ಹಾಲು ಹಾಕಿ ತಯಾರಿಸಿದ ಚಹಾವನ್ನು ಅತಿಯಾಗಿ ಕುದಿಸಬೇಡಿ, ಇದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ತೊಂದರೆಗಳಾಗುತ್ತವೆ ನೋಡಿ
ಪ್ರಪಂಚದಾದ್ಯಂತ ಬಹುತೇಕರಿಗೆ ಚಹಾ-ಕಾಫಿ ಕುಡಿಯದಿದ್ದರೆ ಬೆಳಗಾಗೋದೆ ಇಲ್ಲ. ಭಾರತೀಯರು ಬೆಳಗೆದ್ದ ಕೂಡಲೇ ಚಹಾ-ಕಾಫಿ ಕುಡಿಯುವುದು ಸಾಮಾನ್ಯ. ಅಷ್ಟೇ ಅಲ್ಲ, ಹಾಲು ಹಾಕಿರುವ ಚಹಾವನ್ನು ಜಾಸ್ತಿ ಕುದಿಸಿ, ರುಚಿಯಾದ ಟೀ ಹೀರಲು ಇಷ್ಟಪಡುತ್ತಾರೆ. ಹಾಲು ಹಾಕಿರುವ ಚಹಾವನ್ನು ಹೆಚ್ಚು ಕುದಿಸುವುದರಿಂದ ರುಚಿ ಸಿಗುತ್ತದೆ ನಿಜ, ಆದರೆ ಇದು ಆರೋಗ್ಯಕ್ಕೆ ಒಳಿತಲ್ಲ.

ಭಾರತದಲ್ಲಿ ಬಹುತೇಕ ಮಂದಿ ಬೆಳಗೆದ್ದು ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಚಹಾ ಕುಡಿಯದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಅನ್ನುವ ಹಾಗಾಗಿದೆ. ಇನ್ನೂ ಕೆಲವರಂತೂ ದಿನವಿಡೀ, ತಮಗೆ ನೆನಪಾದಾಗಲೆಲ್ಲಾ ಚಹಾ ಹೀರುತ್ತಲೇ ಇರುತ್ತಾರೆ. ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ಎನ್ನುವುದು ತಿಳಿದಿದ್ದರೂ ಕೆಲವರು ಅದನ್ನೇ ಮಾಡುತ್ತಾರೆ. ಅದರಲ್ಲೂ ಹಾಲು ಹಾಕಿರುವ ಚಹಾ ಅಥವಾ ಕಾಫಿ ಆರೋಗ್ಯಕ್ಕೆ ತುಂಬಾನೇ ತೊಂದರೆ ಮಾಡುತ್ತದೆ.
ಬಹುತೇಕ ಮಂದಿ ಹಾಲು ಹಾಕಿದ ಚಹಾವನ್ನು ಬಹಳ ಹೊತ್ತು ಕುದಿಸುತ್ತಾರೆ. ಇದರಿಂದ ಚಹಾ ಮತ್ತಷ್ಟು ರುಚಿಕರವಾಗುತ್ತದೆ ಅನ್ನೋದು ಅವರ ಅಭಿಪ್ರಾಯ. ಆದರೆ, ಚಹಾವನ್ನು ಅತಿಯಾಗಿ ಕುದಿಸುವ ಅಪಾಯದ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಏಕೆಂದರೆ ಇದು ಪೋಷಕಾಂಶಗಳನ್ನು ಕಡಿಮೆ ಮಾಡಿ, ಆಮ್ಲೀಯತೆಯನ್ನು ಉಂಟುಮಾಡುವ ಅಪಾಯವಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಜನರು ಸೇವಿಸುವ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಚಹಾಕ್ಕೆ ಅಗ್ರಸ್ಥಾನವಿದೆ. ಅದರ ಔಷಧೀಯ ಪ್ರಯೋಜನಗಳಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಚಹಾದಲ್ಲಿ ಕ್ಯಾಟೆಚಿನ್‌ಗಳು, ಥೀಫ್ಲಾವಿನ್‌ಗಳು, ಟ್ಯಾನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪಾಲಿಫಿನಾಲ್ ಅಂಶಗಳಿದ್ದು, ಇವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಾಲು ಸೇರಿಸಿ ಚಹಾ ಕುಡಿಯುವುದಕ್ಕಿಂತ ಬ್ಲ್ಯಾಕ್ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮ.
ಹಾಲಿನ ಚಹಾವನ್ನು ಬಿಸಿ ಮಾಡಿದಾಗ ಕೆಲವು ಅನಪೇಕ್ಷಿತ ಫಲಿತಾಂಶಗಳು ಉಂಟಾಗಬಹುದು. ಇದು ಪಾನೀಯದ ಸುವಾಸನೆ ಮತ್ತು ಪೌಷ್ಟಿಕಾಂಶದ ಸಂಯೋಜನೆ ಮೇಲೆ ಪರಿಣಾಮ ಬೀರುತ್ತದೆ. ಚಹಾ ಎಲೆಗಳು ಕಹಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಹಾಲು ಹಾಕಿ ಅತಿಯಾಗಿ ಕುದಿಸುವುದರಿಂದ ಚಹಾವು ಸೂಕ್ಷ್ಮ ಸಮತೋಲನವನ್ನು ಅಡ್ಡಿಪಡಿಸಬಹುದು. ಪಾನೀಯದ ನೈಸರ್ಗಿಕ ಮಾಧುರ್ಯ ಮತ್ತು ಸುವಾಸನೆಯನ್ನು ಮೀರಿಸುವುದರಿಂದ, ಹಾಲು ಸುಟ್ಟ ರುಚಿ ಉಂಟಾಗಬಹುದು. ಇದು ಗುಣಮಟ್ಟವನ್ನು ಮತ್ತಷ್ಟು ಕುಗ್ಗಿಸುತ್ತದೆ.
ಸಂಶೋಧಕರ ಪ್ರಕಾರ, ಹಾಲು ಸೇರಿಸಿದ ಚಹಾವನ್ನು ಹೆಚ್ಚು ಕುದಿಸಿದರೆ ಅದು ಆಕ್ಸಿಡೀಕರಣಗೊಳ್ಳಬಹುದು. ಇದು ಚಹಾದ ರುಚಿಯನ್ನು ಕಹಿಗೊಳಿಸಬಹುದು. ಚಹಾದ ದ್ರಾವಣ ಮತ್ತು ಹಾಲಿನ ಪ್ರೊಟೀನ್‌ಗಳಲ್ಲಿನ ಪಾಲಿಫಿನಾಲ್‌ಗಳ ಸಂಯೋಜನೆಯು ಹಾಲಿನ ಚಹಾದ ರುಚಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಅತಿಯಾಗಿ ಕುದಿಸುವ ಹಾಲಿನ ಚಹಾದ ಅಡ್ಡಪರಿಣಾಮಗಳು
ಹಾಲಿನ ಚಹಾವನ್ನು ಹೆಚ್ಚು ಕುದಿಸುವುದು ಹಲವಾರು ಬದಲಾವಣೆಗಳಿಗೆ ಕಾರಣವಾಗಬಹುದು. ಅದು ಅದರ ರುಚಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಏನೆಲ್ಲಾ ಅಡ್ಡಪರಿಣಾಮಗಳು ಸಂಭವಿಸುತ್ತವೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ..
1. ಪೋಷಕಾಂಶದ ನಷ್ಟ: ಹಾಲು ಹಾಕಿರುವ ಚಹಾವನ್ನು ಹೆಚ್ಚು ಕುದಿಸುವುದರಿಂದ ಹಾಲಿನಲ್ಲಿರುವ ಕೆಲವು ಪೋಷಕಾಂಶಗಳಾದ ವಿಟಮಿನ್ ಬಿ12 ಮತ್ತು ಸಿ ಕ್ಷೀಣಿಸಬಹುದು.
2. ರುಚಿ ಪರಿಷ್ಕರಣೆ: ಹಾಲನ್ನು ಅತಿಯಾಗಿ ಕುದಿಸುವುದು ಸುಟ್ಟ ರೀತಿಯ ರುಚಿಗೆ ಕಾರಣವಾಗಬಹುದು.
3. ಹಾನಿಕಾರಕ ಸಂಯೋಜನೆಗಳು: ಲ್ಯಾಕ್ಟೋಸ್ (ಹಾಲಿನ ಸಕ್ಕರೆ) ಹಾಲಿನಲ್ಲಿರುವ ಪ್ರೊಟೀನ್‌ಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಕಾಲಾನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಅಪಾಯಕಾರಿ ಸಂಯೋಜನೆಗಳನ್ನು ರೂಪಿಸುತ್ತದೆ.
4. ಚಹಾ ಸಂಯೋಜನೆಗಳಲ್ಲಿನ ಬದಲಾವಣೆಗಳು: ಚಹಾವನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಕ್ಯಾಟೆಚಿನ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಅಂಶಗಳನ್ನು ಕ್ಷೀಣಿಸಬಹುದು. ಚಹಾದ ಉತ್ಕರ್ಷಣ ನಿರೋಧಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅತಿಯಾಗಿ ಕುದಿಸುವುದರಿಂದ ಅಕ್ರಿಲಾಮೈಡ್‌ನಂತಹ ಸಂಯುಕ್ತಗಳನ್ನು ಉತ್ಪಾದಿಸಬಹುದು.
5. ಜೀರ್ಣಕಾರಿ ಅಸ್ವಸ್ಥತೆ: ಅತಿಯಾಗಿ ಕುದಿಸುವುದರಿಂದ ಹಾಲಿನಲ್ಲಿರುವ ಪ್ರೊಟೀನ್‌ಗಳ ಡಿನಾಟರೇಶನ್‌ಗೆ ಕಾರಣವಾಗಬಹುದು. ಅವುಗಳ ರಚನೆ ಬದಲಾಗಿ, ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.
6. ಆಮ್ಲೀಯತೆ: ಹಾಲಿನ ಚಹಾವನ್ನು ಅತಿಯಾಗಿ ಕುದಿಸುವುದರಿಂದ ಆಮ್ಲೀಯವಾಗಿ ಬದಲಾಗುತ್ತದೆ. ಇದು ಎದೆಯುರಿ ಅಥವಾ ಹೊಟ್ಟೆಯ ಅಸ್ವಸ್ಥತೆಯಂತಹ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
ಸಾಮಾನ್ಯವಾಗಿ, ಹಾಲಿನ ಚಹಾವನ್ನು ಎಲ್ಲೋ ಕೆಲವೊಮ್ಮೆ ಅತಿಯಾಗಿ ಕುದಿಸುವುದರಿಂದ ಅಂತಹ ಅಪಾಯವೇನಿಲ್ಲ. ಆದರೆ, ಪದೇ ಪದೇ ಅತಿಯಾಗಿ ಕುದಿಸುವುದರಿಂದ ಅದರ ಪೌಷ್ಟಿಕಾಂಶದ ಪ್ರಯೋಜನಗಳನ್ನು ಕಡಿಮೆ ಮಾಡಬಹುದು. ಈ ಸಮಸ್ಯೆಗಳಿಂದ ದೂರವಿರಲು, ಹಾಲಿನ ಚಹಾವನ್ನು ದೀರ್ಘಕಾಲದವರೆಗೆ ಕುದಿಸದಿರುವಂತೆ ತಜ್ಞರು ಎಚ್ಚರಿಸಿದ್ದಾರೆ.
ಬರಹ: ಪ್ರಿಯಾಂಕ ಗೌಡ
