ಸ್ತನ ಕ್ಯಾನ್ಸರ್ ಜತೆ ನಟಿ ಹಿನಾ ಖಾನ್‌ರನ್ನು ಕಾಡುತ್ತಿದೆ ಮ್ಯೂಕೋಸಿಟಿಸ್; ಏನಿದು ಸಮಸ್ಯೆ, ರೋಗ ಲಕ್ಷಣಗಳೇನು? ಇಲ್ಲಿದೆ ವಿವರ
Mucositis Symptoms: ಬಾಲಿವುಡ್ ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಸದ್ಯ ಆಕೆಗೆ ಕಿಮೋಥೆರಪಿ ಕೂಡ ನಡೆಯುತ್ತಿದೆ. ಈ ಮಧ್ಯೆ ಅವರಿಗೆ ಹೊಸ ಸಮಸ್ಯೆಯೊಂದು ಎದುರಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಅದರ ಹೆಸರು ಮ್ಯೂಕೋಸಿಟಿಸ್. ಏನಿದು ಸಮಸ್ಯೆ, ಇದರಿಂದ ಏನೆಲ್ಲಾ ತೊಂದರೆಗಳು ಎದುರಾಗುತ್ತೆ ನೋಡಿ.
What is Mucositis: ಹಿನಾ ಖಾನ್ ಹಿಂದಿ ಧಾರಾವಾಹಿಗಳು ಹಾಗೂ ಬಿಗ್‌ಬಾಸ್ ಮೂಲಕ ಹಲವರಿಗೆ ಪರಿಚಿತರು. ಕೆಲವು ದಿನಗಳ ಹಿಂದೆ, ತನಗೆ ಕ್ಯಾನ್ಸರ್ ಇರುವ ವಿಚಾರ ಬಹಿರಂಗ ಪಡಿಸಿರುವ ಆಕೆ, ತನಗೆ ಸ್ತನ ಕ್ಯಾನ್ಸರ್ ಮೂರನೇ ಹಂತದಲ್ಲಿದೆ ಎಂದು ಹೇಳಿದ್ದರು. ಸದ್ಯ ಆಕೆಗೆ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಮಯದಲ್ಲಿ, ಅವರು ಆಗಾಗ್ಗೆ ತಮ್ಮ ಆರೋಗ್ಯದ ಬಗ್ಗೆ Instagram ನಲ್ಲಿ ಅಪ್‌ಡೇಟ್ ನೀಡುತ್ತಿರುತ್ತಾರೆ. ಇತ್ತೀಚೆಗೆ, ತಾನು ಮ್ಯೂಕೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಆಕೆ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಈ ಸಮಸ್ಯೆಯಿಂದ ಆಹಾರ ಸೇವನೆಗೂ ತೊಂದರೆಯಾಗುತ್ತಿದೆ ಎಂದು ತಮ್ಮ ನೋವಿನ ಪರಿಸ್ಥಿತಿಯ ಬಗ್ಗೆ ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಪೋಸ್ಟ್ ಮೂಲಕ ಅವರು ಮ್ಯೂಕೋಸಿಟಿಸ್ ಅನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳ ಬಗ್ಗೆ ನೆಟ್ಟಿಗರ ಬಳಿ ಕೇಳಿದ್ದಾರೆ. ಹಾಗಾದರೆ ಮ್ಯೂಕೋಸಿಟಿಸ್ ಎಂದರೇನು, ಇದರ ರೋಗಲಕ್ಷಣಗಳೇನು, ಇದನ್ನು ಕಡಿಮೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಮ್ಯೂಕೋಸಿಟಿಸ್ ಯಾವಾಗ ಸಂಭವಿಸುತ್ತದೆ?
ವಿಕಿರಣ ಅಥವಾ ಕೀಮೋಥೆರಪಿಯಂತಹ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ಜನರಲ್ಲಿ ಮ್ಯೂಕೋಸಿಟಿಸ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮ್ಯೂಕಸ್ ಕೆಂಪಾಗುತ್ತದೆ ಮತ್ತು ಮ್ಯೂಕೋಸಿಟಿಸ್ ಸಮಸ್ಯೆ ಉಂಟಾಗುತ್ತದೆ. ಇದು ಬಾಯಿಯಲ್ಲಿ ಹುಣ್ಣುಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯಿಂದ ತಿನ್ನುವುದು ಮತ್ತು ಕುಡಿಯುವುದು ಕಷ್ಟವಾಗುತ್ತದೆ.
ಮ್ಯೂಕೋಸಿಟಿಸ್‌ನ ಲಕ್ಷಣಗಳು
ಮ್ಯೂಕೋಸಿಟಿಸ್ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ಸಮಸ್ಯೆಯ ಕೆಲವು ಸಾಮಾನ್ಯ ಚಿಹ್ನೆಗಳು ಇವೆ.
* ಬಾಯಿ ಮತ್ತು ಒಸಡುಗಳು ಕೆಂಪಾಗುತ್ತವೆ.
* ಬಾಯಿಯಲ್ಲಿ ರಕ್ತ ಬರಬಹುದು.
* ಒಸಡುಗಳು, ನಾಲಿಗೆ ಮತ್ತು ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.
* ಬಾಯಿ ಅಥವಾ ಗಂಟಲು ನೋವು ಕಾಣಿಸಬಹುದು.
* ಆಹಾರ ನುಂಗಲು ಅಥವಾ ಮಾತನಾಡಲು ತೊಂದರೆ ಉಂಟಾಗಬಹುದು.
* ಆಹಾರ ಸೇವಿಸುವಾಗ ಬಾಯಿ ಒಣಗುವುದು, ಸುಡುವುದು ಮತ್ತು ನೋವಿನ ಅನುಭವವಾಗುತ್ತದೆ.
* ಬಾಯಿಯಲ್ಲಿ ಅಥವಾ ನಾಲಿಗೆಯಲ್ಲಿ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಕೀವು ಕೂಡ ರೂಪುಗೊಳ್ಳಬಹುದು.
* ಬಾಯಿಯಿಂದ ಲೋಳೆ ಬರುತ್ತದೆ. ಲಾಲಾರಸ ದಪ್ಪವಾಗುತ್ತದೆ.
ಮ್ಯೂಕೋಸಿಟಿಸ್ ನಿವಾರಣೆ ಹೇಗೆ?
1) ಬಾಯಿಯನ್ನು ಸ್ವಚ್ಛವಾಗಿಡಿ. ಮ್ಯೂಕೋಸಿಟಿಸ್‌ನ ತೀವ್ರತೆಯನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.
2) ಊಟ ಮಾಡಿದ ನಂತರ ಮತ್ತು ಮಲಗುವ ಮುನ್ನ ಮೃದುವಾದ ಟೂತ್ ಬ್ರಶ್‌ನಿಂದ ಹಲ್ಲುಜ್ಜಿ. ಹಲ್ಲುಜ್ಜುವಾಗ ನೋವು ಉಂಟಾದರೆ ಮೌಖಿಕ ಆರೈಕೆ ಸ್ವ್ಯಾಬ್ ಅನ್ನು ಬಳಸಬಹುದು.
3) ತುಟಿಗಳು ತೇವವಾಗಿರಲು ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.
4) ಬಿಸಿ, ಖಾರ ಮತ್ತು ಹುಳಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಆಲ್ಕೋಹಾಲ್, ಕ್ರಿಸ್ವಿ ಬ್ರೆಡ್, ಚಿಪ್ಸ್, ಕ್ರ್ಯಾಕರ್ಸ್‌ನಂತಹ ಗಟ್ಟಿಯಾದ ಆಹಾರ ಸೇವನೆಯನ್ನು ತಪ್ಪಿಸುವುದು ಉತ್ತಮ.
5) ಸಾಕಷ್ಟು ದ್ರವಾಹಾರ ಸೇವಿಸಿ.
6) ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರೊಟೀನ್ ಅಂಶಗಳನ್ನು ಸೇರಿಸಲು ಪ್ರಯತ್ನಿಸಿ.
ನೆಟ್ಟಿಗರು ಹಿನಾ ಖಾನ್‌ಗೆ ನೀಡಿದ ಸಲಹೆ ಹೀಗಿದೆ
ಹೀನಾ ಖಾನ್ ಅವರ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಮ್ಯೂಕೋಸಿಟಿಸ್ ಅನ್ನು ಕಡಿಮೆ ಮಾಡಲು ಕೆಲವು ಸಲಹೆಗಳನ್ನೂ ನೀಡಿದ್ದಾರೆ, ಮ್ಯೂಕೋಸಿಟಿಸ್ ನಿಯಂತ್ರಣಕ್ಕೆ ನೆಟ್ಟಿಗರು ನೀಡಿದ ಸಲಹೆ ಹೀಗಿದೆ.
ಎಳನೀರು, ಬೀಟ್ರೂಟ್ ಜ್ಯೂಸ್, ಐಸ್ ಕ್ರೀಮ್ ಮತ್ತು ಸೀತಾಫಲವನ್ನು ತಿನ್ನುವುದು ಪ್ರಯೋಜನಕಾರಿ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಬಳಕೆದಾರರು ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಸಲಹೆ ನೀಡುತ್ತಾರೆ. ಇದರೊಂದಿಗೆ ಗರ್ಗ್ಲ್ ಸೋಡಾ ಸಲೈನ್ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ, 1 ಗ್ಲಾಸ್ ಬೆಚ್ಚಗಿನ ನೀರಿನಲ್ಲಿ 1/4 ಟೀ ಚಮಚ ಸೋಡಾ ಮತ್ತು 1/8 ಉಪ್ಪು ಮಿಶ್ರಣ ಮಾಡಿ ಮತ್ತು ಗಾರ್ಗ್ಲ್ ಮಾಡಿ.