ರಕ್ತ ಕೊಡಬೇಕು ಅನ್ನೋ ಬಯಕೆ ನಿಮ್ಮಲ್ಲೂ ಇದ್ಯಾ, ರಕ್ತದಾನ ಮಾಡುವ ಮುಂಚೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ರಕ್ತ ಕೊಡಬೇಕು ಅನ್ನೋ ಬಯಕೆ ನಿಮ್ಮಲ್ಲೂ ಇದ್ಯಾ, ರಕ್ತದಾನ ಮಾಡುವ ಮುಂಚೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳಿವು

ರಕ್ತ ಕೊಡಬೇಕು ಅನ್ನೋ ಬಯಕೆ ನಿಮ್ಮಲ್ಲೂ ಇದ್ಯಾ, ರಕ್ತದಾನ ಮಾಡುವ ಮುಂಚೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳಿವು

ಜೀವನದಲ್ಲಿ ಒಮ್ಮೆಯಾದ್ರೂ ರಕ್ತದಾನ ಮಾಡಬೇಕು ಅನ್ನುವ ಕನಸು ನಿಮಗೂ ಇರಬಹುದು. ಆದರೆ ರಕ್ತದಾನ ಮಾಡಲು ಹಲವರಿಗೆ ಹಿಂಜರಿಕೆ ಇರುತ್ತದೆ. ರಕ್ತದಾನ ಮಾಡುವಾಗ ಪಾಲಿಸಬೇಕಾದ ಕ್ರಮಗಳ ಬಗ್ಗೆಯು ಮಾಹಿತಿ ಇರುವುದಿಲ್ಲ. ನೀವು ರಕ್ತದಾನ ಮಾಡಬೇಕು ಅಂದುಕೊಂಡಿದ್ದರೆ ಈ ವಿಚಾರಗಳು ನಿಮಗೆ ತಿಳಿದಿರಬೇಕು.

ರಕ್ತ ಕೊಡಬೇಕು ಅನ್ನೋ ಬಯಕೆ ನಿಮ್ಮಲ್ಲೂ ಇದ್ಯಾ, ರಕ್ತದಾನ ಮಾಡುವ ಮುಂಚೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳಿವು
ರಕ್ತ ಕೊಡಬೇಕು ಅನ್ನೋ ಬಯಕೆ ನಿಮ್ಮಲ್ಲೂ ಇದ್ಯಾ, ರಕ್ತದಾನ ಮಾಡುವ ಮುಂಚೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳಿವು

ರಕ್ತದ ಸಂಯೋಜನೆಯು ಎರಡು ಪ್ರಮುಖ ಅಂಶಗಳನ್ನು ಹೊಂದಿದೆ. ಒಂದು ಜೀವಕೋಶಗಳ ಅಂಶ (cellular component) ಮತ್ತೊಂದು ಧ್ರವ ಅಂಶ (fluid component). ಸೆಲ್ಯುಲರ್ ಅಂಶದಲ್ಲಿ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್‌ಗಳು ಸೇರಿವೆ. ಇವುಗಳು, ರಕ್ತದ ಧ್ರವ ಅಂಶವಾದ ಪ್ಲಾಸ್ಮಾನಲ್ಲಿ ಮಿಶ್ರಿತವಾಗಿವೆ. ಪ್ಲಾಸ್ಮಾವು ಹೆಚ್ಚಾಗಿ ನೀರು, ಪ್ರೊಟೀನ್‌ಗಳು ಮತ್ತು ರಕ್ತ-ಹೆಪ್ಪುಗಟ್ಟುವಿಕೆ ಅಂಶಗಳನ್ನು ಹೊಂದಿರುತ್ತದೆ. ಶಾರೀರಿಕವಾಗಿ, ಕೆಂಪು ರಕ್ತ ಕಣಗಳು 120 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತವೆ. ಮೂಳೆ ಮಜ್ಜೆಯಿಂದ ಉತ್ಪತ್ತಿಯಾಗುವ ಪ್ರತಿಯೊಂದು ಕೆಂಪು ರಕ್ತ ಕಣ ತನ್ನ ಪಕ್ವತೆಯನ್ನು ತಲುಪುತ್ತದೆ ಮತ್ತು 120ನೇ ದಿನಕ್ಕೆ ಸಾಯುತ್ತದೆ. ಸತ್ತ ಕೆಂಪು ರಕ್ತ ಕಣಗಳು ಮೂಳೆ ಮಜ್ಜೆಯಿಂದ ಉತ್ಪತ್ತಿಯಾಗುವ ಹೊಸ ಕೋಶಗಳಿಂದ ಬದಲಾಯಿಸಲ್ಪಡುತ್ತವೆ. ಅಂತೆಯೇ, ಪ್ಲೇಟ್ಲೆಟ್‌ಗಳು 7-10 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತವೆ ಮತ್ತು ಬಿಳಿ ರಕ್ತ ಕಣಗಳು 12-20 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತವೆ. ನೀವು ರಕ್ತದಾನ ಮಾಡುತ್ತೀರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ರಕ್ತ ಕಣಗಳ ಈ ಶಾರೀರಿಕ ಚಕ್ರವು ಮುಂದುವರಿಯುತ್ತದೆ. ಸಾಮಾನ್ಯವಾಗಿ, ರಕ್ತದಾನ ಸರಳವಾದ ಪ್ರಕ್ರಿಯೆ. ಇದನ್ನು ಅತ್ಯಂತ ಎಚ್ಚರಿಕೆಯಿಂದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ. 

ರಕ್ತದಾನಕ್ಕೂ ಮೊದಲ ಪ್ರಕ್ರಿಯೆಗಳು 

1. ಮೊದಲ ಹಂತ: ರಕ್ತದಾನಿಯ ನೋಂದಣಿ. ಇಲ್ಲಿ ನೀವು ರೋಗಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ದಾನಿಯಾಗಿ ಕೆಲವು ಪ್ರಶ್ನಾವಳಿಯನ್ನು ಸತ್ಯವಾಗಿ ಭರ್ತಿ ಮಾಡಬೇಕಾಗುತ್ತದೆ. ಯಾವುದೇ ಪರೀಕ್ಷೆಯು ಶೇ 100 ನಿಖರವಾಗಿರುವುದಿಲ್ಲ. ಆದ್ದರಿಂದ ಸತ್ಯವಾದ ಮಾಹಿತಿಯು ಬಹಳ ಮುಖ್ಯವಾಗಿದೆ. ಈ ಪ್ರಶ್ನಾವಳಿಯು ಲೈಂಗಿಕ ನಡವಳಿಕೆ, HIV, ಮಾದಕ ವ್ಯಸನ ಮತ್ತು ಇತರರಿಗೆ ಸಂಬಂಧಿಸಿದ ನಿಕಟ ಪ್ರಶ್ನೆಗಳನ್ನು ಹೊಂದಿರುವುದರಿಂದ ಗೌಪ್ಯತೆಯಿಂದ ಉತ್ತರಿಸಬೇಕು.

2. ದಾನಿ ಸಮಾಲೋಚನೆ - ಸಮಾಲೋಚನೆಯು ನಿಮ್ಮ ಮತ್ತು ದಾನಿ ಸಲಹೆಗಾರರ ನಡುವಿನ ಗೌಪ್ಯ ಸಂವಾದವಾಗಿದೆ ಮತ್ತು ಈ ಸಮಾಲೋಚನೆಯು, ರಕ್ತದಾನದ ಕುರಿತು ನಿಮ್ಮ ಮನಸಿನ್ನಲ್ಲಿ ಯಾವುದೇ ರೀತಿಯ ಭಯ, ಶಂಕೆ ಅಥವಾ ಪ್ರಶ್ನೆಗಳಿದ್ದರೆ ಅವುಗಳನ್ನು ನಿವಾರಿಸಲು ಉಪಯುಕ್ತವಾಗಿದೆ.

3. ರಕ್ತದಾನ ಪೂರ್ವ ಪರೀಕ್ಷೆ - ಈ ಪರೀಕ್ಷೆಯು ರಕ್ತದಾನಕ್ಕೆ ನಿಮ್ಮ ಅರ್ಹತೆಯನ್ನು ನಿರ್ಧರಿಸಲು ಸಹಕಾರಿಯಾಗಿದೆ. ಇಲ್ಲಿ ನಿಮ್ಮ ತೂಕ, ತಾಪಮಾನ, ನಾಡಿಮಿಡಿತ, ರಕ್ತದೊತ್ತಡ ಮತ್ತು ಹಿಮೋಗ್ಲೋಬಿನ್ ಅಥವಾ ಪ್ಲೇಟ್ಲೆಟ್ ಎಣಿಕೆಗಳನ್ನು ಪರಿಶೀಲಿಸಲಾಗುತ್ತದೆ.

4. ವೈದ್ಯಕೀಯ ಪರೀಕ್ಷೆ- ಅಂತಿಮವಾಗಿ ವೈದ್ಯರು ನಿಮ್ಮ ಆರೋಗ್ಯದ ಇತಿಹಾಸ ಮತ್ತು ಲ್ಯಾಬ್ ಪರೀಕ್ಷೆಗಳನ್ನು ಪರಿಶೀಲಿಸುತ್ತಾರೆ ಮತ್ತು ನಿಮ್ಮಿಂದ ರಕ್ತವನ್ನು ಸಂಗ್ರಹಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ.

ರಕ್ತದಾನ ಮಾಡಲುಅರ್ಹತೆ ಪರೀಕ್ಷಿಸುವ ಮಾನದಂಡ ಮತ್ತು ಇತರ ಪರಿಗಣನೆಗಳು 

1. ವಯಸ್ಸು - 18 ರಿಂದ 60 ವರ್ಷಗಳು (ಅವಶ್ಯಕತೆಯ ಅನುಸಾರ 65 ವರ್ಷಗಳಿಗೆ ವಿಸ್ತರಿಸಬಹುದು)

2. ತೂಕ(ಕನಿಷ್ಠ): ಆದ್ಯತೆ- ಸಾಮಾನ್ಯ ರಕ್ತದಾನಕ್ಕೆ 55 ಕೆಜಿ ಮತ್ತು ಕಡಿಮೆ ಪ್ರಮಾಣದ ರಕ್ತದಾನಕ್ಕೆ 45 ಕೆಜಿ.

3. ದೇಹದ ಉಷ್ಣತೆ/ನಾಡಿ - ಜ್ವರ ಇಲ್ಲದಿರುವುದು ಮತ್ತು ಸಹಜ ಸ್ಥಿತಿಯ ನಾಡಿಮಿಡಿತ

4. ರಕ್ತದೊತ್ತಡ - ಕಳೆದ 28 ದಿನಗಳು/ 1 ತಿಂಗಳಲ್ಲಿ ಡೋಸ್‌ನಲ್ಲಿ ಯಾವುದೇ ಬದಲಾವಣೆಯಿಲ್ಲದೆ ಔಷಧಿಯೊಂದಿಗೆ ಅಥವಾ ಇಲ್ಲದೆ 140/90 mm Hg ಗಿಂತ ಕಡಿಮೆ.

5. ಹಿಮೋಗ್ಲೋಬಿನ್ - ಪುರುಷರು ಮತ್ತು ಮಹಿಳೆಯರಿಗೆ 12.5 g% ಗಿಂತ ಹೆಚ್ಚು ಅಥವಾ ಹೆಚ್ಚಿನದಾಗಿರಬೇಕು. (ಬಿಬಿ ವಿಧಾನದಿಂದ ಪರೀಕ್ಷಿಸಿದಾಗ).

6. ಆಹಾರ - ಖಾಲಿ ಹೊಟ್ಟೆಯಲ್ಲಿ ರಕ್ತದಾನ ಮಾಡಬೇಡಿ.

7. ನೀರು - ರಕ್ತದಾನಕ್ಕೆ ಅರ್ಧ ಗಂಟೆ ಮೊದಲು ಅರ್ಧ ಲೀಟರ್ ನೀರನ್ನು ಕುಡಿಯಿರಿ.

8. ಧೂಮಪಾನ ಮತ್ತು ಮದ್ಯಪಾನ - ರಕ್ತದಾನಕ್ಕೆ ಅರ್ಧ ಗಂಟೆ ಮೊದಲು ಮತ್ತು ನಂತರ ಧೂಮಪಾನವನ್ನು ತಪ್ಪಿಸಿ. ರಕ್ತದಾನದ ಹಿಂದಿನ ರಾತ್ರಿ ಮದ್ಯಪಾನವನ್ನು ತಪ್ಪಿಸಿ ಮತ್ತು ರಕ್ತದಾನ ನಂತರ ನೀವು ತಿನ್ನುವ ತನಕ ಮದ್ಯವನ್ನು ಸೇವಿಸಬೇಡಿ.

9. ಹೆಚ್ಚಿನ ಅಪಾಯದ ನಡವಳಿಕೆ - ಅಸುರಕ್ಷಿತ ಲೈಂಗಿಕತೆ, ಬಹುಪಾಲು ಲೈಂಗಿಕತೆ, ಮತ್ತು ಚುಚ್ಚುಮದ್ದಿನ ಮಾದಕ ವ್ಯಸನದ ಮೂಲಕ HIV ಹರಡುತ್ತದೆ. ನೀವು ಹೆಚ್ಚಿನ ಅಪಾಯದ ನಡವಳಿಕೆಯನ್ನು ಹೊಂದಿದ್ದರೆ ರಕ್ತದಾನ ಮಾಡಬೇಡಿ.

ರಕ್ತದಾನದ ನಂತರ ಪಾಲಿಸಬೇಕಾದ ಪ್ರಮುಖ ಕ್ರಮಗಳು

• 5-10 ನಿಮಿಷಗಳ ಕಾಲ ರಕ್ತದಾನಕ್ಕಾಗಿ ಸೂಜಿ ಚುಚ್ಚಿದ ಜಾಗದಲ್ಲಿ ಒತ್ತಿ ಹಿಡಿಯಿರಿ

• ಶ್ರಮದಾಯಕ ವ್ಯಾಯಾಮ ಅಥವಾ ಅಧಿಕೃತವಾಗಿ ತೋಳಿನ ಬಳಕೆಯನ್ನು ತಪ್ಪಿಸಿ. ಉದಾ: 2-3 ಗಂಟೆಗಳ ಕಾಲ ಭಾರ ಎತ್ತುವುದು.

• ಅರ್ಧ ಲೀಟರ್ ನೀರು ಕುಡಿಯಿರಿ.

(ಬರಹ: ಡಾ. ಸಿ ಶಿವರಾಮ್, ಕನ್ಸಲ್ಟೆಂಟ್ ಮತ್ತು ಮುಖ್ಯಸ್ಥ - ಟ್ರಾನ್ಸ್ಫ್ಯೂಷನ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು)

Whats_app_banner