ಕನ್ನಡ ಸುದ್ದಿ  /  ಜೀವನಶೈಲಿ  /  Dengue: ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಕಾಣಿಸಿದ್ರೆ ಎದುರಾಗಬಹುದು ಇಷ್ಟೆಲ್ಲಾ ಸಮಸ್ಯೆ; ಮುನ್ನೆಚ್ಚರಿಕೆ ಮರಿಬೇಡಿ

Dengue: ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಕಾಣಿಸಿದ್ರೆ ಎದುರಾಗಬಹುದು ಇಷ್ಟೆಲ್ಲಾ ಸಮಸ್ಯೆ; ಮುನ್ನೆಚ್ಚರಿಕೆ ಮರಿಬೇಡಿ

ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಅವಶ್ಯ. ಅದರಲ್ಲೂ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಗಮನ ನೀಡಬೇಕು. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಕಾಣಿಸುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತೆ, ಮುನ್ನೆಚ್ಚರಿಕೆ ಹೇಗೆ ಎಂಬ ವಿವರ ಇಲ್ಲಿದೆ. (ಬರಹ: ಡಾ. ದೀಪ್ತಿ ಅಶ್ವಿನ್)

ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಕಾಣಿಸಿದ್ರೆ ಎದುರಾಗಬಹುದು ಇಷ್ಟೆಲ್ಲಾ ಸಮಸ್ಯೆ; ಎಚ್ಚರ ಇರಲಿ
ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಕಾಣಿಸಿದ್ರೆ ಎದುರಾಗಬಹುದು ಇಷ್ಟೆಲ್ಲಾ ಸಮಸ್ಯೆ; ಎಚ್ಚರ ಇರಲಿ

ಡೆಂಗ್ಯೂ ಎಂಬುದು ಫ್ಲಾವಿವೈರಸ್‌ನಿಂದ ಉಂಟಾಗುವ ವೈರಲ್ ಜ್ವರವಾಗಿದ್ದು, ಇದು ಈಡಿಸ್ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುತ್ತದೆ. ಭಾರತದಾದ್ಯಂತ ಡೆಂಗ್ಯೂ ಸಾಮಾನ್ಯವಾಗಿದೆ. ಇದು ಗಂಭೀರ ಕಾಯಿಲೆಯಾಗಿದ್ದು, ಸ್ಥಳೀಯ ವೈದ್ಯಕೀಯ ಅಧಿಕಾರಿಗಳಿಗೆ ಇದರ ಬಗ್ಗೆ ವರದಿ ಮಾಡುವುದು ಅವಶ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಹೆಚ್ಚಿನ ಸೋಂಕುಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ರೋಗಲಕ್ಷಣಗಳನ್ನು ತೋರಿಸುವ ಜನರಲ್ಲಿ, ಮೊದಲ ಹಂತವು 1 ರಿಂದ 2 ವಾರಗಳವರೆಗೆ ಜ್ವರವಿರುತ್ತದೆ, ನಂತರ ನಿರ್ಣಾಯಕ ಸ್ಥಿತಿ ಮತ್ತು ಕೊನೆಗೆ ಚೇತರಿಸಿಕೊಳ್ಳುತ್ತಾರೆ. ಜ್ವರವಿರುವ ಹಂತದಲ್ಲಿ, ನೀವು ಹೆಚ್ಚು ತೀವ್ರವಾದ ಜ್ವರ, ಮುಖ ಕೆಂಪುಗಟ್ಟುವುದು, ದೇಹದಲ್ಲಿ ನೋವು, ಗಂಟಲು ನೋವು, ಕಡಿಮೆ ಹಸಿವು ಮತ್ತು ವಾಂತಿಯಂತಹ ಅನಾರೋಗ್ಯವನ್ನು ಅನುಭವಿಸಬಹುದು.

ನಿರ್ಣಾಯಕ ಹಂತದಲ್ಲಿ, ಜ್ವರ ಕಡಿಮೆಯಾಗಲು ಪ್ರಾರಂಭವಾಗುತ್ತದೆ, ಆದರೆ ಈ ಸಂದರ್ಭಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ನೀವು ನಿರಂತರವಾಗಿ ವಾಂತಿ, ತೀವ್ರ ಹೊಟ್ಟೆ ನೋವು ಅಥವಾ ತುಂಬಾ ದಣಿವನ್ನು ಅನುಭವಿಸುತ್ತಿದ್ದರೆ, ದಯವಿಟ್ಟು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ. ಚೇತರಿಕೆಯ ಹಂತದಲ್ಲಿ, ರೋಗಿಗೆ ಮತ್ತೆ ಹಸಿವಾಗಲು ಆರಂಭವಾಗುತ್ತದೆ ಹಾಗೂ ಆರೋಗ್ಯವು ನಿಧಾನಕ್ಕೆ ಚೇತರಿಸಿಕೊಳ್ಳಲು ಶುರುವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಡೆಂಗ್ಯೂ

ಗರ್ಭಾವಸ್ಥೆಯಲ್ಲಿ ಮತ್ತು ಗರ್ಭಿಣಿ ಅಲ್ಲದಿದ್ದರೂ ಕೂಡ ರೋಗಲಕ್ಷಣಗಳು ಒಂದೇ ರೀತಿ ಇರುತ್ತವೆ. ಗರ್ಭಾವಸ್ಥೆಯ ಮೊದಲ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಡೆಂಗ್ಯೂ ಪ್ರಭಾವವು ಹೆಚ್ಚು ತೀವ್ರವಾಗಿರುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ, ಇದು ಗರ್ಭಪಾತಕ್ಕೆ ಕಾರಣವಾಗಬಹುದು. ಗರ್ಭಾವಸ್ಥೆಯ ತ್ರೈಮಾಸಿಕದಲ್ಲಿ, ಡೆಂಗ್ಯೂನಿಂದಾಗಿ ಶಿಶುಗಳು ಕಡಿಮೆ ತೂಕ, ಅಕಾಲಿಕ ಜನನ ಮತ್ತು ಸಿಸೇರಿಯನ್ ಹೆರಿಗೆಯ ಅಗತ್ಯವಿರುವ ಸ್ಥಿತಿಗಳಿಗೆ ಕಾರಣವಾಗಬಹುದು. ಇದು ತಾಯಿಯಿಂದ ಶಿಶುಗಳಿಗೆ ಹರಡಬಹುದು, ಆ ಮೂಲಕ ಅವರಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅನಾರೋಗ್ಯದಂತೆ, ಡೆಂಗ್ಯೂ ಚಿಕಿತ್ಸೆ ಕೂಡ ಗರ್ಭಿಣಿಯರಿಗೆ ಮತ್ತು ಇತರ ಮಹಿಳೆಯರಿಗೆ ಒಂದೇ ರೀತಿ ಇರುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ದ್ರವಾಹಾರಗಳನ್ನು ಕುಡಿಯಿರಿ. ಜ್ವರ ಕಡಿಮೆ ಮಾಡಲು ನೀವು ಪ್ಯಾರಸಿಟಮಾಲ್ ಅನ್ನು ತೆಗೆದುಕೊಳ್ಳಬಹುದು. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ತೀವ್ರವಾಗಿದ್ದರೆ, ಆಸ್ಪತ್ರೆಗೆ ಸೇರಿಸುವುದು ಸೂಕ್ತ. ವೈದ್ಯರು ಅನಾರೋಗ್ಯವನ್ನು ಖಚಿತಪಡಿಸಲು ಮತ್ತು ಅದು ಎಷ್ಟು ಗಂಭೀರವಾಗಿದೆ ಎಂಬುದನ್ನು ಪರೀಕ್ಷಿಸಲು ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನು ಮಾಡುತ್ತಾರೆ. ಅನಾರೋಗ್ಯದ ಸಮಯದಲ್ಲಿ ವೈದ್ಯರ ಸಲಹೆ ಪಡೆಯದೇ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಪ್ರಸೂತಿ ವೈದ್ಯರನ್ನು ಸಂಪರ್ಕಿಸಿ, ಅವರು ಫಿಸಿಶಿಯನ್ ಜೊತೆಗೆ ಸೇರಿ ನಿಮಗೆ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತಾರೆ.

ಡಾ. ದೀಪ್ತಿ ಅಶ್ವಿನ್ (ಎಡಚಿತ್ರ)
ಡಾ. ದೀಪ್ತಿ ಅಶ್ವಿನ್ (ಎಡಚಿತ್ರ)

ಡೆಂಗ್ಯೂ ಬಾರದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳು

ಡೆಂಗ್ಯೂ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸೊಳ್ಳೆಗಳಿಂದ ದೂರವಿರುವುದು. ನಿಮ್ಮನ್ನು ರಕ್ಷಿಸಿಕೊಳ್ಳಲು, ಆದಷ್ಟು ಮನೆಯೊಳಗೆ ಇರಿ, ನಿಮ್ಮ ದೇಹವನ್ನು ಪೂರ್ತಿಯಾಗಿ ಮುಚ್ಚುವ ಬಟ್ಟೆಗಳನ್ನು ಧರಿಸಿ, ಸೊಳ್ಳೆ ನಿವಾರಕವನ್ನು ಬಳಸಿ ಮತ್ತು ಸೊಳ್ಳೆ ಪರದೆಗಳನ್ನು ಹಾಕಿಕೊಂಡು ಮಲಗಿಕೊಳ್ಳಿ. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು, ಹತ್ತಿರದ ಜಾಗಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದು ಕೊಳಗಳು, ಮಡಕೆಗಳು, ಹೂದಾನಿಗಳು, ಖಾಲಿ ಪಾತ್ರೆಗಳು ಅಥವಾ ನಿರ್ಮಾಣ ಸ್ಥಳಗಳಂತಹ ಜಾಗಗಳನ್ನು ಒಳಗೊಂಡಿರುತ್ತದೆ. ಯಾವುದೇ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಗರ್ಭಾವಸ್ಥೆಯಲ್ಲಿ ಸದೃಢವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

(ಲೇಖನ: ಡಾ. ದೀಪ್ತಿ ಅಶ್ವಿನ್, ಕನ್ಸಲ್ಟೆಂಟ್ - ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಣಿಪಾಲ್ ಆಸ್ಪತ್ರೆ ವೈಟ್‌ಫೀಲ್ಡ್)