ಮಳೆಗಾಲದಲ್ಲಿ ದಿನವಿಡಿ ಆಕ್ಟಿವ್ ಆಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಿ
ಮಳೆಗಾಲದಲ್ಲಿ ಮೋಡ ಕವಿದ ತಣ್ಣನೆಯ ವಾತಾವರಣವಿರುವ ಕಾರಣ ಬೆಳಿಗ್ಗೆ ಎದ್ದಾಗಿನಿಂದ ದಿನವಿಡೀ ಆಲಸ್ಯ ಕಾಡುವುದು ಸಹಜ. ಮಳೆಗಾಲದಲ್ಲಿ ನಮ್ಮ ದಿನವನ್ನು ಕ್ರಿಯಾಶೀಲವನ್ನಾಗಿರಿಸುವುದು ನಿಜಕ್ಕೂ ಸವಾಲು. ನಿಮಗೂ ಹಾಗೇ ಆಗುತ್ತಿದ್ದರೆ ನೀವು ಈ 3 ಯೋಗಭಂಗಿಗಳನ್ನ ಅಭ್ಯಾಸ ಮಾಡಿ. ಇದರಿಂದ ದೈಹಿಕವಾಗಿ ಫಿಟ್ ಆಗಿರುವ ಜೊತೆಗೆ ದಿನವಿಡೀ ಆಕ್ಟಿವ್ ಆಗಿರಬಹುದು.

ಬಿಸಿಲ ಬೇಗೆಯಿಂದ ಬೇಸತ್ತ ಜನರು ಮಳೆರಾಯನಿಗಾಗಿ ಕಾಯುವುದು ಸಹಜ. ಮಳೆ ಬಂದಾಗ ಭೂಮಿಗೆ ಮಾತ್ರವಲ್ಲ, ನಮ್ಮೊಡಲಿಗೂ ತಂಪಾಗುತ್ತದೆ. ಈ ಮೈ ಮನ ತಣಿಸುವ ಮಳೆಗಾಲ ನಮ್ಮನ್ನು ಆಲಸಿಗಳನ್ನಾಗಿಯೂ ಮಾಡುತ್ತದೆ. ಮಳೆಗಾಲದಲ್ಲಿ ಆಕ್ಟಿವ್ ಆಗಿರುವುದು ನಿಜಕ್ಕೂ ಸವಾಲು. ಇದರೊಂದಿಗೆ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಮಳೆ ಸುರಿಯುತ್ತಿರುವಾಗ ಬೆಳಿಗ್ಗೆ ಬೇಗ ಎದ್ದೇಳುವುದು ಕಷ್ಟವಾಗಿ ಬಿಡುತ್ತದೆ. ಆಮೇಲೆ ದಿನವಿಡೀ ಮಂಕಾಗಿ ಇರುತ್ತೇವೆ. ಹಾಗಾದ್ರೆ ಮಳೆಗಾಲದಲ್ಲಿ ಮಂಕಾದ ಭಾವನೆಯನ್ನು ತೊಡೆದು ಹಾಕಿ ಸಕ್ರಿಯರಾಗಿರುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಪರಿಹಾರ.
ಪ್ರಸಿದ್ಧ ಯೋಗ ತರಬೇತುದಾರರಾದ ಅಂಶುಕಾ ಪರ್ವಾನಿ ಅವರು ಸೂಚಿಸಿದ ಈ 3 ಯೋಗ ಭಂಗಿಗಳನ್ನು ಪ್ರಯತ್ನಿಸಿ. ಈ ವ್ಯಾಯಾಮಗಳು ನಿಮ್ಮನ್ನು ಆಕ್ಟಿವ್ ಆಗಿರಿಸುವುದು ಮಾತ್ರವಲ್ಲ ಫಿಟ್ ಆಗಿ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ. ಈ ಸರಳ ಆಸನಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನ ಬಲಗೊಳಿಸಿ, ರಕ್ತಪರಿಚಲನೆ ಸುಧಾರಿಸಲು ನೆರವಾಗುತ್ತವೆ. ಆ ವ್ಯಾಯಾಮಗಳು ಯಾವುವು ಅದರ ಪ್ರಯೋಜನಗಳೇನು ತಿಳಿಯಿರಿ.
ಕಪಾಲಭಾತಿ ಪ್ರಾಣಾಯಾಮ
ಕಪಾಲಭಾತಿ ಪ್ರಾಣಾಯಾಮವು ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವಾಗಿದೆ. ಇದೊಂದು ಪವರ್‌ಫುಲ್ ಉಸಿರಾಟ ತಂತ್ರವಾಗಿದ್ದು, ಅದು ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುತ್ತದೆ. ಕ್ರಮೇಣ ಸ್ಥಿರ ಮತ್ತು ಲಯಬದ್ಧ ಉಸಿರಾಟದ ಮಾದರಿಯನ್ನು ಅನುಕರಣೆ ಮಾಡಿದಂತೆ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವ ಪ್ರಮುಖ ಅಂಶವಾದ ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಈ ಪ್ರಾಣಾಯಾಮವು ಶ್ವಾಸಕೋಶದಿಂದ ಕಶ್ಮಲ ಗಾಳಿಯನ್ನು ಹೊರ ಹಾಕಿ ರಕ್ತ ಶುದ್ದಿಯಾಗಲು ನೆರವಾಗುತ್ತದೆ.
ಕಪಾಲಭಾತಿ ಪ್ರಾಣಾಯಾಮ ಮಾಡಲು ಟಿಪ್ಸ್
ಚಕ್ಕಳ ಮಕ್ಕಳ ಹಾಕಿ ನೇರವಾಗಿ ಕುಳಿತುಕೊಳ್ಳಿ. ನಿಮಗೆ ಇಷ್ಟವಾದ ಮುದ್ರೆಯನ್ನ ಮಾಡಿ ಕೈಗಳನ್ನು ಮೊಣಕಾಲಿನ ಮೇಲೆ ಇಡಿ. ಹೊಟ್ಟೆಯನ್ನು ಒಳಗೆ ಎಳೆದುಕೊಂಡು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಹೊಟ್ಟೆಯನ್ನು ಹೊರಗೆ ಬಿಡುವಾಗ ಉಸಿರು ಹೊರಗೆ ಬಿಡಿ. ಇದನ್ನು 20 ರಿಂದ 25 ಬಾರಿ ಮಾಡಿ. ನಂತರ ನಿಮ್ಮ ವೇಗವನ್ನು ಹೆಚ್ಚಿಸಿಕೊಳ್ಳಿ.
ನಾಡಿ ಶೋಧನ ಪ್ರಾಣಾಯಾಮ
ನಾಡಿ ಶೋಧನ ಪ್ರಾಣಾಯಾಮವು ಮೆದುಳಿನ ಎಡ ಮತ್ತು ಬಲ ಅರ್ಧಗೋಳಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಅತ್ಯಗತ್ಯ ಉಸಿರಾಟದ ತಂತ್ರವಾಗಿದೆ. ಈ ಪ್ರಾಣಾಯಾಮವು ನಿಮ್ಮ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸ್ಪರ್ಶಿಸುತ್ತದೆ, ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ. ನಿಮ್ಮ ಮೂಗು ಮತ್ತು ಸೈನಸ್‌ಗಳು ಬ್ಲಾಕ್ ಆಗುವ ಸಾಧ್ಯತೆಯಿರುವಾಗ ಈ ಪ್ರಾಣಾಯಾಮವು ಮಾನ್ಸೂನ್‌ಗೆ ಅತ್ಯುತ್ತಮವಾಗಿದೆ.
ನಾಡಿ ಶೋಧನ ಪ್ರಾಣಾಯಾಮ ಮಾಡುವುದು
* ಚಕ್ಕಳ ಮಕ್ಕಳ ಹಾಕಿ ಬೆನ್ನುಮೂಳೆಯನ್ನು ನೇರವಾಗಿ ಇರಿಸಿ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ.
* ನಿಮ್ಮ ಬಲ ಹೆಬ್ಬೆರಳಿನಿಂದ ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡ ಮೂಗಿನ ಹೊಳ್ಳೆಯ ಮೂಲಕ ಆಳವಾಗಿ ಉಸಿರಾಡಿ.
* ಈಗ, ನಿಮ್ಮ ಬಲ ಉಂಗುರದ ಬೆರಳಿನಿಂದ ನಿಮ್ಮ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ, ಬಲ ಮೂಗಿನ ಹೊಳ್ಳೆಯನ್ನು ಬಿಡುಗಡೆ ಮಾಡಿ ಹಾಗೂ ಉಸಿರನ್ನು ಹೊರಬಿಡಿ.
* ಬಲ ಮೂಗಿನ ಹೊಳ್ಳೆಯ ಮೂಲಕ ಆಳವಾಗಿ ಉಸಿರಾಡಿ.
* ಬಲ ಮೂಗಿನ ಹೊಳ್ಳೆಯನ್ನು ಮತ್ತೆ ಮುಚ್ಚಿ, ಎಡ ಮೂಗಿನ ಹೊಳ್ಳೆಯನ್ನು ಬಿಡುಗಡೆ ಮಾಡಿ
* ಆರಂಭದಲ್ಲಿ ಸ್ವಲ್ಪ ಸ್ವಲ್ಪ ಮಾಡಿ ನಂತರ ಈ ಕ್ರಮವನ್ನು ಹೆಚ್ಚಿಸಿ.
ಅಧೋ ಮುಖ ಶ್ವಾನಾಸನ
ಅಧೋ ಮುಖ ಶ್ವಾನಾಸನವು ಪುನರ್ಯೌವನಗೊಳಿಸುವ ಯೋಗ ಭಂಗಿಯಾಗಿದ್ದು ಅದು ಇಡೀ ದೇಹವನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ, ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ, ಇದು ಮಾನ್ಸೂನ್ ಸಮಯದಲ್ಲಿ ಸಕ್ರಿಯವಾಗಿರಲು ಅತ್ಯುತ್ತಮ ಆಯ್ಕೆಯಾಗಿದೆ. ಮೆದುಳಿಗೆ ರಕ್ತದ ಹರಿವು ತಲೆನೋವು ಮತ್ತು ಮನಸ್ಸು ಮಂಕಾಗಿರುವುದನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಧೋ ಮುಖ ಶ್ವಾನಾಸನ ಮಾಡುವುದು
* ಮೊದಲು ನೇರವಾಗಿ ನಿಂತುಕೊಂಡು ಕೈಗಳನ್ನು ಮುಂದಕ್ಕೆ ಚಾಚಿ.
* ನಿಮ್ಮ ದೇಹ 60 ಡಿಗ್ರಿ ಕೋನದಲ್ಲಿ ನೆಲಕ್ಕೆ ಬಾಗಿರಲಿ. ಪಾದಗಳು ಹಾಗೂ ಅಂಗೈ ನೆಲಕ್ಕೆ ತಾಕಿರಲಿ.
* ನಿಮ್ಮ ಕುಳಿತುಕೊಳ್ಳುವ ಮೂಳೆಗಳನ್ನು ಸೀಲಿಂಗ್ ಕಡೆಗೆ ಎತ್ತಿ, ನಿಮ್ಮ ಬೆನ್ನುಮೂಳೆಯನ್ನು ಉದ್ದಗೊಳಿಸಿ.
* 5 ನಿಮಿಷಗಳ ಕಾಲ ಉಸಿರನ್ನು ಒಳಗೆ ಎಳೆದುಕೊಳ್ಳಿ, ನಂತರ ಹೊರಗೆ ಬಿಡಿ. ಈ ವ್ಯಾಯಾಮವು ದೇಹದಲ್ಲಿನ ವಿಷಾಂಶ ಹೊರ ಹೋಗಲು ಸಹಾಯ ಮಾಡುತ್ತದೆ.
ಮಾನ್ಸೂನ್ ಋತುವಿನಲ್ಲಿ ಫಿಟ್‌ನೆಸ್ ದಿನಚರಿಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದರೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ನೀಡಬೇಕು. ಈ ಮಳೆಗಾಲದ ಉದ್ದಕ್ಕೂ ನಿಮ್ಮನ್ನು ಸಕ್ರಿಯವಾಗಿ ಮತ್ತು ಶಕ್ತಿಯುತವಾಗಿರಿಸಲು ಈ 3 ಯೋಗಾಸನಗಳು ನಿಮಗೆ ಸಹಾಯ ಮಾಡುತ್ತವೆ. ಇವು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ.
