ಕನ್ನಡ ಸುದ್ದಿ  /  ಜೀವನಶೈಲಿ  /  Epilepsy: ಯಾರಾದ್ರೂ ಮೂರ್ಛೆ ಹೋದ್ರೆ ತಕ್ಷಣಕ್ಕೆ ಏನ್‌ ಮಾಡ್ಬೇಕು; ಮೂರ್ಛೆರೋಗಿಗಳ ಆರೈಕೆ, ನಿರ್ವಹಣೆ ಕುರಿತು ತಜ್ಞರ ಸಲಹೆ ಹೀಗಿದೆ

Epilepsy: ಯಾರಾದ್ರೂ ಮೂರ್ಛೆ ಹೋದ್ರೆ ತಕ್ಷಣಕ್ಕೆ ಏನ್‌ ಮಾಡ್ಬೇಕು; ಮೂರ್ಛೆರೋಗಿಗಳ ಆರೈಕೆ, ನಿರ್ವಹಣೆ ಕುರಿತು ತಜ್ಞರ ಸಲಹೆ ಹೀಗಿದೆ

ವಿಶ್ವದಾದ್ಯಂತ ಜನರನ್ನು ಬಾಧಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮೂರ್ಖೆರೋಗ ಕೂಡ ಒಂದು. ಎಪಿಲೆಪ್ಸಿ ಅಥವಾ ಫಿಟ್ಸ್‌ ಎಂಬುದು ಕರೆಯುವ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನಿರ್ವಹಿಸುವುದರಿಂದ ತೊಂದರೆ ಹೆಚ್ಚುವುದನ್ನು ತಪ್ಪಿಸಬಹುದು. ಮೂರ್ಛೆ ಹೋದ ಸಂದರ್ಭ ರೋಗಿಗಳ ನಿರ್ವಹಣೆ ಕುರಿತು ಮಂಗಳೂರಿನ ಡಾ. ಶಿವಾನಂದ ಪೈ ಅವರು ನೀಡಿರುವ ಸಲಹೆಗಳು ಇಲ್ಲಿವೆ.

ಮೂರ್ಛೆರೋಗಿಗಳ ಆರೈಕೆ, ನಿರ್ವಹಣೆ ಕುರಿತು ತಜ್ಞರ ಸಲಹೆ,  ಡಾ. ಶಿವಾನಂದ ಪೈ (ಬಲಚಿತ್ರ)
ಮೂರ್ಛೆರೋಗಿಗಳ ಆರೈಕೆ, ನಿರ್ವಹಣೆ ಕುರಿತು ತಜ್ಞರ ಸಲಹೆ, ಡಾ. ಶಿವಾನಂದ ಪೈ (ಬಲಚಿತ್ರ)

ಫಿಟ್ಸ್‌ ಎನ್ನುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹಲವರನ್ನು ಬಾಧಿಸುವ ಕಾಯಿಲೆ. ಫಿಟ್ಸ್‌ ಬರಲು ಕಾರಣ ತಿಳಿಯದೇ ಹೋದರು ಇದನ್ನು ನಿಭಾಯಿಸುವುದು ಬಹಳ ಮುಖ್ಯ. ಮೂರ್ಖೆರೋಗ ಆರೈಕೆಯಲ್ಲಿ ನೈಪುಣ್ಯ ಪಡೆದು, ತಕ್ಷಣಕ್ಕೆ ಏನು ಮಾಡಬೇಕು ಎಂಬುದು ನಮಗೆ ಅರಿವಿರಬೇಕು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮೂರ್ಛೆರೋಗ(ಎಪಿಲೆಪ್ಸಿ ಅಥವಾ ಫಿಟ್ಸ್) ಎಂಬುದು ಸಾಂಕ್ರಾಮಿಕವಲ್ಲದ ನರರೋಗ ಸಂಬಂಧಿತ ಅಸ್ವಸ್ಥತೆಯಾಗಿದೆ. ಅಲ್ಲದೇ ಇದು ವಿಶ್ವವ್ಯಾಪಿಯಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಪದೇ ಪದೇ ಮೂರ್ಛೆ ಹೋಗುವುದು, ಮೆದುಳಿನಲ್ಲಿ ಹಠಾತ್ ಮತ್ತು ಅನಿಯಂತ್ರಿತ ವಿದ್ಯುತ್ ಅಡಚಣೆಗಳು ಇದರ ಪ್ರಮುಖ ಗುಣಲಕ್ಷಣಗಳಾಗಿವೆ. ಈ ಮೂರ್ಛೆ ಹೋಗುವ ಆಘಾತದ ಕಾಲಾವಧಿ ಮತ್ತು ತೀವ್ರತೆಗಳು ಸ್ವಲ್ಪಮಟ್ಟದಿಂದ ತೀವ್ರಮಟ್ಟದವರೆಗೆ ಇರುತ್ತವೆ. ಜೊತೆಗೆ ಅನೈಚ್ಛಿಕ ಚಲನೆಗಳು, ಪ್ರಜ್ಞಾಸ್ಥಿತಿಯಲ್ಲಿ ಬದಲಾವಣೆಗಳು, ಇಂದ್ರಿಯ ಗ್ರಹಿಕೆಗಳಲ್ಲಿ ಅಥವಾ ನಡವಳಿಕೆಗಳಲ್ಲಿ ಬದಲಾವಣೆಗಳು ಈ ಸಂದರ್ಭಗಳಲ್ಲಿ ಕಂಡುಬರುತ್ತವೆ.

ಈ ಮೂರ್ಛೆಯ ಆಘಾತಗಳನ್ನು ದಾಖಲಿಸುವುದು ರೋಗಿಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಬ್ಬರಿಗೂ ಅಮೂಲ್ಯವಾಗಿರುತ್ತದೆ. ಇದರಿಂದ ಗರಿಷ್ಠ ಪ್ರಮಾಣದಲ್ಲಿ ಮೂರ್ಛೆರೋಗದ ನಿರ್ವಹಣೆ ಕೈಗೊಳ್ಳಲು ಪ್ರಮುಖ ಒಳನೋಟಗಳು ಲಭಿಸುತ್ತವೆ. ಈ ಮೂರ್ಛೆಯ ಆಘಾತಗಳನ್ನು ಪರಿಣಾಮಕಾರಿಯಾಗಿ ದಾಖಲಿಸುವಲ್ಲಿ ಹಲವಾರು ಪ್ರಮುಖ ಅಂಶಗಳು ಒಳಗೊಂಡಿರುತ್ತವೆ:

ಮೂರ್ಛೆರೋಗದ ನಿರ್ವಹಣೆ

ವಿವರವಾದ ವರ್ಣನೆ: ಮೂರ್ಛೆಯ ಆಘಾತದ ಅವಧಿ ಸೇರಿದಂತೆ ಆ ಘಟನೆಯ ವಿವರವಾದ ವರ್ಣನೆಯನ್ನು ಪೂರೈಸಲು ಕುಟುಂಬದ ಸದಸ್ಯರಿಗೆ ಪ್ರೋತ್ಸಾಹಿಸಿ.

ಮೂರ್ಛೆ ಆಘಾತದ ವಿಧ: ಬೇರೆ ಬೇರೆ ಲಕ್ಷಣಗಳೊಂದಿಗೆ ಪ್ರತ್ಯೇಕ ರೀತಿಯ ಮೂರ್ಛೆ ಆಘಾತಗಳು ಇರುತ್ತವೆ. ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಮೂರ್ಛೆ ಆಘಾತದ ವಿಧವನ್ನು ದಾಖಲಿಸುವುದು ಅವಶ್ಯಕವಾಗಿರುತ್ತದೆ.

ಸಮಯ ಮತ್ತು ದಿನಾಂಕ: ಮೂರ್ಛೆಯ ಆಘಾತಗಳ ಪುನರಾವರ್ತನೆಗಳು ಮತ್ತು ಅವುಗಳ ಮಾದರಿಗಳನ್ನು ಪತ್ತೆ ಮಾಡುವಲ್ಲಿ ಈ ಆಘಾತಗಳ ಸಮಯ ಮತ್ತು ದಿನಾಂಕದ ದಾಖಲಿಸುವಿಕೆಯಿಂದ ನೆರವಾಗುತ್ತದೆ.

ಅವಧಿ: ಆಘಾತದ ತೀವ್ರತೆಯ ಮೌಲ್ಯೀಕರಣ ಮತ್ತು ಸೂಕ್ತ ವೈದ್ಯಕೀಯ ಹಸ್ತಕ್ಷೇಪಗಳನ್ನು ನಿರ್ಧರಿಸಲು ಮೂರ್ಛೆಯ ಆಘಾತದ ಅವಧಿಯನ್ನು ದಾಖಲಿಸುವುದು ಮುಖ್ಯವಾಗಿರುತ್ತದೆ.

ಪ್ರಚೋದಕಗಳು ಮತ್ತು ಪ್ರಭಾವ ಬೀರುವ ಅಂಶಗಳು: ಮೂರ್ಛೆಯ ಆಘಾತಕ್ಕೆ ಕೊಡುಗೆ ನೀಡಬಹುದಾದ ಸಂಭಾವ್ಯ ಪ್ರಚೋದಕಗಳು ಅಥವಾ ಪ್ರಭಾವ ಬೀರುವ ಅಂಶಗಳನ್ನು ಗುರುತಿಸುವುದರಿಂದ ಭವಿಷ್ಯದಲ್ಲಿ ಈ ಆಘಾತಗಳನ್ನು ಕಡಿಮೆ ಮಾಡಲು ಯೋಜನಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯವಾಗಬಹುದು.

ವಿಡಿಯೊ ದಾಖಲೆ ಮಾಡುವುದು: ಸಾಧ್ಯವಾದಲ್ಲಿ ಕ್ಯಾಮೆರಾ ಅಥವಾ ಸ್ಮಾಟ್‌ಫೋನ್ ಬಳಸಿ ಮೂರ್ಛೆಯ ಆಘಾತವನ್ನು ಸೆರೆಹಿಡಿಯಿರಿ. ವಿಡಿಯೋ ದಾಖಲೆ ಮಾಡುವುದರಿಂದ ಮೂರ್ಛೆಯ ಆಘಾತದ ಗುಣಲಕ್ಷಣಗಳನ್ನು ಕುರಿತು ಅಮೂಲ್ಯ ಒಳನೋಟಗಳು ಲಭ್ಯವಾಗುತ್ತವೆ. ವೈದ್ಯರು ತೊಂದರೆಯನ್ನು ನಿಖರವಾಗಿ ಮೌಲ್ಯೀಕರಿಸಲು ಇದು ನೆರವಾಗುತ್ತದೆ.

ನೀರಿನಲ್ಲಿ ಮೂರ್ಛೆಯ ಆಘಾತಗಳು ಉಂಟಾಗುವ ಪ್ರಕರಣಗಳಲ್ಲಿ ವ್ಯಕ್ತಿಯ ಸುರಕ್ಷತೆಯ ಖಾತ್ರಿ ಮಾಡಿಕೊಳ್ಳಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಅಂತಹ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ನೀರಿನಲ್ಲಿ ವ್ಯಕ್ತಿ ಮೂರ್ಛೆ ಹೋದಾಗ ಮಾಡಬೇಕಾಗಿರುವುದು

ವ್ಯಕ್ತಿಯ ತಲೆಗೆ ಆಸರೆ ನೀಡಿ: ವ್ಯಕ್ತಿಯ ತಲೆ ನೀರಿನಿಂದ ಹೊರಗಿರುವಂತೆ ಅವರಿಗೆ ಬೆಂಬಲ ಅಥವಾ ಆಸರೆ ನೀಡುವ ಖಾತ್ರಿ ಮಾಡಿಕೊಳ್ಳಿ. ಇದರಿಂದ ಅವರು ಮುಳುಗುವ ಅಪಾಯ ಕಡಿಮೆಯಾಗುತ್ತದೆ.

ತಲೆಯನ್ನು ಹಿಂದಕ್ಕೆ ಬಾಗಿಸಿ: ಉಸಿರಾಟದ ಮಾರ್ಗ ತೆರೆದಿರುವಂತೆ ಉಳಿಸಿಕೊಳ್ಳಲು ವ್ಯಕ್ತಿಯ ತಲೆಯನ್ನು ಹಿಂದಕ್ಕೆ ಬಾಗಿಸಿ. ಇದರಿಂದ ವ್ಯಕ್ತಿಗೆ ಉಸಿರಾಡಲು ಅನುಕೂಲವಾಗುತ್ತದೆ.

ನೀರಿನಿಂದ ಹೊರಗೆ ತನ್ನಿ: ಮೂರ್ಛೆ ಆಘಾತದ ಸೆಳೆತಗಳು ಸಂಭವಿಸಿದಾಗ ವ್ಯಕ್ತಿ ಈಜುಕೊಳದಲ್ಲಿದ್ದರೆ, ಈ ಸೆಳೆತಗಳು ನಿಂತ ನಂತರ ಅವರನ್ನು ಈಜುಕೊಳದಿಂದ ಮೇಲೆತ್ತಿ.

ಸೂಚನೆ: ಸೆಳೆತಗಳು ನಿಲ್ಲದ ಅಪರೂಪದ ಸಂದರ್ಭದಲ್ಲಿ, ಸಾಧ್ಯವಾದರೆ ಇತರರ ಸಹಾಯ ಪಡೆದುಕೊಳ್ಳಿ. ಅತ್ಯಂತ ಕಡಿಮೆ ಆಳವಿರುವ ಪ್ರದೇಶದಿಂದ ಅವರನ್ನು ಹೊರ ತನ್ನಿರಿ.

* ಮೂರ್ಛೆ ಆಘಾತದ ಸೆಳೆತಗಳು ಅಲೆಗಳ ನಡುವೆ ಸಂಭವಿಸಿದಲ್ಲಿ, ವ್ಯಕ್ತಿಯನ್ನು ತಕ್ಷಣ ನೀರಿನಿಂದ ಹೊರತನ್ನಿರಿ.

ಈಜಲು ನೆರವಾಗುವ ಸಾಧನಗಳನ್ನು ಬಳಸಿ: ನೀರಿನಿಂದ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ನೆರವಾಗಲು ಇರುವ ಸಾಧನಗಳನ್ನು ಬಳಸಿಕೊಳ್ಳಿ.

ಸಹಾಯ ಪಡೆದುಕೊಳ್ಳಿ: ಸುತ್ತಲೂ ಯಾರಾದರೂ ಲಭ್ಯವಿದ್ದಲ್ಲಿ ಅವರ ಸಹಾಯ ಪಡೆದುಕೊಂಡು ಪೀಡಿತ ವ್ಯಕ್ತಿಯ ಸುರಕ್ಷತೆಯ ಖಾತ್ರಿ ಮಾಡಿಕೊಳ್ಳಿ.

ನೀರಿನಿಂದ ಹೊರ ಕರೆತಂದ ನಂತರ ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮಗಳು

ಒಂದು ಮಗ್ಗುಲಿಗೆ ಮಲಗಿಸಿ: ಉಸಿರಾಟದ ಮಾರ್ಗ ತೆರೆದಿರುವಂತೆ ನೋಡಿಕೊಳ್ಳಲು ಮತ್ತು ದ್ರವ ಪದಾರ್ಥಗಳಿಂದ ಉಸಿರುಕಟ್ಟುವುದನ್ನು ತಪ್ಪಿಸಲು ವ್ಯಕ್ತಿಯನ್ನು ಒಂದು ಮಗ್ಗುಲಿಗೆ ಅಥವಾ ಪಕ್ಕಕ್ಕೆ ಮಲಗಿಸಿ.

ಉಸಿರಾಟವನ್ನು ಪರೀಕ್ಷಿಸಿ : ಉಸಿರಾಟ ಸರಿಯಾಗಿದೆಯೇ ಎಂದು ಪರೀಕ್ಷಿಸಿ; ಅದು ಅಸಾಧಾರಣವಾಗಿದ್ದಲ್ಲಿ, ಬೆನ್ನಿನ ಮೇಲೆ ಅಂಗಾತ ಮಲಗಿಸಿ ಕೃತಕ ಉಸಿರಾಟ ಕ್ರಮವನ್ನು(ಸಿಪಿಆರ್-ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್) ಆರಂಭಿಸಿ.

ಮೂರ್ಛೆಯ ಆಘಾತಗಳನ್ನು ನಿಭಾಯಿಸುವಲ್ಲಿ ಈ ಕ್ರಮಗಳು ಬಹಳ ಮುಖ್ಯವಾಗಿರುತ್ತವೆ. ಅದರಲ್ಲಿಯೂ ನೀರಿನಲ್ಲಿದ್ದರೆ, ವ್ಯಕ್ತಿಯ ಸುರಕ್ಷತೆ ಮತ್ತು ಯೋಗಕ್ಷೇಮದ ಖಾತ್ರಿ ಮಾಡಿಕೊಳ್ಳಿ.

(ಲೇಖನ: ಡಾ. ಶಿವಾನಂದ ಪೈ, ನರರೋಗ ಸಲಹಾ ತಜ್ಞರು, ಕೆಎಂಸಿ ಆಸ್ಪತ್ರೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು)