Black Coffee Benefits: ತೂಕ ಇಳಿಕೆಯಿಂದ ಒತ್ತಡ ನಿರ್ವಹಣೆವರೆಗೆ ಬೆಳಗೆದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯುವುದರಿಂದಾಗುವ 10 ಪ್ರಯೋಜನಗಳಿವು
10 Benefits Of Consuming Black Coffee: ಬೆಳಿಗ್ಗೆ ಎದ್ದಾಕ್ಷಣ ಚಹಾ ಅಥವಾ ಕಾಫಿ ಕುಡಿಯೋದು ಹಲವರಿಗೆ ರೂಢಿಯಾಗಿರುತ್ತದೆ. ಆದ್ರೆ ಇನ್ ಮೇಲೆ ಬ್ಲ್ಯಾಕ್ ಕಾಫಿ ಕುಡಿಯೋದು ಅಭ್ಯಾಸ ಮಾಡಿ, ಯಾಕೆ ಅಂತೀರಾ, ಖಂಡಿತ ಕಾರಣ ಇದೆ. ಬೆಳಗೆದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಬೆಳಿಗ್ಗೆ ಎದ್ದ ಮೇಲೆ ನಂತರ ಇಡೀ ದಿನ ಮನಸ್ಸು ಖುಷ್ ಖುಷಿಗಾಗಿ, ಫ್ರೆಶ್ ಆಗಿ ಇರಬೇಕು ಅನ್ನೋ ಕಾರಣಕ್ಕೆ ಹಲವರು ಬೆಳಗೆದ್ದು ಕಾಫಿ, ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಒಂಥರಾ ಮೈಂಡ್ ಫ್ರೆಶ್ ಮಾಡೋದು ನಿಜ. ಕಾಫಿ ಅಥವಾ ಟೀಯಲ್ಲಿರುವ ಕೆಫಿನ್ ಅಂಶ ನಮ್ಮ ಮನಸ್ಸನ್ನು ಚೇತೋಹಾರಿಯನ್ನಾಗಿಸುತ್ತದೆ. ಇದು ಅರಿವಿನ ಕಾರ್ಯಕ್ಕೂ ಉತ್ತಮ. ದೇಹ, ಮನಸ್ಸಿನ ಆಯಾಸವನ್ನೂ ಹೊಡೆಸುವ ಶಕ್ತಿ ಈ ಕಾಫಿ ಅಥವಾ ಟೀಯಲ್ಲಿದೆ ಎನ್ನುವುದು ಹಲವರು ಅಭಿಪ್ರಾಯ.
ಆದರೆ ಟೀ, ಕಾಫಿ ಕುಡಿಯೋದಕ್ಕಿಂತ ಬ್ಲ್ಯಾಕ್ ಕಾಫಿ ಕುಡಿದ್ರೆ ಬೆಸ್ಟ್ ಎನ್ನುವುದು ತಜ್ಞರ ಅಭಿಪ್ರಾಯ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತೆ ಎನ್ನುತ್ತೆ ಅಧ್ಯಯನ. ಇದರೊಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಅಲ್ಝೈಮರ್ ಡಿಸೀಸ್ ಹಾಗೂ ಟೈಪ್ 2 ಡಯಾಬಿಟಿಸ್‌ನಂತಹ ಅಪಾಯವನ್ನೂ ಕಡಿಮೆ ಮಾಡುತ್ತದೆ. ಇಷ್ಟೇ ಅಲ್ಲದೆ ಬೆಳಗೆದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಬೆಳಿಗ್ಗೆ ಬ್ಲ್ಯಾಕ್ ಕಾಫಿ ಕುಡಿಯುವುದರಿಂದಾಗುವ ಪ್ರಯೋಜನಗಳಿವು
- ತೂಕ ಇಳಿಕೆ
ಬ್ಲ್ಯಾಕ್ ಕಾಫಿ ಕ್ಯಾಲೋರಿ ರಹಿತವಾಗಿರುತ್ತದೆ. ಆ ಕಾರಣಕ್ಕೆ ಇದನ್ನು ಕುಡಿಯುವುದರಿಂದ ಆರೋಗ್ಯಕರ ದೇಹ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಕೆಫಿನ್ ಅಂಶವಿರುತ್ತದೆ. ಇದು ನಮ್ಮ ಚಯಾಪಚಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ದೈಹಿಕ ಚೈತನ್ಯವನ್ನು ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡುತ್ತದೆ.
2. ಮನಸ್ಸಿಗೆ ಚೈತನ್ಯ ನೀಡುತ್ತದೆ
ಬ್ಲ್ಯಾಕ್ ಕಾಫಿ ಕುಡಿಯವುದರಿಂದ ತಮ್ಮ ನರವೈಜ್ಞಾನಿಕ ವ್ಯವಸ್ಥೆ ಸುಧಾರಿಸುತ್ತದೆ. ಇದು ಹ್ಯಾಪಿ ಕೆಮಿಕಲ್‌ಗಳಾದ ನೊರ್ಪೈನ್ಫ್ರಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮನಸ್ಸು ಚೇತೋಹಾರಿಯಾಗಿರುತ್ತದೆ.
3. ಮಧುಮೇಹ ನಿಯಂತ್ರಣ
ಹಲವು ಅಧ್ಯಯನಗಳ ಪ್ರಕಾರ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಮಧುಮೇಹ ಬರುವ ಸಾಧ್ಯತೆಗಳು ಕಡಿಮೆ ಇದೆ ಎಂಬುದು ಸಾಬೀತಾಗಿದೆ. ಕಾಫಿ ಸೇವನೆಯಿಂದ ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
4. ಖಿನ್ನತೆ ಶಮನ ಮಾಡುತ್ತದೆ
ಕಾಫಿ ಖಿನ್ನತೆಯನ್ನು ಶಮನ ಮಾಡಲು ಪರಿಣಾಮಕಾರಿಯಾಗಿದೆ. ಯಾಕೆಂದರೆ ಇದು ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದುಃಖ, ಒಂಟಿತನ ಸೇರಿದಂತೆ ಖಿನ್ನತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ.
5. ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ
ಬ್ಲ್ಯಾಕ್ ಕಾಫಿ ಕುಡಿಯವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂಬುದು ಹಲವರಿಗೆ ತಿಳಿದಿರುವ ವಿಚಾರ. ವಯಸ್ಸಾದಂತೆ ನಮ್ಮ ಅರಿವಿನ ಸಾಮರ್ಥ್ಯ ಹದಗೆಡುತ್ತದೆ ಮತ್ತು ಅಲ್ಝೈಮರ್ಸ್, ಬುದ್ದಿಮಾಂದ್ಯತೆ ಮತ್ತು ಪಾರ್ಕಿನ್ಸನ್ ಕಾಯಿಲೆಯಂತಹ ನೆನಪಿನ ಶಕ್ತಿ ಕುಂದಿಸುವ ಸಮಸ್ಯೆಗಳ ನಿವಾರಣೆಗೆ ಇದು ಸಹಾಯ ಮಾಡುತ್ತದೆ.
6. ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು
ಯಕೃತ್ತು ದೇಹದ ಆರೋಗ್ಯವನ್ನು ಸದ್ದಿಲ್ಲದೆ ಕಾಪಾಡುವ ಅತ್ಯಗತ್ಯ ಅಂಗವಾಗಿದೆ. ಬ್ಲ್ಯಾಕ್ ಕಾಫಿಯ ಸಹಾಯದಿಂದ ರಕ್ತದಲ್ಲಿನ ಅಪಾಯಕಾರಿ ಪಿತ್ತಜನಕಾಂಗದ ಕಿಣ್ವಗಳ ಮಟ್ಟವನ್ನು ಕಡಿಮೆ ಮಾಡಬಹುದು. ಕೆಲವು ಸಂಶೋಧನೆಗಳ ಪ್ರಕಾರ, ಕಾಫಿ ಹೆಪಟೈಟಿಸ್, ಲಿವರ್ ಸಿರೋಸಿಸ್, ಫ್ಯಾಟಿ ಲಿವರ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ
ಬ್ಲ್ಯಾಕ್ ಕಾಫಿಯಲ್ಲಿನ ಪ್ರಬಲ ಉತ್ಕರ್ಷಣ ನಿರೋಧಕ ಅಂಶವು ಹಲವು ಆರೋಗ್ಯ ಪ್ರಯೋಜನಗಳಿಗೆ ಕೊಡುಗೆ ನೀಡುತ್ತದೆ. ಇದು ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ2, ಬಿ3 ಮತ್ತು ಬಿ5 ಸೇರಿದಂತೆ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
8. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ
ಕಾಫಿಯು ಮೂತ್ರವರ್ಧಕವಾಗಿರುವುದರಿಂದ ನೀವು ಹೆಚ್ಚು ಕಾಫಿ ಕುಡಿದಷ್ಟೂ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದರಿಂದ ನಿಮ್ಮ ಹೊಟ್ಟೆಯು ಸ್ವಚ್ಛವಾಗುತ್ತದೆ ಮತ್ತು ದೇಹದಿಂದ ವಿಷ ಮತ್ತು ಬ್ಯಾಕ್ಟೀರಿಯಾವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
9. ಒತ್ತಡ ಕಡಿಮೆ ಮಾಡುತ್ತದೆ
ಬ್ಲ್ಯಾಕ್ ಕಾಫಿಯಲ್ಲಿರುವ ಒಂದು ಅದ್ಭುತ ಗುಣ ಎಂದರೆ ಇದು ನಮ್ಮಲ್ಲಿರುವ ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಮನಸ್ಸಿಗೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಒಂದು ಕಪ್ ಕಾಫಿಗೆ ತಕ್ಷಣಕ್ಕೆ ಮನಸ್ಸನ್ನು ನಿಯಂತ್ರಿಸುವ, ಮನಸ್ಸಿನ ಚೈತನ್ಯ ಹೆಚ್ಚಿಸುವ ಶಕ್ತಿ ಇದೆ. ಇದು ನರವೈಜ್ಞಾನಿಕ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಸಿರೊಟೋನಿನ್ ಮತ್ತು ಡೊಪಮೈನ್‌ನಂತಹ ನೈಸರ್ಗಿಕ ರಾಸಾಯನಿಕಗಳ ಮಟ್ಟ ಹೆಚ್ಚಲು ಸಹಾಯ ಮಾಡುತ್ತದೆ.
10. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಯಕೃತ್ತು, ಕೊಲೊನ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ಗಳ ಅಭಿವೃದ್ಧಿಯ ಅಪಾಯವನ್ನು ಕಡಿಮೆ ಕಾಫಿ ಸಹಾಯ ಮಾಡುತ್ತದೆ. ಕಾಫಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ.
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ ನಿಜ. ಆದರೆ ಅತಿಯಾದರೆ ಅಮೃತವೂ ವಿಷ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಸೇವನೆಯನ್ನು ರೂಢಿಸಿಕೊಳ್ಳಿ. ಇದನ್ನು ಮಿತವಾಗಿ ಕುಡಿಯುವುದರಿಂದ ಕ್ಯಾಲೊರಿ ರಹಿತವಾಗಿ, ಕೊಬ್ಬು ರಹಿತವಾಗಿ ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಕೂಡ ದೇಹದಲ್ಲಿ ಕಡಿಮೆಯಾಗುತ್ತದೆ.

ವಿಭಾಗ