Tomato: ಪ್ರತಿದಿನ ಟೊಮೆಟೊ ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾತ್ತೆ ತಿಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ
ಕನ್ನಡ ಸುದ್ದಿ  /  ಜೀವನಶೈಲಿ  /  Tomato: ಪ್ರತಿದಿನ ಟೊಮೆಟೊ ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾತ್ತೆ ತಿಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

Tomato: ಪ್ರತಿದಿನ ಟೊಮೆಟೊ ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾತ್ತೆ ತಿಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

ಟೊಮೆಟೊ ಅಡುಗೆಮನೆಯ ಸ್ನೇಹಿತ. ಟೊಮೆಟೊ ಇಲ್ಲದೆ ಬಹುತೇಕ ಖಾದ್ಯಗಳು ಪರಿಪೂರ್ಣ ಎನ್ನಿಸುವುದಿಲ್ಲ. ಆದರೆ ಬಹು ಬೇಡಿಕೆಯ ಟೊಮೆಟೊ ತಿನ್ನುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾಗುತ್ತೆ ನೋಡಿದ್ರೆ ನೀವು ಅಚ್ಚರಿ ಪಡೋದು ಖಂಡಿತ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಲ್ಲಿರುವ ತರಕಾರಿಗಳಲ್ಲಿ ಟೊಮೆಟೊಗೆ ಅಗ್ರಸ್ಥಾನವಿದೆ. ಗಾಢ ಬಣ್ಣ, ಹುಳಿ ರುಚಿ, ಭಿನ್ನ ಫ್ಲೇವರ್‌ನ ಕಾರಣಕ್ಕೆ ಟೊಮೆಟೊವು ಅಡುಗೆಮನೆಯ ಅವಶ್ಯಗಳಲ್ಲಿ ಒಂದಾಗಿದೆ. ತಮ್ಮ ಬಹುಮುಖ ಅಂಶದ ಕಾರಣದಿಂದ ಅಡುಗೆಮನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಬೆಸ್ಟ್‌ ಈ ಟೊಮೆಟೊ. ಅದು ಹಲವು ಪೋಷಕಾಂಶಗಳನ್ನು ಹೊಂದಿದ್ದು, ತಮ್ಮ ಒಟ್ಟಾರೆ ದೇಹ ಹಾಗೂ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಪ್ರತಿದಿನ ಆಹಾರದ ಭಾಗವಾಗಿ ಟೊಮೆಟೊ ಬಳಸುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ, ಇದರಿಂದ ಏನು ಪ್ರಯೋಜನಗಳಾಗುತ್ತವೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

ಟೊಮೆಟೊವು ವಿಟಮಿನ್‌, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಾರಣ ಇದು ದೇಹದ ಮೇಲೆ ವಿವಿಧ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಅಲ್ಲದೆ ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಪಡೆಯಬಹುದು ಎನ್ನುತ್ತಾರೆ ಹೈದರಾಬಾದ್‌ನ ಹಿರಿಯ ವೈದ್ಯ ಡಾ. ಸೋಮನಾಥ ಗುಪ್ತಾ.

ಟೊಮೆಟೊದಲ್ಲಿನ ಲೈಕೋಪೀನ್‌ನಂತಹ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಹೃದಯ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಲೈಕೊಪೀನ್‌ ಹಾಗೂ ಬೀಟಾ ಕ್ಯಾರೊಟೀನ್‌ ಈ ಎರಡೂ ಟೊಮೆಟೊಗಳಲ್ಲಿ ಕಂಡುಬರುವ ಪ್ರಮುಖ ಕ್ಯಾರೊಟಿನಾಯ್ಡ್‌ಗಳಾಗಿವೆ. ಈ ಎರಡೂ ಕ್ಯಾನ್ಸರ್‌ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ತರಕಾರಿಗಳಾಗಿವೆ ಎಂದು ಯಶೋಧಾ ಆಸ್ಪತ್ರೆಯ ವೈದ್ಯರಾದ ಡಾ. ರಂಗ ಸಂತೋಷ್‌ ಕುಮಾರ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಟೊಮೆಟೊ ಪುಡಿಯು ಕರುಳಿನ ಸೂಕ್ಷ್ಮಜೀವಿಯ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಉರಿಯೂತ ಹಾಗೂ ಕರುಳಿನ ಹಾನಿಯನ್ನು ತಡೆದು ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ.

ಟೊಮೆಟೊವು ವಿಟಮಿನ್‌ ಸಿ, ಕೆ ಹಾಗೂ ಪೊಟ್ಯಾಶಿಯಂಗಳ ಉತ್ತಮ ಮೂಲವಾಗಿದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚರ್ಮದ ಆರೋಗ್ಯ ಸುಧಾರಣೆ ನೆರವಾಗುತ್ತದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಅವಶ್ಯಕ. ಪೊಟ್ಯಾಸಿಯಮ್ ರಕ್ತದೊತ್ತಡ ಮತ್ತು ದ್ರವ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ. ಗುಪ್ತಾ.

ಟೊಮೆಟೊ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅವುಗಳಲ್ಲಿನ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ನೀರಿನಾಂಶದ ಕಾರಣದಿಂದಾಗಿ ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಾಂಶ ಅತ್ಯಧಿಕವಾಗಿದ್ದು, ಇದು ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿವೆ.

ಟೊಮೆಟೊ ತಿನ್ನುವುದರಿಂದಾಗುವ ಅಪಾಯಗಳು

ಪ್ರತಿನಿತ್ಯ ಟೊಮೆಟೊ ತಿನ್ನುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ಒಳ್ಳೆಯ ಪರಿಣಾಮಗಳು ಇರುವಂತೆ ಕೆಟ್ಟ ಪರಿಣಾಮಗಳೂ ಇವೆ.

ಕೆಲವರಿಗೆ ಟೊಮೆಟೊದಲ್ಲಿರುವ ಆಮ್ಲ ಗುಣ ಅಲರ್ಜಿಯಂತಹ ತೊಂದರೆಗಳನ್ನು ಉಂಟು ಮಾಡಬಹುದು. ಇದು ಜೀರ್ಣಕ್ರಿಯೆಗೂ ಅಡ್ಡಿಪಡಿಸಬಹುದು. ಆಸಿಡ್‌ ರಿಫ್ಲಕ್ಸ್‌ನಂತಹ ಪರಿಸ್ಥಿತಿಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಇದು ಪೌಷ್ಟಿಕಾಂಶದ ಅಸಮತೋಲನಕ್ಕೂ ಕಾರಣವಾಗಬಹುದು. ಮೂತ್ರದ ಸಮಸ್ಯೆ, ಗ್ಲೈಕೋಲ್ಕಲಾಯ್ಡ್‌ಗಳಿಗೆ ಸಂಬಂಧಿಸಿದ ಮೈಕೈನೋವು, ಲೈಕೋಪೆನೊಡರ್ಮಿಯಾದಂತಹ ತೊಂದರೆಗಳೂ ಉಂಟಾಗಬಹುದು ಎಂದು ಡಾ. ಕುಮಾರ್‌ ಹೇಳುತ್ತಾರೆ.

ಯಾರು ಟೊಮೆಟೊ ತಿನ್ನಬಾರದು?

ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆ ಹೊಂದಿರುವ ಜನರು ಆಕ್ಸ್‌ಲೇಟ್‌ಗಳ ಉಪಸ್ಥಿತಿಯ ಕಾರಣದಿಂದ ಟೊಮೆಟೊ ಸೇವನೆಯ ಬಗ್ಗೆ ತಜ್ಞರಲ್ಲಿ ಚರ್ಚಿಸುವುದು ಉತ್ತಮ. ಈ ಅಂಶವು ಕಲ್ಲಿನ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸಬಹುದು.

Whats_app_banner