Monsoon Health: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ಫುಡ್‌ಗಳಿವು; ದಿನನಿತ್ಯದ ಬಳಕೆಗಿರಲಿ ಪ್ರಾಧಾನ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ಫುಡ್‌ಗಳಿವು; ದಿನನಿತ್ಯದ ಬಳಕೆಗಿರಲಿ ಪ್ರಾಧಾನ್ಯ

Monsoon Health: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ಫುಡ್‌ಗಳಿವು; ದಿನನಿತ್ಯದ ಬಳಕೆಗಿರಲಿ ಪ್ರಾಧಾನ್ಯ

ಮಳೆಗಾಲದಲ್ಲಿ ಅನಾರೋಗ್ಯ ಕಾಡುವುದು ಸಾಮಾನ್ಯ. ಆ ಕಾರಣಕ್ಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿನಿತ್ಯ ನಾವು ಸೇವಿಸುವ ಆಹಾರಗಳೊಂದಿಗೆ ಕೆಲವೊಂದು ಸೂಪರ್‌ಫುಡ್‌ಗಳನ್ನು ಸೇರಿಸಬೇಕು. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರ ಸೇವಿಸಿ
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರ ಸೇವಿಸಿ

ಮಳೆಗಾಲವು ಸುಡು ಬಿಸಿಲಿನಿಂದ ಕಂಗೆಟ್ಟ ದೇಹ, ಮನಸ್ಸಿಗೆ ಖುಷಿ ಕೊಡುವುದೇನೋ ನಿಜ. ಆದರೆ ಸುರಿಯುವ ಮಳೆಯ ನಡುವೆ ಅನಾರೋಗ್ಯ, ಅಲರ್ಜಿಗಳು ಜೊತೆಯಾಗಿಯೇ ಬರುತ್ತವೆ. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಸೋಂಕು, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಡುವುದು ಹೆಚ್ಚು.

ಹಾಗಾಗಿ ಮುಂಗಾರಿನ ಋತುವಿನಲ್ಲಿ ದೇಹ ರಕ್ಷಣೆಗಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಹೆಚ್ಚು ಹೆಚ್ಚು ಸೇವನೆಯ ಮೇಲೆ ಗಮನ ಹರಿಸಬೇಕು. ಹಾಗಾದರೆ ಮಳೆಗಾಲದಲ್ಲಿ ಎಂತಹ ಆಹಾರ ಸೇವಿಸಬೇಕು ಎನ್ನುವ ಬಗ್ಗೆ ಪೌಷ್ಟಿಕ ತಜ್ಞ ಲೋವ್ನಿತ್‌ ಬಾತ್ರಾ ಇಲ್ಲಿ ವಿವರಿಸಿದ್ದಾರೆ.

ಮಾನ್ಸೂನ್‌ ಡಯೆಟ್‌ನಲ್ಲಿ ಈ ಸೂಪರ್‌ಫುಡ್‌

ತುಳಸಿ

ತುಳಸಿ ದೈವಿಕ ಶಕ್ತಿ ಹೊಂದಿರುವುದು ಮಾತ್ರವಲ್ಲ, ಇದು ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ, ಅಲ್ಲದೆ ಇದು ಸೋಂಕನ್ನು ದೂರ ಮಾಡಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಟಿ ಜೀವಕೋಶಗಳ ಕಾರ್ಯವನ್ನು ಸುಧಾರಿಸುತ್ತವೆ. ತುಳಸಿ ಎಲೆಗಳನ್ನು ನೇರವಾಗಿ ಸೇವಿಸಬಹುದು ಅಥವಾ ಗಿಡಮೂಲಿಕೆಗಳ ಚಹಾದೊಂದಿಗೆ ಸೇರಿಸಿ, ಕುದಿಸಿ ಕುಡಿಯಬಹುದು. ಇದನ್ನು ಸೂಪ್‌ ಅಥವಾ ಮೇಲೋಗರಗಳ ಜೊತೆ ಸೇರಿಸಬಹುದು.

ಶುಂಠಿ

ಶುಂಠಿ ಜಿಂಜರೋಲ್‌, ಪ್ಯಾರಾಡೋಲ್‌, ಸೆಸ್ಕ್ವಟರ್‌ಪೀನ್‌, ಶೋಗೋಲ್‌ ಮತ್ತು ಜಿಂಗರೋನ್‌ ಎಂಬ ಅಂಶಗಳನ್ನು ಹೊಂದಿರುತ್ತದೆ. ಈ ಅಂಶಗಳು ಉರಿಯೂತ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಇದಲ್ಲದೆ, ಶುಂಠಿಯು ದೇಹದ ಅಂಗಾಂಶಗಳಿಗೆ ಪೋಷಕಾಂಶ ಹರಡಲು ಸಹಾಯ ಮಾಡತ್ತದೆ. ಶೀತ ಮತ್ತು ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಂದ ದೂರವಿರಲು ಇದು ಅಗತ್ಯ. ಚಹಾ, ಸೂಪ್‌, ರಸಂ, ಸಾಂಬಾರ್‌ ಜೊತೆ ಶುಂಠಿಯನ್ನು ಸೇರಿಸಬಹುದು.

ಕಾಳುಮೆಣಸು

ಕಾಳುಮೆಣಸಿನಲ್ಲಿ ಪೈಪರಿನ್‌ ಎಂಬ ಸಂಯುಕ್ತ ಇರುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಅಂಟಿಮೈಕ್ರೊಬಿಯಲ್‌ ಗುಣಲಕ್ಷಣಗಳನ್ನು ಹೊಂದಿದೆ. ಇದು ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಸೇವಿಸಲು ಕರಿಮೆಣಸಿನ ಪುಡಿಯನ್ನು ಆಹಾರದೊಂದಿಗೆ ಸಿಂಪಡಿಸಿ ಸವಿಯಬಹುದು.

ಕರಿಬೇವು

ಕರಿಬೇವಿನ ಎಲೆಗಳು ಲಿನೂಲ್‌, ಆಲ್ಫಾ-ಟೆರ್ಪಿನೆನ್‌, ಮೈರ್ಸೀನ್‌, ಮಹಾನಿಂಬಿನ್‌, ಕ್ಯಾರಿಯೊಫಿಲಿನ್‌, ಮುರ್ಯಾಯನಾಲ್‌ ಮತ್ತು ಅಲ್ಫಾ-ಪಿನೆನ್‌ ಸೇರಿದಂತೆ ಅನೇಕ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಈ ಸಂಯುಕ್ತಗಳು ದೇಹದಲ್ಲಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ ಅಂಶ ದೇಹವನ್ನು ಆರೋಗ್ಯಕರವಾಗಿ ಮತ್ತು ರೋಗಗಳಿಂದ ಮುಕ್ತವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ದೈನಂದಿನ ಅಡುಗೆಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಲು ಮರೆಯದಿರಿ.

ನಿಂಬೆ

ನಿಂಬೆಹಣ್ಣಿನಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದೆ. ಇದು ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಅಂಶಗಳನ್ನೂ ಹೊಂದಿದ್ದು ದೇಹ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಿಂಬೆರಸವನ್ನು ಬೆಚ್ಚಗಿನ ನೀರಿಗೆ ಹಿಂಡಿಕೊಂಡು ಕುಡಿಯಬಹುದು ಅಥವಾ ಸಲಾಡ್‌ಗಳ ಮೇಲೆ ರಸ ಸಿಂಪಡಿಸಿ ಸೇವಿಸಬಹದು. ಮಳೆಗಾಲದಲ್ಲಿ ರಸಂ ಸಹ ತಯಾರಿಸಿ ಸವಿಯಬಹುದು.

ಮಳೆಗಾಲಕ್ಕೆ ಸಂಬಂಧಿಸಿದ ಈ ಲೇಖನಗಳನ್ನು ಓದಿ

Whats_app_banner