Palm Oil: ಅಡುಗೆಗೆ ಪಾಮ್ ಆಯಿಲ್ ಬಳಸುವ ಅಭ್ಯಾಸ ಇದ್ಯಾ, ಹಾಗಿದ್ರೆ ಗಮನಿಸಿ; ಹೃದಯದ ಆರೋಗ್ಯಕ್ಕಿದು ಅಪಾಯ
ಇತ್ತೀಚಿನ ದಿನಗಳಲ್ಲಿ ಮನೆ, ಹೋಟೆಲ್, ಫುಡ್‌ಸ್ಟಾಲ್‌ಗಳಲ್ಲಿ ಖಾದ್ಯಗಳನ್ನ ತಯಾರಿಸಲು ಪಾಮ್ ಆಯಿಲ್ ಅನ್ನು ಹೆಚ್ಚು ಬಳಕೆ ಮಾಡ್ತಾರೆ. ಕಡಿಮೆ ದರ ಎನ್ನುವ ಕಾರಣಕ್ಕೆ ಇದರ ಬಳಕೆ ಹೆಚ್ಚು. ಅಡುಗೆಗೆ ರುಚಿ ನೀಡುವ ಪಾಮ್ ಆಯಿಲ್ ಸೇವನೆಯಿಂದ ಆರೋಗ್ಯಕ್ಕೆ ಕಂಟಕ ಇರುವುದು ಸುಳ್ಳಲ್ಲ. ಇದ್ರಿಂದ ಏನೆಲ್ಲಾ ಅಪಾಯವಿದೆ, ಇದಕ್ಕೆ ಪರ್ಯಾಯವೇನು ನೋಡಿ.
ಹಿಂದಿನ ಕಾಲದಿಂದಲೂ ಅಡುಗೆ ಮಾಡಲು ಬಗೆ ಬಗೆಯ ಎಣ್ಣೆಗಳನ್ನು ಬಳಸುವುದು ರೂಢಿ. ಮೊದಲೆಲ್ಲಾ ತೆಂಗಿನೆಣ್ಣೆ, ಶೇಂಗಾಎಣ್ಣೆಯನ್ನು ಜಾಸ್ತಿ ಬಳಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಗೆ ಬಗೆಯ ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಪಾಮ್ ಆಯಿಲ್. ಕರಿಯಲು, ಒಗ್ಗರಣೆ ಹಾಕಲು ಹೀಗೆ ಹೋಟೆಲ್, ಮನೆ, ಫುಡ್‌ಸ್ಟಾಲ್‌ಗಳಲ್ಲಿ ಇದರ ಬಳಕೆಯ ಪ್ರಮಾಣ ಅಧಿಕ. ಕೆಲವೊಮ್ಮೆ ನಾವು ಆರೋಗ್ಯಕ್ಕಿಂತ ರುಚಿಯ ಹಿಂದೆ ಹೋಗುತ್ತೇವೆ. ರುಚಿಯಾದ ಖಾದ್ಯಗಳನ್ನು ತಿನ್ನುವ ಭರದಲ್ಲಿ ಆರೋಗ್ಯವನ್ನು ಮರೆತು ಬಿಡುತ್ತೇವೆ. ಆದರೆ ನಿರಂತರ ಪಾಮ್ ಆಯಿಲ್ ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘಾವಧಿಯ ಪರಿಣಾಮಗಳು ಉಂಟಾಗುವುದು ಸುಳ್ಳಲ್ಲ.
ಅಡುಗೆ ಎಣ್ಣೆಗಳಲ್ಲಿ ಪಾಮ್ ಆಯಿಲ್ ಕಡಿಮೆ ದರದಲ್ಲಿ ಸಿಗುತ್ತದೆ. ಪ್ರಪಂಚದಾದ್ಯಂತ ಪಾಮ್ ಗಿಡಗಳ ಇಳುವರಿಯೂ ಹೆಚ್ಚಿದೆ. ಇದರ ಉತ್ಪಾದನಾ ವೆಚ್ಚವು ಕಡಿಮೆ. ಇದರೊಂದಿಗೆ ಸರ್ಕಾರವು ಪಾಮ್ ಬೆಳೆಗೆ ಹಾಗೂ ತಾಳೆ ಎಣ್ಣೆ ಉತ್ಪಾದನೆಗೆ ಸಹಕಾರ ನೀಡುತ್ತಿದೆ. ಆದರೆ ಇತರೆಲ್ಲಾ ಸಸ್ಯಜನ್ಯ ಎಣ್ಣೆಗಳಿಗೆ ಹೋಲಿಸಿದರೆ ಪಾಮ್ ಆಯಿಲ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನ (ಕೆಟ್ಟ ಕೊಬ್ಬಿನಾಂಶ) ಪ್ರಮಾಣ ಅಧಿಕವಾಗಿದೆ. ನೀವು ಪಾಮ್ ಆಯಿಲ್ ಬಳಸುತ್ತಿದ್ದರೆ, ಇದರ ದುಷ್ಪರಿಣಾಮಗಳ ಬಗ್ಗೆ ತಿಳಿಯಲೇಬೇಕು.
ಹೃದಯಕ್ಕೆ ಅಪಾಯ ಪಾಮ್
ಲಾರ್ಡ್ಸ್ ಮಾರ್ಕ್ ಬಯೋಟೆಕ್‌ನ ಪೌಷ್ಟಿಕತಜ್ಞರಾದ ಸಾಂಚಿ ತಿವಾರಿ ಅವರ ಪ್ರಕಾರ ʼಸ್ಯಾಚುರೇಟೆಡ್ ಕೊಬ್ಬುಗಳು (ಎಲ್‌ಡಿಎಲ್ -ಕೆಟ್ಟ ಕೊಬ್ಬಿನಾಂಶ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಕುಖ್ಯಾತಿ ಪಡೆದಿವೆ. ಇದು ಹೃದಯಾಘಾತ, ಪಾರ್ಶ್ಚವಾಯುವಿನಂತಹ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಅಪಧಮನಿಗಳಲ್ಲಿ ಎಲ್‌ಡಿಎಲ್ ಪ್ರಮಾಣ ಏರಿಕೆಯಾಗುವ ಕಾರಣ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗಿ, ಇಲ್ಲದ ತೊಂದರೆಗಳು ಎದುರಾಗುತ್ತದೆ. ಇದು ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಇದು ದೇಹದ ಅಂಗಾಂಗಗಳ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಇದರೊಂದಿಗೆ ಆಕ್ಸಿಡೈಡ್ ಪಾಮ್ ಎಣ್ಣೆಯಿಂದ ಹಾರ್ಮೋನ್‌ಗಳ ಅಸಮತೋಲನ ಮತ್ತು ದೇಹದಲ್ಲಿ ವಿಷಾಂಶಗಳು ಏರಿಕೆಯಾಗಬಹುದುʼ ಎಂದು ಅವರು ಹೇಳುತ್ತಾರೆ.
ಖ್ಯಾತ ಪೌಷ್ಟಿಕತಜ್ಞರಾದ ಲೋವ್‌ನಿತ್ ಬಾತ್ರಾ ಅವರ ಪ್ರಕಾರ ʼಇದರಿಂದ ಸಂತಾನೋತ್ಪತ್ತಿ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಯಕೃತ್ತು, ಮೂತ್ರಪಿಂಡಗಳು ಮತ್ತು ಶ್ವಾಸಕೋಶದಂತಹ ಪ್ರಮುಖ ಅಂಗಾಂಗಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆʼ ಎಂದು ಅವರು ಹೇಳುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ಪಾಮ್ ಆಯಿಲ್ ಸೇರಿದಂತೆ ಪಾಲ್ಮಿಟಿಕ್ ಆಸಿಡ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಂಶವಿರುವ ಆಹಾರಗಳ ಸೇವೆನಯನ್ನು ಮಿತಗೊಳಿಸುವಂತೆ ನಿರ್ದೇಶಿಸಿದೆ ಎಂಬ ಅಂಶವು ಈಗ ಬಹಿರಂಗವಾಗಿದೆ.
ತಾಳೆಎಣ್ಣೆ ಸೇವನೆಗೆ ಪರ್ಯಾಯವೇನು?
ಒಟ್ಟಾರೆ ದೈಹಿಕ ಆರೋಗ್ಯ ಸುಧಾರಣೆಗೆ ಪಾಲ್ ಆಯಿಲ್ ಬಳಕೆಯನ್ನು ಕಡಿಮೆ ಮಾಡುವುದು ಬಹಳ ಅವಶ್ಯ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯಕರ ಅಡುಗೆಎಣ್ಣೆಯನ್ನು ಆರಿಸಿ: ಆಲಿವ್ ಎಣ್ಣೆ, ಅವಕಾಡೊ, ಸೂರ್ಯಕಾಂತಿ ಎಣ್ಣೆಯಂತಹ ಅನ್‌ಸ್ಯಾಚುರೇಟೆಡ್ ಕೊಬ್ಬಿನಾಂಶ ಅಧಿಕವಾಗಿರುವ ಅಡುಗೆಎಣ್ಣೆಯನ್ನು ಆರಿಸಿ. ಇವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಂಶ ಕಡಿಮೆ ಇದ್ದು, ಇದು ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ.
ಆಹಾರದ ಲೇಬಲ್‌ಗಳನ್ನು ಓದಿ: ಪ್ಯಾಕ್ ಮಾಡಿರುವ ಆಹಾರಗಳ ಖರೀದಿಗೂ ಮುನ್ನ ಲೇಬಲ್ ಮೇಲಿರುವುದನ್ನು ಓದಿ. ಆಹಾರದ ಲೇಬಲ್‌ನಲ್ಲಿ ಈ ಖಾದ್ಯವನ್ನು ಯಾವ ಎಣ್ಣೆಯಿಂದ ತಯಾರಿಸಲಾಗಿದೆ ಎಂಬುದನ್ನು ಬರೆದಿರುತ್ತಾರೆ. ಅದನ್ನು ಪರಿಶೀಲಿಸಿ ಖರೀದಿಸಿ.
ಸಾಧ್ಯವಾದಷ್ಟು ಮನೆ ಅಡುಗೆ ತಿನ್ನಿ: ಅತಿಯಾದ ಕೊಬ್ಬಿನಾಂಶ ಇರುವ ಎಣ್ಣೆ ಸೇವನೆಯು ಇಲ್ಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಹೊರಗಡೆ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಿ, ಯಾಕೆಂದರೆ ಅಲ್ಲಿ ಬಳಸುವ ಅಡುಗೆ ಎಣ್ಣೆಯ ಬಗ್ಗೆ ನಿಮಗೆ ಅರಿವಿರುವುದಿಲ್ಲ. ಸಾಧ್ಯವಾದಷ್ಟು ಮನೆ ಅಡುಗ ಸೇವಿಸಿ.
ಪೌಷ್ಟಿಕ ತಜ್ಞರನ್ನು ಭೇಟಿ ಮಾಡಿ: ನಿಮ್ಮ ದೇಹಕ್ಕೆ ಯಾವ ರೀತಿ ಆಹಾರ ಒಗ್ಗುತ್ತದೆ, ಯಾವ ಆಹಾರ ಆರೋಗ್ಯಕ್ಕೆ ಹಿತವಲ್ಲ ಎಂಬುದನ್ನು ತಿಳಿಯಲು ಪೌಷ್ಟಿಕ ತಜ್ಞರನ್ನು ಭೇಟಿ ಮಾಡಿ. ಅವರು ಸಲಹೆ ನೀಡಿದ ಕ್ರಮಗಳನ್ನು ತಪ್ಪದೇ ಪಾಲಿಸಿ.
ಪಾಮ್ ಆಯಿಲ್ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶದ ಪ್ರಮಾಣ ಏರಿಕೆಯಾಗುತ್ತದೆ, ಇದರ ದೀರ್ಘಕಾಲದ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಪಾಮ್ ಆಯಿಲ್ ಸೇವಿಸುವ ಮುನ್ನ ಇರಲಿ ಎಚ್ಚರ.