Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ತಿಳಿದಿರುವ ವಿಚಾರ. ಆದರೆ ಬೇಸಿಗೆಕಾಲದಲ್ಲಿ ಮೊಟ್ಟೆ ಸೇವನೆಯಿಂದ ಎಷ್ಟೆಲ್ಲ ಲಾಭವಿದೆ ಎಂಬುದು ನಿಮಗೆ ತಿಳಿದಿದೆಯೇ..? ಈ ಐದು ಪ್ರಮುಖ ಕಾರಣಗಳಿಗಾಗಿ ಬೇಸಿಗೆಯಲ್ಲಿ ನೀವು ಮೊಟ್ಟೆ ಸೇವನೆ ಮಾಡಲೇಬೇಕು.

ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ 5 ಪ್ರಮುಖ ಕಾರಣಗಳು ಹೀಗಿವೆ
ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ 5 ಪ್ರಮುಖ ಕಾರಣಗಳು ಹೀಗಿವೆ

ಮೊಟ್ಟೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಕಾರಣ ಇದನ್ನು ನಮ್ಮ ದೈನಂದಿನ ಆಹಾರವಾಗಿ ಬಳಸುತ್ತೇವೆ. ಬೇಯಿಸಿದ ಮೊಟ್ಟೆ, ಆಮ್ಲೆಟ್, ಮೊಟ್ಟೆ ಕರಿ ಹೀಗೆ ನಾನಾ ರೀತಿಯಲ್ಲಿ ಮೊಟ್ಟೆಯನ್ನು ಸೇವಿಸಬಹುದು. ಮೊಟ್ಟೆ ಪ್ರೊಟೀನ್‌ನ ಮುಖ್ಯ ಮೂಲವಾಗಿದೆ. ಮೊಟ್ಟೆಗಳಲ್ಲಿ ಪೌಷ್ಟಿಕಾಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಿಂದ ಹಿಡಿದು ತೂಕ ನಿರ್ವಹಣೆಯವರೆಗೂ ಮೊಟ್ಟೆಗಳು ನಿಮಗೆ ಉತ್ತಮ ಆಹಾರದ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ತಪ್ಪದೇ ಮೊಟ್ಟೆ ತಿನ್ನಿ ಎನ್ನುತ್ತಾರೆ ತಜ್ಞರು, ಇದಕ್ಕೆ ಕಾರಣವೇನು ನೋಡಿ.

ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಅವಶ್ಯ ಏಕೆ?

ಪ್ರೊಟೀನ್ ಅಗಾಧ ಪ್ರಮಾಣದಲ್ಲಿದೆ: ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೊಟೀನ್‌ ಮೂಲವಾಗಿದೆ. ದೇಹದ ಮೂಳೆ ಹಾಗೂ ಮಾಂಸಖಂಡಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಇದರಲ್ಲಿ ಸಿಗುವ ಕಾರಣ ಇದು ಬೇಸಿಗೆ ಸೇರಿದಂತೆ ಎಲ್ಲಾ ಕಾಲಕ್ಕೂ ಉತ್ತಮ.

ಕಣ್ಣಿನ ಆರೋಗ್ಯ: ಬೇಸಿಗೆಯಲ್ಲಿ ನಮ್ಮ ದೇಹವು ಹೆಚ್ಚು ಸೂರ್ಯನ ಶಾಖಕ್ಕೆ ತೆರೆದುಕೊಳ್ಳುತ್ತದೆ. ಸೂರ್ಯನ ವಿಕಿರಣಗಳು ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಸೂರ್ಯನ ಶಾಖವು ಕಣ್ಣುಗಳ ಮೇಲೆ ವಿಪರೀತ ಒತ್ತಡವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಮೊಟ್ಟೆಯಲ್ಲಿ ಲ್ಯುಟೀನ್, ಝೆಕ್ಸಾಂಥಿನ್‌ನಂತಹ ಅಂಶಗಳು ಹೇರಳವಾಗಿ ಅಡಕವಾಗಿದೆ. ಇವುಗಳು ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಜೊತೆಯಲ್ಲಿ ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುವ ಕಾರ್ಯವನ್ನೂ ಮಾಡುತ್ತದೆ.

ಹೃದಯದ ಆರೋಗ್ಯ: ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಮೊಟ್ಟೆಯು ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳಲ್ಲಿ ಉತ್ತಮ ಕೊಬ್ಬಿನಾಂಶವಿದ್ದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮೊಟ್ಟೆಗಳು ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶವನ್ನು ನಿವಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡಬಹುದು.

ಮೂಳೆಗಳ ಆರೋಗ್ಯಕ್ಕೆ ಪುಷ್ಠಿ: ಮೊಟ್ಟೆಗಳಲ್ಲಿ ವಿಟಮಿನ್ ಡಿ ಹಾಗೂ ಅಗತ್ಯ ಕ್ಯಾಲ್ಸಿಯಂ ಇದ್ದು ಇವುಗಳು ಮೂಳೆಯ ಆರೋಗ್ಯವನ್ನು ವೃದ್ಧಿಸುವ ಕಾರ್ಯ ಮಾಡುತ್ತವೆ. ಮೂಳೆಗಳು ಬಲಶಾಲಿಯಾಗಿರಲು ದೇಹಕ್ಕೆ ವಿಟಮಿನ್ ಡಿ ಅವಶ್ಯವಿದೆ. ಮೂಳೆಗಳ ಮುರಿತದ ಅಪಾಯವನ್ನೂ ಮೊಟ್ಟೆಗಳು ಕಡಿಮೆ ಮಾಡುತ್ತದೆ.

ತೂಕ ನಿರ್ವಹಣೆ: ಮೊಟ್ಟೆಯಲ್ಲಿ ಇರುವ ಕಡಿಮೆ ಕ್ಯಾಲೋರಿ, ಅತ್ಯಧಿಕ ಪ್ರೊಟೀನ್‌ನಿಂದಾಗಿ ನಿಮ್ಮ ಹಸಿವಿನ ಬಯಕೆಯು ಕಡಿಮೆಯಾಗುತ್ತದೆ. ಇದು ನಿಮ್ಮ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಅದರಲ್ಲೂ ತೂಕ ನಿರ್ವಹಣೆ ಮಾಡುತ್ತಿರುವವರು ಬೇಸಿಗೆಯಲ್ಲಿ ತಪ್ಪದೇ ಮೊಟ್ಟೆಯನ್ನು ಸೇವಿಸಬೇಕು.

Whats_app_banner