Summer Care: ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಕಾಡುವ ಸಮಸ್ಯೆಗಳಿವು, ಬಿಸಿಲಿನ ತಾಪದಿಂದ ಪುಟ್ಟ ಕಂದಮ್ಮನನ್ನು ಹೀಗೆ ರಕ್ಷಿಸಿ-health news child care summer health how to take care of baby in summer summer health problems for infants rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Summer Care: ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಕಾಡುವ ಸಮಸ್ಯೆಗಳಿವು, ಬಿಸಿಲಿನ ತಾಪದಿಂದ ಪುಟ್ಟ ಕಂದಮ್ಮನನ್ನು ಹೀಗೆ ರಕ್ಷಿಸಿ

Summer Care: ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಕಾಡುವ ಸಮಸ್ಯೆಗಳಿವು, ಬಿಸಿಲಿನ ತಾಪದಿಂದ ಪುಟ್ಟ ಕಂದಮ್ಮನನ್ನು ಹೀಗೆ ರಕ್ಷಿಸಿ

ನವಜಾತ ಶಿಶುಗಳು ಹಾಗೂ ಪುಟ್ಟ ಕಂದಮ್ಮಗಳನ್ನು ಕಾಳಜಿ ಮಾಡುವುದು ಸುಲಭದ ಮಾತಲ್ಲ. ಎಲ್ಲಾ ಸಮಯದಲ್ಲೂ ಇವರ ಮೇಲೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ಬಿಸಿಲಿನ ತಾಪ ಹೆಚ್ಚಿರುವ ಈ ಸಮಯದಲ್ಲಿ ಅವರನ್ನು ಇಲ್ಲದ ಸಮಸ್ಯೆಗಳು ಕಾಡಬಹುದು. ಬೇಸಿಗೆಯಲ್ಲಿ ನವಜಾತ ಶಿಶುಗಳ ಆರೈಕೆ ಹೇಗಿರಬೇಕು ನೋಡಿ.

ಬಿಸಿಲಿನ ತಾಪದಿಂದ ಪುಟ್ಟ ಕಂದಮ್ಮನನ್ನು ಹೀಗೆ ರಕ್ಷಿಸಿ
ಬಿಸಿಲಿನ ತಾಪದಿಂದ ಪುಟ್ಟ ಕಂದಮ್ಮನನ್ನು ಹೀಗೆ ರಕ್ಷಿಸಿ

ಬೇಸಿಗೆಯಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈ ವರ್ಷ ಹಿಂದೆಂದಿಗಿಂತಲೂ ಬಿಸಿಲಿನ ತಾಪ ಜೋರಾಗಿದೆ. ಹಾಗಾಗಿ ಸಾಕಷ್ಟು ಎಚ್ಚರ ವಹಿಸಬೇಕು. ಅದರಲ್ಲೂ ನವಜಾತ ಶಿಶುಗಳು ಈ ಬಿಸಿಲಿನ ತಾಪ ತಡೆದುಕೊಳ್ಳದೇ ಇರಬಹುದು. ಮನೆಯೊಳಗೆ ಇದ್ದರೂ ತಾಪಮಾನ ಏರಿಕೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಮುಖ್ಯವಾಗಿ ಮಕ್ಕಳ ತ್ವಚೆಯ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು.

ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಕಾಡುವ ಪ್ರಮುಖ ಸಮಸ್ಯೆಗಳು

ಡೀಹೈಡ್ರೇಷನ್‌: ಬೇಸಿಗೆಯಲ್ಲಿ ಚಿಕ್ಕ ಮಕ್ಕಳಿಗೂ ಸಹ ಡೀಹೈಡ್ರೇಷನ್‌ ಸಮಸ್ಯೆ ಕಾಡಬಹುದು. ಅತಿಯಾದ ತಾಪಮಾನದಿಂದ ಮಕ್ಕಳು ಈ ಸಮಸ್ಯೆ ಎದುರಿಸಬಹುದು. ಹಾಗಾಗಿ ಅವರಿಗೆ ಆಗಾಗ ಹಾಲೂಡಿಸಬೇಕು. 6 ತಿಂಗಳ ಮೇಲಿನ ಮಕ್ಕಳಾದ್ರೆ ದ್ರವಾಹಾರಗಳನ್ನು ನೀಡಬೇಕು. ಬಗ್ಗೆ ಗೊಂದಲ ಇದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಅತಿಸಾರ: ಬೇಸಿಗೆಯಲ್ಲಿ ಕಂದಮ್ಮಗಳು ಹಾಗೂ ಮಕ್ಕಳನ್ನು ಕಾಡುವ ಪ್ರಮುಖ ಸಮಸ್ಯೆ ಇದು. ಅತಿಸಾರ ಅಥವಾ ಡಯರಿಯಾ ಉಂಟಾಗಲು ಪ್ರಮುಖ ಕಾರಣ ಸ್ವಚ್ಛತೆ ಇಲ್ಲದೇ ಇರುವುದು. ಕೊಳಕು ಕೈಗಳಿಂದ ಆಹಾರ ತಿನ್ನುವುದು ಅಥವಾ ತಿನ್ನಿಸುವುದು ಇದಕ್ಕೆ ಕಾರಣವಾಗಬಹುದು. ಕುಡಿಯುವ ನೀರಿನಲ್ಲಿ ಸಮಸ್ಯೆ ಇದ್ದರೂ ಅತಿಸಾರ ಉಂಟಾಗಬಹುದು.

ವಾಂತಿ: ಅತಿಸಾರದಂತೆ ಬೇಸಿಗೆಯಲ್ಲಿ ಮಕ್ಕಳನ್ನು ಕಾಡುವ ಇನ್ನೊಂದು ಪ್ರಮುಖ ಸಮಸ್ಯೆ ವಾಂತಿ. ಆಹಾರದಲ್ಲಿ ವ್ಯತ್ಯಯ ಉಂಟಾದಾಗ ಮಕ್ಕಳಿಗೆ ವಾಂತಿ ಶುರುವಾಗಬಹುದು. ಎದೆಹಾಲೂಡಿಸುವ ತಾಯಿಯ ಆಹಾರವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು.

ಚರ್ಮದ ಅಲರ್ಜಿ: ಬೇಸಿಗೆಯಲ್ಲಿ ಪುಟ್ಟ ಕಂದಮ್ಮಗಳಿಗೆ ಚರ್ಮದ ಅಲರ್ಜಿಯಾಗುವುದು ಬಹಳ ಬೇಗ. ಇದು ಬೆವರು, ಬಟ್ಟೆ, ನೀರು ಹೀಗೆ ಹಲವರು ಕಾರಣಗಳಿಂದ ಆಗಬಹುದು. ಹೆಚ್ಚು ಹೊತ್ತು ಡೈಪರ್‌ ಹಾಕಿ ಇರಿಸಿದರೆ, ಆ ಜಾಗದಲ್ಲಿ ಅಲರ್ಜಿ ಉಂಟಾಗಬಹುದು. ಕೆಲವು ಬಟ್ಟೆಗಳು ಬೇಸಿಗೆಯಲ್ಲಿ ಮಕ್ಕಳಿಗೆ ಚರ್ಮದ ಸಮಸ್ಯೆ ಉಂಟು ಮಾಡಬಹುದು.

ಬೇಸಿಗೆಯಲ್ಲಿ ನವಜಾತ ಶಿಶುಗಳ ಆರೈಕೆಗೆ ಈ ಕ್ರಮ ಪಾಲಿಸಿ

ಸ್ವಚ್ಛತೆಯತ್ತ ಗಮನ ಹರಿಸಿ

ಬೇಸಿಗೆಯಲ್ಲಿ ಮಕ್ಕಳನ್ನು ಬಿಸಿಲಿನಿಂದ ರಕ್ಷಿಸುವುದು ಮಾತ್ರವಲ್ಲ, ಸ್ವಚ್ಛತೆಗೂ ಗಮನ ನೀಡಬೇಕು. ಸ್ವಚ್ಛತೆ ಎಂದರೆ ಕೇವಲ ಮಕ್ಕಳನ್ನು ಸ್ನಾನ ಮಾಡಿಸುವುದು ಎಂದಲ್ಲ. ಅವುಗಳಿಗೆ ತೊಡಿಸುವ ಬಟ್ಟೆ, ಬೆಡ್‌ ಅಥವಾ ತೊಟ್ಟಿಲಿಗೆ ಹಾಸುವ ಬಟ್ಟೆ, ಮೈ ಒರೆಸುವ ಬಟ್ಟೆ, ಮಕ್ಕಳು ಮಲಗುವ ಕೋಣೆ ಈ ಎಲ್ಲವೂ ಸ್ವಚ್ಛವಾಗಿರಬೇಕು. ಇದರೊಂದಿಗೆ ಸೇವಿಸುವ ಆಹಾರ ಹಾಗೂ ನೀರಿನ ವಿಚಾರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಗಮನ ನೀಡಬೇಕು. ಮಕ್ಕಳ ಚರ್ಮದ ಸ್ವಚ್ಛತೆಗೆ ಈ ಸಮಯದಲ್ಲಿ ಹೆಚ್ಚಿನ ಒತ್ತು ನೀಡಬೇಕು. ಇದರಲ್ಲೂ ಕಂಕುಳ, ತೊಡೆ ಸಂಧಿ ಇಂತಹ ಬೆವರು ನಿಲ್ಲುವ ಜಾಗದಲ್ಲಿ ದುದ್ದು, ರಿಂಗ್‌ವರ್ಮ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೇಸಿಗೆಯಲ್ಲಿ ನವಜಾತ ಶಿಶುಗಳಿಗೆ ಎರಡು ಬಾರಿ ಸ್ನಾನ ಮಾಡಿಸುವುದು ಉತ್ತಮ.

ಬಟ್ಟೆ ಹೀಗಿರಲಿ

ಬೇಸಿಗೆಯಲ್ಲಿ ನವಜಾತ ಶಿಶುಗಳ ವಿಚಾರದಲ್ಲಿ ಗಮನ ಹರಿಸಬೇಕಾದ ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಬಟ್ಟೆ. ಈ ಸಮಯದಲ್ಲಿ ಅವುಗಳಿಗೆ ತೆಳುವಾದ ಹತ್ತಿ ಬಟ್ಟೆಯನ್ನೇ ಹಾಕಿಸಿ. ಸಾಧ್ಯವಾದಷ್ಟು ಸಡಿಲವಾದ ಬಟ್ಟೆ ಹಾಕಿ. ಬಳಿ ಬಟ್ಟೆಗೆ ಹೆಚ್ಚು ಪ್ರಾಮುಖ್ಯ ನೀಡಿ. ಸೊಳ್ಳೆಗಳು ಕಡಿಯದಂತೆ ಉದ್ದ ತೋಳಿನ ಅಂಗಿ ಹಾಕಿಸಿ. ತೆಳ್ಳನೆಯ ಪ್ಯಾಂಟ್‌ ಹಾಕುವುದು ಉತ್ತಮ.

ಸೂರ್ಯನ ಕಿರಣಗಳಿಂದ ರಕ್ಷಿಸಿ

ನವಜಾತ ಶಿಶುಗಳು ಅದರಲ್ಲೂ 6 ತಿಂಗಳ ಒಳಗಿನ ಮಕ್ಕಳಲ್ಲಿ ಮೆಲನಿನ್‌ ಅಂಶ ಕಡಿಮೆ ಇರುವ ಕಾರಣ ಸೂರ್ಯನ ಕಿರಣಗಳಿಂದ ಅವರ ಚರ್ಮವನ್ನು ರಕ್ಷಿಸಬೇಕು. ಮಕ್ಕಳು ಕಣ್ಣು, ಚರ್ಮ, ಕೂದಲಿನ ವಿಚಾರದಲ್ಲಿ ಸಾಕಷ್ಟು ಕಾಳಜಿ ಅಗತ್ಯ. ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಹೊರಗಡೆ ಕರೆದುಕೊಂಡು ಹೋಗದೇ ಇದ್ದರೆ ಉತ್ತಮ.

ಆಯಿಲ್‌ ಮಸಾಜ್‌ ತಪ್ಪಿಸಬೇಡಿ

ಬೇಸಿಗೆ ಕಾಲದಲ್ಲಿ ಮಗುವಿಗೆ ಕಿರಿಕಿರಿ ಆಗುತ್ತದೆ ಎಂಬ ಕಾರಣಕ್ಕೆ ಆಯಿಲ್‌ ಮಸಾಜ್‌ ಮಾಡದೇ ಇರಬೇಡಿ. ಇದು ಬೆಳೆಯುವ ಎಳೆ ಕಂದಮ್ಮಗಳ ತ್ವಚೆಗೆ ಬಹಳ ಮುಖ್ಯ. ಆದರೆ ಸ್ವಲ್ಪ ಎಣ್ಣೆ ಕಡಿಮೆ ಹಾಕಿ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ.

ಧೂಳಿನಿಂದ ರಕ್ಷಿಸಿ

ಮೊದಲೇ ಹೇಳಿದಂತೆ ಎಳೆ ಕಂದಮ್ಮನನ್ನು ಸ್ವಚ್ಛವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಧೂಳು ಕೂಡ ಹೆಚ್ಚಿರುತ್ತದೆ. ಗಾಳಿಯಲ್ಲಿ ಧೂಳಿನಾಂಶ ಹಾರಿ ಬರಬಹುದು. ಸಾಧ್ಯವಾದಷ್ಟು ಕಿಟಕಿ ಬಾಗಿಲುಗಳನ್ನು ಮುಚ್ಚಿಡಿ. ಆಗಾಗ ಮನೆ ಸ್ವಚ್ಛ ಮಾಡುವತ್ತ ಗಮನ ನೀಡಿ. ಧೂಳು, ಬೆವರು ಸೇರಿ ಚರ್ಮದ ಸಮಸ್ಯೆಗಳು ಹೆಚ್ಚಬಹುದು. ಹೀಗಾಗಿ ಈ ವಿಚಾರದಲ್ಲೂ ಎಚ್ಚರ ಅವಶ್ಯ.

ನವಜಾತ ಶಿಶುಗಳ ಅಥವಾ ಪುಟ್ಟ ಕಂದಮ್ಮಗಳ ಕಾಳಜಿ ಎಂದಾಕ್ಷಣ ಮನೆಯೇ ಮುಖ್ಯ. ಯಾಕೆಂದರೆ ಈ ಮಕ್ಕಳು ಹೆಚ್ಚು ಮನೆಯಲ್ಲಿಯೇ ಸಮಯ ಕಳೆಯುತ್ತವೆ. ಆಗಾಗಿ ಮನೆಯ ಸ್ವಚ್ಛತೆಯ ಕಡೆಗೆ ಮೊದಲು ಗಮನ ನೀಡಬೇಕು. ಇದರೊಂದಿಗೆ ಹೊರಗಡೆ ಆಟವಾಡಿ ಬರುವ ದೊಡ್ಡ ಮಕ್ಕಳು ನೇರವಾಗಿ ಚಿಕ್ಕ ಮಗುವನ್ನು ಮುಟ್ಟದಂತೆ ನೋಡಿಕೊಳ್ಳಿ. ಈ ಮೇಲಿನ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಪುಟ್ಟ ಕಂದಮ್ಮನಿಗೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ರಕ್ಷಿಸಿಕೊಳ್ಳಬಹುದು.

mysore-dasara_Entry_Point