Dengue: ಮಳೆರಾಯನ ಆಗಮನದ ನಡುವೆ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣಗಳು; ಈ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಮರಿಬೇಡಿ
ಈ ವರ್ಷ ಬಿಸಿಲಿನ ಬೇಗೆ ಹೆಚ್ಚಿದ್ದ ಕಾರಣ ಎಲ್ಲರೂ ಮಳೆಗಾಗಿ ಕಾಯುತ್ತಿದ್ದರು. ಇದೀಗ ವರುಣರಾಯನ ಆಗಮನವಾಗಿದ್ದು, ಮಳೆಯೊಂದಿಗೆ ಡೆಂಗ್ಯೂ ಪ್ರಕರಣಗಳೂ ಹೆಚ್ಚುತ್ತಿವೆ. ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಖಂಡಿತ ನಿರ್ಲಕ್ಷ್ಯ ಮಾಡುವಂತಿಲ್ಲ. ಅದಕ್ಕಾಗಿ ಈ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಮಳೆರಾಯನ ಆಗಮನದಿಂದ ಮನಸ್ಸು ಖುಷಿಯಿಂದ ಕುಣಿದಾಡುವುದು ಸಹಜ. ಆದರೆ ವರುಣನ ಬರುವಿಕೆಯೊಂದಿಗೆ ಸೊಳ್ಳೆಗಳು ಜೊತೆಯಾಗಿಯೇ ಬರುತ್ತವೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಹಲವು ರೋಗಗಳು ಹರಡುತ್ತವೆ. ಇತ್ತೀಚಿಗೆ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ. ಡೆಂಗ್ಯೂ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದ್ರೆ ಅದು ಆರೋಗ್ಯಕ್ಕೆ ಮಾತ್ರವಲ್ಲ ಜೀವಕ್ಕೂ ಹಾನಿ ಮಾಡಬಹುದು. ಹಾಗಾಗಿ ಈ ಕುರಿತು ಮುನ್ನೆಚ್ಚರಿಕೆ ವಹಿಸುವುದು ಬಹಳ ಅವಶ್ಯ. ಡೆಂಗ್ಯೂ ಹರಡುವುದು ಹೇಗೆ, ಇದರ ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಡೆಂಗ್ಯೂ ರೋಗ ಹರಡುವುದು ಹೇಗೆ?
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೊಳ್ಳೆಗಳು ಹೆಚ್ಚಿರುವ ಪ್ರದೇಶದಲ್ಲಿ ಡೆಂಗ್ಯೂ ವೇಗವಾಗಿ ಹರಡುತ್ತದೆ. ಮನೆಯ ಬಳಿ ಕೊಳಚೆ ನೀರಿದ್ದರೆ ಆ ನೀರಿನಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ಮಲೇರಿಯಾ ಹರಡುವ ಸೊಳ್ಳೆಗಳು ರಾತ್ರಿ ವೇಳೆ ಕಚ್ಚಿದರೆ, ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆ ಕಚ್ಚುತ್ತವೆ. ಈ ಜ್ವರವು ಮನುಷ್ಯರಿಗೆ ಕೀಲು ಹಾಗೂ ಮೂಳೆಗಳ ನೋವಿಗೆ ಕಾರಣವಾಗುತ್ತದೆ. ಹಾಗಾಗಿ ಅದನ್ನು ಮೂಳೆ ಜ್ವರ ಎಂದೂ ಕರೆಯುತ್ತಾರೆ.
ಡೆಂಗ್ಯೂ ಜ್ವರದ ವೈರಸ್ ಸೊಳ್ಳೆ ಮನುಷ್ಯನಿಗೆ ಕಚ್ಚಿದ ನಂತರ ಎರಡು ಅಥವಾ ಏಳು ದಿನಗಳವರೆಗೆ ರಕ್ತದಲ್ಲಿ ಸೋಂಕು ಹರಡಲು ಕಾರಣವಾಗುತ್ತದೆ. ಕಚ್ಚಿದ ನಾಲ್ಕರಿಂದ ಐದು ದಿನಗಳ ನಂತರ ಡೆಂಗ್ಯೂ ಜ್ವರದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಾಗ, ಈಗಾಗಲೇ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯಿಂದ ಅದು ಇತರರಿಗೂ ಹರಡಬಹುದು. ಡೆಂಗ್ಯೂ ಜ್ವರದಿಂದ ವ್ಯಕ್ತಿ ಚೇತರಿಸಿಕೊಂಡರೂ ಆ ವ್ಯಕ್ತಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗಬಹುದು.
ಡೆಂಗ್ಯೂ ಜ್ವರದ ರೋಗಲಕ್ಷಣಗಳು
ಡೆಂಗ್ಯೂ ಜ್ವರ ಬಂದ ನಾಲ್ಕೈದು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಲು ಆರಂಭವಾಗುತ್ತದೆ. ಸೋಂಕಿನ ತೀವ್ರತೆಯ ಆಧಾರದ ಮೇಲೆ ಈ ಲಕ್ಷಣಗಳು ಸುಮಾರು 10 ರಿಂದ 15 ದಿನಗಳವರೆಗೆ ಇರುತ್ತದೆ.
ಡೆಂಗ್ಯೂ ಜ್ವರದ ಸಾಮಾನ್ಯ ಲಕ್ಷಣಗಳು
* ವಾಕರಿಕೆ
* ದೇಹದ ಉಷ್ಣಾಂಶದಲ್ಲಿ ಹಠಾತ್ ಏರಿಕೆಯಾಗುವುದು
* ಕಣ್ಣುಗಳ ಹಿಂದೆ ನೋವು ಉಂಟಾಗುವುದು
* ತೀವ್ರ ತಲೆನೋವು
* ಕೀಲು ಮತ್ತು ಸ್ನಾಯು ನೋವು
* ತೀವ್ರ ಆಯಾಸ
* ವಾಂತಿ
ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಕಾಣಿಸಿದರೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ತಜ್ಞರ ವೈದ್ಯರ ಬಳಿ ಸಲಹೆ ಪಡೆಯಬೇಕು.
ಡೆಂಗ್ಯೂ ತಡೆಯಲು ಮುಂಜಾಗೃತ ಕ್ರಮಗಳು
ಡೆಂಗ್ಯೂ ರೋಗವು ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇರುವ ಕಾರಣ ಈ ಬಗ್ಗೆ ಎಚ್ಚರ ವಹಿಸಬೇಕಾದದ್ದು ಅವಶ್ಯ. ಡೆಂಗ್ಯೂ ರೋಗ ಬಾರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ.
* ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯುವುದು: ಡೆಂಗ್ಯೂವಿನಿಂದ ಮುಂಜಾಗೃತೆ ವಹಿಸಲು ಮೊದಲು ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಯಬೇಕು. ಮನೆಯ ವಾತಾವರಣವನ್ನು ಚೆನ್ನಾಗಿ ಇರಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
* ನೀರು ನಿಲ್ಲದಂತೆ ನೋಡಿಕೊಳ್ಳಬೇಕು: ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಹೂವಿನ ಕುಂಡಗಳು, ಪಾಟ್‌ಗಳು, ಟೈಯರ್‌ಗಳು, ಒಡೆದ ಪಾತ್ರೆ ಮುಂತಾದವುಗಳಲ್ಲಿ ನೀರು ತುಂಬಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ನೆರವಾಗುತ್ತದೆ. ಮೊದಲು ಅವುಗಳನ್ನು ಸ್ವಚ್ಛ ಮಾಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೀಡಿಕೊಳ್ಳಬೇಕು.
* ಚರಂಡಿಗಳನ್ನು ಆಗಾಗ ಸ್ವಚ್ಛ ಮಾಡಿ: ಮನೆಯ ಎದುರು ನೀರು ಹರಿಯುವ ತೋಡು, ಚರಂಡಿಗಳಿದ್ದರೆ ಮಳೆಗಾಲದಲ್ಲಿ ಅದನ್ನು ಆಗಾಗ ಸ್ವಚ್ಛ ಮಾಡಬೇಕು. ಅಲ್ಲಿಯೂ ನೀರು ಬ್ಲಾಕ್ ಆಗದಂತೆ ನೋಡಿಕೊಳ್ಳಬೇಕು.
* ಸೊಳ್ಳೆ ನಿವಾರಕಗಳನ್ನು ಬಳಸಿ: ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯಲು ಸೊಳ್ಳೆ ಬತ್ತಿಗಳನ್ನು ಹಚ್ಚಬಹುದು. ಸೊಳ್ಳೆಯ ನಿವಾರಕ ಕ್ರೀಮ್‌ಗಳು ಲಭ್ಯವಿದ್ದು, ಅದನ್ನು ಕೈ ಕಾಲುಗಳಿಗೆ ಹಚ್ಚಿಕೊಳ್ಳಬಹುದು. ಉದ್ದ ತೋಳಿನ ಅಂಗಿ ಪ್ಯಾಂಟ್ ಧರಿಸಬಹುದು.
* ಸಂಜೆ ಹೊತ್ತು ಹೊರಗಡೆ ಸುತ್ತಾಡುವುದಕ್ಕೆ ಕಡಿವಾಣ ಹಾಕಿ. ಇದರಿಂದಲೂ ಸೊಳ್ಳೆ ಕಡಿಯುವ ಸಾಧ್ಯತೆ ಹೆಚ್ಚು.
* ಸಂಜೆ ಹೊತ್ತು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಡಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)