Menopause: ಋತುಬಂಧದ ಹಂತದಲ್ಲಿ ಹೀಗಿರಲಿ ಮಹಿಳೆಯರ ಆಹಾರಕ್ರಮ; ದೈಹಿಕ ಯೋಗಕ್ಷೇಮದತ್ತ ಇರಲಿ ಚಿತ್ತ
ಕನ್ನಡ ಸುದ್ದಿ  /  ಜೀವನಶೈಲಿ  /  Menopause: ಋತುಬಂಧದ ಹಂತದಲ್ಲಿ ಹೀಗಿರಲಿ ಮಹಿಳೆಯರ ಆಹಾರಕ್ರಮ; ದೈಹಿಕ ಯೋಗಕ್ಷೇಮದತ್ತ ಇರಲಿ ಚಿತ್ತ

Menopause: ಋತುಬಂಧದ ಹಂತದಲ್ಲಿ ಹೀಗಿರಲಿ ಮಹಿಳೆಯರ ಆಹಾರಕ್ರಮ; ದೈಹಿಕ ಯೋಗಕ್ಷೇಮದತ್ತ ಇರಲಿ ಚಿತ್ತ

ಋತುಬಂಧದ ಹಂತದಲ್ಲಿ ಮಹಿಳೆಯರನ್ನು ಹಲವು ದೈಹಿಕ ಸಮಸ್ಯೆಗಳು ಕಾಡಬಹುದು. ಇದಕ್ಕೆ ಪ್ರಮುಖ ಕಾರಣ ಹಾರ್ಮೋನ್‌ಗಳ ಬದಲಾವಣೆ. ಆ ಕಾರಣಕ್ಕೆ ಈ ಹಂತದಲ್ಲಿ ಸಮತೋಲಿತ ಆಹಾರ ಸೇವನೆ ಬಹಳ ಅವಶ್ಯ. ಇದರೊಂದಿಗೆ ದೈಹಿಕ ಯೋಗಕ್ಷೇಮದ ಮೇಲೂ ಗಮನ ಹರಿಸಬೇಕು ಎನ್ನುತ್ತಾರೆ ತಜ್ಞರು.

ಋತುಬಂಧದ ಸಮಯದಲ್ಲಿ ಹೀಗಿರಲಿ ನಿಮ್ಮ ಆಹಾರಕ್ರಮ
ಋತುಬಂಧದ ಸಮಯದಲ್ಲಿ ಹೀಗಿರಲಿ ನಿಮ್ಮ ಆಹಾರಕ್ರಮ

ಮುಟ್ಟು ನಿಲ್ಲುವ ಮೊದಲು ಮತ್ತು ಋತುಬಂಧದ ನಂತರದ ಹಂತಗಳ ಅವಧಿ ಮಹಿಳೆಯರಲ್ಲಿ ಸಹಜವಾಗಿದ್ದರೂ ಅದು ಪ್ರಶಾಂತ ಪ್ರಯಾಣವಾಗಿರಬೇಕು. ಏಕೆಂದರೆ ಈ ಹಂತದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಹಾರ್ಮೋನ್‌ ಬದಲಾವಣೆಯನ್ನು ನಿಭಾಯಿಸಲು ಮಹಿಳೆಯರು ಸರಿಯಾದ ಆಹಾರಕ್ರಮ ಮತ್ತು ಪೋಷಕಾಂಶಗಳನ್ನು ಹೊಂದುವುದು ಅವಶ್ಯ.

ಋತುಬಂಧದ ಪೂರ್ವ ಮತ್ತು ನಂತರದ ಅವಧಿ ಕುರಿತಂತೆ ಫೆಮ್‌ಟೆಕ್ ಕಂಪನಿ ಮಿರರ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಿತ್ ಶೆಟ್ಟಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಋತುಬಂಧದ ಪೂರ್ವ ಅವಧಿಯಲ್ಲಿ ಮಹಿಳೆಯರು ತಮ್ಮ ಯೋಗಕ್ಷೇಮ ಹಾಗೂ ಆರೈಕೆಗೆ ಯಾವ ರೀತಿ ಗಮನ ನೀಡಬೇಕು ಎಂಬುದನ್ನು ಅವರು ವಿವರಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಪೋಷಕಾಂಶ ಸಮೃದ್ಧ ಸಮತೋಲಿತ ಆಹಾರಕ್ರಮ

ಹಾರ್ಮೋನ್‌ಗಳ ನಿಯಂತ್ರಣ ಮತ್ತು ಒಟ್ಟಾರೆ ಯೋಗಕ್ಷೇಮ ಕಾಪಾಡಿಕೊಳ್ಳಲು ಪೋಷಕಾಂಶ ಸಮೃದ್ಧ ಸಮತೋಲಿತ ಆಹಾರಕ್ರಮ ಮುಖ್ಯ ಪಾತ್ರ ವಹಿಸುತ್ತದೆ ಎಂದು ಸಂಜಿತ್ ಒತ್ತಿ ಹೇಳುತ್ತಾರೆ. ಪೋಷಕಾಂಶ ಸಮೃದ್ಧವಾದ ವೈವಿಧ್ಯಮಯ ಆಹಾರ ಪದಾರ್ಥಗಳ ಜೊತೆಗೆ ಸಂಪೂರ್ಣ ಧಾನ್ಯಗಳು, ಪ್ರೊಟೀನ್‌ಗಳು, ಆರೋಗ್ಯಕರ ಕೊಬ್ಬಿನಾಂಶ, ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಹಾರ್ಮೋನ್‌ಗಳ ಸಮತೋಲನವನ್ನು ಈ ಆಯ್ಕೆಗಳು ಬೆಂಬಲಿಸುವುದಲ್ಲದೆ, ಅಗತ್ಯ ವಿಟಮಿನ್ ಮತ್ತು ಖನಿಜ ಪದಾರ್ಥಗಳನ್ನು ಪೂರೈಸುತ್ತವೆ.

ವಿಟಮಿನ್ ಡಿ ಸೇವನೆ ಅವಶ್ಯ

ಋತುಬಂಧ ಪೂರ್ವ ಮತ್ತು ನಂತರದ ಅವಧಿಯಲ್ಲಿ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗುವುದರಿಂದ ಮೂಳೆಯ ಆರೋಗ್ಯ ಕುರಿತು ಪ್ರಮುಖವಾಗಿ ಗಮನಹರಿಸಬೇಕಾಗುತ್ತದೆ. ಸೂಕ್ತ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವನೆಯ ಜೊತೆಗೆ ಅದನ್ನು ದೇಹವು ಸೂಕ್ತ ರೀತಿಯಲ್ಲಿ ಹೀರಿಕೊಳ್ಳುವುದಕ್ಕಾಗಿ ವಿಟಮಿನ್ ಡಿ ಸೇವನೆಯು ಕೂಡ ಮುಖ್ಯವಾಗಿರುತ್ತದೆ. ಡೇರಿ ಉತ್ಪನ್ನಗಳು, ಫೋರ್ಟಿಫೈಡ್ ಆಹಾರಗಳು, ಹಸಿರು ತರಕಾರಿ, ಸೊಪ್ಪುಗಳು ಹಾಗೂ ಬೀಜಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಿಂದ ಮೂಳೆಯ ಸಾಂದ್ರತೆಗೆ ಬೆಂಬಲ ಸಿಗುತ್ತದೆ.

ಸೋಯಾ ಉತ್ಪನ್ನಗಳು, ಅಗಸೆ ಬೀಜಗಳು, ಲೆಗ್ಯೂಮ್‌ಗಳಲ್ಲಿ ಇರುವ ಫೈಟೊಇಸ್ಟ್ರೋಜೆನ್‌ ದೇಹದಲ್ಲಿನ ಇಸ್ಟ್ರೋಜೆನ್‌ನಂತೆ ಕೆಲಸ ಮಾಡುತ್ತವೆ. ಈ ಆಹಾರ ಪದಾರ್ಥಗಳನ್ನು ಆಗಾಗ್ಗೆ ಸೇವಿಸುವುದರಿಂದ ಋತುಬಂಧದ ಸಮಯದಲ್ಲಿನ ಕೆಲವು ತೊಂದರೆಯ ಲಕ್ಷಣಗಳನ್ನು ನಿವಾರಿಸಲು ನೆರವಾಗುತ್ತದೆ.

ನೀರು ಮತ್ತು ನಾರು

ಸಂಜಿತ್ ಅವರ ಪ್ರಕಾರ, ದೇಹಕ್ಕೆ ಅಗತ್ಯವಾದ ನೀರು ಮತ್ತು ನಾರಿನಂಶಗಳ ಸೇವನೆಯ ಪ್ರಾಮುಖ್ಯತೆಯನ್ನು ಅಧ್ಯಯನಗಳು ತಿಳಿಸುತ್ತವೆ. ದೇಹದಲ್ಲಿ ಆರ್ದ್ರತೆಯ ಪ್ರಮಾಣ ಹೆಚ್ಚಿಸುವ ನೀರು ಹಾಗೂ ದ್ರವಾಹಾರವನ್ನು ಸೇವಿಸುವುದರಿಂದ ದೇಹದ ಹಲವು ಕಾರ್ಯಗಳಿಗೆ ಬೆಂಬಲ ಸಿಗುತ್ತದೆ. ಇವುಗಳಲ್ಲಿ ಉಷ್ಣಾಂಶ ನಿಯಂತ್ರಣವೂ ಸೇರಿರುತ್ತದೆ. ನಾರಿನಂಶಗಳ ಸೇವನೆಯು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ, ತೂಕ ನಿರ್ವಹಣೆಗೂ ನೆರವಾಗುತ್ತದೆ. ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡುತ್ತಾರೆ. ಈ ಪದಾರ್ಥಗಳು ಋತುಬಂಧದ ಅವಧಿಯಲ್ಲಿ ಉರಿಯೂತ ಉಂಟಾಗಲು ಕಾರಣವಾಗಬಹುದಲ್ಲದೆ, ಭಾವನೆಗಳಲ್ಲಿನ ಅತಿಯಾದ ಬದಲಾವಣೆ ಹಾಗೂ ಶಕ್ತಿಯಲ್ಲಿ ಏರಿಳಿತಗಳಿಗೆ ಬೆಂಬಲ ನೀಡುತ್ತವೆ. ದೈಹಿಕ ಚಟುವಟಿಕೆ ಅಲ್ಲದೆ, ವಿಶ್ರಾಂತಿ ಹಾಗೂ ಆರಾಮ ನೀಡುವಂತಹ ಧ್ಯಾನ ಮತ್ತು ಯೋಗಗಳ ಅಭ್ಯಾಸ ಹಾಗೂ ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ.

ಅಂತಿಮವಾಗಿ, ವೈಯಕ್ತಿಕ ಆರೈಕೆ ಮತ್ತು ಯೋಗಕ್ಷೇಮದ ಕಡೆಗೆ ಆದ್ಯತೆ ನೀಡಲು ಋತುಬಂಧಪೂರ್ವ ಮತ್ತು ನಂತರದ ಅವಧಿ ಅವಕಾಶ ಒದಗಿಸುತ್ತದೆ. ಪೋಷಕಾಂಶ ಸಮೃದ್ಧ ಆಹಾರಕ್ರಮ ಅಳವಡಿಸಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು, ಒತ್ತಡ ನಿರ್ವಹಣೆ ಮತ್ತು ನಿರಂತರ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಸಂಜಿತ್‌ ಒತ್ತಿ ಹೇಳುತ್ತಾರೆ.

ಡಾ. ಹೇಮನಂದಿನಿ ಜಯರಾಮನ್ (ಎಡಚಿತ್ರ) ಸಂಜಿತ್ ಶೆಟ್ಟಿ (ಬಲಚಿತ್ರ)
ಡಾ. ಹೇಮನಂದಿನಿ ಜಯರಾಮನ್ (ಎಡಚಿತ್ರ) ಸಂಜಿತ್ ಶೆಟ್ಟಿ (ಬಲಚಿತ್ರ)

ಆಹಾರವೇ ಆರೋಗ್ಯ

ಬೆಂಗಳೂರಿನ ಓಲ್ಡ್‌ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಹೇಮನಂದಿನಿ ಜಯರಾಮನ್ ಅವರ ಪ್ರಕಾರ ʼ40ರ ಕೊನೆಯಲ್ಲಿ ಮತ್ತು 50 ರ ಆರಂಭದಲ್ಲಿರುವ ಮಹಿಳೆಯರಲ್ಲಿ ಋತುಬಂಧ ಕಾಣಿಸುತ್ತದೆ. ಋತುಬಂಧದ ಹಂತ ಹತ್ತಿರವಾದಂತೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನುಗಳ ಮಟ್ಟವು ಕಡಿಮೆಯಾಗುತ್ತದೆ ಮತ್ತು ಅಂಡಾಶಯಗಳು ನಿಧಾನವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಹಾರ್ಮೋನ್‌ಗಳ ಉತ್ಪಾದನೆ ಕ್ರಮೇಣ ಸ್ಥಗಿತಗೊಳ್ಳುತ್ತದೆ. ಒಂದು ವರ್ಷದವರೆಗೆ ಮುಟ್ಟಿಲ್ಲದೇ ಆಗುವ ಈ ಪರಿವರ್ತನೆಯು, ಚಯಾಪಚಯ ಕ್ರಿಯೆಯನ್ನು ನಿಧಾನವಾಗಿಸುತ್ತದೆ. ಇದು ಮಹಿಳೆಯರಲ್ಲಿ ತೂಕದ ಸಮಸ್ಯೆಗಳು, ಮನಸ್ಥಿತಿ ಬದಲಾವಣೆಗಳು, ದೇಹ ಬಿಸಿಯಾದಂತೆ ಭಾಸವಾಗುವುದು, ಆಯಾಸ ಮತ್ತು ದಿಗಿಲುತನ, ಭಾವನಾತ್ಮಕ ದುರ್ಬಲತೆ, ಖಿನ್ನತೆ ಮತ್ತು ನಿದ್ದೆಯ ಅಡಚಣೆಗಳು ಇಂತಹ ಹಲವು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಬದಲಾವಣೆಗಳಿಗೆ ಕಾರಣವಾಗುತ್ತದೆ.

ನೀರು ಕುಡಿಯುವುದು, ಆಂಟಿಆಕ್ಸಿಡೆಂಟ್ಸ್‌ಗಳ ಮೂಲಕ ಪ್ರತಿರಕ್ಷಣಾ ವರ್ಧನೆ (ಟ್ಯಾಬ್ಲೆಟ್ ಅಥವಾ ಹಣ್ಣುಗಳಂತಹ ಆಹಾರ ರೂಪದಲ್ಲಿ) ಮತ್ತು ತಾಜಾ ಹಣ್ಣುಗಳು ಆರೋಗ್ಯಕರ ಆಹಾರದ ಸ್ವರೂಪವಾಗಿದೆ.

ಹಾರ್ಮೋನ್‌ಗಳು ಬದಲಾಗುವ ಈ ಹಂತದಲ್ಲಿ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆಯೂ ಅಧಿಕ. ಇದರಿಂದ ಆಗುವ ಸಂಭಾವ್ಯ ರಕ್ತಹೀನತೆಯನ್ನು ತಪ್ಪಿಸಲು ಕಬ್ಬಿಣಾಂಶ ಸಮೃದ್ಧ ಆಹಾರಗಳು (ಸೊಪ್ಪು ಮತ್ತು ಹಣ್ಣುಗಳು) ಮತ್ತು ಪೂರಕಗಳನ್ನು ಸೇವಿಸುವ ಅಗತ್ಯವಿರುತ್ತದೆ. ಫೈಟೊಇಸ್ಟ್ರೊಜೆನ್‌ಗಳಲ್ಲಿ ಸಮೃದ್ಧವಾಗಿರುವ ಸೋಯಾ, ಈಸ್ಟ್ರೊಜೆನ್ ಕ್ಷೀಣಿಸುವುದನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸುತ್ತದೆ. ಹಾರ್ಮೋನುಗಳ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ಕೆಲವು ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಅಥವಾ ತ್ಯಜಿಸಬೇಕು. ಇವುಗಳಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಕೆಫಿನ್ ಮತ್ತು ಆಲ್ಕೋಹಾಲ್ ಸೇರಿವೆ.

ಉತ್ತಮ ಸಮತೋಲಿತ ಆಹಾರಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಬದಲಾವಣೆಯ ಈ ಸಮಯವನ್ನು ಸುಗಮಗೊಳಿಸಬಹುದು. ಇದರ ಜೊತೆಗೆ ದೀರ್ಘಾವಧಿ ಯೋಗಕ್ಷೇಮವನ್ನು ಉತ್ತೇಜಿಸಲು ನೆರವಾಗುತ್ತದೆ.

Whats_app_banner