ಕರ್ನಾಟಕದಲ್ಲಿ 9,147 ಡೆಂಗ್ಯೂ ಪ್ರಕರಣ ಪತ್ತೆ; ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಹೇಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ
ದೇಶದಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ. ಕರ್ನಾಟಕದಲ್ಲೂ ಪ್ರಕರಣಗಳು ಹೆಚ್ಚುತ್ತಿದೆ ಈಗಾಗಲೇ 9,147 ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂ ಕುರಿತ ಮುನ್ನೆಚ್ಚರಿಕೆಯ ಬಗ್ಗೆ ಆರೋಗ್ಯ ಇಲಾಖೆ ಅಧಿಸೂಚನೆಯನ್ನೂ ಹೊರಡಿಸಿದೆ. ಹಾಗಾದರೆ ಇದರ ರೋಗಲಕ್ಷಣಗಳೇನು, ತಡೆಗಟ್ಟುವ ಮಾರ್ಗ ಹೇಗೆ ಹಾಗೂ ದೇಹದಲ್ಲಿ ಪ್ಲೇಟ್ಲೆಟ್ ಹೆಚ್ಚಿಸಿಕೊಳ್ಳುವುದು ಹೇಗೆ? ಮಾಹಿತಿ.
ಒಮ್ಮೊಮ್ಮೆ ಮಳೆ, ಆಗಾಗ ಬಿಸಿಲು, ಕೆಲವೊಮ್ಮೆ ಮೋಡ ಕವಿದ ವಾತಾವರಣ ಸೇರಿದಂತೆ ಹಲವು ಕಾರಣಗಳಿಂದ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಾದ್ಯಂತ 9,147 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ, ಅಲ್ಲದೆ ಡೆಂಗ್ಯೂ ಉಲ್ಬಣವಾಗುತ್ತಿರುವ ಹಿನ್ನೆಲೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೆಲವು ರಾಜ್ಯಗಳಲ್ಲಿ ಡೆಂಗ್ಯೂ ಉಪತಳಿ ಡೆನ್ 2 ಹೆಚ್ಚು ಸದ್ದು ಮಾಡುತ್ತಿದೆ. ಇದು ಕೂಡ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾದರೆ ಡೆಂಗ್ಯೂ ರೋಗಲಕ್ಷಣಗಳೇನು, ಪರಿಹಾರ ಮಾರ್ಗಗಳೇನು ಮತ್ತು ಪೇಟ್ಲೇಟ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಈ ಕುರಿತ ಮಾಹಿತಿ ಇಲ್ಲಿದೆ.
ಏನಿದು ಡೆನ್ 2?
ಡೆನ್ 2 ಎನ್ನುವುದು ಡೆಂಗ್ಯೂವಿನ ಉಪತಳಿಯಾಗಿದೆ. ಇದು ಈಗ ದೇಶದಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ತಜ್ಞರ ಪ್ರಕಾರ ತಲೆನೋವು, ಜ್ವರ, ಚಳಿ, ವಾಂತಿ ಡೆನ್ 2ನ ಪ್ರಮುಖ ಲಕ್ಷಣಗಳಾಗಿವೆ.
ಡೆನ್ 2 ಎಷ್ಟು ತೀವ್ರತರ?
ಡೆನ್ 2 ಹರಡುವಿಕೆಯ ಬಗ್ಗೆ ವೈದ್ಯಲೋಕ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ಹೊಸ ಉಪತಳಿ ಹೆಚ್ಚು ಅಪಾಯಕಾರಿ ಎಂದಿದ್ದಾರೆ. ಡೆಂಗ್ಯೂ ಒಟ್ಟು ನಾಲ್ಕು ಉಪತಳಿಗಳನ್ನು ಹೊಂದಿದೆ. ಡೆನ್ ವಿ1, ಡೆನ್ ವಿ2, ಡೆನ್ ವಿ3, ಡೆನ್ ವಿ4. ಆದರೆ ಈ ವರ್ಷ ಡೆನ್ 2 ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಹಾಗೂ ಇದು ಅತ್ಯಂತ ತೀವ್ರವಾಗಿದೆ. ಈ ಪ್ರಕರಣ ತೀವ್ರವಾದರೆ ಇದು ಡೆಂಗ್ಯೂ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
ತಜ್ಞರ ಪ್ರಕಾರ ಡೆನ್ 2 ಕೆಲವೊಮ್ಮೆ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರುವುದು ಅವಶ್ಯ ಎನ್ನುತ್ತದೆ ವೈದ್ಯಲೋಕ.
ಡೆಂಗ್ಯೂ ಜ್ವರದ ಲಕ್ಷಣಗಳು ಹಾಗೂ ತಡೆಗಟ್ಟುವ ಮಾರ್ಗ
ಲಕ್ಷಣಗಳು
- ಅತಿಯಾದ ಜ್ವರ
- ವಾಕರಿಕೆ
- ವಾಂತಿ
- ಕಣ್ಣುಗಳ ಹಿಂಭಾಗದಲ್ಲಿ ನೋವು
- ಮೈಕೈ ನೋವು
- ಬಿಡದೇ ಕಾಡುವ ತಲೆನೋವು
ಡೆಂಗ್ಯೂ ತಡೆಗಟ್ಟುವ ಮಾರ್ಗಗಳು
- ಕತ್ತಿನಿಂದ ಕಾಲಿನವರೆಗೆ ಮೈ ತುಂಬಾ ಬಟ್ಟೆ ಧರಿಸಿ, ಸೊಳ್ಳೆ ಕಡಿತವನ್ನು ತಪ್ಪಿಸಿ.
- ನೈರ್ಮಲ್ಯ ಕಾಪಾಡಿಕೊಳ್ಳಿ.
- ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ.
- ನೀರು ನಿಲ್ಲಲು ಬಿಡಿದಿರಿ
- ಸೊಳ್ಳೆ ನಿವಾರಣಗಳನ್ನು ಬಳಸಿ
- ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ
- ಸಾಕಷ್ಟು ನೀರು ಕುಡಿಯಿರಿ.
ಪೇಟ್ಲೇಟ್ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ?
ದ್ರವಾಹಾರ ಸೇವನೆಯನ್ನು ಹೆಚ್ಚಿಸಿ
ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನಕ್ಕೆ ದೇಹದಲ್ಲಿ ನೀರಿನಾಂಶ ಇರುವಂತೆ ನೋಡಿಕೊಳ್ಳುವುದು ಅವಶ್ಯ. ಹಾಗಾಗಿ ಸಾಕಷ್ಟು ನೀರು, ಹಣ್ಣಿನ ರಸದಂತಹ ಪಾನೀಯಗಳನ್ನು ಸೇವಿಸಿ. ದ್ರವಾಹಾರದ ಸೇವನೆಯು ದೇಹದಿಂದ ವಿಷದ ಅಂಶ ಹೊರ ಹೋಗಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಿ
ನಿಮಗೆ ಇಷ್ಟವಾಗದೇ ಇದ್ದರೂ ಸೊಪ್ಪು, ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ. ನಿಮ್ಮ ಪ್ರತಿನಿತ್ಯದ ಆಹಾರದೊಂದಿಗೆ ಇವುಗಳನ್ನು ಸೇರಿಸಲು ಮರೆಯದಿರಿ. ತರಕಾರಿಯಲ್ಲಿ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಸುಧಾರಿಸಲು ಮತ್ತು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುವ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದೆ.
ಹಣ್ಣುಗಳ ಸೇವನೆ
ಹಣ್ಣುಗಳನ್ನು ತಿನ್ನಿ ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಲು ಹಣ್ಣುಗಳ ಸೇವನೆ ಬಹಳ ಮುಖ್ಯ. ಅಧಿಕ ಪೋಷಕಾಂಶ, ವಿಟಮಿನ್ ಸಿ, ವಿಟಮಿನ್ ಎ, ಆಂಟಿಆಕ್ಸಿಡೆಂಟ್ ಹಾಗೂ ನಾರಿನಾಂಶ ಸಮೃದ್ಧವಾಗಿರುವ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಇದು ಕರುಳಿನ ಆರೋಗ್ಯ ಸುಧಾರಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಕಿವಿ, ಚೆರ್ರಿ, ಸೇಬು ಹಣ್ಣುಗಳನ್ನು ಹೆಚ್ಚು ಸೇವಿಸಿ.
ಪ್ರೊಬಯೋಟಿಕ್ ಆಹಾರಗಳ ಸೇವನೆ
ಪ್ರೊಬಯೋಟಿಕ್ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇದು ಕರುಳಿನ ಬ್ಯಾಕ್ಟೀರಿಯಾವನ್ನು ಸುಧಾರಿಸುತ್ತದೆ. ಮೊಸರು, ಸೋಯಾಬೀನ್, ಮಜ್ಜಿಗೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತವೆ.
ಡೆಂಗ್ಯೂ ಕಾಣಿಸಿದರೆ ದೇಹದ ಒಳಗೆ ಏನಾಗುತ್ತದೆ?
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೋಂಕಿತ ಸೊಳ್ಳೆಯು ಕಚ್ಚುವುದರಿಂದ ವೈರಸ್ ದೇಹವನ್ನು ಪ್ರವೇಶಿಸುತ್ತದೆ. ವೈರಸ್ ದೇಹದೊಳಗೆ ದಾಳಿ ಮಾಡುತ್ತದೆ, ಪ್ರಾಥಮಿಕ ಹಂತದಲ್ಲಿ ಮೊಸೊಸೈಟ್‌ಗಳು ಮತ್ತು ಮ್ಯಾಕೋಫೇಜಸ್‌ಗಳು ಎಂದು ಕರೆಯಲ್ಪಡುವ ಪ್ರತಿರಕ್ಷಣಾ ಕೋಶಗಳನ್ನು ಗುರಿಯಾಗಿಸುತ್ತವೆ. ವೈರಸ್ ವಿವಿಧ ಹಂತಗಳಲ್ಲಿ ಹರಡುತ್ತದೆ. ಡೆಂಗ್ಯೂ ಸೋಂಕಿನ ಆರಂಭಿಕ ಹಂತವನ್ನು ಜ್ವರ ಎಂದು ಕರೆಯಲಾಗುತ್ತದೆ. ಇದು ಸುಮಾರು 2 ರಿಂದ 5 ದಿನಗಳವರೆಗೆ ಇರುತ್ತದೆ. ಈ ಹಂತದಲ್ಲಿ ವೈರಸ್ ದೇಹದಾದ್ಯಂತ ಹರಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ಡೆಂಗ್ಯೂಗೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
Dengue Cases On Rise: ಹೆಚ್ಚುತ್ತಲೇ ಇದೆ ಡೆಂಗಿ ಪ್ರಕರಣ; ರೋಗದ ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿರಲಿ ಈ 12 ಪ್ರಮುಖ ಬದಲಾವಣೆ
Dengue Alert: ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳು; ಆರಂಭಿಕ ಹಂತದ ರೋಗಲಕ್ಷಣಗಳ ಕುರಿತು ನಿರ್ಲಕ್ಷ್ಯ ಮಾಡದಿರಿ; ಮುನ್ನೆಚ್ಚರಿಕೆ ಇರಲಿ
Dengue: ಮಳೆಯ ಕಣ್ಣಮುಚ್ಚಾಲೆಯ ನಡುವೆ ಹೆಚ್ಚುತ್ತಿದೆ ಡೆಂಗಿ ಜ್ವರದ ಲಕ್ಷಣ; ಇರಲಿ ಮುನ್ನೆಚ್ಚರಿಕೆ