Diabetes: ಯುವಜನರನ್ನು ಅತಿಯಾಗಿ ಕಾಡುತ್ತಿದೆ ಮಧುಮೇಹ, ಈ 8 ಅಂಶಗಳೇ ಪ್ರಮುಖ ಕಾರಣ-health news diabetes problem with youngsters 8 factors that are increasing risk of diabetes young age health tips rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Diabetes: ಯುವಜನರನ್ನು ಅತಿಯಾಗಿ ಕಾಡುತ್ತಿದೆ ಮಧುಮೇಹ, ಈ 8 ಅಂಶಗಳೇ ಪ್ರಮುಖ ಕಾರಣ

Diabetes: ಯುವಜನರನ್ನು ಅತಿಯಾಗಿ ಕಾಡುತ್ತಿದೆ ಮಧುಮೇಹ, ಈ 8 ಅಂಶಗಳೇ ಪ್ರಮುಖ ಕಾರಣ

ಇತ್ತೀಚಿನ ದಿನಗಳಲ್ಲಿ ಹದಿವಯಸ್ಸಿನ ಮಕ್ಕಳು ಹಾಗೂ ಯುವಜನರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ. ಇದು ಆತಂಕಕಾರಿ ವಿಚಾರವೂ ಹೌದು. ಯುವಕರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಲು ಕಾರಣವಾಗಿರುವ 8 ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಎಳೆ ವಯಸ್ಸಿನವರನ್ನೂ ಕಾಡುತ್ತಿದೆ. ಹಿಂದೆಲ್ಲಾ 60 ವರ್ಷದ ಮೇಲಿನವರನ್ನು ಕಾಡುತ್ತಿದ್ದ ಮಧುಮೇಹ ಇಂದು 30 ವರ್ಷದವರನ್ನೂ ಬಿಡುತ್ತಿಲ್ಲ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು ದೇಹವು ಗ್ಲೂಕೋಸ್‌ ಅನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೆ ಮಧುಮೇಹ ಆವರಿಸಿದರೆ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಇದರಲ್ಲಿ ಟೈಪ್‌ 1 ಹಾಗೂ ಟೈಪ್‌ 2 ಎಂಬ ಎರಡು ವಿಧಗಳಿವೆ. ಯುವಜನರಲ್ಲಿ ಮಧುಮೇಹ ಹೆಚ್ಚುತ್ತಿರುವುದಕ್ಕೆ ಹಲವು ಕಾರಣಗಳಿರುತ್ತವೆ. ಬಾಲ್ಯದ ಸ್ಥೂಲಕಾಯದಿಂದ ಜಡಜೀವನಶೈಲಿವರೆಗೆ ಮಧುಮೇಹ ಉಂಟಾಗಲು ಕಾರಣಗಳು ಹಲವಿರಬಹುದು.

ಕೌಟುಂಬಿಕ ಇತಿಹಾಸ, ಕಳಪೆ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಈ ಎಲ್ಲವೂ ಮಧುಮೇಹಕ್ಕೆ ಕೊಡುಗೆ ನೀಡುತ್ತವೆ. ಹಾಗಾದರೆ ಮಧುಮೇಹ ಹೆಚ್ಚಲು ಕಾರಣವಾಗುತ್ತಿರುವ ಕೆಲವು ಪ್ರಮುಖ ಅಂಶಗಳು ಯಾವುವು ತಿಳಿಯೋಣ.

ಜಡ ಜೀವನಶೈಲಿ

ಇತ್ತೀಚಿನ ದಿನಗಳಲ್ಲಿ ಓದು, ವೃತ್ತಿಯ ಕಾರಣದಿಂದ ಯುವಜನರಲ್ಲಿ ದೈಹಿಕ ಚಟುವಟಿಕೆಯ ಕೊರತೆ ಕಾಡುತ್ತಿದೆ. ಇದರೊಂದಿಗೆ ಅತಿಯಾದ ಸ್ಕ್ರೀನ್‌ ಟೈಮ್‌ ಕೂಡ ಮಧುಮೇಹ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಸಣ್ಣ ವಯಸ್ಸಿನಿಂದಲೇ ಆರೋಗ್ಯ ಹಾಗೂ ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸಬೇಕು. ನಿಯಮಿತ ವ್ಯಾಯಾಮದ ಮೇಲೆ ಗಮನ ಹರಿಸಬೇಕು. ಸಾಧ್ಯವಾದಷ್ಟು ಜಡಜೀವನಶೈಲಿಯಿಂದ ಹೊರ ಬರಬೇಕು.

ಇದನ್ನೂ ಓದಿ: Diabetes: ಅತಿಯಾಗಿ ಸಿಹಿ ತಿನ್ನೋದು ಮಾತ್ರ ಮಧುಮೇಹಕ್ಕೆ ಕಾರಣವೇ; ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ; ಏನಿದರ ಹಿಂದಿನ ಸತ್ಯ

ಅಸಮರ್ಪಕ ಆಹಾರಕ್ರಮ

ಅತಿಯಾದ ಕ್ಯಾಲೊರಿ ಅಂಶ ಇರುವ ಆಹಾರ ಸೇವನೆ, ಸಂಸ್ಕರಿತ ಆಹಾರ ತಿನ್ನುವುದು, ಅತಿಯಾದ ಸಕ್ಕರೆ ಅಂಶ ಇರುವ ಆಹಾರ ಸೇವಿಸುವುದು ಈ ಎಲ್ಲವೂ ಮಧುಮೇಹ ಹೆಚ್ಚಲು ಕಾರಣವಾಗಬಹುದು. ಯುವಜನರ ಆಹಾರಕ್ರಮವು ಇದರ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಪೋಷ್ಟಿಕಾಂಶ ಯುಕ್ತ ಆಹಾರ ಸೇವನೆಗೆ ಒತ್ತು ನೀಡಬೇಕು. ಧಾನ್ಯಗಳು, ಹಣ್ಣು-ತರಕಾರಿ, ಲೀನ್‌ ಪ್ರೊಟೀನ್‌ ಇಂತಹ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಸಂಸ್ಕರಿತ ಹಾಗೂ ಸಕ್ಕರೆ ಅಂಶ ಇರುವ ಆಹಾರ ಸೇವನೆಗೆ ಕಡಿವಾಣ ಹಾಕಬೇಕು.

ಸ್ಥೂಲಕಾಯ

ಅತಿಯಾದ ದೇಹತೂಕವು ಮಧುಮೇಹ ಹೆಚ್ಚಲು ಒಂದು ಪ್ರಮುಖ ಕಾರಣವಾಗಿದೆ. ಆ ಕಾರಣಕ್ಕೆ ದೇಹ ತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಹಾಗೂ ಬಾಡಿ ಮಾಸ್‌ ಇಂಡೆಕ್ಸ್‌ ಅನ್ನು ಮಾನಿಟರ್‌ ಮಾಡುವುದು ಬಹಳ ಮುಖ್ಯ. ಸಮತೋಲಿತ ಡಯೆಟ್‌ ಹಾಗೂ ನಿರಂತರ ವ್ಯಾಯಾಮದ ಮೂಲಕ ತೂಕ ನಿಯಂತ್ರಣ ಮಾಡುವುದು ಬಹಳ ಮುಖ್ಯ.

ಅನುವಂಶಿಕ ಪ್ರವೃತ್ತಿ

ಕೌಟುಂಬಿಕ ಇತಿಹಾಸದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ, ಮುಂದಿನ ಪೀಳಿಗೆಗೂ ಅದು ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಮಧುಮೇಹ ಬಂದರೆ ಕೌಟುಂಬಿಕ ಇತಿಹಾಸ ಪರಿಶೀಲಿಸುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಅನುವಂಶಿಕ ಅಂಶಗಳನ್ನು ಬದಲಾಯಿಸಲು ಆಗದೇ ಇದ್ದರೂ, ಜೀವನಶೈಲಿಯಲ್ಲಿನ ಬದಲಾವಣೆಯು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಸಮರ್ಪಕ ನಿದ್ದೆ

ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇರುವುದು, ತಡವಾಗಿ ನಿದ್ರಿ, ಬೆಳಿಗ್ಗೆ ತಡವಾಗಿ ಏಳುವುದು ಇದು ಕೂಡ ಮಧುಮೇಹ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ನಿದ್ದೆಯ ಕೊರತೆ ಹೆಚ್ಚುತ್ತಿದೆ. ಇದಕ್ಕೆ ಮೊಬೈಲ್‌, ಟಿವಿ ಕೂಡ ವರದಾನವಾಗಿದೆ. ಅದಕ್ಕಾಗಿ ಉತ್ತಮ ನಿದ್ದೆ ಹಾಗೂ ನಿದ್ದೆಯ ವಿಷಯದಲ್ಲಿ ನೈಮರ್ಲ್ಯ ಕಾಪಾಡಿಕೊಳ್ಳುವುದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒತ್ತಡ

ಅತಿಯಾದ ಒತ್ತಡ ಮಧುಮೇಹಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆ ವೃದ್ಧಿಯಾಗಲು ಒತ್ತಡ ಕೂಡ ಒಂದು ಪ್ರಮುಖ ಅಂಶವಾಗಿದೆ. ಅದಕ್ಕಾಗಿ ಒತ್ತಡ ನಿರ್ವಹಣೆಗೆ ಗಮನ ಕೊಡುವುದು ಗಮನ ಮುಖ್ಯವಾಗುತ್ತದೆ. ಜೊತೆಗೆ ಜೀವನಶೈಲಿಯಲ್ಲೂ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Coconut Water: ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ ಪ್ರತಿದಿನ ಎಳನೀರು ಕುಡಿಯುವುದರಿಂದಾಗುವ 10 ಆರೋಗ್ಯ ಪ್ರಯೋಜನಗಳಿವು

ಪ್ರಸವಪೂರ್ವ ಅಂಶಗಳು

ಗರ್ಭಾವಸ್ಥೆಯ ಮಧುಮೇಹ ಅಥವಾ ಗರ್ಭಾವಸ್ಥೆಯಲ್ಲಿ ತಾಯಿಯ ಬೊಜ್ಜಿನ ಸಮಸ್ಯೆ ಮುಂತಾದ ಕೆಲವು ಪ್ರಸವಪೂರ್ವ ಅಂಶಗಳು ಯುವಜನರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ಅದಕ್ಕೆ ಪ್ರಸವಪೂರ್ವ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ. ಅಲ್ಲದೆ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ಯುವಜನರಲ್ಲಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ಅಥವಾ ಹೈಬಿಪಿ ಸಮಸ್ಯೆ ಕೂಡ ಮಧುಮೇಹ ಉಂಟಾಗಲು ಒಂದು ಪ್ರಮುಖ ಕಾರಣವಾಗಿದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ಅದಕ್ಕಾಗಿ ನಿಯಮಿತ ರಕ್ತದೊತ್ತಡ ತಪಾಸಣೆಗಳನ್ನು ಮಾಡುವುದು ಮುಖ್ಯವಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡುವುದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಒಟ್ಟಾರೆ ಯುವಜನರಲ್ಲಿ ಕಾಣಿಸುವ ಮಧುಮೇಹ ಸಮಸ್ಯೆಯು ಅವರ ಒಟ್ಟಾರೆ ಆರೋಗ್ಯ ಹಾಗೂ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕಾಗಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಬಹಳ ಮುಖ್ಯವಾಗುತ್ತದೆ.