Blood Pressure: ಬಿಪಿ ಸಮಸ್ಯೆ ನಿಮ್ಗೂ ಇದ್ಯಾ, ರಕ್ತದೊತ್ತಡ ನಿಯಂತ್ರಣದಲ್ಲಿರಲು ಈ 3 ಪಾನೀಯಗಳನ್ನು ಕುಡಿದು ನೋಡಿ
ಬ್ಲಡ್ ಪ್ರೆಶರ್ ಅಥವಾ ಬಿಪಿ ಸಮಸ್ಯೆ ಇತ್ತೀಚಿಗೆ ಸಾಮಾನ್ಯವಾಗಿದೆ. ಬಿಪಿ ಕಡಿಮೆಯಾದ್ರೂ ಡೆಂಜರ್, ಹೆಚ್ಚಾದ್ರೂ ಅಪಾಯ. ಇದು ನಿಯಂತ್ರಣದಲ್ಲಿದ್ರೆ ಒಳಿತು. ಬ್ರಡ್ ಪ್ರೆಶರ್ ನಿಯಂತ್ರಣದಲ್ಲಿರಲು ಸಹಾಯ ಮಾಡುವ 3 ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ, ಬಿಪಿ ಸಮಸ್ಯೆ ಇರುವವರು ಇದನ್ನು ಕುಡಿದು ನೋಡಿ.
ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬಿಪಿ ಇಲ್ಲದೇ ಇರುವವರು ಕಡಿಮೆ ಎನ್ನಬಹುದು. ಬಿಪಿ ಹೆಚ್ಚಿದ್ರೆ ಮಾತ್ರವಲ್ಲ, ಬಿಪಿ ಕಡಿಮೆ ಆಗೋದು ಸಹ ಅಪಾಯ. ಈ ಬ್ಲಡ್ ಪ್ರೆಶರ್ ಅಥವಾ ರಕ್ತದೊತ್ತಡ ನಿಯಂತ್ರಣದಲ್ಲಿದ್ರೆ ಉತ್ತಮ. ಬಿಪಿ ಕಂಟ್ರೋಲ್ ಅಲ್ಲಿ ಇರ್ಬೇಕು ಅಂದ್ರೆ ನಮ್ಮ ಡಯೆಟ್ ಕ್ರಮ ಕೂಡ ಬಹಳ ಮುಖ್ಯವಾಗುತ್ತದೆ. ಹಣ್ಣು, ತರಕಾರಿ, ಧಾನ್ಯಗಳು, ಒಣಹಣ್ಣು, ಲೀನ್ ಪ್ರೊಟೀನ್, ಸೀಮಿತ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೊಂದಿರುವ ಪದಾರ್ಥಗಳು ಸೇರಿದಂತೆ ಆರೋಗ್ಯಕರ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. ಇದರೊಂದಿಗೆ ಕೆಲವು ಆರೋಗ್ಯಕರ ಪಾನೀಯಗಳು ಕೂಡ ಬಿಪಿ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ. ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ಡಯಟಿಷೀಯನ್ ಡಾ ಉಷಾಕಿರಣ್ ಸಿಸೋಡಿಯಾ ʼಆಹಾರವು ರಕ್ತದೊತ್ತಡ ಮಟ್ಟದಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಸೋಡಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಪೊಟ್ಯಾಶಿಯಂ, ಮೆಗ್ನಿಶಿಯಂ, ನಾರಿನಾಂಶ ಸಮೃದ್ಧವಾಗಿರುವ ಆಹಾರಗಳು ರಕ್ತದೊತ್ತಡ ಕಡಿಮೆಯಾಗಲು ಸಹಾಯ ಮಾಡುತ್ತವೆ. ಒಟ್ಟಾರೆ ಆಹಾರಕ್ಕೂ ರಕ್ತದೊತ್ತಡಕ್ಕೂ ಸಂಬಂಧ ಇರುವುದು ನಿಜʼ ಎಂದು ಅವರು ಹೇಳುತ್ತಾರೆ.
ಖ್ಯಾತ ಡಯಟೀಷಿಯನ್ ಲೋವ್ನಿತ್ ಭಾತ್ರಾ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯ ಮಾಡುವ 3 ಪಾನೀಯಗಳ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಅವರು ಹೇಳುವ ಪ್ರಕಾರ ʼಆಹಾರ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಜೊತೆಗೆ ಹಲವಾರು ಪಾನೀಯಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇವು ಹೃದಯದ ಆರೋಗ್ಯ ಸುಧಾರಿಸಲು ಉತ್ತಮʼ ಎಂದು ಬರೆದುಕೊಂಡಿದ್ದಾರೆ.
ರಕ್ತದೊತ್ತಡ ನಿಯಂತ್ರಿಸುವ 3 ಪಾನೀಯಗಳು
ನೆಲ್ಲಿಕಾಯಿ ಶುಂಠಿ ಜ್ಯೂಸ್: ನೆಲ್ಲಿಕಾಯಿಯು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚುವುದನ್ನು ಇದು ತಡೆಯುತ್ತದೆ. ಶುಂಠಿಯು ರಕ್ತನಾಳಗಳನ್ನು ವಿಸ್ತರಿಸುವ ವಾಸೋಡಿಲೇಷನ್ ಅನ್ನು ಉತ್ತೇಜಿಸುವ ಸಂಯುಕ್ತಗಳನ್ನು ಹೊಂದಿದೆ. ನೆಲ್ಲಿಕಾಯಿ ಹಾಗೂ ಶುಂಠಿ ರಸವು ರಕ್ತದೊತ್ತಡಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ಉತ್ಕರ್ಷಣ ನಿರೋಧಕ ಹಾಗೂ ವಿಟಮಿನ್ ಸಿಯಲ್ಲಿ ಸಮೃದ್ಧವಾಗಿದೆ. ಇದು ರಕ್ತನಾಳಗಳನ್ನು ವಿಸ್ತರಿಸಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಶುಂಠಿಯು ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ. ಹೀಗೆ ಒಟ್ಟಾರೆ ಈ ಎರಡೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆʼ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಸಿಸೋಡಿಯಾ ಹೇಳಿದ್ದಾರೆ.
ಕೊತ್ತಂಬರಿ ಬೀಜದ ನೀರು: ಕೊತ್ತಂಬರಿ ಸಾರವು ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ನಮ್ಮ ದೇಹವು ಸೋಡಿಯಂ ಅನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ. ಆ ಮೂಲಕ ರಕ್ತದೊತ್ತಡ ಕಡಿಮೆಯಾಗಲು ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜದ ನೀರು ರಕ್ತದೊತ್ತಡ ನಿರ್ವಹಣೆಗೂ ಒಳ್ಳೆಯದು. ಕೊತ್ತಂಬರಿ ಬೀಜಗಳು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಇದು ಸೋಡಿಯಂ ಅಂಶವನ್ನು ದೇಹದಿಂದ ಹೊರ ಹಾಕಿ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿಟ್ರೂಟ್ ಟೊಮೆಟೊ ಜ್ಯೂಸ್: ಬೀಟ್ರೂಟ್ ನೈಟ್ರೇಟ್‌ನಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು, ರಕ್ತದ ಪ್ರವಾಹದಲ್ಲಿ ನೈಟ್ರಿಕ್ ಆಕ್ಸೈಡ್ ಸಾಂಧ್ರತೆಯನ್ನು ಹೆಚ್ಚಿಸುತ್ತದೆ. ಟೊಮೆಟೊ ಸಾರವು ಲೈಕೋಪೀನ್, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಇ ನಂತಹ ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ, ಇದು ಸ್ವತಂತ್ರ ರಾಡಿಕಲ್‌ಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಸಂಕೋಚನ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಎರಡನ್ನೂ ಸುಧಾರಿಸಲು ಪರಿಣಾಮಕಾರಿ ಉತ್ಕರ್ಷಣ ನಿರೋಧಕಗಳು ಎಂದು ಕರೆಯಲ್ಪಡುತ್ತದೆ.
ರಕ್ತದೊತ್ತಡ ಮಟ್ಟ ಆರೋಗ್ಯಕರವಾಗಿರಲು ಬೀಟ್ರೂಟ್ ಹಾಗೂ ಟೊಮೆಟೊ ರಸವು ಆರೋಗ್ಯಕರ ಸಂಯೋಜನೆಯಾಗಿದೆ. ಬೀಟ್‌ರೂಟ್‌ಗಳು ನೈಟ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಟೊಮೆಟೊ ಹಣ್ಣಿನಲ್ಲಿ ಪೊಟ್ಯಾಸಿಯಂ ಹಾಗೂ ಲೈಕೋಪೀನ್ ಅಧಿಕವಾಗಿದ್ದು, ಇವೆರಡೂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಿಸೋಡಿಯಾ ಹೇಳುತ್ತಾರೆ.
ಈ ನೈಸರ್ಗಿಕ ಪರಿಹಾರಗಳು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತವೆಯಾದರೂ, ವೈದ್ಯರು ಸೂಚಿಸಿದ ಔಷಧಿ ಹಾಗೂ ಆರೈಕೆ ಕ್ರಮವನ್ನು ಬದಲಿಸುವಂತಿಲ್ಲ. "ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯು ಸದ್ಯ ನಡೆಯುತ್ತಿರುವ ಚಿಕಿತ್ಸೆಯನ್ನು ಮಾತ್ರ ಬೆಂಬಲಿಸುತ್ತದೆ. ಅದಕ್ಕೆ ಈ ಪಾನೀಯಗಳು ಪರ್ಯಾಯವಲ್ಲ. ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಸೋಡಿಯಂ ಅಂಶ ಅಧಿಕವಿರುವ ಆಹಾರಗಳ ಕಡಿಮೆ ಸೇವನೆ ಮುಂತಾದವುಗಳಿಂದ ಆರೋಗ್ಯಕರ ರಕ್ತದೊತ್ತಡವನ್ನು ನಿಯಂತ್ರಿಸಬಹುದುʼ ಎಂದು ಡಾ. ಸಿಸೋಡಿಯಾ ಹೇಳುತ್ತಾರೆ.