Moong Dal Soup: ಮಳೆಗಾಲದಲ್ಲಿ ದೇಹ ಬೆಚ್ಚಗಾಗಿಸಿ, ಬಾಯಿರುಚಿ ಹೆಚ್ಚಿಸುವುದಷ್ಟೇ ಅಲ್ಲ ತೂಕ ಇಳಿಕೆಗೂ ನೆರವಾಗುತ್ತೆ ಹೆಸರುಕಾಳಿನ ಸೂಪ್
ಮಳೆಗಾಲದಲ್ಲಿ ಬಾಯಿಗೆ ರುಚಿಯಾಗಿರುವ ಆಹಾರ ಸೇವಿಸುವುದರ ಜೊತೆಗೆ ತೂಕವು ಇಳಿಬೇಕು ಅಂದ್ರೆ ಹೆಸರುಬೇಳೆ ಸೂಪ್ ಸೇವಿಸಬೇಕು. ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಈ ಸೂಪ್ ಆರೋಗ್ಯಕ್ಕೂ ಹೇಳಿ ಮಾಡಿಸಿದ್ದು. ಇದನ್ನು ತಯಾರಿಸೋದು ಹೇಗೆ ನೋಡಿ.

ತೂಕ ಇಳಿಕೆ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಸವಾಲಾಗಿದೆ. ಜಿಮ್‌ನಲ್ಲಿ ಬೆವರಿಸುವುದು, ದೇಹ ದಂಡಿಸುವ ಮೂಲಕ ಕ್ಯಾಲೊರಿ ಬರ್ನ್ ಮಾಡುವ ಯತ್ನ ಮಾಡಲಾಗುತ್ತದೆ. ಆದರೆ ಕೇವಲ ಇದರಿಂದ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಇದರೊಂದಿಗೆ ನಮ್ಮ ಆಹಾರ ಕ್ರಮದ ಮೇಲೂ ಗಮನ ಹರಿಸಬೇಕು. ಡಿಟಾಕ್ಸ್ ವಾಟರ್‌ಗಳು ಮತ್ತು ಸಕ್ಕರೆ ಸೇರಿಸಿದ ಹಣ್ಣಿನ ಜ್ಯೂಸ್‌ಗಳು ನಮಗೆ ತೂಕ ನಿರ್ವಹಣೆಗೆ ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ತೂಕ ಇಳಿಕೆಯ ಆಯ್ಕೆ ಮೇಲೆ ನೀವು ಗಮನ ಹರಿಸುತ್ತಿದ್ದರೆ ಹೆಸರುಬೇಳೆ ಸೂಪ್ ಅನ್ನು ಸೇವಿಸಬಹುದು. ಇದು ಸಾಕಷ್ಟು ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಯನ್ನು ಹೊಂದಿರುತ್ತದೆ. ಇದು ತೂಕ ಇಳಿಕೆಯ ಜೊತೆಗೆ ಆರೋಗ್ಯ ವೃದ್ಧಿಯಾಗಲು ಸಹಕಾರಿ.
ಹೆಸರುಬೇಳೆಗಿಂತ ಇಡಿ ಹೆಸರು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎನ್ನುತ್ತಾರೆ ಪೌಷ್ಠಿಕಾ ತಜ್ಞರು. ಸಿಪ್ಪೆ ಸಹಿತ ಇರುವ ಹೆಸರುಕಾಳು ಸಾಕಷ್ಟು ಪೋಷಕಾಂಶಗಳು ಹಾಗೂ ನಾರಿನಾಂಶವನ್ನು ಹೊಂದಿರುತ್ತದೆ. ಸುಮಾರು ನೂರು ಗ್ರಾಂ ಹೆಸರುಕಾಳು 16.3 ಗ್ರಾಂ ಫೈಬರ್, 23.9 ಗ್ರಾಂ ಪ್ರೊಟೀನ್, 4.8 ಮಿಗ್ರಾಂ ವಿಟಮಿನ್ ಸಿ, 2.25 ಮಿಗ್ರಾಂ ನಿಯಾಸಿನ್, 1250 ಮಿಗ್ರಾಂ ಪೊಟ್ಯಾಸಿಯಮ್, 132 ಮಿಗ್ರಾಂ ಕ್ಯಾಲ್ಸಿಯಂ ಮತ್ತು 6.74 ಮಿಗ್ರಾಂ ಕಬ್ಬಿಣವನ್ನು ಹೊಂದಿದೆ. ಹೆಸರುಬೇಳೆಯು 9.8 ಗ್ರಾಂ ಫೈಬರ್, 39 mg ಕ್ಯಾಲ್ಸಿಯಂ, 3.53 mg ಕಬ್ಬಿಣ ಮತ್ತು 25.5 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.
ಹೆಸರುಬೇಳೆಯು ಹೆಚ್ಚುವರಿ ಆಹಾರದ ನಾರಿನಾಂಶವನ್ನು ಹೊಂದಿರುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಹೆಸರುಕಾಳಿನ ಸಿಪ್ಪೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಅದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಸರುಬೇಳೆಗೆ ಹೋಲಿಸಿದರೆ ಇದು ಹೆಚ್ಚು ಪೋಷಕಾಂಶ-ದಟ್ಟವಾಗಿರುತ್ತದೆ.
ಹೆಸರುಕಾಳು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ
* ಹೆಸರುಕಾಳಿನ ಸೂಪ್ ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು ತೂಕ ಇಳಿಕೆಗೆ ಉತ್ತಮ ಆಯ್ಕೆಯಾಗಿದೆ.
* ಹೆಸರುಕಾಳಿನಲ್ಲಿರುವ ಹೆಚ್ಚಿನ ಪ್ರೊಟೀನ್ ಅಂಶವು ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
* ಇದರಲ್ಲಿರುವ ನಾರಿನಾಂಶವು ದೀರ್ಘಕಾಲದವರೆಗೆ ಪೂರ್ಣವಾಗಿರಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
* ಹೆಸರುಕಾಳಿನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಹೆಚ್ಚಿದ ಹಸಿವು ಮತ್ತು ಕಡುಬಯಕೆಗಳಿಗೆ ಕಾರಣವಾಗುವ ಸ್ಪೈಕ್‌ಗಳನ್ನು ತಡೆಯುತ್ತದೆ.
ಹೆಸರುಕಾಳಿನ ಸೂಪ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಹೆಸರುಕಾಳು - ಒಂದು ಕಪ್, ಈರುಳ್ಳಿ - ಒಂದು (ಚಿಕ್ಕದಾಗಿ ಹೆಚ್ಚಿದ್ದು), ಟೊಮೆಟೊ - ಒಂದು (ಚಿಕ್ಕದಾಗಿ ಹೆಚ್ಚಿದ್ದು), ಕ್ಯಾರೆಟ್ - ಒಂದು (ಚಿಕ್ಕದಾಗಿ ಹೆಚ್ಚಿದ್ದು), ಬೆಳ್ಳುಳ್ಳಿ - ಎರಡರಿಂದ ಮೂರು ಎಸಳು (ಜಜ್ಜಿಕೊಂಡಿದ್ದು), ಶುಂಠಿ - ಸಣ್ಣ ತುಂಡು (ಜಜ್ಜಿಕೊಂಡಿದ್ದು), ಹಸಿಮೆಣಸು - ಚಿಕ್ಕದಾಗಿ ಕತ್ತರಿಸಿಕೊಂಡಿದ್ದು, ಜೀರಿಗೆ - ಒಂದು ಚಮಚ, ಅರಿಸಿನ ಪುಡಿ - ಚಿಟಿಕೆ, ಧನಿಯಾ ಪುಡಿ - ಒಂದು ಚಮಚ, ಗರಂ ಮಸಾಲಾ - ಒಂದು ಚಮಚ, ಉಪ್ಪು - ರುಚಿಗೆ, ನೀರು - ಎರಡು ಕಪ್, ತುಪ್ಪ ಅಥವಾ ಎಣ್ಣೆ - ಒಂದು ಚಮಚ, ಕೊತ್ತಂಬರಿ ಸೊಪ್ಪು - ಅಲಂಕರಿಸಲು.
ತಯಾರಿಸುವ ವಿಧಾನ: ಹೆಸರುಕಾಳನ್ನು ಚೆನ್ನಾಗಿ ತೊಳೆದು ಎರಡು ಗಂಟೆಗಳ ಕಾಲ ನೆನೆಸಿಡಿ. ಕುಕ್ಕರ್‌ಗೆ ನೆನೆಸಿಟ್ಟುಕೊಂಡಿದ್ದ ಹೆಸರುಕಾಳು, ಅರಿಸಿನಪುಡಿ, ಹಾಗೂ ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯುವವರೆಗೂ ಬೇಯಿಸಿ. ಇದು ಮೃದುವಾಗುವವರೆಗೂ ಬೇಯಿಸಬೇಕು. ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಬಿಸಿಯಾದ ಮೇಲೆ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಜೀರಿಗೆ, ಶುಂಠಿ, ಹಸಿಮೆಣಸು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ಟೊಮೆಟೊ ಹಾಗೂ ಕ್ಯಾರೆಟ್ ಸೇರಿಸಿ ಬೇಯಿಸಿ. ಟೊಮೆಟೊ ಮೆತ್ತಗಾಗುವವರೆಗೂ ಬೇಯಿಸಿ. ನಂತರ ಬೇಯಿಸಿಕೊಂಡ ಹೆಸರುಕಾಳು ಹಾಕಿ. ನಂತರ ನೀರು ಹಾಕಿ. ಅದಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲೆ ಹಾಗೂ ಉಪ್ಪು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಕುದಿಸಿ. ಗ್ಯಾಸ್ ಸ್ಟೌ ಅನ್ನು ಚಿಕ್ಕ ಉರಿಯಲ್ಲಿ ಇಟ್ಟು 10 ರಿಂದ 15 ನಿಮಿಷ ಕುದಿಸಿ. ಈಗ ನಿಮ್ಮ ಮುಂದೆ ಹೆಸರುಕಾಳಿನ ಸೂಪ್ ಸವಿಯಲು ಸಿದ್ಧ.
