Calcium Deficiency: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುವ ಲಕ್ಷಣಗಳಿವು, ಇವುಗಳನ್ನು ತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ
ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಕೆಲವು ರೋಗಲಕ್ಷಣಗಳು ಕಾಣಿಸುತ್ತವೆ. ಇವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕ್ಯಾಲ್ಸಿಯಂ ಪೂರಕ ಆಹಾರಗಳನ್ನು ಸೇವಿಸುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬಹುದು. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ ಕಾಣಿಸುವ ಲಕ್ಷಣಗಳು ಯಾವುವು ನೋಡಿ.
ದೇಹಕ್ಕೆ ಅಗತ್ಯ ಪೋಷಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ಕೊರತೆ ಉಂಟಾದರೆ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಮೂಳೆಗಳು ಸದೃಢವಾಗಿರಲು, ಹಲ್ಲುಗಳ ಆರೋಗ್ಯ ಸುಧಾರಿಸಲು, ಹೃದಯ ಸೇರಿದಂತೆ ಸ್ನಾಯುಗಳ ಸಂಕೋಚನವನ್ನು ನಿಯಂತ್ರಿಸಲು, ನರಮಂಡಲದ ಆರೋಗ್ಯ ವೃದ್ಧಿಯಾಗಲು ಹೀಗೆ ದೇಹದ ಹಲವು ಕಾರ್ಯಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಕ್ಯಾಲ್ಸಿಯಂ ಹಾರ್ಮೋನುಗಳ ಉತ್ಪಾದನೆಯಲ್ಲಿ, ಜೀವಕೋಶದ ಸಂಕೇತ ವ್ಯವಸ್ಥೆಗಳಲ್ಲಿ ಮತ್ತು ಕಿಣ್ವಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ, ಕೆಲವು ಲಕ್ಷಣಗಳು ಗೋಚರಿಸುತ್ತವೆ. ನಿಮ್ಮ ದೇಹದಲ್ಲೂ ಇಂತಹ ಲಕ್ಷಣಗಳು ಕಂಡರೆ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ ನಿಮ್ಮ ದಿನನಿತ್ಯದ ಜೀವನದಲ್ಲಿ ಕ್ಯಾಲ್ಸಿಯಂ ಪೂರಕ ಆಹಾರ ಸೇವನೆಗೆ ಗಮನ ನೀಡಿ. ಹಾಗಾದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಕಾಣಿಸುವ ಲಕ್ಷಣಗಳೇನು ನೋಡಿ.
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳೇನು?
ಕ್ಯಾಲ್ಸಿಯಂ ಸ್ನಾಯುವಿನ ಕಾರ್ಯನಿರ್ವಹಣೆಗೆ ಮುಖ್ಯವಾಗಿದೆ. ಕ್ಯಾಲ್ಸಿಯಂ ಮಟ್ಟ ಕಡಿಮೆಯಾದರೆ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ನಾಯುಗಳ ಸೆಳೆತ ಹೆಚ್ಚಾಗುತ್ತದೆ. ಕೆಲಸ ಮಾಡುವಾಗ ಮಾತ್ರವಲ್ಲ, ವಿಶ್ರಾಂತಿ ಸಮಯದಲ್ಲಿಯೂ ಕಾಲುಗಳು, ಪಾದಗಳು ಮತ್ತು ಕೈಗಳ ಸ್ನಾಯುಗಳಲ್ಲಿನ ಸೆಳೆತ ಸಂಭವಿಸಬಹುದು.
ಕ್ಯಾಲ್ಸಿಯಂ ಕಡಿಮೆಯಾದರೆ ನರಮಂಡಲದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ದೇಹ ಜುಮ್ಮೆನ್ನಿಸುತ್ತದೆ. ಬೆರಳುಗಳು, ಕಾಲುಗಳು, ತುಟಿಗಳು ಮತ್ತು ನಾಲಿಗೆಯಲ್ಲಿ ಸೂಜಿಯಿಂದ ಚುಚ್ಚಿದಂತೆ ಭಾಸವಾಗುತ್ತದೆ. ಕಡಿಮೆ ಕ್ಯಾಲ್ಸಿಯಂ ಮಟ್ಟವು ನರಗಳ ಕಾರ್ಯವನ್ನು ಅಡ್ಡಿಪಡಿಸುತ್ತದೆ.
ಕಡಿಮೆ ಕ್ಯಾಲ್ಸಿಯಂ ಮಟ್ಟವು ಸ್ನಾಯುಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದರಿಂದ ನೀವು ತುಂಬಾ ಸುಸ್ತಾಗಿರುತ್ತೀರಿ. ಕೈಕಾಲುಗಳ ಸ್ನಾಯುಗಳು ಸಹಕರಿಸುವುದಿಲ್ಲ. ಸೋಮಾರಿತನ ಆವರಿಸುತ್ತದೆ.
ಉಗುರುಗಳು ನಮ್ಮ ಆರೋಗ್ಯವನ್ನು ಸಹ ಪ್ರತಿನಿಧಿಸುತ್ತವೆ. ಕ್ಯಾಲ್ಸಿಯಂ ಮಟ್ಟವನ್ನು ಬೆರಳಿನ ಉಗುರುಗಳಿಂದ ಕಂಡುಹಿಡಿಯಬಹುದು. ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇಲ್ಲದಿದ್ದರೆ, ಉಗುರುಗಳು ತುಂಡಾಗುತ್ತವೆ. ಉಗುರುಗಳ ತುದಿಗಳು ಸುಲಭವಾಗಿ ಕಟ್ ಆಗುತ್ತವೆ. ಉಗುರಿನ ಬಣ್ಣ ಕೆಡುತ್ತದೆ.
ಕ್ಯಾಲ್ಸಿಯಂ ಬಾಯಿಯ ದಂತಕವಚದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇದು ಹಲ್ಲುಗಳ ಮೇಲಿನ ಪದರವನ್ನು ರಕ್ಷಿಸುತ್ತದೆ. ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಹೊಂದಿಲ್ಲ ಎಂದರೆ, ದಂತಕವಚವು ದುರ್ಬಲಗೊಳ್ಳುತ್ತದೆ. ದಂತಕ್ಷಯದಂತಹ ಸಮಸ್ಯೆಗಳು ಎದುರಾಗುತ್ತವೆ. ಹಲ್ಲುಗಳು ಬೇಗನೆ ಬೀಳುತ್ತವೆ. ವಸಡಿನ ಸಮಸ್ಯೆಯೂ ಬರಬಹುದು.
ಮೂಳೆಗಳ ಆರೋಗ್ಯ ಸುಧಾರಿಸಲು ಕ್ಯಾಲ್ಸಿಯಂ ಬಹಳ ಅವಶ್ಯ. ದೀರ್ಘಕಾಲದ ಕ್ಯಾಲ್ಸಿಯಂ ಕೊರತೆಯು ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇದು ಸಂಧಿವಾತದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ಕ್ಯಾಲ್ಸಿಯಂ ಹೃದಯ ಬಡಿತವನ್ನು ನಿಯಂತ್ರಿಸುವ ವಿದ್ಯುತ್ ಪ್ರಚೋದನೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಕ್ಯಾಲ್ಸಿಯಂ ಮಟ್ಟವು ಕಡಿಮೆಯಾದಾಗ ಹೃದಯದ ಲಯದ ಅಡಚಣೆಗಳು ಸಂಭವಿಸುತ್ತವೆ. ಇದನ್ನು ಕಾರ್ಡಿಯಾಕ್ ಆರ್ಹೆತ್ಮಿಯಾ ಎಂದು ಕರೆಯಲಾಗುತ್ತದೆ. ಇದು ಹೃದಯ ಬಡಿತ, ಅನಿಯಮಿತ ಹೃದಯ ಬಡಿತಗಳು ಮತ್ತು ಎದೆಯಲ್ಲಿ ನೋವು ಉಂಟಾಗಲು ಕಾರಣವಾಗಬಹುದು.
ಕ್ಯಾಲ್ಸಿಯಂ ಹೆಚ್ಚಲು ಏನನ್ನು ಸೇವಿಸಬೇಕು
ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಲು ನಿರ್ದಿಷ್ಟವಾಗಿ ಪ್ರತಿದಿನ ಕೆಲವು ಆಹಾರಗಳನ್ನು ಸೇವಿಸಬೇಕು. ವಿಶೇಷವಾಗಿ ಹಾಲು, ಮೊಸರು ಮತ್ತು ಚೀಸ್ ತಿನ್ನಬೇಕು. ನೀವು ಲೆಟಿಸ್ ಮತ್ತು ಎಲೆಕೋಸು ಮುಂತಾದ ಹಸಿರು ತರಕಾರಿಗಳನ್ನು ಸಹ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬಹುದು. ಬಾದಾಮಿ, ಸೋಯಾ ಹಾಲು, ಸೋಯಾ ಉತ್ಪನ್ನಗಳು, ಪನೀರ್ ಇವು ಕೂಡ ಉತ್ತಮ. ಸಾಲ್ಮನ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳನ್ನು ಸಹ ತಿನ್ನಬೇಕು. ಚಿಯಾ ಬೀಜಗಳು ಮತ್ತು ಎಳ್ಳು ಆಹಾರದ ಭಾಗವಾಗಿರಬೇಕು. ಇವೆಲ್ಲವೂ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಈ ಮೇಲೆ ತಿಳಿಸಿದ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ.
ವಿಭಾಗ