ನವಜಾತ ಶಿಶುಗಳನ್ನು ಕಾಡುವ ಮಲಬದ್ಧತೆಗೆ ಪ್ರಮುಖ ಕಾರಣಗಳಿವು; ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಸುಲಭ ಉಪಾಯ
ಕನ್ನಡ ಸುದ್ದಿ  /  ಜೀವನಶೈಲಿ  /  ನವಜಾತ ಶಿಶುಗಳನ್ನು ಕಾಡುವ ಮಲಬದ್ಧತೆಗೆ ಪ್ರಮುಖ ಕಾರಣಗಳಿವು; ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಸುಲಭ ಉಪಾಯ

ನವಜಾತ ಶಿಶುಗಳನ್ನು ಕಾಡುವ ಮಲಬದ್ಧತೆಗೆ ಪ್ರಮುಖ ಕಾರಣಗಳಿವು; ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಸುಲಭ ಉಪಾಯ

ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ತೊಂದರೆ ಎಂದರೆ ಮಲಬದ್ಧತೆ. ಇದರಿಂದ ಮಕ್ಕಳು ಪದೇ ಪದೇ ಅಳುವುದು, ಕಿರುಚಾಡುವುದು ಮಾಡುತ್ತವೆ. ಹಾಗಾದರೆ ಎಳೆ ಕಂದಮ್ಮಗಳಿಗೆ ಮಲಬದ್ಧತೆ ಕಾಡಲು ಕಾರಣವೇನು, ಇದರ ನಿವಾರಣೆಗಳಿಗೆ ಮನೆಮದ್ದುಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ. (ಬರಹ: ಪ್ರಿಯಾಂಕ ಗೌಡ)

ನವಜಾತ ಶಿಶುಗಳ ಮಲಬದ್ಧತೆ ಸಮಸ್ಯೆಗೆ ಪ್ರಮುಖ ಕಾರಣಗಳಿವು; ಈ ಸಮಸ್ಯೆಗೆ ಮನೆಯಲ್ಲಿ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಸಲಹೆ
ನವಜಾತ ಶಿಶುಗಳ ಮಲಬದ್ಧತೆ ಸಮಸ್ಯೆಗೆ ಪ್ರಮುಖ ಕಾರಣಗಳಿವು; ಈ ಸಮಸ್ಯೆಗೆ ಮನೆಯಲ್ಲಿ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಸಲಹೆ

ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ಮಾತು ಬರುವ ಮಕ್ಕಳಾದರೆ ತಮಗೇನು ಸಮಸ್ಯೆಯಾಗುತ್ತಿದೆ ಎಂದು ತಿಳಿಸುತ್ತಾರೆ. ಆದರೆ, ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚುವುದೇ ಒಂದು ಸವಾಲು. ಹಾಗಂತ ಅದು ಕಷ್ಟವೇನಲ್ಲ. ನೀವು ಪೋಷಕರಾಗಿದ್ದರೆ, ನಿಮ್ಮ ಮಗುವಿನ ನಗು, ಬಿಕ್ಕಳಿಕೆ, ಅಳುವಿನಿಂದ ಆ ಮಗುವಿಗೇನು ಆಗುತ್ತಿದೆ ಎಂಬುದನ್ನು ಗುರುತಿಸಿರಬಹುದು. ಇದು ಮಗು ಹೊಂದಿರುವ ಸಮಸ್ಯೆಯ ಸುಳಿವಾಗಿದ್ದರೂ ಅದನ್ನು ಪತ್ತೆಹಚ್ಚಲು ನಿಮಗೆ ಸ್ವಲ್ಪ ಕಷ್ಟವಾಗಬಹುದು.

ಮಗುವಿನ ಆರೋಗ್ಯದಲ್ಲಿ ಬಹಳಷ್ಟು ಬದಲಾಗುತ್ತವೆ. ಕಾಲಕಾಲಕ್ಕೆ ಆ ಬದಲಾವಣೆಗಳು ನಿಮ್ಮ ಮಗುವಿಗೆ ಮಲಬದ್ಧತೆಯ ಸಂಕೇತವನ್ನು ನೀಡಬಹುದು. ಮಲಬದ್ಧತೆ ಅನ್ನುವುದು ಶಿಶು ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ ಕಾಡುವ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಹಾಗಂತ ಶಿಶುವಿನ ಮಲಬದ್ಧತೆ ತುಂಬಾ ಸಾಮಾನ್ಯವಲ್ಲ. ಇದನ್ನು ಕಡೆಗಣಿಸುವಂತಿಲ್ಲ.

ತಾಯಿಯ ಆಹಾರ ಸೇವನೆ ಸಹ ಇಲ್ಲಿ ಮುಖ್ಯವಾಗಿರುತ್ತದೆ. ಮಗು ಎದೆಹಾಲು ಕುಡಿಯುವುದರಿಂದ, ಘನ ಆಹಾರವನ್ನು ಪ್ರಾರಂಭಿಸಿದಾಗ ಅಥವಾ ಸಾಮಾನ್ಯಕ್ಕಿಂತ ಕಡಿಮೆ ಹಾಲು ಸೇವನೆ ಇತ್ಯಾದಿ ಆಹಾರದ ಬದಲಾವಣೆಗಳನ್ನು ಅವಲಂಬಿಸಿ ಮಗುವಿನ ಕರುಳಿನ ಚಲನೆಯ ಮಾದರಿ ಮತ್ತು ಸಮಯಗಳು ಆಗಾಗ್ಗೆ ಬದಲಾಗುತ್ತವೆ. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮಲವಿಸರ್ಜನೆಯ ಸಮಯದಲ್ಲಿ ನೋವು ಉಂಟಾಗಬಹುದು. ಮಗುವಿನ ಮಲವು ಮೃದುವಾಗಿರದಿದ್ದರೆ ಅಥವಾ ಸುಲಭವಾಗಿ ಹೋಗದೆ ಬಿಕ್ಕಳಿಸುತ್ತಿದ್ದರೆ, ಮಕ್ಕಳು ಜೋರಾಗಿ ಅಳುತ್ತಾರೆ. ಮಗು ಯಾಕಾಗಿ ಅಳುತ್ತಿದೆ ಎಂಬುದಾಗಿ ನೀವು ಪತ್ತೆ ಹಚ್ಚಬೇಕು. ಮಗುವು ಘನ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ ಮಲಬದ್ಧತೆ ಹೆಚ್ಚಾಗಿ ಪ್ರಾರಂಭವಾಗುತ್ತದೆ. ಶಿಶುಗಳು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಯಾವ ರೀತಿ ತೊಂದರೆ ಅನುಭವಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಸೂಚನೆಗಳು:

ಮಗುವಿನ ಮಲಬದ್ಧತೆ ಸಮಸ್ಯೆಯ ಲಕ್ಷಣಗಳು 

- ಶಿಶು ತನ್ನ ಮುಖವನ್ನು ಗಟ್ಟಿಯಾಗಿ ಹಿಡಿದುಕೊಂಡಿರುವಂತೆ ಮಾಡುತ್ತದೆ.

- ಬಾಯಲ್ಲಿ ಜೊಲ್ಲು ಹೆಚ್ಚಾಗಿ ಸುರಿಯುವುದು

- ಮಲ ವಿಸರ್ಜಿಸುವಾಗ ತೊಂದರೆ ಅನುಭವಿಸುತ್ತದೆ. ಶಕ್ತಿ ಮೀರಿ ಮಲ ವಿಸರ್ಜಿಸಲು ಪ್ರಯತ್ನಿಸುತ್ತದೆ.

- ಹೊಟ್ಟೆ ಉಬ್ಬುತ್ತದೆ ಅಥವಾ ಹೊಟ್ಟೆ ನೋವಿನಿಂದ ಸಂಕಟ ಪಡುತ್ತಿರುತ್ತದೆ.

- ಮಲ ಗಟ್ಟಿಯಾಗಿರುತ್ತದೆ.

- ಮಲ ವಿಸರ್ಜಿಸುವಾಗ ರಕ್ತ ಕಾಣಿಸಿಕೊಳ್ಳಬಹುದು. ಹಾಗೂ ಆ ಜಾಗದಲ್ಲಿ ಗಾಯದ ಗುರುತು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

- ಮಲಬದ್ಧತೆ ಇದ್ದರೆ ಮಗು ತನ್ನ ಪೃಷ್ಠವನ್ನು ಬಿಗಿಗೊಳಿಸುತ್ತದೆ.

- ಹೊಟ್ಟೆ ತುಂಬಿದಂತಾಗಿರುವುದರಿಂದ ಆಹಾರ ಸೇವಿಸಲು ನಿರಾಕರಿಸಬಹುದು.

ಮಲಬದ್ಧತೆಗೆ ಚಿಕಿತ್ಸೆ ನೀಡುವ ಮೊದಲು ನಿಮ್ಮ ಮಗುವಿಗೆ ಈ ಸಮಸ್ಯೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ನವಜಾತ ಶಿಶುಗಳಿಗಿಂತ ಆರು ವಾರಗಳಿಗಿಂತ ಹೆಚ್ಚು ತಿಂಗಳಾಗಿರುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಫಾರ್ಮುಲಾ ಹಾಲು ಕುಡಿಯುವ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚು. ಮನೆಯಲ್ಲೇ ಮದ್ದು ಮಾಡುವುದರಿಂದ ಶಿಶುಗಳಲ್ಲಿನ ಮಲಬದ್ಧತೆಯನ್ನು ತಡೆಗಟ್ಟಬಹುದು. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ..

ಮಗುವಿನಲ್ಲಿ ಮಲಬದ್ಧತೆ ತಡೆಗಟ್ಟಲು ಹೀಗೆ ಮಾಡಿ 

1. ವ್ಯಾಯಾಮ ಅಥವಾ ಮಸಾಜ್: ವಯಸ್ಕರಂತೆ ವ್ಯಾಯಾಮ ಮತ್ತು ಚಲನೆಯು ಮಗುವಿನ ಕರುಳನ್ನು ಉತ್ತೇಜಿಸುತ್ತದೆ. ಶಿಶುಗಳು ನಡೆಯಲು ಅಥವಾ ತೆವಳಲು ಸಾಧ್ಯವಿಲ್ಲದ ಅದು ಹೇಗೆ ವ್ಯಾಯಾಮ ಮಾಡಿಸುವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಭಾರತದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವ ಮುಂಚೆ ಎಣ್ಣೆ ಹಚ್ಚುವ ಪದ್ಧತಿ ಹಿಂದಿನಿಂದಲೂ ಇದೆ. ಕೇವಲ ಎಣ್ಣೆ ಹಚ್ಚಿ ಬಿಡುವುದಿಲ್ಲ. ಈ ವೇಳೆ ಮಕ್ಕಳ ಕೈ, ಕಾಲುಗಳನ್ನು ಮೇಲೆ, ಕೆಳಗೆ ಮಾಡುವುದು, ಸೈಕಲ್ ತುಳಿಯುವಂತೆ ಶಿಶುಗಳ ಕಾಲನ್ನು ಕೈಯಲ್ಲೇ ತಿರುಗಿಸಿ ಆರೈಕೆ ಮಾಡುತ್ತಾರೆ. ಅಲ್ಲದೆ ಮಗುವಿಗೆ ಚೆನ್ನಾಗಿ ಮಸಾಜ್ ಮಾಡಬೇಕು. ಹೊಟ್ಟೆಯನ್ನು ವೃತ್ತಾಕಾರವಾಗಿ ತಿಕ್ಕಬೇಕು. ಈ ರೀತಿ ಮಾಡುವುದರಿಂದ ಕರುಳುಗಳು ಕಾರ್ಯನಿರ್ವಹಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

2. ಬೆಚ್ಚಗಿನ ಸ್ನಾನ: ಮಗುವಿಗೆ ಬೆಚ್ಚಗಿನ ಸ್ನಾನವನ್ನು ಮಾಡಿಸುವುದರಿಂದ ಶಿಶುವಿನ ಕಿಬ್ಬೊಟ್ಟೆಯ ಸ್ನಾಯುಗಳಿಗೆ ವಿಶ್ರಾಂತಿ ಸಿಗುವಂತಾಗುತ್ತದೆ. ಇದರಿಂದ ಆಯಾಸ ಪರಿಹಾರವಾಗುತ್ತದೆ. ಎಣ್ಣೆ ಹಚ್ಚಿ ಬೆಚ್ಚಗಿನ ಸ್ನಾನ ಮಾಡುವುದು ಇನ್ನೂ ಉತ್ತಮ. ಇದು ಮಲಬದ್ಧತೆಗೆ ಸಂಬಂಧಿಸಿದ ಕೆಲವು ಅಸ್ವಸ್ಥತೆಯನ್ನು ಸಹ ನಿವಾರಿಸುತ್ತದೆ.

3. ಹೈಡ್ರೇಟ್ ಆಗಿರುವುದು ಮುಖ್ಯ: ಸಾಮಾನ್ಯವಾಗಿ ಶಿಶುಗಳು ಎದೆಹಾಲನ್ನೇ ಕುಡಿಯುವುದರಿಂದ ಯಾವುದೇ ಪೂರಕ ದ್ರವಗಳು ಅಗತ್ಯವಿಲ್ಲ. ಆದರೆ, ಘನ ಆಹಾರವನ್ನು ಸೇವಿಸುವ 6 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಎದೆಹಾಲಿನ ಜೊತೆ ಸಾಕಷ್ಟು ನೀರು ಕುಡಿಸಬೇಕು.

4. ಹಣ್ಣಿನ ರಸ (ಜ್ಯೂಸ್): ಘನ ಆಹಾರವನ್ನು ಸೇವಿಸಲು ಪ್ರಾರಂಭಿಸದ ಶಿಶುಗಳು ಒಣದ್ರಾಕ್ಷಿ, ಪೇರಳೆ ಅಥವಾ ಸೇಬುಹಣ್ಣಿನ ಜ್ಯೂಸ್ ಅನ್ನು ನೀಡಬೇಕು. ಜ್ಯೂಸ್‌ನಲ್ಲಿರುವ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಶಿಶುವಿಗೆ ಕಷ್ಟವಾಗುತ್ತದೆ. ಇದರಿಂದ ಹೆಚ್ಚು ದ್ರವವು ಕರುಳನ್ನು ಪ್ರವೇಶಿಸುತ್ತದೆ. ಇದು ನೀರಿನ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ನೀರು ಮಲವನ್ನು ಮೃದುಗೊಳಿಸುತ್ತದೆ. ಆದರೆ, ಮೊದಲ ಬಾರಿಗೆ ಮಗುವಿಗೆ ಜ್ಯೂಸ್ ನೀಡುವ ಮೊದಲು ಪೋಷಕರು ಅಥವಾ ಆರೈಕೆದಾರರು ಮಕ್ಕಳ ವೈದ್ಯರಲ್ಲಿ ಸಲಹೆ ಕೇಳವುದು ಒಳಿತು.

5. ಶಿಶು ಆಹಾರ: ನಿಮ್ಮ ಮಗು ಘನ ಆಹಾರವನ್ನು ತಿನ್ನುತ್ತಿದ್ದರೆ, ಹಣ್ಣುಗಳು ಮತ್ತು ತರಕಾರಿಗಳಿಗಿಂತ ಹೆಚ್ಚು ನಾರಿನಾಂಶ ಹೊಂದಿರುವ ಹಸಿ ಬಟಾಣಿ ಅಥವಾ ಒಣದ್ರಾಕ್ಷಿಗಳನ್ನು ಪ್ರಯತ್ನಿಸಿ. ಗೋಧಿ, ಬಾರ್ಲಿ ಅಥವಾ ಬಹುಧಾನ್ಯಗಳನ್ನು ತಯಾರಿಸಿ ಶಿಶುವಿಗೆ ಉಣಿಸಿ. ಇದು ಅಕ್ಕಿ ಧಾನ್ಯಕ್ಕಿಂತ ಹೆಚ್ಚು ನಾರಿನಾಂಶವನ್ನು ಹೊಂದಿರುತ್ತದೆ.

ಅಪರೂಪವಾಗಿ, ಶಿಶು ಮಲಬದ್ಧತೆ ಹಿರ್ಷ್‌ಸ್ಪ್ರಂಗ್ ಕಾಯಿಲೆ, ಹೈಪೋಥೈರಾಯ್ಡಿಸಮ್ ಅಥವಾ ಸಿಸ್ಟಿಕ್ ಫೈಬ್ರೋಸಿಸ್‌ನಂತಹ ಆಧಾರವಾಗಿರುವ ಸ್ಥಿತಿಯಿಂದ ಉಂಟಾಗುತ್ತದೆ. ಮನೆಮದ್ದುಗಳು ಸಾಮಾನ್ಯವಾಗಿ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ, ಇತರ ರೋಗಲಕ್ಷಣಗಳು ಇದ್ದರೆ ಉದಾಹರಣೆಗೆ ಹಿಗ್ಗಿದ ಹೊಟ್ಟೆ, ವಾಂತಿ, ಮಲದಲ್ಲಿ ರಕ್ತ, ಕಿಬ್ಬೊಟ್ಟೆಯ ನೋವು ಇತ್ಯಾದಿ ಇದ್ದರೆ ಕೂಡಲೇ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

Whats_app_banner