ಕನ್ನಡ ಸುದ್ದಿ  /  ಜೀವನಶೈಲಿ  /  Eye Care: ಬಿರುಬಿಸಿಲಿನ ತಾಪಕ್ಕೆ ನಲುಗುತ್ತಿವೆ ನಯನಗಳು; ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Eye Care: ಬಿರುಬಿಸಿಲಿನ ತಾಪಕ್ಕೆ ನಲುಗುತ್ತಿವೆ ನಯನಗಳು; ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಕರ್ನಾಟಕದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅತಿಯಾದ ಸೂರ್ಯ ಶಾಖದಿಂದ ನಮ್ಮ ಕಣ್ಣುಗಳು ನಲುಗುತ್ತಿವೆ. ಬಿಸಿಗಾಳಿ, ಸೂರ್ಯನ ಶಾಖ, ಧೂಳು ಇನ್ನಿತರ ಕಾರಣಗಳಿಂದ ಕಣ್ಣುಗಳ ಅಲರ್ಜಿ ಉಂಟಾಗುತ್ತಿದೆ. ಈ ಹೊತ್ತಿನಲ್ಲಿ ಕಂಗಳ ರಕ್ಷಣೆ ಹೇಗೆ ನೋಡಿ.

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಮಕ್ಕಳಿಂದ ಹಿಡಿದು ವಯಸ್ಸಾದವರೆಗೆ ಇಲ್ಲದ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಬಿಸಿಗಾಳಿಯ ಪರಿಣಾಮವು ಕಣ್ಣುಗಳ ಮೇಲೂ ಬೀರುತ್ತಿದ್ದು, ನಯನಗಳು ನಲುಗುತ್ತಿವೆ. ಸೂರ್ಯನ ಬಿಸಿಲಿಗೆ ನೇರವಾಗಿ ಕಣ್ಣುಗಳನ್ನು ಒಡ್ಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಜೊತೆಗೆ ಬೇಸಿಗೆಯಲ್ಲಿ ನೀರು ಕೂಡ ಕಣ್ಣಿನ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆ. ಇದರೊಂದಿಗೆ ಅತಿಯಾದ ಧೂಳು ಕಣ್ಣಿಗೆ ಅಪಾಯ ಉಂಟು ಮಾಡುತ್ತಿದೆ. ಬೇಸಿಗೆಯಲ್ಲಿ ಎದುರಾಗುವ ಕಣ್ಣಿನ ತೊಂದರೆಗಳು ಯಾವುವು, ಬಿರು ಬಿಸಿಲಿನಿಂದ ಕಣ್ಣನ್ನು ರಕ್ಷಿಸಿಕೊಳ್ಳುವುದು ಹೇಗೆ ಇಲ್ಲಿದೆ ಉತ್ತರ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳಿವು

ಬೇಸಿಗೆಯಲ್ಲಿ ತಾಪಮಾನ ಏರಿಕೆ, ಬಿಸಿಗಾಳಿ ಹಾಗೂ ಶಾಖದ ಕಾರಣದಿಂದ ಕಣ್ಣುರಿ, ಕಣ್ಣಿನಲ್ಲಿ ನೀರು ಸುರಿಯುವುದು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಇಂತಹ ಸಮಸ್ಯೆಗಳು ಎದುರಾಗುವುದು ಸಹಜ. ಇನ್ನು ಸೂರ್ಯನ ಕಿರಣಗಳು, ಧೂಳು ಹಾಗೂ ಮಾಲಿನ್ಯದ ಕಾರಣದಿಂದ ಕಣ್ಣು ಒಣಗುವುದು, ಕಿರಿಕಿರಿ, ಅಲರ್ಜಿಯಂತಹ ಸಮಸ್ಯೆಗಳು ಕೂಡ ಎದುರಾಗಬಹುದು. ಕೆಲವೊಮ್ಮೆ ಕಲುಷಿತ ನೀರು ಕಣ್ಣಿನ ಅಲರ್ಜಿಗೂ ಕಾರಣವಾಗಬಹುದು.

ಇದರೊಂದಿಗೆ ಬೇಸಿಗೆಯಲ್ಲಿ ಕಾಮಾಲೆ, ಕಾರ್ನಿಯಲ್‌ ಬರ್ನ್‌, ಕಣ್ಣುಗಳು ದಣಿದಂತಾಗುವುದು, ಸೋಂಕು, ಬೆಳಕಿನ ಸೂಕ್ಷ್ಮತೆ ಕೂಡ ಉಂಟಾಗಬಹುದು.

ಬೇಸಿಗೆಯಲ್ಲಿ ಕಂಗಳ ರಕ್ಷಣೆ ಹೇಗೆ?

ಕಣ್ಣುಗಳು ಬಹಳ ಸೂಕ್ಷ್ಮ. ಎಲ್ಲಾ ಸಮಯದಲ್ಲೂ ಕಣ್ಣುಗಳನ್ನು ಜೋಪಾನ ಮಾಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ತಾಪ ನಯನಗಳಿಗೆ ನೇರವಾಗಿ ತಾಕದಂತೆ ನೋಡಿಕೊಳ್ಳಬೇಕು. ಈ ವರ್ಷ ಬೇಸಿಗೆ ಧಗೆ, ಸೂರ್ಯನ ತಾಪಮಾನ ಹೆಚ್ಚಿರುವ ಕಾರಣದಿಂದ ಕಣ್ಣನ್ನು ಜೋಪಾನ ಮಾಡುವ ವಿಚಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

ಹೊರಗಡೆ ಹೋಗುವಾಗ ಸನ್‌ಗ್ಲಾಸ್‌ ಧರಿಸಿ: ಬೇಸಿಗೆಯಲ್ಲಿ ಹೊರಗಡೆ ಹೋಗುವಾಗ ತಪ್ಪದೇ ಸನ್‌ಗ್ಲಾನ್‌ ಬಳಸಿ. ನೇರವಾಗಿ ಸೂರ್ಯನ ಕಿರಣ ಕಣ್ಣುಗಳಿಗೆ ತಾಕದಂತೆ ನೋಡಿಕೊಳ್ಳಿ. ಮಧ್ಯಾಹ್ನದ ಉರಿ ಬಿಸಿಲಿಗೆ ತಪ್ಪಿಯೂ ಗ್ಲಾಸ್‌, ಟೋಪಿ ಇಲ್ಲದೇ ಹೊರಗಡೆ ಹೋಗಬೇಡಿ.

ವೈಯಕ್ತಿಕ ನೈರ್ಮಲ್ಯಕ್ಕೆ ಗಮನ ಕೊಡಿ: ಕಣ್ಣಿನ ಆರೋಗ್ಯಕ್ಕೆ ಸ್ವಚ್ಛತೆಯು ಬಹಳ ಮುಖ್ಯ. ಬೇಸಿಗೆಯಲ್ಲಿ ಧೂಳು, ಬಿಸಿಲಿನ ಕಾರಣದಿಂದ ಕೈಗಳು ಕೊಳೆಯಾಗುತ್ತಿರುತ್ತದೆ. ಕಣ್ಣುಗಳನ್ನು ಮುಟ್ಟುವಾಗ ತಪ್ಪದೇ ಕೈ ತೊಳೆದುಕೊಳ್ಳಿ. ತಲೆ ಹಾಗೂ ಮುಖದ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಬೆವರು, ಧೂಳಿನಾಂಶ ಕಣ್ಣಿಗೆ ತಾಕದಂತೆ ನೋಡಿಕೊಳ್ಳಿ.

ಕಣ್ಣನ್ನು ಪದೇ ಪದೇ ಉಜ್ಜಬೇಡಿ: ಬೇಸಿಗೆಯಲ್ಲಿ ಕಣ್ಣಿನ ತುರಿಕೆ, ಕಿರಿಕಿರಿ ಸಹಜ. ಹಾಗಂತ ಕಣ್ಣುಗಳನ್ನು ಪದೇ ಪದೇ ಉಜ್ಜಬಾರದು. ಕಣ್ಣುಗಳನ್ನು ಪದೇ ಪದೇ ಮುಟ್ಟಿಕೊಳ್ಳುವುದು ಸರಿಯಲ್ಲ. ಆಗಾಗ ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.

ಬೇರೆಯವರ ಕರ್ಚೀಫ್‌, ಕಾಸ್ಮೆಟಿಕ್‌ ಬಳಕೆ ಬೇಡ: ಕಣ್ಣು ಬಹಳ ಸೂಕ್ಷ್ಮವಾಗಿರುವ ಕಾರಣ ಕೊಂಚ ವ್ಯತ್ಯಯವಾದ್ರೂ ಅಪಾಯ ಖಚಿತ. ಹಾಗಾಗಿ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಬೇರೆಯವರು ಬಳಸಿದ ಕರ್ಚಿಫ್‌, ಕಾಡಿಗೆ, ಐಲೈನರ್‌ನಂತಹ ಕಾಸ್ಮೆಟಿಕ್‌ಗಳನ್ನು ಬಳಸಬೇಡಿ.

ಸ್ವಿಮ್ಮಿಂಗ್‌ ಮಾಡುವಾಗ ಗಾಗಲ್‌ ಬಳಸಿ: ನೀರಿನಿಂದ ಕಣ್ಣಿಗೆ ಅಲರ್ಜಿಯಾಗುವ ಅಪಾಯ ಹೆಚ್ಚಿರುವ ಕಾರಣ ನೀವು ನೀರಿಗೆ ಇಳಿಯುವಾಗ ತಪ್ಪದೇ ಗಾಗಲ್ಸ್‌ ಬಳಸಿ. ನೇರವಾಗಿ ಸ್ವಿಮ್ಮಿಂಗ್‌ ಫೂಲ್‌ನ ನೀರು ಕಣ್ಣಿಗೆ ತಾಕದಂತೆ ನೋಡಿಕೊಳ್ಳಿ.

ಸನ್‌ಸ್ಕ್ರೀನ್‌ನಂತಹ ಯಾವುದೇ ಲೋಷನ್‌ ಕಣ್ಣಿಗೆ ತಾಕದಂತೆ ನೋಡಿಕೊಳ್ಳಿ: ಬೇಸಿಗೆಯಲ್ಲಿ ನಾವು ಬಳಸುವ ಸನ್‌ಸ್ಕ್ರೀನ್‌ ಲೋಷನ್‌ಗಳು, ಬಾಡಿ ಲೋಷನ್‌ಗಳು ಕಣ್ಣಿಗೆ ತಾಕದಂತೆ ನೋಡಿಕೊಳ್ಳಿ. ಇದರಿಂದ ಇನ್ನೂ ಸಮಸ್ಯೆಗಳು ಹೆಚ್ಚಬಹುದು. ಕಣ್ಣು ಶಾಶ್ವತ ಕುರುಡಾಗುವ ಅಪಾಯವೂ ಇದೆ. ಹಾಗಾಗಿ ಇದರಿಂದ ಎಚ್ಚರ ವಹಿಸುವುದು ತುಂಬಾ ಅಗತ್ಯ.

ಸೂರ್ಯನ ಬಿರುಬಿಸಿಲಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ. ಇದರೊಂದಿಗೆ ನಾವು ಸೇವಿಸುವ ಆಹಾರಗಳ ಮೇಲೂ ಗಮನಹರಿಸಬೇಕು. ಕಣ್ಣುಗಳು ಒಣಗುವುದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು, ದೇಹದಲ್ಲಿ ಡೀಹೈಡ್ರೇಷನ್‌ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ.