Suicide Preventions: ಆತ್ಮಹತ್ಯೆ ಪಿಡುಗಿನಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ? ಮಕ್ಕಳ ಮನಸ್ಸು ಗಟ್ಟಿಯಾಗಿಸಲು ಇವಿಷ್ಟೂ ಗೊತ್ತಿರಬೇಕು
ಮೊಬೈಲ್ ಕೊಡಲಿಲ್ಲವೆಂದು, ಶಿಕ್ಷಕರು ಬೈದರೆಂದು, ಗೆಳೆಯ ದೂರಾದನೆಂದು... ಹಲವು ಕಾರಣಗಳಿಗೆ ಮಕ್ಕಳು ಆತ್ಮಹತ್ಯೆಗೆ ಜಾರುತ್ತಿದ್ದಾರೆ. ಮಕ್ಕಳು ಇಷ್ಟೇಕೆ ಕುಗ್ಗಿದ್ದಾರೆ? ಆತ್ಮಹತ್ಯೆ ಪ್ರವೃತ್ತಿಯನ್ನು ಹೋಗಲಾಡಿಸುವುದು ಹೇಗೆ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ಈ ಲೇಖನದಲ್ಲಿ ಉತ್ತರಿಸಿದ್ದಾರೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ (NCRB) 'ಆಕ್ಸಿಡೆಂಟಲ್ ಆಂಡ್ ಡೆತ್ಸ್ ಸ್ಯೂಸೈಡ್ಸ್ ಇನ್ ಇಂಡಿಯಾ'ದ (National Crime Records Bureau’s Accidental Deaths & Suicides in India) ವರದಿಯ ಪ್ರಕಾರ, ಭಾರತದಲ್ಲಿ 2021 ರಲ್ಲಿ 13,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ದಿನದ ಸರಾಸರಿಗೆ ಲೆಕ್ಕಹಾಕಿದರೆ ಪ್ರತಿದಿನ ಸತ್ತವರ ಸಂಖ್ಯೆ 35 ಕ್ಕಿಂತ ಹೆಚ್ಚು. 2020 ರಲ್ಲಿ 12,526 ಮಂದಿ ಸಾವನ್ನಪ್ಪಿದ್ದರು. 2020ಕ್ಕೆ ಹೋಲಿಸಿದರೆ 2021ರಲ್ಲಿ ಮೃತಪಟ್ಟವರ ಸಂಖ್ಯೆ ಶೇ 4.5 ಹೆಚ್ಚಾಗಿದೆ. 10,732 ಆತ್ಮಹತ್ಯೆಗಳಲ್ಲಿ 864 ಪ್ರಕರಣಗಳಿಗೆ 'ಪರೀಕ್ಷೆಯಲ್ಲಿ ವೈಫಲ್ಯ'ವೇ ಮುಖ್ಯ ಕಾರಣ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಏನು ಮಾಡಬಹುದು?
ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಗಟ್ಟುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಓದುವ ಮಕ್ಕಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಮಾನಸಿಕ ದೌರ್ಬಲ್ಯಗಳು ಸಹ ಹೆಚ್ಚಾಗಿವೆ. ಅಸಹಾಯಕತೆ, ಒತ್ತಡ, ಒಂಟಿತನ, ಭಯ ಮತ್ತು ಆತಂಕಗಳಿಗೆ ಒಳಗಾಗಿ ಪರಿಸ್ಥಿಯನ್ನು ಎದುರಿಸಲು ಆಗದ ಅಸಹಾಯಕತೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಮಕ್ಕಳ ಬದುಕಲ್ಲಿ ಮಹತ್ವವಾದ ಪಾತ್ರವಹಿಸುವವರು ಪೋಷಕರು, ಶಿಕ್ಷಕರು, ಸ್ನೇಹಿತರು ಮತ್ತು ಸಮಾಜ. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರ, ಶಿಕ್ಷಕರ ಮತ್ತು ಸಮಾಜದ ಪಾತ್ರಗಳು ಏನೆಂದು ಪ್ರತ್ಯೇಕವಾಗಿ ತಿಳಿಯೋಣ.
ಆತ್ಮಹತ್ಯೆ ತಡೆಗಟ್ಟುವಲ್ಲಿ ಪೋಷಕರ ಪಾತ್ರ
1) ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರಿಯಿರಿ: ಪೋಷಕರಾಗಿ ಮಕ್ಕಳಿಗೆ ಗುಣಮಟ್ಟದ ಸಮಯವನ್ನು ನೀಡಿ. ಮಕ್ಕಳು ಯಾವುದೇ ಕ್ಷೆೇತ್ರದಲ್ಲಿ ಹಿಂದೆ ಬಿದ್ದರೆ ಅಥವ ಸೋತರೆ ಅವರನ್ನು ಅತಿಯಾಗಿ ನಿಂದಿಸಬೇಡಿ. ಬದಲು ಮಾನಸಿಕವಾಗಿ ಬೆಂಬಲಿಸಿ. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಿ. ಭಯ, ಆತಂಕ ಮತ್ತು ಒತ್ತಡವನ್ನು ಎದುರಿಸಲು ಸಹಕರಿಸಿ. ಮಕ್ಕಳು ಏನಾದರೂ ತಪ್ಪು ಮಾಡಿದರೆ ಅಥವಾ ಶಿಕ್ಷಕರಿಂದ ದೂರು ಬಂದರೆ, ಮಕ್ಕಳನ್ನು ಅತಿಯಾಗಿ ಶಿಕ್ಷಿಸುವುದನ್ನು ನಿಲ್ಲಿಸಿ.
2) ಭಾವನೆ ವ್ಯಕ್ತಪಡಿಸಲು ಅವಕಾಶ ಕೊಡಿ: ಮಕ್ಕಳಿಗೆ ತಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವನ್ನು ಮಾಡಿಕೊಡಿ. ಹೊರಗೆ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ತಮ್ಮ ಪೋಷಕರ ಬಳಿ ಸಮಸ್ಯೆ ಕುರಿತು ಮಾತುಕತೆ ಆಡಲು ಸಾಧ್ಯವಾಗುವ ಮುಕ್ತ ವಾತಾವರಣ ಇರಲಿ.
3) ಹಣೆಪಟ್ಟಿ ಕಟ್ಟಬೇಡಿ: ಮಕ್ಕಳಿಗೆ ಯಾವುದೇ ಹಣೆಪಟ್ಟಿ ಹಚ್ಚುವುದನ್ನು ತಡೆಯಿರಿ. ಯಾರಿಗೂ ಇಂಥ ಅವಕಾಶ ಕೊಡಬೇಡಿ. ನೀವು ಅಪ್ಪ-ಅಮ್ಮ ಆಗಿದ್ದರೂ ಸರಿ, ಮಕ್ಕಳಿಗೆ ಹಣೆಪಟ್ಟಿ ಕಟ್ಟಬೇಡಿ. ಉದಾ: ದಡ್ಡ, ಹುಚ್ಚ, ಪೆದ್ದ, ಕಳ್ಳ, ಅಯೋಗ್ಯ, ಕೆಟ್ಟವನು, ಸುಳ್ಳಿ.. ಇತ್ಯಾದಿ
4) ಮಕ್ಕಳಿಗೆ ಆಸರೆಯಾಗಿ, ಆತಂಕಕಾರಿಗಳಾಗಬೇಡಿ: ಮಕ್ಕಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಶೈಕ್ಷಣಿಕ ಬೆಳವಣಿಗೆ ಕುಂಠಿತವಾದರೆ ಸುಧಾರಿಸಿಕೊಳ್ಳಲು ಪ್ರೇರಣೆ ನೀಡಿ. ಅವರು ಎದುರಿಸುತ್ತಿರುವ ಸವಾಲುಗಳನ್ನು ಅರಿತು ಮುನ್ನಡೆಯಲು ಪ್ರೋತ್ಸಾಹ ಕೊಡಿ, ಸಹಕರಿಸಿ.
5) ದಿನಚರಿ ಗಮನಿಸಿ: ಮಕ್ಕಳ ದಿನಚರಿ ಅಂದರೆ ಊಟ, ಪಾಠ, ನಿದ್ರೆ ಮತ್ತು ಇತರೆ ಚಟುವಟೆಕೆಗಳ ಬಗ್ಗೆ ಗಮನರಲಿ. ನಿರ್ಲಕ್ಷ್ಯ ಸಲ್ಲದು.
ಆಸರೆಯಾಗು ಗುರುವೇ
ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿಗತ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಶಿಸ್ತು, ಶೈಕ್ಷಣಿಕ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಮೇಲೆ ಅನುಕಂಪ, ಸಹಾನುಭೂತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ತಿದ್ದಿ ಸುಧಾರಿಸುವ ಉದ್ದೇಶ ಇರಬೇಕು. ತಪ್ಪು ಮಾಡಿದರೆಂದು ಎಲ್ಲರ ಎದುರು ಅತಿಯಾಗಿ ನಿಂದಿಸುವುದು, ನಕಾರಾತ್ಮಕ ಹಣೆಪಟ್ಟಿಯನ್ನು ಹಚ್ಚುವ ಕೆಲಸ ಮಾಡಬಾರದು. ಆತ್ಮಗೌರವ ಮತ್ತು ವಿಶ್ವಾಸದ ಕೊರತೆಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಬಹಳ ಕುಗ್ಗಿಸುತ್ತದೆ. ವಿದ್ಯಾಥಿ೯ಗಳ ಜೊತೆ ಆರೋಗ್ಯಕರ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಅಗತ್ಯಗಳನ್ನು ಅರಿಯಬೇಕು.
ಸ್ನೇಹಿತರು, ಸಮಾಜದ ಬೆಂಬಲ ಬೇಕು
ಶಾಲ-ಕಾಲೇಜುಗಳಲ್ಲಿ ಮಕ್ಕಳು ಹೆಚ್ಚು ಸಮಯವನ್ನು ಸ್ನೇಹಿತರ ಬಳಿ ಕಳೆಯುತ್ತಾರೆ. ತಮ್ಮ ಕಷ್ಟ ಸುಖಗಳನ್ನು, ಭಾವನೆಗಳನ್ನು ಸ್ನೇಹಿತರ ಬಳಿ ಹಂಚಿಕೊಳ್ಳುವುದಕ್ಕೆ ಬಯಸುತ್ತಾರೆ. ಪರಸ್ಪರ ಅರ್ಥಮಾಡಿಕೊಂಡು ಬೆಂಬಲವಾಗಿರುವುದಕ್ಕೆ ಯತ್ನಿಸುತ್ತಾರೆ. ಸ್ನೇಹಿತರ ವತ೯ನೆಯಲ್ಲಿ ದೀಢೀರ್ ಬದಲಾವಣೆಗಳಾದಾಗ, ಅಂಕಗಳು ನಿರೀಕ್ಷೆಗಿಂತ ಕಡಿಮೆ ಬಂದಾಗ, ವಿಫಲವಾದಾಗ ಮತ್ತು ಬೇರೆ ಯಾವುದೇ ಸಮಸ್ಯೆಯಲ್ಲಿ ಗೆಳೆಯರು ಸಿಲುಕಿದಾಗ, ಮಾನಸಿಕ ಬೆಂಬಲವನ್ನು ನೀಡುವುದು ಅತ್ಯವಶ್ಯಕ. ಪೈಪೋಟಿಯಿಂದಾಗಿ ಗೆಳೆಯರನ್ನು ನಿರ್ಲಕ್ಷಿಸಬಾರದು. ಪರಸ್ಪರ ಪ್ರೋತ್ಸಾಹ ಮತ್ತು ಸಹಾಯ ನೀಡಬೇಕು.
ಮಕ್ಕಳೇಕೆ ಇಂಥ ನಿರ್ಧಾರಕ್ಕೆ ಬರುತ್ತಾರೆ
1) ಶೈಕ್ಷಣಿಕ ಒತ್ತಡ: ಪರೀಕ್ಷೆಯ ಆತಂಕ, ಹೆಚ್ಚು ಅಂಕ ಗಳಿಸಲೇಬೇಕೆಂಬ ಒತ್ತಡ, ಸೋಲುವ ಆತಂಕ, ಸ್ಪರ್ಧೆಗಳ ಒತ್ತಡ, ಶಿಕ್ಷಕರ ನಿಂದನೆ, ಹೆಚ್ಚು ಅಂಕಗಳಿಸುವ ವಿದ್ಯಾರ್ಥಿ ಮತ್ತು ಸ್ನೇಹಿತರ ಜೊತೆ ಹೋಲಿಕೆ. ಇದಿಷ್ಟೇ ಅಲ್ಲದೇ ಪೈಪೋಟಿಯು ಮಿತಿಮೀರಿದ್ದು ಸಹ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ.
2) ಸಂಬಂಧಗಳ ಬಿಕ್ಕಟ್ಟು: ಪ್ರೇಮ ವೈಫಲ್ಯ, ಕೌಟುಂಬಿಕ ಕಲಹಗಳು, ಸ್ನೇಹದಲ್ಲಿ ಮನಸ್ತಾಪಗಳು, ಮನೆಯಲ್ಲಿ ಅಹಿತಕರ ವಾತಾವರಣ, ಪೋಷಕರ ಮಧ್ಯೆ ಜಗಳ, ಭಿನ್ನಾಭಿಪ್ರಾಯ. ಪೋಷಕರ ಪ್ರೀತಿ, ಕಾಳಜಿ ಅಥವಾ ಸಮಯದ ಕೊರತೆ ಇತ್ಯಾದಿ ಕೂಡ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಉಂಟು ಮಾಡುತ್ತವೆ.
3) ಒಂಟಿತನ ಮತ್ತು ಅಸಹಾಯಕತೆ: ಮನೆಯಿಂದ, ಪೋಷಕರಿಂದ ದೂರವಿರುವ ಹಾಸ್ಟೆಲ್‌ವಾಸಿ ಮಕ್ಕಳಿಗೆ ಮಾನಸಿಕ ಬೆಂಬಲದ ಕೊರತೆ ಇರುತ್ತದೆ. ಇಂಥವರಿಗೆ ಸಣ್ಣಪುಟ್ಟ ಮಾನಸಿಕ ಒತ್ತಡ ಎದುರಿಸುವೂ ಬಹಳ ಕಷ್ಟ ಎನಿಸುತ್ತದೆ. ಇಂಥವರು ಸವಾಲುಗಳನ್ನು ಒಂಟಿಯಾಗಿ ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ
4) ಮಾನಸಿಕ ಬೆಂಬಲದ ಕೊರತೆ: ತೊಂದರೆಯಲ್ಲಿರುವ ವಿದ್ಯಾರ್ಥಿಗಳು ಆತ್ಮೀಯರಿಂದ ಸಹಾಯ ಮತ್ತು ಮಾರ್ಗದರ್ಶನ ತೆಗೆದುಕೊಳ್ಳುವುದಕ್ಕೂ ಹಿಂಜರಿಯುತ್ತಾರೆ. ಬೇರೆಯವರು ತಪ್ಪು ತಿಳಿಯಬಹುದು, ತಪ್ಪು ಅಭಿಪ್ರಾಯ ಮೂಡಿಸಿಕೊಳ್ಳಬಹುದು ಎಂದು ಊಹಿಸಿ ಸುಮ್ಮನಾಗುತ್ತಾರೆ. ಮಾನಸಿಕ ಆರೋಗ್ಯದ ಮಾತನಾಡುವುದು ಪಿಡುಗೆಂಬ ಭಾವನೆ ಈಗಲೂ ಸಹ ಸಮಾಜದಲ್ಲಿ ನೆಲೆಸಿರುವುದರಿಂದ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ
5) ಸೈಬರ್ ಬೆದರಿಕೆ (Cyber Bullying): ಆನ್‌ಲೈನ್ ಅಂದರೆ ಸಾಮಾಜಿಕ ಜಾಲತಾಣಗಳನ್ನು ವಿದ್ಯಾರ್ಥಿಗಳಿಗೆ ಕಿರುಕುಳ ಕೊಡಲು ಬಳಸುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಇದೂ ಸಹ ಕಾರಣ ಆಗಬಹುದು.
6) ಮಾದಕವಸ್ತುಗಳ ಚಟ: ಮಾದಕ ವ್ಯಸನ ಮತ್ತು ಮದ್ಯದ ದುರ್ಬಳಕೆ ಮಾನಸಿಕ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ. ಮತ್ತು ಹಣಕಾಸಿನ ತೊಂದರೆಗಳು ಮತ್ತು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು, ಇವೆಲ್ಲವೂ ವಿದ್ಯಾರ್ಥಿಗಳಿಗೆ ಆಘಾತವಾಗಿ, ನಿಭಾಯಿಸುವುದಕ್ಕೆ ಆಗದೆ ಅಸಹಾಯಕರಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು.
7) ಇತರ ಕಾರಣಗಳು: ಆತ್ಮವಿಶ್ವಾಸ ಮತ್ತು ಆತ್ಮಗೌರವದ ಕೊರತೆ, ಆರ್ಥಿಕ ಸಮಸ್ಯೆ, ಮಾನಸಿಕ ಕಾಯಿಲೆಗಳು (ಖಿನ್ನತೆ, ಆತಂಕ, ಬೈಪೋಲಾರ್ ಡಿಸ್ಆರ್ಡರ್... ಇತ್ಯಾದಿ), ದೈಹಿಕ ಅನಾರೋಗ್ಯಗಳು ಸಹ ಮಕ್ಕಳನ್ನು ಮಾನಸಿಕವಾಗಿ ದುರ್ಬಲರನ್ನಾಗಿಸುತ್ತವೆ. ಸವಾಲುಗಳು ಮತ್ತು ಕಷ್ಟದ ಸಂದರ್ಭಗಳನ್ನು ಎದುರಿಸಲು ಆಗದೆ ಭರವಸೆ ಕಳೆದುಕೊಳ್ಳುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ನಿರ್ಧಾರದ ಬಹುದಿನಗಳ ನೋವು
ಯಾವುದೇ ವ್ಯಕ್ತಿ ಇದ್ದಕ್ಕಿದ್ದಂತೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬಹುಕಾಲ ನರಳಿ, ವೇದನೆ ಪಟ್ಟು, ಸೋತು, ಹತಾಶೆ ಅನುಭವಿಸಿದ ನಂತರ ಇಂಥ ಕಠಿಣ ನಿರ್ಧಾರ ಮನಸ್ಸಿನಲ್ಲಿ ಗಟ್ಟಿಯಾಗುತ್ತದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಇಂಥವರು ಸಾಮಾನ್ಯವಾಗಿ ನಾನು ಒಂಟಿ, ನಾನು ಅಸಹಾಯಕ, ನನ್ನನ್ನು ಅಥ೯ ಮಾಡಿಕೆೊಳ್ಳುವರು ಯಾರೂ ಇಲ್ಲ ಎಂದು ಬಳಲುತ್ತಿರುತ್ತಾರೆ. ನಾನು ನಿಷ್ಪ್ರಯೋಜಕ/ಕಿ, ಅಸಮರ್ಥ, ನಾ ಬದುಕಿದ್ದು ಪ್ರಯೋಜನವಿಲ್ಲವೆಂಬ ಮನಃಸ್ಥಿತಿಯಲ್ಲಿ ಇರುತ್ತಾರೆ.
ಎಚ್ಚೆತ್ತುಕೊಳ್ಳಲು ಸಂಕೇತಗಳು
ಮಕ್ಕಳಲ್ಲಿ ಅಥವಾ ಯಾವುದೇ ವ್ಯಕ್ತಿಯಲ್ಲಿ ಇಂಥ ವರ್ತನೆಗಳು ಕಂಡು ಬಂದರೆ ಪೋಷಕರು ಅಥವಾ ಹತ್ತಿರದವರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇವನ್ನು ಎಚ್ಚರಿಕೆಯ ಸಂಕೇತಗಳು (Warning signs) ಎಂದು ಪರಿಗಣಿಸಲಾಗುತ್ತದೆ. ಇಂಥ ವರ್ತನೆಗಳನ್ನು ನಿರ್ಲಕ್ಷಿಸಬಾರದು.
1) ನಿರಾಸಕ್ತಿ: ದಿನಚರಿ, ಸಂಬಂಧಗಳಲ್ಲಿ ನಿರಾಸಕ್ತಿ
2) ನಿದ್ರೆ ಮತ್ತು ಆಹಾರ ಸಾಕಷ್ಟು ಕಡಿಮೆ ಮಾಡಿರುತ್ತಾರೆ
3) ಮೌನ: ಮಾತನಾಡದಿರುವುದು
4) ಕಾರಣವಿಲ್ಲದೆ ಸಿಟ್ಟು, ದುಃಖ ಒಳಗಾಗುತ್ತಿರುತ್ತಾರೆ
5) ಏಕಾಂತ ಪ್ರವೃತ್ತಿ: ಒಂಟಿಯಾಗಿರುವುದಕ್ಕೆ ಇಚ್ಛಿಸುತ್ತಾರೆ
6) ಸದಾ ಫೋನ್ ಅಥವಾ ಟಿವಿಯಲ್ಲಿ ಮುಳುಗಿರುತ್ತಾರೆ. ಜನರೊಂದಿಗೆ ಬೆರೆಯುವುದಿಲ್ಲ.
7) ವೈಯಕ್ತಿಕ ಸ್ವಚ್ಚತೆ ಇರುವುದಿಲ್ಲ
ಕಾಪಾಡಿಕೊಳ್ಳುವುದು ಹೇಗೆ
ಸೂಚನೆಗಳನ್ನು ಗಮನಿಸಿದ ತಕ್ಷಣವೇ, ತಡಮಾಡದೇ ಕೆಳಕಂಡಂತೆ ಮಾಡಿ.
1) ಒಂಟಿಯಾಗಿ ಬಿಡಬೇಡಿ. ಅವರೊಂದಿಗೆ ಜೊತೆಯಲ್ಲಿ ಸದಾ ಯಾರಾದರೂ ಒಬ್ಬರು ಇರಬೇಕು.
2) ನಿಂದಿಸುವುದು, ಟೀಕಿಸುವುದು, ದೂಷಿಸುವುದು, ಅವರ ಬಗ್ಗೆ ತೀರ್ಪು ಕೊಡುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು.
3) ಮಾನಸಿಕ ಬೆಂಬಲ ನೀಡಿ. ಆದಷ್ಟೂ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅವರ ಭವಿಷ್ಯದ ಬಗ್ಗೆ ಭರವಸೆ ಕೊಡಿ. ಅವರ ಸಹಾಯಕ್ಕೆ ನೀವಿದ್ದೀರೆಂದು ಭರವಸೆ ತುಂಬಿ.
4) ವರ್ತನೆಯಲ್ಲಿ ಬದಲಾವಣೆ ಗೋಚರಿಸಿದ ತಕ್ಷಣ ಪೋಷಕರಿಗೆ, ಸ್ನೇಹಿತರಿಗೆ, ಶಿಕ್ಷಕರಿಗೆ ಈ ಕುರಿತು ಮಾಹಿತಿ ಕೊಡಿ.
5) ಆಪ್ತಸಮಾಲೋಚಕರು ಅಥವಾ ಮನಃಶಾಸ್ರಜ್ಞರನ್ನು ಸಂಪರ್ಕಿಸಿ. ನೆರವು ಪಡೆದುಕೊಳ್ಳಿ.
6) ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಸಹಾಯವಾಣಿಯನ್ನು ಸಂಪರ್ಕಿಸಿ. ವಂದ್ರೆವಾಲ ಫೌಂಡೇಷನ್ (9999 666 555), ಪರಿವರ್ತನ (76766 02602), ಆಸರ (98204 66726), ಐಕಾಲ್ (9152987821).
ದೀರ್ಘಾವಧಿ ಪರಿಹಾರಗಳು
ಮಕ್ಕಳು ದೈಹಿಕವಾಗಿ ಮಾತ್ರವೇ ಅಲ್ಲ, ಮಾನಸಿಕವಾಗಿಯೂ ಸದೃಢರಾಗಬೇಕಿದೆ. ಇದು ಸಾಧ್ಯವಾಗಲು ಸುದೀರ್ಘ ಅವಧಿಗೆ ಸತತ ಪರಿಶ್ರಮ ಅತ್ಯಗತ್ಯ. ಈ ಉದ್ದೇಶ ಈಡೇರಲು ಕೆಳಗಿನ ಅಂಶಗಳನ್ನು ಗಮನಿಸಬೇಕು.
1) ಸುಧಾರಿತ ಮಾನಸಿಕ ಆರೋಗ್ಯ ಸೇವೆಗಳು: ಮಾನಸಿಕ ಆರೋಗ್ಯ ಮತ್ತು ಸಮಾಲೋಚನೆ ಸೇವೆಗಳು, ಬೆಂಬಲ ಗುಂಪುಗಳು (Support groups) ಮತ್ತು ಮನೋವೈದ್ಯಕೀಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳಿಗೆ ಒಡನಾಟ ಬೆಳೆಯುವಂತೆ ಮಾಡುವುದು ಒಳ್ಳೆಯದು. ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಪ್ರಥಮ ಚಿಕಿತ್ಸೆಯಲ್ಲಿ (mental health first aid) ತರಬೇತಿ ಸಿಗಬೇಕು.
2) ಮಾನಸಿಕ ಆರೋಗ್ಯದ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆಯ ಬಗ್ಗೆ "ಮುಕ್ತ ಚರ್ಚೆಗಳ" ಮೂಲಕ ಮಾನಸಿಕ ಆರೋಗ್ಯ ಮತ್ತು ಸಹಾಯ-ಯಾಚನೆಯ ಬಗ್ಗೆ ಧನಾತ್ಮಕ ವರ್ತನೆಗಳನ್ನು ಉತ್ತೇಜಿಸಬೇಕು
3) ವ್ಯಕ್ತಿತ್ವ ವಿಕಸನವನ್ನು ಸಮಗ್ರವಾಗಿ ಪರಿಭಾವಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಸಮಗ್ರ ವಿಧಾನವನ್ನು ತೆಗೆದುಕೊಳ್ಳುವ ಮೂಲಕ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ವಿಕಸನ ಹೊಂದಲು ನೆರವಾಗಬೇಕು. ಇದು ಆತ್ಮಹತ್ಯೆ ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
4) ಕಟ್ಟುನಿಟ್ಟಾದ ಸೈಬರ್ ನೀತಿಗಳು: ಆನ್‌ಲೈನ್ ಕಿರುಕುಳವನ್ನು ತಡೆಯಲು ಕಟ್ಟುನಿಟ್ಟಾದ ಸೈಬರ್ ನೀತಿಗಳನ್ನು ಜಾರಿಗೊಳಿಸಬೇಕು. ಮಕ್ಕಳ ಆನ್‌ಲೈನ್ ವರ್ತನೆಯನ್ನೂ ಗಮನಿಸಬೇಕು. ಮಕ್ಕಳ ಮೇಲೆ ಶೋಷಣೆಯಾಗದಂತೆ ಎಚ್ಚರವಹಿಸಬೇಕು. ಈ ಅಂಶವು ವಿದ್ಯಾರ್ಥಿಗಳ ಆತ್ಮಹತ್ಯೆಯ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ.
5) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸಂದೇಶಗಳ ಮೇಲೆಯೇ ಕಣ್ಗಾವಲು ಬೇಕು. ಆನ್‌ಲೈನ್ ಬೆದರಿಸುವಿಕೆಯಿಂದ ಪಾರಾಗುವುದು ಹೇಗೆ ಎಂಬ ಶಿಕ್ಷಣವನ್ನು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ನೀಡಬೇಕು.
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.