ಪ್ರತಿದಿನ ಟೀ ಕುಡಿತೀರಾ; ಹಾಗಾದ್ರೆ ಈ 6 ವಿಚಾರಗಳು ನಿಮಗೆ ತಿಳಿದಿರಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಟೀ ಕುಡಿತೀರಾ; ಹಾಗಾದ್ರೆ ಈ 6 ವಿಚಾರಗಳು ನಿಮಗೆ ತಿಳಿದಿರಲೇಬೇಕು

ಪ್ರತಿದಿನ ಟೀ ಕುಡಿತೀರಾ; ಹಾಗಾದ್ರೆ ಈ 6 ವಿಚಾರಗಳು ನಿಮಗೆ ತಿಳಿದಿರಲೇಬೇಕು

ಟೀ ಕುಡಿಯೋದು ಹಲವರಿಗೆ ನೆಚ್ಚಿನ ಹವ್ಯಾಸ. ಟೀ ಇಲ್ಲ ಅಂದ್ರೆ ಬದುಕಿಲ್ಲ ಎನ್ನುತ್ತಾರೆ. ಆದರೆ ಟೀ ಕುಡಿಯುವ ಕ್ರಮವು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಾತ್ರ ಸುಳ್ಳಲ್ಲ. ಪ್ರತಿದಿನ ಟೀ ಕುಡಿಯುವವರು ತಿಳಿದಿರಲೇಬೇಕಾದ 6 ಪ್ರಮುಖ ಅಂಶಗಳು ಹೀಗಿವೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಟೀ ಕುಡಿಯೋದು ಹಲವರಿಗೆ ಪಂಚಪ್ರಾಣ. ಬೆಳಗೆದ್ದು ಟೀ ಕುಡಿದಿಲ್ಲ ಅಂದ್ರೆ ಅವರ ದಿನಾನೇ ಆರಂಭವಾಗುವುದಿಲ್ಲ. ಇನ್ನೂ ಕೆಲವರಿಗೆ ಪದೇ ಪದೇ ಟೀ ಕುಡಿಯುವ ಅಭ್ಯಾಸ. ಊಟ ಇಲ್ಲದೇ ಬೇಕಾದ್ರೂ ಬದುಕುತ್ತಾರೆ, ಆದ್ರೆ ಟೀ ಇಲ್ಲದೇ ಬದುಕುವವರು ಕಡಿಮೆ. ಹೀಗೆ ಟೀ ಹಲವರ ನೆಚ್ಚಿನ ಸಂಗಾತಿ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಪ್ರತಿದಿನ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಹೆಲ್ತ್‌ಹ್ಯಾಚ್‌ ಎನ್ನುವ ವೆಲ್‌ನೆಸ್‌ ಕಂಪನಿಯೊಂದು ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಟೀ ಕುಡಿಯುವ ವಿಚಾರದಲ್ಲಿ ನಮ್ಮ ಕೆಲವು ಅಭ್ಯಾಸಗಳ ಬಗ್ಗೆ ತಿಳಿಸಿದೆ. ಮಾತ್ರವಲ್ಲ, ಇದರಿಂದ ಉಂಟಾಗುವ ಪರಿಣಾಮಗಳನ್ನೂ ಇದು ವಿವರಿಸಿದೆ.

ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು

ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯವುದರಿಂದ ಆಸಿಡಿಟಿಗೆ ಕಾರಣವಾಗಬಹುದು. ಇದು ಹೊಟ್ಟೆಯ ಅಸ್ವಸ್ಥತೆಯನ್ನೂ ಉಂಟು ಮಾಡುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿಯುವುದರಿಂದ ಆಸಿಡಿಟಿ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಗ್ಯಾಸ್ಟ್ರಿಕ್‌, ಅಲ್ಸರ್‌, ಆಸಿಡ್‌ ಪೆಫ್ಟಿಕ್‌ನಂತಹ ಸಮಸ್ಯೆಗಳು ಇದರಿಂದ ಉಲ್ಭಣಗೊಳುತ್ತದೆ ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ದಿಲೀಪ್‌ ಗುಡೆ ವಿವರಿಸಿದ್ದಾರೆ.

ಊಟದೊಂದಿಗ ಟೀ ಕುಡಿಯುವುದು

ಊಟದೊಂದಿಗೆ ಟೀ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣಾಂಶ ಕೊರತೆಗೆ ಕಾರಣವಾಗಬಹುದು. ದೇಹದಲ್ಲಿ ಕಬ್ಬಿಣಾಂಶ ಕೊರತೆ ಉಂಟಾದರೆ ರಕ್ತಹೀನತೆ ಕಾಡುತ್ತದೆ. ಹಾಗಾಗಿ ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ಪದಾರ್ಥಗಳ ಜೊತೆಗೆ ಚಹಾ ಸೇವಿಸುವುದು ಮುಖ್ಯವಾಗುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ ಗುರುಗ್ರಾಮದ ನಾರಾಯಣ ಆಸ್ಪತ್ರೆಯ ವೈದ್ಯರಾದ ಡಾ. ಸುಕೃತ್‌ ಸಿಂಗ್‌.

ಸಂಜೆ ವೇಳೆ ಟೀ ಕುಡಿಯುವುದು

ಹಲವರಲ್ಲಿ ನಿದ್ದೆಯ ಕೊರತೆ ಕಾಡಲು ಮುಖ್ಯ ಕಾರಣ ಸಂಜೆ ವೇಳೆಗೆ ಟೀ ಕುಡಿಯುವುದು. ಚಹಾದಲ್ಲಿನ ಥಿಯೋಫಿಲಿನ್‌ ಅಂಶ ಉತ್ತೇಜಕಗಳಾಗಿವೆ. ಇದು ನಿಮ್ಮನ್ನು ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಾತ್ರಿ ನಿದ್ದೆಗೆ ತೊಂದರೆ ಉಂಟಾಗಬಹುದು ಎನ್ನುತ್ತಾರೆ ವೈದ್ಯರು. ಹಾಗಾಗಿ ರಾತ್ರಿ ಮಗಲುವ ಕನಿಷ್ಠ 6 ರಿಂದ 8 ಗಂಟೆಗಳ ಮೊದಲು ಟೀ ಕುಡಿದಿರಬೇಕು. ಅದರ ನಂತರ ಟೀ ಕುಡಿಯುವುದು ಉತ್ತಮ ಅಭ್ಯಾಸವಲ್ಲ.

ದಿನದಲ್ಲಿ ಹಲವು ಕಪ್‌ ಟೀ ಕುಡಿಯುವುದು

ಡಾ. ಗುಡೆ ಅವರ ಪ್ರಕಾರ ದಿನದಲ್ಲಿ ಸಾಕಷ್ಟು ಬಾರಿ ಟೀ ಕುಡಿಯುವುದರಿಂದ ಆಸಿಡಿಟಿ, ನಿದ್ರಾಹೀನತೆ, ಕಬ್ಬಿಣಾಂಶ ಕೊರತೆ ಕಾಡುವುದು, ಕರುಳಿನ ಆರೋಗ್ಯದ ಸಮಸ್ಯೆ, ಇದರೊಂದಿಗೆ ಅತಿಯಾದ ಕೆಫೀನ್‌ ಅಂಶದ ಸೇವನೆಯು ಕಾರ್ಟಿಸೋಲ್‌ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ದಿನದಲ್ಲಿ ಹಲವು ಬಾರಿ ಚಹಾ ಕುಡಿಯುವುದರಿಂದ ರಕ್ತದೊತ್ತಡವು ಏರುಪೇರಾಗಬಹುದು. ತಜ್ಞರ ಪ್ರಕಾರ ದಿನದಲ್ಲಿ 1 ರಿಂದ 2 ಕಪ್‌ ಟೀ ಕುಡಿಯುವುದು ಉತ್ತಮ.

ಪ್ಲಾಸ್ಟಿಕ್‌ ಕಪ್‌ನಲ್ಲಿ ಟೀ ಕುಡಿಯುವುದು

ಬಿಸಿ ಚಹಾವನ್ನು ಪ್ಲಾಸ್ಟಿಕ್‌ ಕಪ್‌ಗೆ ಹಾಕಿದಾಗ ಅದು ವಿಷಾಂಶವನ್ನು ಹೊರ ಹಾಕುತ್ತದೆ. ಅದನ್ನು ಬಿಪಿಎ ಎಂದು ಕರೆಯುತ್ತಾರೆ. ಬಿಪಿಎ ಎಂದರೆ ಎಂಡೋಕ್ರೈನ್‌ ಡಿಸ್ರಪ್ಟರ್‌ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿನ ಹಲವು ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್‌ ಕಪ್‌ ಅಥವಾ ಪ್ಲಾಸ್ಟಿಕ್‌ ಲೇಪಿತ ಬಳಸಿ ಎಸೆಯುವ ಕಪ್‌ಗಳಲ್ಲಿ ಚಹಾ ಕುಡಿಯುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ ಕ್ಯಾನ್ಸರ್‌ನಂತಹ ಸಮಸ್ಯೆಗಳು ಎದುರಾಗಬಹುದು. ಸ್ಟೀಲ್‌ ಅಥವಾ ಪಿಂಗಾಣಿ ಲೋಟದಲ್ಲಿ ಚಹಾ ಕುಡಿಯುವುದು ಯಾವಾಗಲೂ ಉತ್ತಮ.

ಅತಿಯಾದ ಸಕ್ಕರೆ ಸೇರಿಸುವುದು

ಚಹಾಕ್ಕೆ ಅತಿಯಾಗಿ ಸಕ್ಕರೆ ಸೇರಿಸುವುದರಿಂದ ಕ್ಯಾಲೊರಿ ಪ್ರಮಾಣ ಹೆಚ್ಚಬಹುದು. ಸಕ್ಕರೆಯಲ್ಲಿ ಯಾವುದೇ ಪೌಷ್ಟಿಕಾಂಶವಿರುವುದಿಲ್ಲ. ಅತಿಯಾದ ಸಕ್ಕರೆ ಸೇವನೆಯು ರಕ್ತದಲ್ಲಿನ ಇನ್ಸುಲಿನ್‌ ಅಥವಾ ಗ್ಲೂಕೋಸ್‌ ಮಟ್ಟವನ್ನು ಹೆಚ್ಚಿಸಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ದಿನದಲ್ಲಿ ಅತಿಯಾದ ಸಕ್ಕರೆ ಸೇರಿಸಿದ ಚಹಾವನ್ನು 3 ಕಪ್‌ಗಿಂತ ಹೆಚ್ಚು ಸೇವಿಸುವುದು ಮುಖ್ಯವಾಗುತ್ತದೆʼ ಎಂದು ಡಾ. ಗುಡೆ ಹೇಳುತ್ತಾರೆ.

Whats_app_banner