ಇಂಗು ತಿಂದ್ರೆ ಮಂಗನಂತಾಗಲ್ಲ, ಆರೋಗ್ಯವಾಗಿ ಇರ್ತೀರ; ಇಂಗಿನ ಇತಿಹಾಸ ಜೊತೆಗೆ ಪ್ರಯೋಜನವೂ ತಿಳ್ಕೊಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇಂಗು ತಿಂದ್ರೆ ಮಂಗನಂತಾಗಲ್ಲ, ಆರೋಗ್ಯವಾಗಿ ಇರ್ತೀರ; ಇಂಗಿನ ಇತಿಹಾಸ ಜೊತೆಗೆ ಪ್ರಯೋಜನವೂ ತಿಳ್ಕೊಳಿ

ಇಂಗು ತಿಂದ್ರೆ ಮಂಗನಂತಾಗಲ್ಲ, ಆರೋಗ್ಯವಾಗಿ ಇರ್ತೀರ; ಇಂಗಿನ ಇತಿಹಾಸ ಜೊತೆಗೆ ಪ್ರಯೋಜನವೂ ತಿಳ್ಕೊಳಿ

ನಿತ್ಯದ ಅಡುಗೆಯಲ್ಲಿ ಇಂಗು ಬಳಸುವುದರಿಂದ ಹಿಡಿದು ಹಲವು ಆರೋಗ್ಯ ಪ್ರಯೋಜನಗಳಿವೆ. ಜೀರ್ಣಕ್ರಿಯೆ ಸುಧಾರಣೆಯಿಂದ ಹಿಡಿದು ತ್ವಚೆಯ ಆರೋಗ್ಯಕ್ಕೂ ಇಂಗು ಉತ್ತಮ ಮದ್ದು.

ಇಂಗು ತಿಂದ್ರೆ ಮಂಗನಂತಾಗಲ್ಲ, ಆರೋಗ್ಯವಾಗಿ ಇರ್ತೀರ
ಇಂಗು ತಿಂದ್ರೆ ಮಂಗನಂತಾಗಲ್ಲ, ಆರೋಗ್ಯವಾಗಿ ಇರ್ತೀರ

ಬಹುತೇಕ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಇಂಗು ಇದ್ದೇ ಇರುತ್ತದೆ. ಉಪ್ಪಿನಕಾಯಿಯಿಂದ ಹಿಡಿದು ಅನೇಕ ಅಡುಗೆಗಳಿಗೆ ಇಂಗು ಬಳಸಲಾಗುತ್ತದೆ. ಚಿಟಿಕೆ ಇಂಗು, ಅಡುಗೆಗೆ ಒಂದು ರೀತಿಯ ವಿಶೇಷ ಸುವಾಸನೆ ನೀಡುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಹೆಚ್ಚಿನವರಿಗೆ ಇಂಗಿನ ವಾಸನೆ ಇಷ್ಟವಾಗುವುದಿಲ್ಲ. ಆದರೆ ಅಡುಗೆಗೆ ಬಳಸಿದಾಗ ಅದು ಆ ಅಡುಗೆಯ ಪರಿಮಳ ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಇಂಗು ಸಿಗುತ್ತದೆ. ಅದನ್ನು ನಿತ್ಯ ಅಡುಗೆಯಲ್ಲಿ ಬಳಸಬಹುದು. ಇದು ತ್ವಚೆಯ ಆರೋಗ್ಯ ಮಾತ್ರವಲ್ಲದೆ ಜೀರ್ಣಕಾರಿ ಸಮಸ್ಯೆಗಳಿಗೂ ಪರಿಹಾರವಾಗಿದೆ.

ಫೆರುಲಾ ಸಸ್ಯದ ಕಾಂಡ ಮತ್ತು ಬೇರುಗಳ ರಸದಿಂದ ಈ ಗಮ್‌ನಂಥಾ ವಸ್ತುವನ್ನು ಸಂಗ್ರಹಿಸಿ ಇಂಗು ತಯಾರಾಗುತ್ತದೆ. ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಇದು ಹೆಚ್ಚಾಗಿ ಉತ್ಪಾದನೆಯಾಗುತ್ತದೆ. ಆದರೆ, ಭಾರತದಲ್ಲಿ ಬಳಕೆ ಹೆಚ್ಚು. ಜೊತೆಗೆ ಮೆಡಿಟರೇನಿಯನ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಇಂಗು ಬಳಕೆ ನೂರಾರು ವರ್ಷಗಳ ಹಿಂದಿನಿಂದಲೇ ಆರಂಭವಾಗಿರುವ ಸುಳಿವು ಸಿಗುತ್ತದೆ. ಆವಿಷ್ಕಾರದ ನಿಜವಾದ ದಿನಾಂಕ ಸ್ಪಷ್ಟವಾಗಿಲ್ಲ. ಆದರೆ, ಇಂಗು ಸಸ್ಯವನ್ನು ಭಾರತಕ್ಕೆ ಕ್ರಿಸ್ತಪೂರ್ವ 400ರಲ್ಲಿ ಪರಿಚಯಿಸಲಾಯಿತು ಎಂಬ ಮಾಹಿತಿ ಸಿಗುತ್ತದೆ. ರೋಮನ್ನರು ಮತ್ತು ಪ್ರಾಚೀನ ಗ್ರೀಕರು ಇದನ್ನು ಗುರುತಿಸಿ ಎಲ್ಲೆಡೆ ಪರಿಚಯಿಸಿದರು. ಭಾರತದ ಸಾಂಪ್ರದಾಯಿಕ ಅಡುಗೆಗಳಿಗೆ ಇಂಗು ಬಳಸಲಾಗುತ್ತದೆ. ಹಲವು ವರ್ಷಗಳಿಂದ ಪ್ರಪಂಚದಾದ್ಯಂತ ಇದನ್ನು ವ್ಯಾಪಾರ ಮಾಡಲಾಗುತ್ತಿದೆ.

ಇಂಗು, ರುಚಿಹೀನ ಅಡುಗೆಗೆ ರುಚಿ ತುಂಬುತ್ತದೆ. ಜೀರ್ಣಕ್ರಿಯೆ ಸುಧಾರಿಸಲು ನೆರವಾಗುವುದರೊಂದಿಗೆ ಆಸ್ತಮಾವನ್ನು ಗುಣಪಡಿಸುವವರೆಗೆ ಆರೋಗ್ಯಕರ ಆಹಾರವಾಗಿದೆ. ಹಾಗಂತ ಇದನ್ನು ಹಾಗೇ ಸೇವಿಸಬೇಕೆಂದೇನಿಲ್ಲ. ಅಡುಗೆಗೆ ನಿಯಮಿತ ಸೇರಿಸಿದರೆ ಸಾಕು. ಹಿಂಗನ್ನು ಹೆಚ್ಚಾಗಿ ಒಣಗಿಸಿ ಪುಡಿ ರೂಪದಲ್ಲಿ ಬಳಸಲಾಗುತ್ತದೆ. ಹಲವು ಔಷಧೀಯ ಗುಣಗಳು ಇರುವುದರಿಂದ ಜಾಸ್ತಿ ದಿನ ಕೆಡದಂತೆ ಇರಿಸಬಹುದಾಗಿದೆ.

ಸಾಮಾನ್ಯ ಆಹಾರದಲ್ಲಿ ಸೇರಿಸುವ ಮೂಲಕ ಇಂಗಿನಿಂದ ಹಲವು ಪ್ರಯೋಜನಗಳಿವೆ. ಅವುಗಳೆಂದರೆ

ಚರ್ಮದ ಆರೋಗ್ಯ

ಚರ್ಮದ ಆರೋಗ್ಯಕ್ಕೆ ಇಂಗು ಒಳ್ಳೆಯದು. ಇದು ಮೊಡವೆಗಳನ್ನು ಮಸುಕಾಗಿಸುವುದಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಮುಖ್ಯವಾಗಿ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ.

ರಕ್ತದೊತ್ತಡ ನಿಯಂತ್ರಣ

ಇಂಗು ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮ ಔಷಧ. ಅಧಿಕ ರಕ್ತದೊತ್ತಡ ಇರುವವರು ಊಟಕ್ಕೆ ಇಂಗು ಸೇರಿಸುವುದು ಒಳ್ಳೆಯದು.

ಜೀರ್ಣಕ್ರಿಯೆ ಸುಧಾರಣೆ

ಅಡುಗೆಗೆ ಇಂಗು ಹಾಕುವುದರಿಂದ ಗ್ಯಾಸ್ ಮತ್ತು ಮಲಬದ್ಧತೆಯಂಥ ಜೀರ್ಣಕಾರಿ ಸಮಸ್ಯೆಗಳನ್ನು ಸುಧಾರಿಸಬಹುದು.

Whats_app_banner