ಕನ್ನಡ ಸುದ್ದಿ  /  ಜೀವನಶೈಲಿ  /  Panchamrit: ಪೂಜೆಗಷ್ಟೇ ಅಲ್ಲ ಪಂಚಾಮೃತ ಆರೋಗ್ಯಕ್ಕೂ ಒಳ್ಳೆಯದು; ಆಯುರ್ವೇದದ ಪ್ರಕಾರ ದೇಹಕ್ಕೆ ಇದರ ಪ್ರಯೋಜನ ತಿಳಿಯಿರಿ

Panchamrit: ಪೂಜೆಗಷ್ಟೇ ಅಲ್ಲ ಪಂಚಾಮೃತ ಆರೋಗ್ಯಕ್ಕೂ ಒಳ್ಳೆಯದು; ಆಯುರ್ವೇದದ ಪ್ರಕಾರ ದೇಹಕ್ಕೆ ಇದರ ಪ್ರಯೋಜನ ತಿಳಿಯಿರಿ

ದೇವರ ನೈವೇದ್ಯಕ್ಕೆಂದು ತಯಾರಿಸುವ ಪಂಚಾಮೃತಕ್ಕೆ ಆಧ್ಯಾತ್ಮದಲ್ಲಿ ಮಾತ್ರವಲ್ಲ, ಆಯುರ್ವೇದದಲ್ಲೂ ಸಾಕಷ್ಟು ಮಹತ್ವವಿದೆ. ಇದು ಅಸಂಖ್ಯಾತ ಆರೋಗ್ಯ ಪ್ರಯೋಜನಗಳ ಗಣಿಯಾಗಿದೆ. ಪಂಚಾಮೃತ ಸೇವನೆಯಿಂದ ಆರೋಗಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಇದನ್ನು ತಯಾರಿಸುವುದು ಹೇಗೆ ನೋಡಿ.

ಪೂಜೆಗಷ್ಟೇ ಅಲ್ಲ ಪಂಚಾಮೃತ ಆರೋಗ್ಯಕ್ಕೂ ಒಳ್ಳೆಯದು; ಆಯುರ್ವೇದದ ಪ್ರಕಾರ ದೇಹಕ್ಕೆ ಇದರ ಪ್ರಯೋಜನ ತಿಳಿಯಿರಿ
ಪೂಜೆಗಷ್ಟೇ ಅಲ್ಲ ಪಂಚಾಮೃತ ಆರೋಗ್ಯಕ್ಕೂ ಒಳ್ಳೆಯದು; ಆಯುರ್ವೇದದ ಪ್ರಕಾರ ದೇಹಕ್ಕೆ ಇದರ ಪ್ರಯೋಜನ ತಿಳಿಯಿರಿ

ಪಂಚಾಮೃತದ ಹೆಸರು ಕೇಳಿಲ್ಲದವರು ಕಡಿಮೆ ಎನ್ನಬಹುದು. ಹಿಂದೂಗಳಲ್ಲಿ ಪೂಜೆಯ ನೈವೇದ್ಯಕ್ಕೆ ಪಂಚಾಮೃತ ಇರಲೇಬೇಕು. ಇದನ್ನು ಚರಣಾಮೃತ ಎಂದೂ ಕರೆಯುತ್ತಾರೆ. ಪಂಚಾಮೃತ ಇಲ್ಲದ ಪೂಜೆಗಳು ಇಲ್ಲ ಎನ್ನಬಹುದು. ಪಂಚಾಮೃತ ಎನ್ನುವುದು ಎರಡು ಪದಗಳಿಂದ ಬಂದಿದೆ. ಪಂಚ ಎಂದರೆ 5, ಅಮೃತ ಎಂದರೆ ಅಮರತ್ವ, ಕೊನೆಯಲ್ಲಿದ್ದು ಎಂಬೆಲ್ಲಾ ಅರ್ಥವಿದೆ. ದೇವರಿಗೆ ನೈವೇದ್ಯ ಮಾಡುವ ಈ ವಿಶೇಷ ದ್ರವರೂಪದ ಆಹಾರವು 5 ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆಯುರ್ವೇದದ ಪ್ರಕಾರ ಈ 5 ಪದಾರ್ಥಗಳು ವಿಶಿಷ್ಟವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಆರೋಗ್ಯ ಹಾಗೂ ಸ್ವಾಸ್ಥ್ಯದ ನಿಧಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಪಂಚಾಮೃತ ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು: ಹಾಲು - 1ಕಪ್‌, ಮೊಸರು - 2 ಚಮಚ, ತುಪ್ಪ - 1 ಚಮಚ, ಜೇನುತುಪ್ಪ - 1 ಚಮಚ, ಸಕ್ಕರೆ - 1 ಚಮಚ

ತಯಾರಿಸುವ ವಿಧಾನ: ಹಾಲನ್ನು ಕುದಿಸಿ, ತಣ್ಣಗಾಗಲು ಬಿಡಿ. ಸ್ವಚ್ಛವಾದ ಪಾತ್ರೆಯೊಂದರಲ್ಲಿ ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆ ಸೇರಿಸಿ. ಹಾಲು ಸಂಪೂರ್ಣ ತಣ್ಣದಾಗ ಮೇಲೆ ಈ ಮಿಶ್ರಣಕ್ಕೆ ಹಾಲನ್ನು ಸೇರಿಸಿ. ಇದನ್ನು ಚೆನ್ನಾಗಿ ತಿರುಗಿಸಿ. ಈಗ ನಿಮ್ಮ ಮುಂದೆ ಪಂಜಾಮೃತ ಸವಿಯಲು ಸಿದ್ಧ.

ಆಯುರ್ವೇದವು ಪಂಚಾಮೃತದ ಬಗ್ಗೆ ಹೇಳುವುದೇನು, ಪಂಚಾಮೃತಕ್ಕೆ ಬೆರೆಸಿದ ಪದಾರ್ಥಗಳಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ತಿಳಿಯಿರಿ.

ಪಂಚಾಮೃತದ ಆರೋಗ್ಯ ಪ್ರಯೋಜನಗಳೇನು?

ಹಾಲು: ಆಯುರ್ವೇದದಲ್ಲಿ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಇದು ದೇಹದ ಅಂಗಾಂಶಗಳನ್ನು ಪೋಷಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯುರ್ವೇದ ಗ್ರಂಥಗಳ ಪ್ರಕಾರ ಓಜಸ್ (ಪ್ರಮುಖ ಸಾರ) ಅನ್ನು ಉತ್ತೇಜಿಸುತ್ತದೆ.

ಮೊಸರು: ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಮತ್ತು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪ್ರೋಬಯಾಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ತುಪ್ಪ: ಜೀರ್ಣಕ್ರಿಯೆಯನ್ನು ಉತ್ತೇಜಿಸುವ, ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ವರ್ಧಿಸುವ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವ ಕಾರಣ ತುಪ್ಪಕ್ಕೆ ಆಯುರ್ವೇದದಲ್ಲಿ ವಿಶೇಷ ಮಹತ್ವವಿದೆ. ಇತರ ಪದಾರ್ಥಗಳೊಂದಿಗೆ ಸಂಯೋಜಿಸಿದಾಗ ಇದರ ಔಷಧೀಯ ಗುಣಗಳು ವೃದ್ಧಿಯಾಗುತ್ತದೆ.

ಜೇನುತುಪ್ಪ: ಆಯುರ್ವೇದವು ಜೇನುತುಪ್ಪವನ್ನು ಅದರ ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಗಾಗಿ ಪ್ರಶಂಸಿಸುತ್ತದೆ. ಇದು ನೈಸರ್ಗಿಕ ಶಕ್ತಿ ವರ್ಧಕವಾಗಿದೆ ಮತ್ತು ದೇಹದ ಅಂಗಾಂಶಗಳನ್ನು ತೆರುವುಗೊಳಿಸುತ್ತದೆ ಎಂದು ನಂಬಲಾಗಿದೆ. ಇದು ದೇಹದಿಂದ ವಿಷಾಂಶ ಹೊರ ಹಾಕಲು ಸಹಕಾರಿ.

ಸಕ್ಕರೆ: ಮಿತವಾಗಿ ಸೇವಿಸಿದರೂ ಪಂಚಾಮೃತದಲ್ಲಿರುವ ಸಕ್ಕರೆ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಒಟ್ಟಾರೆ ಈ ಎಲ್ಲಾ ಅಂಶಗಳು ಆಯುರ್ವೇದದಲ್ಲಿ ತಮ್ಮದೇ ಆದ ವೈಶಿಷ್ಟವನ್ನು ಹೊಂದಿದ್ದು, ಈ ಎಲ್ಲದರ ಮಿಶ್ರಣವು ಆರೋಗ್ಯ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದು ನೈವೇದ್ಯಕ್ಕೆ ಮಾತ್ರವಲ್ಲ, ಜೀವಕ್ಕೂ ಅಮೃತದಂತಾಗಿದೆ. ಹಾಗಾಗಿ ಪಂಚಾಮೃತ ಸೇವನೆಗೆ ಆದ್ಯತೆ ನೀಡಿ, ಆರೋಗ್ಯ ರಕ್ಷಿಸಿಕೊಳ್ಳಿ.