ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲ ಬಂತು, ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯ ವಾತಾವರಣವನ್ನು ಈಗಲೇ ಸಿದ್ಧಗೊಳಿಸಿ; ಈ ಟಿಪ್ಸ್‌ಗಳನ್ನು ಪಾಲಿಸಿ

ಮಳೆಗಾಲ ಬಂತು, ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯ ವಾತಾವರಣವನ್ನು ಈಗಲೇ ಸಿದ್ಧಗೊಳಿಸಿ; ಈ ಟಿಪ್ಸ್‌ಗಳನ್ನು ಪಾಲಿಸಿ

ಬಿಸಿಲ ಬೇಗೆಯಿಂದ ಬೇಸತ್ತ ಭೂಮಿಗೆ ಮಳೆರಾಯ ತಂಪೆರೆಯಲು ಆರಂಭಿಸಿದ್ದಾನೆ. ರಾಜ್ಯ ಸೇರಿದಂತೆ ದೇಶದ ಕೆಲವು ಕಡೆ ಮಳೆ ಸುರಿಯಲು ಆರಂಭವಾಗಿದೆ. ಮಳೆಯೊಂದಿಗೆ ಸೊಳ್ಳೆಗಳ ಆಗಮನವೂ ಸಹಜ. ಸೊಳ್ಳೆಗಳಿಂದ ವಿವಿಧ ಕಾಯಿಲೆಗಳು ಬರುವ ಕಾರಣ ಮನೆಯ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಗಾಲಕ್ಕೆ ನಿಮ್ಮ ಮನೆಯ ಬಳಿ ಸೊಳ್ಳೆಗಳು ಸುಳಿದಾಡಬಾರದು ಅಂದ್ರೆ ಹೀಗೆ ಮಾಡಿ.

 ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ನಿಮ್ಮ ಮನೆಯನ್ನು ಈಗಲೇ ಸಿದ್ಧಗೊಳಿಸಿ
ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ನಿಮ್ಮ ಮನೆಯನ್ನು ಈಗಲೇ ಸಿದ್ಧಗೊಳಿಸಿ

ಮಳೆಗಾಲ ಬಂತೆಂದರೆ ಏನೋ ಒಂಥರಾ ಹರುಷ. ಬಿಸಿಲಿನ ಬೇಗೆಯಿಂದ ಬೇಸತ್ತ ಜೀವಗಳಿಗೆ ಮಳೆರಾಯ ತಂಪು ನೀಡುತ್ತಾನೆ. ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ, ಆದರೆ ಮಳೆರಾಯನ ಜೊತೆಗೆ ಸಂಗೀತ ಹಾಡುತ್ತಾ ಬರುವ ಸೊಳ್ಳೆರಾಯ ಯಾರಿಗೆ ಬೇಕು ಹೇಳಿ. ಮಳೆಗಾಲ ಆರಂಭವಾದಾಗಲೇ ಸೊಳ್ಳೆಗಳ ಕಾಟವೂ ಆರಂಭವಾಗುತ್ತದೆ. ಸೊಳ್ಳೆಗಳಿಂದ ಚಿಕುನ್‌ಗುನ್ಯಾ, ಡೆಂಗಿ, ಮಲೇರಿಯಾ ಸೇರಿದಂತೆ ನೂರಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಮನೆಯ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಗಮನ ಹರಿಸಬೇಕು. ಮಳೆಗಾಲದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಲು ಪ್ರಮುಖ ಕಾರಣ ನಿಂತ ನೀರು. ಮೊದಲು ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಸೊಳ್ಳೆಗಳಿಂದ ದೂರವಿಡಲು ಒಂದಿಷ್ಟು ಉಪಾಯಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದಲ್ಲಿ ಸೊಳ್ಳೆಗಳಿಂದ ದೂರವಿರುವುದು ಹೇಗೆ?

ನಿಂತ ನೀರನ್ನು ತೆರವುಗೊಳಿಸಿ

ಮಳೆಗಾಲದಲ್ಲಿ ಕಾಯಿಲೆ ಹರಡಲು ಪ್ರಮುಖ ಕಾರಣ ಸೊಳ್ಳೆಗಳು. ಹಾಗಾಗಿ ಸೊಳ್ಳೆಗಳನ್ನು ಬಾರದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳಿಂದ ದೂರವಿರಲು ಪ್ರಮುಖ ದಾರಿ ಮನೆ ಅಥವಾ ನೀವಿರುವ ಜಾಗದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಬಳಕೆಯಾಗದ ಟೈರುಗಳು, ಮಡಕೆಗಳು, ಡಸ್ಟ್-ಬಿನ್‌ಗಳು ಮತ್ತು ಬಳಕೆಯಲ್ಲಿಲ್ಲದ ಯಾವುದೇ ಇತರ ವಸ್ತುಗಳ ಒಳಗೆ ನೀರು ತುಂಬುತ್ತದೆ. ಇದು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಹಾಗಾಗಿ ಮಳೆಗಾಲ ಬರುವ ಮೊದಲೇ ಅವುಗಳನ್ನು ತೆರವುಗೊಳಿಸಿ. ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸೊಳ್ಳೆ ನಿವಾರಕ ಸ್ಪ್ರೇ ಅಥವಾ ಸೊಳ್ಳೆ ನಿವಾರಕ ರೋಲ್ ಅನ್ನು ಸಹ ಬಳಸಬಹುದು.

ಕಿಟಿಕಿ, ಬಾಗಿಲುಗಳನ್ನು ಮುಚ್ಚಿಡಿ

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣದಿಂದ ಸೊಳ್ಳೆಗಳು ಉತ್ಪತ್ತಿಯಾಗಲು ಅನುಕೂಲವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಸಾಧ್ಯವಾದಷ್ಟು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಡಿ. ಅದರಲ್ಲೂ ಸಂಜೆ ವೇಳೆಗೆ ತಪ್ಪಿಯೂ ಕಿಟಕಿ, ಬಾಗಿಲು ತೆರೆದಿಡಬೇಡಿ.

ಕರ್ಪೂರ ಬಳಸಿ

ಕರ್ಪೂರದ ಸುಗಂಧ ಹರಡುವುದರಿಂದ ಸೊಳ್ಳೆಗಳು ನಿವಾರಣೆಯಾಗುತ್ತವೆ. ಕರ್ಪೂರವನ್ನು ನೀರಿನಲ್ಲಿ ನೆನೆಸಿ ಇಡಬಹುದು. ಇದರಿಂದಲೂ ಸೊಳ್ಳೆಗಳು ದೂರಾಗುತ್ತವೆ. ಆದರೆ ಕರ್ಪೂರವನ್ನು ಇಡುವ ಮುನ್ನ ಮಕ್ಕಳು, ಸಾಕುಪ್ರಾಣಿಗಳಿಂದ ದೂರ ಇಡುವುದು ಉತ್ತಮ.

ಸೊಳ್ಳೆ ನಿವಾರಕ ಸಸ್ಯಗಳನ್ನು ಬೆಳೆಸಿ

ಕಿವಿಯ ಬಳಿ ಸೊಳ್ಳೆಗಳು ಸಂಗೀತ ಹಾಡುವುದು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ಸೊಳ್ಳೆಗಳು ಬಾರದೇ ಇರುವುದೂ ಇಲ್ಲ. ಸೊಳ್ಳೆ ನಿಯಂತ್ರಣಕ್ಕಾಗಿ ನೀವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಮನೆಯ ಹೊರಗೆ ತುಳಸಿ, ಪುದಿನಾದಂತಹ ಸೊಳ್ಳೆ ನಿವಾರಕ ಗಿಡಗಳನ್ನು ಬೆಳೆಸಬೇಕು. ಇಂತಹ ಗಿಡಗಳನ್ನು ಮನೆಯ ಒಳಗೂ ಹೊರಗೂ ನೆಡಬಹುದು.

ಬೆಳ್ಳುಳ್ಳಿ ಬಳಸಿ

ಬೆಳ್ಳುಳ್ಳಿ ಅತ್ಯುತ್ತಮ ನೈಸರ್ಗಿಕ ಸೊಳ್ಳೆ ನಿವಾರಕಗಳಲ್ಲಿ ಒಂದಾಗಿದೆ. ಬೆಳ್ಳುಳ್ಳಿಯ ಕಟು ವಾಸನೆ ಸೊಳ್ಳೆಯನ್ನು ದೂರ ಮಾಡುವ ಗುಣವನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಸೊಳ್ಳೆ ನಿವಾರಕವಾಗಿ ಬಳಸಲು, ಬೆಳ್ಳುಳ್ಳಿಯನ್ನು ಗುದ್ದಿ ನೀರಿಗೆ ಹಾಕಿ ಕುದಿಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಮನೆಯ ಒಳಗೆ ಈ ನೀರನ್ನು ಸಿಂಪಡಿಸಿ.

ಮನೆಯ ಕಿಟಕಿ, ಬಾಗಿಲಿನ ಅಂಚನ್ನು ಸ್ವಚ್ಛ ಮಾಡಿ

ಮನೆಯ ಕಿಟಕಿ ಹಾಗೂ ಬಾಗಿಲ ಅಂಚಿನ ಬಳಿ ಗಲೀಜು ಇದ್ದರೆ ಸೊಳ್ಳೆಗಳು ಹೆಚ್ಚು ಸುಳಿದಾಡುತ್ತವೆ. ಹಾಗಾಗಿ ಮಳೆಗಾಲ ಬರುವ ಮುನ್ನ ಇದೆಲ್ಲವನ್ನೂ ಸ್ವಚ್ಛ ಮಾಡಿ.

ಮನೆಯ ಬಳಿ ನೀರು ಸರಾಗವಾಗಿ ಹರಿದಾಡುವಂತೆ ಮಾಡಿ

ಮನೆಯ ಬಳಿ ನೀರು ನಿಲ್ಲದಂತೆ ಮಾಡಲು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಮನೆಯ ಟೆರೇಸ್‌ ಮೇಲೆ ಕೂಡ ನೀರು ನಿಲ್ಲದಂತೆ ಪೈಪ್‌ಗಳಲ್ಲಿ ಕಸ ಸಿಕ್ಕಿದ್ದರೆ ಬಿಡಿಸಿ ಬಿಡಿ.

ಶರಾಬಿಯೂ ಸೊಳ್ಳೆ ನಿವಾರಕ

ಆಲ್ಕೋಹಾಲ್‌ ನಮಗಷ್ಟೇ ಅಲ್ಲ ಸೊಳ್ಳೆಗಳಿಗೂ ಹಾನಿಕಾರಕ. ಸೊಳ್ಳೆಗಳು ಬಾರದಂತೆ ತಡೆಯಲು ಮನೆಯ ಕಿಟಕಿಯ ಬಳಿ ಸಾರಾಯಿಯನ್ನು ಗ್ಲಾಸ್‌ನಲ್ಲಿ ಹಾಕಿ ಇಡಬೇಕು. ಇದರ ವಾಸನೆಗೆ ಸೊಳ್ಳೆಗಳು ಸುಳಿಯುವುದಿಲ್ಲ.

ಮಳೆಗಾಲ ಬಂದೇ ಬಿಟ್ಟಿದೆ. ಸೊಳ್ಳೆಗಳ ಆಗಮನ ನಿಧಾನಕ್ಕೆ ಶುರುವಾಗಿದೆ, ಹಾಗಾಗಿ ಈಗಲೇ ಸೊಳ್ಳೆಗಳು ಬಾರದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಕಾಯಿಲೆಗಳು ಹರಡದಂತೆ ಮನೆ ಮಂದಿಯನ್ನು ರಕ್ಷಿಸಿ.