Bone Sarcoma: ಮಕ್ಕಳಲ್ಲಿ ಕಾಣಿಸುವ ಮೂಳೆ ಸಾರ್ಕೋಮಾ ಸಮಸ್ಯೆಗುಂಟು ಪರಿಣಾಮಕಾರಿ ಶಸ್ತ್ರಚಿಕಿತ್ಸೆ; ಇದರ ಪ್ರಯೋಜನ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Bone Sarcoma: ಮಕ್ಕಳಲ್ಲಿ ಕಾಣಿಸುವ ಮೂಳೆ ಸಾರ್ಕೋಮಾ ಸಮಸ್ಯೆಗುಂಟು ಪರಿಣಾಮಕಾರಿ ಶಸ್ತ್ರಚಿಕಿತ್ಸೆ; ಇದರ ಪ್ರಯೋಜನ ತಿಳಿಯಿರಿ

Bone Sarcoma: ಮಕ್ಕಳಲ್ಲಿ ಕಾಣಿಸುವ ಮೂಳೆ ಸಾರ್ಕೋಮಾ ಸಮಸ್ಯೆಗುಂಟು ಪರಿಣಾಮಕಾರಿ ಶಸ್ತ್ರಚಿಕಿತ್ಸೆ; ಇದರ ಪ್ರಯೋಜನ ತಿಳಿಯಿರಿ

ಮೂಳೆ ಕ್ಯಾನ್ಸರ್‌ ಸಮಸ್ಯೆ ಇತ್ತೀಚೆಗೆ ಮಕ್ಕಳು ಹಾಗೂ ಯುವಜನರನ್ನು ಹೆಚ್ಚು ಕಾಡುತ್ತಿದೆ. ಮೂಳೆಗಳ ಬೆಳವಣಿಗೆಯ ಹಂತದಲ್ಲಿ ಇದು ಕಾಣಿಸಬಹುದು. ಮೂಳೆಗಳ ಮೇಲೆ ಅಥವಾ ಒಳಗೆ ಗೆಡ್ಡೆಗಳ ರೂಪದಲ್ಲಿ ಕಾಣಿಸುವ ಈ ಕ್ಯಾನ್ಸರ್‌ಗೆ ಮೂಳೆ ಸಾರ್ಕೋಮಾ ಎಂದೂ ಕರೆಯುತ್ತಾರೆ. ಇದರ ನಿವಾರಣೆಗೆ ನೆರವಾಗುವ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿಸಿದ್ದಾರೆ ಡಾ. ಶ್ರೀಮಂತ್ ಬಿ.ಎಸ್.

ಡಾ. ಶ್ರೀಮಂತ್ ಬಿ.ಎಸ್. (ಬಲಚಿತ್ರ)
ಡಾ. ಶ್ರೀಮಂತ್ ಬಿ.ಎಸ್. (ಬಲಚಿತ್ರ)

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್‌ ಪ್ರಕಾರಗಳಲ್ಲಿ ಮೂಳೆ ಕ್ಯಾನ್ಸರ್‌ ಕೂಡ ಒಂದು. ಇದಕ್ಕೆ ಬೋನ್‌ ಸಾರ್ಕೋಮಾ ಡಿಸೀಸ್‌ ಅಥವಾ ಮೂಳೆ ಸಾರ್ಕೋಮಾ ಕಾಯಿಲೆ ಎಂದೂ ಕರೆಯುತ್ತಾರೆ. ಇದು ಕ್ಯಾನ್ಸರ್‌ನ ಒಂದು ಪ್ರಕಾರ. ಮೂಳೆಗಳ ಮೇಲೆ ಅಥವಾ ಒಳಗೆ ಗೆಡ್ಡೆಗಳು ಬೆಳೆಯುವ ಕಾರಣ ಈ ಮೂಳೆ ಸಾರ್ಕೋಮಾ ಕಾಯಿಲೆ ಉಂಟಾಗುತ್ತದೆ. ಇದು ಮಕ್ಕಳನ್ನೂ ಕಾಡುತ್ತಿದೆ. ಇದರಿಂದ ನಡೆದಾಡಲು ಕೂಡ ಕಷ್ಟವಾಗಬಹುದು. ಆದರೆ ಮಕ್ಕಳನ್ನು ಕಾಡುವ ಮೂಳೆ ಸಾರ್ಕೋಮಾ ಕಾಯಿಲೆಗೆ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಇದೆ. ಈ ಶಸ್ತ್ರಚಿಕಿತ್ಸೆಯ ಪ್ರಯೋಜನ ತಿಳಿಯಿರಿ.

ಮೂಳೆ ಸಾರ್ಕೋಮಾ ಕಾಯಿಲೆಗೆ ಶಸ್ತ್ರಚಿಕಿತ್ಸೆ

ಅಂಗ ರಕ್ಷಿಸುವ ಶಸ್ತ್ರಚಿಕಿತ್ಸೆಯು ಮಗುವಿನ ಮೂಳೆಯಲ್ಲಿ ಕ್ಯಾನ್ಸರ್ ಗೆಡ್ಡೆಯನ್ನು ತೆಗೆದುಹಾಕುತ್ತದೆ ಮತ್ತು ಸಾಧ್ಯವಾದಷ್ಟು ಕೈ ಕಾಲುಗಳನ್ನು ಸದೃಢವಾಗಿಸುವುದು ಮಾತ್ರವಲ್ಲ, ಕೆಲಸ ಮಾಡುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದು ಸಂಪೂರ್ಣವಾಗಿ ಕ್ಯಾನ್ಸರ್‌ ಪೀಡಿತ ಅಂಗವನ್ನು ತೆಗೆದು ಹಾಕುವ ಸಾಂಪ್ರದಾಯಿಕ ಪ್ರಕ್ರಿಯೆಗಿಂತ ಭಿನ್ನವಾಗಿದೆ. ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಗಳ ಕಾರಣ ಮೂಳೆ ಸಾರ್ಕೋಮಾಗಳನ್ನು ಸುರಕ್ಷಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಾಗುವಂತಹ ಶಸ್ತ್ರಚಿಕಿತ್ಸೆಗಳು ಈಗ ಲಭ್ಯವಿವೆ. ಇದು ಕೈ ಕಾಲುಗಳನ್ನು ರಕ್ಷಿಸುವ, ಅದರ ಸಾಮರ್ಥ್ಯ ವೃದ್ಧಿಯಾಗುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ಸಂಕೀರ್ಣ ಕಾರ್ಯವಿಧಾನವನ್ನು ನಡೆಸಲು ಮೂಳೆ ಶಸ್ತ್ರಚಿಕಿತ್ಸಕರು, ಆಂಕೊಲಾಜಿಸ್ಟ್‌ಗಳು ಮತ್ತು ರಿಹ್ಯಾಬಿಲಿಟೇಷನ್ ಥೆರಪಿಸ್ಟ್‌ಗಳು ಸೇರಿದಂತೆ ತಜ್ಞರ ತಂಡದ ಅಗತ್ಯವಿದೆ.

ಮೂಳೆ ಸಾರ್ಕೋಮಾ ಕಾಯಿಲೆ; ಶಸ್ತ್ರಚಿಕಿತ್ಸೆಯ ಪರಿಣಾಮ

1. ಚಲನಶೀಲತೆಯನ್ನು ಕಾಪಾಡುತ್ತದೆ: ಪೀಡಿತ ಅಂಗವನ್ನು ಉಳಿಸುವ ಮೂಲಕ, ಈ ಶಸ್ತ್ರಚಿಕಿತ್ಸೆಗಳು ಮಕ್ಕಳಿಗೆ ನಡೆಯಲು, ಓದಲು ಮತ್ತು ಆಟ ಆಡುವ ಸಾಮಾನ್ಯ ಅಗತ್ಯ ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತದೆ. ಚಲನಶೀಲತೆಯ ಈ ಸಂರಕ್ಷಣೆಯು ಅವರ ದೈಹಿಕ ಬೆಳವಣಿಗೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ನಿರ್ಣಾಯಕವಾಗಿದೆ. ಇದು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸ್ವತಂತ್ರ್ಯವಾಗಿ ಅವರ ಕೆಲಸಗಳನ್ನು ಮಾಡಲು ನೆರವಾಗುತ್ತದೆ.

2. ಮಾನಸಿಕ ಯೋಗಕ್ಷೇಮ: ಅಂಗವನ್ನು ಕತ್ತರಿಸುವಂತಹ ಭಾವನಾತ್ಮಕ ಆಘಾತ ಮತ್ತು ನೋವು ಕಡಿಮೆಯಾಗುತ್ತದೆ, ಆ ಮೂಲಕ ಧನಾತ್ಮಕ ಚಿಂತನೆಗೆ ಕಾರಣವಾಗುತ್ತದೆ ಮತ್ತು ಸಮಾಜದಲ್ಲಿ ಬೆರೆಯುವಿಕೆಯನ್ನು ಹೆಚ್ಚಿಸುತ್ತದೆ. ಅವರ ದೈಹಿಕ ಸ್ಥಿತಿ ಮತ್ತು ದೇಹದ ಸಮಗ್ರತೆಯನ್ನು ಕಾಪಾಡುವುದು ಈ ಕಷ್ಟಕರ ಸಮಯದಲ್ಲಿ ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುತ್ತದೆ.

3. ದೀರ್ಘಾವಧಿಯ ಫಲಿತಾಂಶಗಳು: ಅಂಗ ಉಳಿಸುವ ಶಸ್ತ್ರಚಿಕಿತ್ಸೆಗಳು ಸಾಮಾನ್ಯ ಬೆಳವಣಿಗೆ, ಶಿಕ್ಷಣ ಮತ್ತು ಸಾಮಾಜಿಕ ಏಕೀಕರಣಕ್ಕೆ ಅವಕಾಶಗಳನ್ನು ನೀಡುತ್ತವೆ. ಜೈವಿಕ ಪುನರ್ನಿರ್ಮಾಣ, 3D-ಮುದ್ರಿತ ಪ್ರಾಸ್ತೆಟಿಕ್ಸ್, ಇತ್ಯಾದಿಗಳಂತಹ ಸುಧಾರಿತ ತಂತ್ರಗಳು ಉತ್ತಮ ಕ್ರಿಯಾತ್ಮಕ ಫಲಿತಾಂಶಗಳನ್ನು ಖಚಿತಪಡಿಸುತ್ತದೆ ಮತ್ತು ಸುಂದರತೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ಮಗುವಿನ ದೀರ್ಘಾವಧಿಯ ಜೀವನದ ಗುಣಮಟ್ಟವನ್ನು ಬೆಳೆಸುತ್ತದೆ.

4. ನವೀನ ವಿಧಾನಗಳು: ಸುಧಾರಿತ ಇಮೇಜಿಂಗ್ ತಂತ್ರಗಳು ನಿಖರವಾಗಿ ಗೆಡ್ಡೆಯನ್ನು ತೆಗೆಯಲು ಮತ್ತು ಕಸ್ಟಮ್ ಪ್ರಾಸ್ಥೆಟಿಕ್ ವಿನ್ಯಾಸಕ್ಕೆ ಮಾರ್ಗದರ್ಶನ ನೀಡುತ್ತವೆ, ಹಾಗೆಯೇ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ರೋಗಿಗೆ ನಿರ್ದಿಷ್ಟವಾದ ಉಪಕರಣಗಳು, ಟ್ಯೂಮರ್ ಮ್ಯಾಪಿಂಗ್ ಫಲಿತಾಂಶಗಳನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. 3D ಮುದ್ರಣ ತಂತ್ರಜ್ಞಾನವನ್ನು ಜೋಡಿಸುವ ಮೂಲಕ ಪುನರ್ನಿರ್ಮಾಣದಲ್ಲಿ ನಿಖರತೆ ಮತ್ತು ಒಂದು ಮಗುವಿಗೆ ಬೇಕಾಗುವ ನಿರ್ದಿಷ್ಟ ಅಗತ್ಯವನ್ನು ನೀಡುತ್ತದೆ, ಆ ಮೂಲಕ ಶಸ್ತ್ರಚಿಕಿತ್ಸೆಯ ನಂತರ ಉತ್ತಮ ಫಿಟ್ ಮತ್ತು ಸುಧಾರಿತ ಚಲನಶೀಲತೆಯನ್ನು ಖಚಿತಪಡಿಸುತ್ತದೆ.

5. ಸಮಗ್ರ ಆರೈಕೆ: ಈ ಶಸ್ತ್ರಚಿಕಿತ್ಸೆಗಳು ಕ್ಯಾನ್ಸರ್ ಚಿಕಿತ್ಸೆಗೆ ಸಮಗ್ರವಾದ ವಿಧಾನವನ್ನು ಬಳಸುವ ಮೂಲಕ ರೋಗಿ-ಕೇಂದ್ರಿತ ಆರೈಕೆ ಮತ್ತು ಬಹುವಿಭಾಗೀಯ ನೆರವಿನ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಇಲ್ಲಿ ರೋಗವನ್ನು ಮಾತ್ರವಲ್ಲದೆ ಮಗುವಿನ ಜೀವನದ ಮೇಲೆ ಅದು ಬೀರುವ ಪ್ರಭಾವವನ್ನು ಗುರುತಿಸುವ ಮೂಲಕ, ಅಂಗ-ಉಳಿಸುವ ಶಸ್ತ್ರಚಿಕಿತ್ಸೆಗಳು ಸಮಗ್ರ ಚೇತರಿಕೆ ಮತ್ತು ಸುಧಾರಿತ ಯೋಗಕ್ಷೇಮ ಕಾಪಾಡಲು ನೆರವಾಗುತ್ತವೆ.

ಕೊನೆಯದಾಗಿ ಹೇಳುವುದಾದರೆ, ಮೂಳೆ ಕ್ಯಾನ್ಸರ್ ಕಾಯಿಲೆ ಹೊಂದಿರುವ ಮಕ್ಕಳಿಗೆ ಅಂಗ-ಉಳಿಸುವ ಶಸ್ತ್ರಚಿಕಿತ್ಸೆಗಳು ಗಮನಾರ್ಹ ಮತ್ತು ವ್ಯಾಪಕ ಪರಿಣಾಮವನ್ನು ಬೀರುತ್ತವೆ, ಚಲನಶೀಲತೆಯನ್ನು ಸಂರಕ್ಷಿಸುತ್ತವೆ, ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸುತ್ತವೆ ಮತ್ತು ದೀರ್ಘಾವಧಿಯ ಫಲಿತಾಂಶಗಳನ್ನು ಹೆಚ್ಚಿಸುತ್ತವೆ. ಈ ಕಾರ್ಯವಿಧಾನಗಳು ಪೀಡಿಯಾಟ್ರಿಕ್ ಆಂಕೊಲಾಜಿಯಲ್ಲಿ ಒಂದು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಣ್ಣ ವಯಸ್ಸಿನ ರೋಗಿಗಳಿಗೆ ವೈಯಕ್ತಿಕಗೊಳಿಸಿದ, ಸಮಗ್ರ ಆರೈಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ.

(ಈ ಲೇಖನವನ್ನು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರಿಯುವ ಮಣಿಪಾಲ್ ಆಸ್ಪತ್ರೆಯ ಡಾ. ಶ್ರೀಮಂತ್ ಬಿ ಎಸ್, ಲೀಡ್ ಕನ್ಸಲ್ಟೆಂಟ್ - ಆರ್ಥೋಪೆಡಿಕ್ ಆಂಕೊಲಾಜಿ, ಇವರು ಬರೆದಿದ್ದಾರೆ)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner