ಕನ್ನಡ ಸುದ್ದಿ  /  Lifestyle  /  Health News Grapes Cleaning Tips Bacteria Lurking How To Wash And Store Grapes For Safe Snacking Rst

ದ್ರಾಕ್ಷಿಹಣ್ಣಿನಲ್ಲಿರುತ್ತೆ ಅಪಾಯಕಾರಿ ಬ್ಯಾಕ್ಟೀರಿಯಾ, ತೊಳೆಯದೇ ತಿಂದ್ರೆ ತೊಂದರೆ ತಪ್ಪಿದ್ದಲ್ಲ; ತಿನ್ನುವ ಮುನ್ನ ಈ ಕ್ರಮ ಪಾಲಿಸಿ

ದ್ರಾಕ್ಷಿಹಣ್ಣಿನ ಸೀಸನ್‌ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರು ದ್ರಾಕ್ಷಿಯೇ ಕಾಣುತ್ತದೆ. ಆದರೆ ದ್ರಾಕ್ಷಿಹಣ್ಣು ತಿನ್ನುವ ಮುನ್ನ ಈ ವಿಚಾರ ಗಮನಿಸಬೇಕು. ಇದನ್ನು ಸರಿಯಾಗಿ ತೊಳೆಯದೇ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಇದನ್ನು ಸರಿಯಾದ ಕ್ರಮದಲ್ಲಿ ತೊಳೆಯುವುದು ಹೇಗೆ, ಇಲ್ಲಿದೆ ಸಲಹೆ. (ಬರಹ: ಪ್ರಿಯಾಂಕ ಗೌಡ)

ದ್ರಾಕ್ಷಿಹಣ್ಣು ತೊಳೆಯದೇ ತಿಂದ್ರೆ ತೊಂದರೆ ತಪ್ಪಿದ್ದಲ್ಲ; ತಿನ್ನುವ ಮುನ್ನ ಈ ಕ್ರಮ ಪಾಲಿಸಿ
ದ್ರಾಕ್ಷಿಹಣ್ಣು ತೊಳೆಯದೇ ತಿಂದ್ರೆ ತೊಂದರೆ ತಪ್ಪಿದ್ದಲ್ಲ; ತಿನ್ನುವ ಮುನ್ನ ಈ ಕ್ರಮ ಪಾಲಿಸಿ

ಬೇಸಿಗೆ ಕಾಲ ಬಂದಾಕ್ಷಣ ದ್ರಾಕ್ಷಿಹಣ್ಣಿನ ಸೀಸನ್‌ ಆರಂಭವಾಗುತ್ತದೆ. ದ್ರಾಕ್ಷಿಹಣ್ಣನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹುಳಿ, ಸಿಹಿ ರುಚಿಯ ದ್ರಾಕ್ಷಿ ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಕೆಲವರು ದ್ರಾಕ್ಷಿಹಣ್ಣನ್ನು ಸರಿಯಾಗಿ ತೊಳೆಯದೇ ತಿನ್ನುತ್ತಾರೆ. ಇದು ತುಂಬಾ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಯಾಕೆಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ತೊಂದರೆ ಉಂಟು ಮಾಡಲಿವೆ.

ಹೌದು, ತೊಳೆಯದೇ ತಿನ್ನುವ ದ್ರಾಕ್ಷಿಹಣ್ಣು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊ ನೋಡಿದ ನೆಟ್ಟಿಗರು ಗಾಬರಿಗೊಂಡಿದ್ದಾರೆ. ನಾವು ಸೇವಿಸುವ ದ್ರಾಕ್ಷಿಯಲ್ಲಿ ಇಷ್ಟೊಂದು ರಾಸಾಯನಿಕಗಳಿವೆ ಎಂದು ತಿಳಿದು ಕಳವಳಗೊಂಡಿದ್ದಾರೆ.

ಫುಡ್‌ ಬ್ಲಾಗರ್‌ ವಾಣಿ ಶರ್ಮಾ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ದ್ರಾಕ್ಷಿ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದ್ರಾಕ್ಷಿ ತಿನ್ನುವವರು ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ಸಲಹೆ ನೀಡುವ ವಿಡಿಯೊ ಇದಾಗಿದೆ.

ದ್ರಾಕ್ಷಿ ಹಣ್ಣಿಗೆ ರಾಸಾಯನಿಕವನ್ನು ಸಿಂಪಡಿಸುವುದರಿಂದ ಅದು ಹಣ್ಣುಗಳ ಮೇಲೆ ಮೇಣದಂತೆ ಹಾಗೆಯೇ ಅಂಟಿಕೊಂಡಿರುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾಗಳು ಅಡಗಿವೆ. ಹೀಗಾಗಿ ಅವುಗಳನ್ನು ವಿನೆಗರ್ ಮತ್ತು ಅಡುಗೆ ಸೋಡಾದಲ್ಲಿ 15 ನಿಮಿಷಗಳ ಕಾಲ ನೆನೆಸಿ, ನಂತರ ಮೂರರಿಂದ ನಾಲ್ಕು ಬಾರಿ ಚೆನ್ನಾಗಿ ತೊಳೆಯಬೇಕು. ಬಳಿಕವಷ್ಟೇ ದ್ರಾಕ್ಷಿ ತಿನ್ನಲು ಯೋಗ್ಯವಾಗಿರುತ್ತದೆ. ಇಲ್ಲದಿದ್ದಲ್ಲಿ ದ್ರಾಕ್ಷಿ ಸೇವನೆಯ ಜೊತೆಗೆ ಕೀಟನಾಶಕಗಳು ದೇಹ ಸೇರುತ್ತದೆ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ವಾಣಿ ಶರ್ಮಾ.

ದ್ರಾಕ್ಷಿಹಣ್ಣಿನ ರಾಸಾಯನಿಕಗಳ ಬಗ್ಗೆ ತಜ್ಞರು ಏನಂತಾರೆ?

ದ್ರಾಕ್ಷಿ ಸೇವನೆಯ ಮುನ್ನ ಅದನ್ನು ಸರಿಯಾಗಿ ತೊಳೆಯುವ ಪ್ರಾಮುಖ್ಯದ ಬಗ್ಗೆ ಫಿಟ್ನೆಸ್ ಮತ್ತು ಪೌಷ್ಟಿಕಾಂಶ ತಜ್ಞರಾದ ರಿಯಾ ಶ್ರಾಫ್ ಎಖ್ಲಾಸ್ ಅವರು ಸಹ ಒತ್ತಿ ಹೇಳಿದ್ದಾರೆ. ತೊಳೆಯದೆ ತಿನ್ನುವ ದ್ರಾಕ್ಷಿಗಳು ಆರೋಗ್ಯಕ್ಕೆ ಭಾರಿ ಅಪಾಯವನ್ನುಂಟು ಮಾಡುತ್ತವೆ. ದ್ರಾಕ್ಷಿಯನ್ನು ಶುದ್ಧವಾಗಿ ತೊಳೆಯುವುದರಿಂದ ಕೀಟನಾಶಕಗಳು ಮತ್ತು ಬ್ಯಾಕ್ಟೀರಿಯಾಗಳಂತಹ ಮಾಲಿನ್ಯಕಾರಕಗಳು ನಾಶವಾಗುತ್ತವೆ. ಇಲ್ಲದಿದ್ದಲ್ಲಿ ದೇಹಕ್ಕೆ ಅಪಾಯಕಾರಿ ರಾಸಾಯನಿಕಗಳು ಸೇರುವುದು ನಿಶ್ಚಿತ.

ದ್ರಾಕ್ಷಿಯನ್ನು ತೊಳೆಯುವ ಸರಿಯಾದ ಮಾರ್ಗ ಹೇಗೆ?

ದ್ರಾಕ್ಷಿಯನ್ನು ತೊಳೆಯಲು ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ, ಅದರಲ್ಲಿ ದ್ರಾಕ್ಷಿಯನ್ನು ನೆನೆಯಲು ಬಿಡಬೇಕು. 10 ರಿಂದ 15 ನಿಮಿಷಗಳ ಕಾಲ ಹೀಗೆ ಬಿಡಬೇಕು. ನಂತರ, ಶುದ್ಧವಾದ ಬಟ್ಟೆಯಿಂದ ಅವುಗಳನ್ನು ಚೆನ್ನಾಗಿ ಒರೆಸಿ, ಸ್ವಲ್ಪ ಹೊತ್ತು ಗಾಳಿಯಲ್ಲಿ ಹಾಗೆಯೇ ಬಿಟ್ಟು, ನಂತರ ಗಾಳಿಯಾಡದ ಕಂಟೇನರ್‌ನಲ್ಲಿ ಎತ್ತಿಡಬೇಕು. ಕೆಲವು ದಿನಗಳ ನಂತರ ತಿನ್ನುವುದಾದರೆ ಫ್ರಿಜ್‌ನಲ್ಲಿ ಶೇಖರಿಸಿಡಬಹುದು.

ಅಡುಗೆ ಸೋಡಾವು ದ್ರಾಕ್ಷಿಯ ಕಲ್ಮಶವನ್ನು ತೆಗೆದುಹಾಕಿದರೆ, ವಿನೆಗರ್ ಅದರಲ್ಲಿನ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ.

ಆದರೆ, ಈ ವಿಧಾನವು ಪರಿಣಾಮಕಾರಿ ಹಾಗೂ ಸುರಕ್ಷಿತವೇ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಸಾಮಾನ್ಯವಾಗಿ, ಹರಿಯುವ ನೀರಿನಲ್ಲಿ ಹಣ್ಣುಗಳನ್ನು ತೊಳೆಯುವುದರಿಂದಲೂ ಮಾಲಿನ್ಯವನ್ನು ತೆಗೆದುಹಾಕಬಹುದಾಗಿದೆ ಎಂದು ನಂಬಲಾಗಿದೆ.

ಅಂದಹಾಗೆ, ದ್ರಾಕ್ಷಿಯನ್ನು ಹೆಚ್ಚಾಗಿ ಪಂಜಾಬ್‌ನಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಈ ದ್ರಾಕ್ಷಿ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಶೇ 0.15 ರಿಂದ 0.25 ರಷ್ಟು ಹೊಂದಿದ್ದರೆ, ಕ್ಯಾಲ್ಸಿಯಂ ಶೇ 0.004 ರಿಂದ 0.025 ಮತ್ತು ಬಿ-ಕಾಂಪ್ಲೆಕ್ಸ್ 391-636 ಮಿ.ಗ್ರಾಂ/100 ಗ್ರಾಂ ರಷ್ಟು ಜೀವಸತ್ವಗಳಂತಹ ಸಾಕಷ್ಟು ಪ್ರಮಾಣದ ಖನಿಜಗಳನ್ನು ಹೊಂದಿರುತ್ತವೆ.

ವಿಭಾಗ