ಹಾಲಿನಷ್ಟೇ ಪೋಷಕಾಂಶ ಹೊಂದಿರುವ ಆಹಾರವಿದು; ಡೇರಿ ಉತ್ಪನ್ನ ತ್ಯಜಿಸಬೇಕು ಅಂದುಕೊಂಡವರಿಗೆ ಉತ್ತಮ ಆಯ್ಕೆ
ಕೆಲವರಿಗೆ ಡೈರಿ ಉತ್ಪನ್ನಗಳು ಹಿಡಿಸುವುದಿಲ್ಲ. ಇನ್ನೂ ಕೆಲವರಿಗೆ ತೂಕದ ಕಾರಣದಿಂದಾಗಿ ಡೈರಿ ಉತ್ಪನ್ನಗಳ ಸೇವನೆ ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ಸಿಗುವ ಪೋಷಕಾಂಶಗಳನ್ನು ದೇಹಕ್ಕೆ ಪಡೆದುಕೊಳ್ಳಲು ಹಾಲಿನ ಬದಲಾಗಿ ಇನ್ಯಾವ ಪದಾರ್ಥವನ್ನು ಸೇವಿಸಬಹುದು ಎಂದು ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ದೇಹಕ್ಕೆ ಉತ್ತಮ ಪೋಷಕಾಂಶ ಬೇಕು ಎಂದಾದಾಗ ಡೈರಿ ಉತ್ಪನ್ನಗಳನ್ನು ಸೇವನೆ ಮಾಡುವುದು ಒಳ್ಳೆಯದು. ಆದರೆ ನೀವು ಡೈರಿ ಉತ್ಪನ್ನಗಳ ಬದಲಾಗಿ ಅಷ್ಟೇ ಪೌಷ್ಠಿಕಾಂಶವನ್ನು ನೀಡಬಲ್ಲ ಇನ್ನಿತರ ಯಾವುದಾದರೂ ಪದಾರ್ಥವನ್ನು ನಾನು ಪರ್ಯಾಯವಾಗಿ ಬಳಕೆ ಮಾಡಬಹುದೇ ಎಂದು ಯೋಚಿಸುತ್ತಿದ್ದೀರೇ..? ನೀವು ಈ ರೀತಿ ಯೋಚನೆ ಮಾಡಿದ್ದರೆ ಖಂಡಿತವಾಗಿಯೂ ನೀವು ಡೈರಿ ಉತ್ಪನ್ನಗಳ ಬದಲಾಗಿ ನುಗ್ಗೆ ಎಲೆಗಳನ್ನು ಬಳಕೆ ಮಾಡಬಹುದಾಗಿದೆ. ಇವುಗಳು ಸಾಕಷ್ಟು ವಿಟಮಿನ್ಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡಂಟ್ ಗುಣವನ್ನು ಹೊಂದಿರುವ ಸೂಪರ್ ಫುಡ್ ಆಗಿವೆ.
ಡೈರಿ ಉತ್ಪನ್ನಗಳ ಸೇವನೆಯಿಂದ ತೂಕ ಏರಿಕೆಯ ಭಯ ಕೂಡ ಇರುವುದರಿಂದ ಖಂಡಿತವಾಗಿಯೂ ನೀವು ಹಾಲಿಗೆ ಬದಲಾಗಿ ನುಗ್ಗೆ ಸೊಪ್ಪನ್ನು ಸೇಚಿಸಬಹುದಾಗಿದೆ. ಇನ್ನೊಂದು ಆಶ್ವರ್ಯಕರ ವಿಚಾರ ಏನೆಂದರೆ ನುಗ್ಗೆ ಎಲೆಗಳು ಹಾಲಿಗಿಂತಲೂ ಎರಡರಿಂದ ಮೂರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಹೊಂದಿರುತ್ತವೆ. ಹೀಗಾಗಿ ನೀವು ಡೈರಿ ಉತ್ಪನ್ನಗಳನ್ನು ಸೇವಿಸಲು ಇಚ್ಛಿಸದೇ ಇದ್ದರೆ ಖಂಡಿತವಾಗಿಯೂ ನೀವು ಇದಕ್ಕೆ ಪರ್ಯಾಯವಾಗಿ ನುಗ್ಗೆ ಎಲೆಗಳನ್ನು ಬಳಸಬಹುದಾಗಿದೆ.
ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳಿವು
ಆಹಾರ ಹಾಗೂ ಕೃಷಿ ವಿಜ್ಞಾನದ ತಜ್ಞರು ಹಾಗೂ ಡಿಗಾ ಆರ್ಗಾನಿಕ್ ಸಂಸ್ಥಾಪಕರಾಗಿರುವ ಅಲೋಕ್ ಸಿಂಗ್ ಕೂಡ ಈ ಮಾತಿಗೆ ಸಮ್ಮತಿ ಸೂಚಿಸಿದ್ದು ನುಗ್ಗೆ ಎಲೆಗಳಲ್ಲಿ ವಿಟಮಿನ್ ಎ, ಸಿ ಹಾಗೂ ಇ ಸಮೃದ್ಧವಾಗಿ ಇರುತ್ತದೆ. ಅಲ್ಲದೇ ಇವುಗಳು ಕ್ಯಾಲ್ಸಿಯಂ, ಪೊಟ್ಯಾಷಿಯಂ ಹಾಗೂ ಕಬ್ಬಿಣದಂತಹ ಗಮನಾರ್ಹ ಖನಿಜಾಂಶಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ.
ಹಾಲು ಕ್ಯಾಲ್ಸಿಯಂ ಹಾಗೂ ಪ್ರೊಟೀನ್ನ ಅತ್ಯುತ್ತಮ ಮೂಲವಾಗಿದ್ದರೂ, ನುಗ್ಗೆ ಸೊಪ್ಪು ಸಸ್ಯ ಆಧಾರಿತ ಕಬ್ಬಿಣಾಂಶ ಹಾಗೂ ವಿಟಮಿನ್ಗಳನ್ನು ಹೊಂದಿದ್ದು ಒಟ್ಟೂ ಪೋಷಕಾಂಶವನ್ನು ಹೋಲಿಕೆ ಮಾಡಿದರೆ ಇದು ಹಾಲನ್ನು ಮೀರಿಸುತ್ತದೆ ಎನ್ನಲಾಗಿದೆ. ನುಗ್ಗೆಸೊಪ್ಪು ಅಗತ್ಯ ಅಮೈನೋ ಆಮ್ಲಗಳನ್ನೂ ಹೊಂದಿದ್ದು ಇದೂ ಕೂಡ ಸಸ್ಯ ಆಧಾರಿತ ಪ್ರೊಟೀನ್ನ ಮೂಲವಾಗಿದೆ.
ನುಗ್ಗೆಸೊಪ್ಪಿನಲ್ಲಿ ಫೈಬರ್ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇರುವುದು ಪ್ರಯೋಜನಕಾರಿ ಎನಿಸಿದ್ದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡಿದರೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಅನೇಕರಿಗೆ ನುಗ್ಗೆಸೊಪ್ಪು ಅಷ್ಟೇನು ರುಚಿಸುವುದಿಲ್ಲ. ಹೀಗಾಗಿ ಅನೇಕರು ಈ ವಿಚಾರಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಬಹುದಾಗಿದೆ.
ಡೈರಿ ಉತ್ಪನ್ನಗಳ ಬಗ್ಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳು ಅಥವಾ ಸಂಪೂರ್ಣ ವೇಗನ್ ಆಗಬೇಕೆಂದು ನಿರ್ಧರಸಿರುವವರು ನುಗ್ಗೆ ಸೊಪ್ಪನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಸ್ಯ ಆಧಾರಿತ ಮೂಲಗಳಿಂದ ಮಾತ್ರ ಪಡೆಯಲು ಸಾಧ್ಯವಾಗದ ಪೋಷಕಾಂಶಗಳನ್ನೂ ನುಗ್ಗೆಸೊಪ್ಪು ಒದಗಿಸುವ ಸಾಮರ್ಥ್ಯ ಹೊಂದಿರುತ್ತದೆ.
ನುಗ್ಗೆ ಎಲೆಗಳಲ್ಲಿ ಪೋಷಕಾಂಶ ಸಮೃದ್ಧವಾಗಿದ್ದರೂ ಸಹ ವಿಟಮಿನ್ ಬಿ 12 ಹಾಗೂ ಡಿ ಅಂಶ ಹೆಚ್ಚಾಗಿ ಇರುವುದಿಲ್ಲ. ಇವುಗಳು ಹಾಲಿನಲ್ಲಿ ಹೇರಳವಾಗಿ ಇರುತ್ತದೆ. ಹೀಗಾಗಿ ಸಂಪೂರ್ಣವಾಗಿ ಡೈರಿ ಉತ್ಪನ್ನಗಳನ್ನು ತ್ಯಜಿಸಬೇಕು ಎಂದುಕೊಂಡಿರುವವರು ವಿಟಮಿನ್ ಬಿ 12 ಹಾಗೂ ವಿಟಮಿನ್ ಡಿ ಪೂರೈಕೆಗಾಗಿ ಬೇರೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿ ಬರಬಹುದು.