Vitamin D: ಮಳೆಗಾಲದಲ್ಲಿ ಕಾಡದಿರಲಿ ವಿಟಮಿನ್ ಡಿ ಕೊರತೆ; ಈ ಆಹಾರಗಳ ಸೇವನೆಗಿರಲಿ ಆದ್ಯತೆ
Vitamin D Problem in Rainy Season: ಮಳೆಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆ ಇರುವ ಕಾರಣದಿಂದ ವಿಟಮಿನ್ ಡಿ ಸಮಸ್ಯೆ ಕಾಡುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ನಾವು ಕೆಲವು ಆಹಾರವನ್ನು ಸೇವಿಸಬಹುದು. ವಿಟಮಿನ್ ಡಿ ದೇಹಕ್ಕೆ ಎಷ್ಟು ಅವಶ್ಯ ತಿಳಿಯಬೇಕೇ, ಈ ಲೇಖನ ಓದಿ.

'ಆರೋಗ್ಯವೇ ಭಾಗ್ಯ' ಎಂಬ ನಾಣ್ನುಡಿ ಎಲ್ಲರಿಗೂ ತಿಳಿದಿದೆ. ಆದರೆ ಆರೋಗ್ಯದ ಬಗ್ಗೆ ಕೆಲವೊಮ್ಮೆ ನಾವು ನಿರ್ಲಕ್ಷ್ಯ ವಹಿಸುತ್ತೇವೆ. ನಾವು ಆರೋಗ್ಯದಿಂದಿರಬೇಕೆಂದರೆ ನಮ್ಮ ದೇಹದಲ್ಲಿ ಸರಿಯಾದ ರೀತಿಯಲ್ಲಿ ವಿಟಮಿನ್ ಮತ್ತು ಪೌಷ್ಟಿಕಾಂಶ ಸೇರಿಕೊಂಡಿರಬೇಕು. ಇವುಗಳಲ್ಲಿ ಏರುಪೇರಾದರೆ ಮನುಷ್ಯನ ದೇಹಕ್ಕೆ ಇಲ್ಲ ಸಲ್ಲದ ರೋಗಗಳು ಅಂಟಿಕೊಂಡು ಬಿಡುತ್ತವೆ. ಹಾಗಾಗಿ ವಿಟಮಿನ್ ಎಯಿಂದ ಹಿಡಿದು ವಿಟಮಿನ್ B12ವರೆಗೂ ದೇಹಕ್ಕೆ ಅಗತ್ಯವಾಗಿರುವವುಗಳೆಲ್ಲಾ ದೇಹದಲ್ಲಿ ಇರಲೇಬೇಕು. ಇವುಗಳಲ್ಲಿ ಮುಖ್ಯವಾದ ವಿಟಮಿನ್ ಡಿಯ ಕುರಿತು ಈಗ ತಿಳಿದುಕೊಳ್ಳೋಣ.
ವಿಟಮಿನ್ ಡಿಯನ್ನು ನಾವು ಸೂರ್ಯನ ಬೆಳಕಿನ ಮೂಲಕ ಪಡೆದುಕೊಳ್ಳಬಹುದು. ಇದರ ಜೊತೆಗೆ ಕೆಲವು ಆಹಾರಗಳೂ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿಯನ್ನು ಒದಗಿಸುತ್ತವೆ.
ಈಗ ಮಳೆಗಾಲದ ಸಮಯವಾದ್ದರಿಂದ ಸೂರ್ಯನ ಕಿರಣ ಭೂಮಿಗೆ ಬೀಳುವುದು ಅಪರೂಪವಾದ್ದರಿಂದ ಮಳೆಗಾಲದಲ್ಲಿ ಈ ಪೋಷಕಾಂಶವನ್ನು ಬೇರೆ ರೂಪದಲ್ಲಿ ಪಡೆದುಕೊಳ್ಳುವುದು ಉತ್ತಮ.
ಆಹಾರಕ್ರಮ
ಟ್ರೌಟ್, ಸಾಲ್ಮನ್, ಟ್ಯೂನ, ಮ್ಯಾಕೆರೆಲ್‌ನಂತಹ ಕೊಬ್ಬಿನ ಮೀನುಗಳನ್ನು ಸೇವಿಸುವುದರ ಮೂಲಕ ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಡಿ ಇರುವಂತೆ ನೋಡಿಕೊಳ್ಳಬೇಕು.
ಇವುಗಳ ಜೊತೆಗೆ ಮೊಟ್ಟೆಯ ಹಳದಿ ಭಾಗ, ಅಣಬೆ ಮತ್ತು ಚೀಸನ್ನು ತಿನ್ನಬಹುದು. ಇನ್ನು ಹಸುವಿನ ಹಾಲು, ಸಸ್ಯಜನ್ಯ ಹಾಲು, ಕಿತ್ತಳೆ ಜ್ಯೂಸ್ ಮತ್ತು ಮೊಸರಿನಿಂದಲೂ ವಿಟಮಿನ್ ಡಿ ಸಿಗುತ್ತದೆ.
ಆದರೆ ಇವು ದೇಹಕ್ಕೆ ಹೇಗೆ ಒಗ್ಗಿಕೊಳ್ಳುತ್ತವೆ ಎಂದು ಪರೀಕ್ಷಿಸಿ ಸೇವಿಸುವುದು ಉತ್ತಮ.
ಕೆಲವೊಮ್ಮೆ ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಡಿ ಸಮರ್ಪಕವಾಗಿ ದೊರೆಯುತ್ತಿಲ್ಲವಾದಲ್ಲಿ ವಿಟಮಿನ್ ಡಿಯನ್ನು ಒದಗಿಸುವ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳಬಹುದು. ಇದನ್ನು ಊಟ ಅಥವಾ ತಿಂಡಿಯ ಜೊತೆಗೆ ತೆಗೆದುಕೊಂಡಲ್ಲಿ ಸುಲಭವಾಗಿ ಸಹಾಯಕವಾಗುತ್ತದೆ.
ಸಾಕಷ್ಟು ಮಂದಿ ತಮ್ಮ ದೇಹಕ್ಕೆ ಇದು ಬೇಕು ಅಥವಾ ಬೇಡ ಎಂಬುದನ್ನು ತಿಳಿದುಕೊಳ್ಳದೇ ತೆಗೆದುಕೊಳ್ಳುತ್ತಾರೆ. ಈ ರೀತಿ ಮಾಡಲೇಬಾರದು.
ವಿಟಮಿನ್ ಡಿಯ ಕೊರತೆ ಇದೆಯೋ ಇಲ್ಲವೋ ಎಂಬುದನ್ನು ಮೊದಲು ರಕ್ತಪರೀಕ್ಷೆ ಮಾಡಿಸುವುದರ ಮೂಲಕ ನಂತರ ತಿಳಿದುಕೊಳ್ಳಬಹುದು. ಕೊರತೆ ಇದ್ದಲ್ಲಿ ವೈದ್ಯರನ್ನು ಭೇಟಿಯಾಗಿ ನಂತರ ಔಷಧಿಯನ್ನು ತೆಗೆದುಕೊಳ್ಳಿ. ಇಲ್ಲವಾದರೆ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಬಹುದು.
ವಿಟಮಿನ್ ಡಿಯಿಂದ ಸಿಗುವ ಪ್ರಯೋಜನಗಳು
ಇದು ದೇಹದಲ್ಲಿನ ಮೂಳೆಗಳ ಬೆಳವಣಿಗೆಗೆ ಅವಶ್ಯಕವಾದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸ್ನಾಯುಗಳ ಚಲನೆಗೆ, ದೇಹ ಮತ್ತು ಮೆದುಳಿನ ನಡುವೆ ಸಂದೇಶ ರವಾನಿಸುವ ನರಗಳಿಗೆ ವಿಟಮಿನ್ ಡಿಯ ಅವಶ್ಯಕತೆ ಹೆಚ್ಚಿರುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಗೆ ವಿಟಮಿನ್ ಡಿ ಅತ್ಯಗತ್ಯವಾಗಿದೆ. ವಿಟಮಿನ್ ಡಿಯ ಕೊರತೆ ಎದುರಾದಲ್ಲಿ ಕೂದಲು ಉದುರುವಿಕೆ, ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮಾನಸಿಕ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀಳುತ್ತದೆ.
ಹಾಗೆಯೇ ವಿಟಮಿನ್ ಡಿಯನ್ನು ಯಥೇಚ್ಛವಾಗಿ ಸೇವಿಸಿದರೆ ದೇಹದ ಮೇಲೆ ಹಾನಿಕಾರಕ ಪರಿಣಾಮವಾಗುತ್ತದೆ.
ಇದರಿಂದ ವಾಕರಿಕೆ, ವಾಂತಿ, ಸ್ನಾಯು ದೌರ್ಬಲ್ಯ, ನಿಶಕ್ತಿ, ನಿರ್ಜಲೀಕರಣ, ಅತಿಯಾದ ಮೂತ್ರ ವಿಸರ್ಜನೆ, ಬಾಯಾರಿಕೆ, ಮೂತ್ರಪಿಂಡಗಳಲ್ಲಿ ಕಲ್ಲು ಉಂಟಾಗುವುದು ಸೇರಿದಂತೆ ಅನೇಕ ರೋಗಗಳು ಎದುರಾಗಬಹುದು.
ಲೇಖನ: ಅಕ್ಷರ ಕಿರಣ್
ಇದನ್ನೂ ಓದಿ
Vitamin D: ವಿಟಮಿನ್ ಡಿ ಕೊರತೆಯೇ? ಸಸ್ಯಾಹಾರಿಗಳೂ ತಿನ್ನಬಹುದಾದ ಈ ಆಹಾರಗಳನ್ನು ಮಿಸ್ ಮಾಡಲೇಬೇಡಿ
ವಿಟಮಿನ್ ಡಿ ದೇಹಕ್ಕೆ ಅತ್ಯವಶ್ಯಕವಾಗಿದ್ದು, ವಿಟಮಿನ್ ಡಿ ಕೊರತೆಯು ಸಾಮಾನ್ಯವಾಗಿ ಮೂಳೆ ಮತ್ತು ಸ್ನಾಯುಗಳ ನೋವಿಗೆ ಕಾರಣವಾಗುತ್ತದೆ. ವಿಟಮಿನ್ ಡಿ ಹೆಚ್ಚಳಕ್ಕೆ ನೀವು ಸೇವಿಸಬಹುದಾದ ಆಹಾರಗಳ ಕುರಿತು ಇಲ್ಲಿ ಮಾಹಿತಿ ಕೊಡಲಾಗಿದೆ.

ವಿಭಾಗ