ಹಸಿವಾದಾಗೆಲ್ಲ ವಿಪರೀತ ಕೋಪ ಬರೋದ್ಯಾಕೆ? ಹಸಿವಿನ ಹಿಂದಿನ ಕೋಪಕ್ಕಿರುವ ವೈಜ್ಞಾನಿಕ ಕಾರಣವಿದು
ಹಸಿವಾಗುವುದು ಮಾನವ ಸಹಜ ಪ್ರಕ್ರಿಯೆ. ಆದರೆ ಬಹುತೇಕರಿಗೆ ಹಸಿವು ಮಿತಿ ಮೀರುತ್ತಿದ್ದಂತೆಯೇ ತಡೆಯಲಾರದ ಕೋಪ ಬರುತ್ತದೆ. ಏಕೆ ಹೀಗಾಗುತ್ತದೆ..? ಹಸಿವಿಗೂ ಕೋಪಕ್ಕೂ ಏನು ಸಂಬಂಧ..? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ತಿಳಿಯಿರಿ.

ಹಸಿವಿಗೂ ನಮ್ಮ ಮೂಡ್‌ಗೂ ಏನೋ ಒಂದು ಸಂಬಂಧ ಇದೆ. ನಾವು ಹೊಟ್ಟೆ ತುಂಬಿದ್ದಾಗ ಒಂದು ರೀತಿ ವರ್ತಿಸಿದರೆ, ಹಸಿವಾಗುವಾಗ ಇನ್ನೊಂದು ರೀತಿ ವರ್ತಿಸುತ್ತೇವೆ. ಏಕೆ ಹೀಗಾಗುತ್ತದೆ? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇರಬಹುದೇ ಎಂದು ನೀವು ಅಂದುಕೊಳ್ಳಬಹುದು. ಜೊತೆಗೆ ನಾವು ಯಾವುದೋ ಒತ್ತಡಕ್ಕೆ ಒಳಗಾದಾಗ ಅತಿಯಾಗಿ ತಿನ್ನುತ್ತೇವೆ, ಕೆಲವರು ಒತ್ತಡ ಹೆಚ್ಚಾದಾಗ ಏನನ್ನೂ ತಿನ್ನುವುದಿಲ್ಲ. ಈ ರೀತಿ ಎಲ್ಲ ಯಾಕಾಗುತ್ತದೆ? ಎಂಬ ಯೋಚನೆ ನಿಮ್ಮ ತಲೆಯಲ್ಲೂ ಮೂಡಬಹುದು.
ಇದನ್ನೆಲ್ಲ ನೋಡುತ್ತಿದ್ದರೆ ನಾವು ಸೇವಿಸುವ ಆಹಾರವು ನಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
ಉದಾಹರಣೆಗೆ ನಾವೀಗ ವಿವಿಧ ಹಣ್ಣು, ತರಕಾರಿಗಳು, ಧಾನ್ಯಗಳು ಹಾಗೂ ಪ್ರೊಟೀನ್‌ಗಳನ್ನು ಸೇವನೆ ಮಾಡಿದರೆ ಇವುಗಳು ನಮ್ಮ ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಮನಸ್ಥಿತಿ ಉತ್ತಮವಾಗಿರಲು ಕೊಡುಗೆ ನೀಡುತ್ತದೆ. ಇನ್ನು ಅತಿಯಾಗಿ ಸಂಸ್ಕರಿಸಿದ ಆಹಾರಗಳು ನಮ್ಮಲ್ಲಿ ಖಿನ್ನತೆ ಹಾಗೂ ಆತಂಕದ ಭಾವನೆಗಳನ್ನು ಹೆಚ್ಚಿಸುತ್ತವೆ.
ಹಸಿವಿಗೂ ಕೋಪಕ್ಕೂ ಇರುವ ಸಂಬಂಧ
ನಮ್ಮ ಭಾವನೆಗಳು ಹಾಗೂ ಆಹಾರದ ನಡುವಿನ ಸಂಬಂಧ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಿಮಗೆ ಹಸಿವಾಗಿದ್ದಾಗ ಸರಿಯಾಗಿ ಆಹಾರ ಸಿಗದೇ ಹೋದಲ್ಲಿ ಕೂಡ ನಿಮಗೆ ತಿಳಿಯದಂತೆ ಕೋಪ ಬರಬಹುದು.
ಎಂದಾದರೂ ನಿಮಗೆ ಹಠಾತ್ ಕೋಪ ಬಂದು ನಿಮ್ಮ ಸುತ್ತಮುತ್ತಲೂ ಇದ್ದವರ ಮೇಲೆಲ್ಲ ನಿಮ್ಮ ಕೋಪವನ್ನು ಹೊರಹಾಕಿ ಬಳಿಕ ಅದಕ್ಕೆ ಹಸಿವು ಕಾರಣ ಇರಬಹುದು ಎಂಬ ಅನುಭವ ನಿಮಗಾಗಿದ್ಯಾ? ಈ ರೀತಿಯ ಅನುಭವ ನಿಮಗೂ ಆಗಿದ್ದರೆ ಇದನ್ನೆ ಹಸಿವಿನ ಕೋಪ ಎಂದು ಕರೆಯಬಹುದು.
ಇದೇ ಸಿದ್ಧಾಂತವನ್ನು ಇಟ್ಟುಕೊಂಡು ಸ್ನಿಕ್ಕರ್ ಎಂಬ ಚಾಕಲೇಟ್ ಕಂಪನಿಯು 2012ರಲ್ಲಿ ಜಾಹೀರಾತು ಪ್ರಸಾರ ಮಾಡಿದ್ದು ನಿಮಗೆ ನೆನಪಿದ್ದಿರಬಹುದು. ಹಸಿವಾದಾಗ ನೀನು ನೀನಾಗಿರುವುದಿಲ್ಲ ಎಂಬ ಸಾಲನ್ನು ಇಟ್ಟುಕೊಂಡು ಈ ಜಾಹೀರಾತು ಪ್ರಸಾರಗೊಂಡಿತ್ತು. ಹಸಿವು ಎನ್ನುವುದು ಎಂಥಾ ಉತ್ತಮರನ್ನೂ ಬದಲಾಯಿಸಿಬಿಡುತ್ತದೆ ಎಂದೂ ಈ ಜಾಹೀರಾತಿನಲ್ಲಿ ಹೇಳಲಾಗಿತ್ತು.
ಆರೋಗ್ಯ ತಜ್ಞರು ಹೇಳುವ ಪ್ರಕಾರ ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿತಗೊಳ್ಳುವ ಕಾರಣ ಉಂಟಾಗುವ ಒಂದು ಸಾಮಾನ್ಯ ಭಾವವಾಗಿದೆ. ಇದು ಮೆದುಳಿನ ಕಾರ್ಯ ಹಾಗೂ ಭಾವನೆಗಳ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸುತ್ತಮುತ್ತ ಇರುವವರನ್ನು ನೋಡಿದರೆ ಕಿರಿಕಿರಿ ಹಾಗೂ ಹಠಾತ್ ಕೋಪ ಬರುತ್ತದೆ. ಇದೊಂದು ತಾತ್ಕಾಲಿಕ ಭಾವನೆಯಾಗಿದ್ದು ಮೆದುಳು ಕೇಳಿದ ಶಕ್ತಿಯ ಬೇಡಿಕೆಯನ್ನು ಪೂರೈಸದೇ ಇದ್ದಾಗ ಇಂಥಾ ಭಾವನೆಗಳು ಕಾಣಿಸಿಕೊಳ್ಳುತ್ತದೆ.
ಹಾರ್ಮೋನ್‌ಗಳ ಪರಿಣಾಮ
ಡೆಹರಾಡೂನ್‌ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಡಾ. ಅಂಕಿತಾ ಪ್ರಿಯದರ್ಶಿನಿ ಈ ವಿಚಾರವಾಗಿ ಮಾಹಿತಿ ನೀಡಿದ್ದು ಹಸಿವಾದಾಗ ಏಕೆ ಹೀಗಾಗುತ್ತದೆ ಎಂಬ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾವು ಸರಿಯಾದ ಸಮಯಕ್ಕೆ ತಿನ್ನದೇ ಇದ್ದಾಗ ನಮ್ಮ ದೇಹವು ಗ್ರೆಲಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ಮೆದುಳಿಗೆ ತಿನ್ನುವ ಸಮಯ ಎಂಬ ಸಂಕೇತವನ್ನು ರವಾನಿಸುತ್ತದೆ. ನಾವು ಈ ಸಂಕೇತವನ್ನು ನಿರ್ಲಕ್ಷ್ಯ ಮಾಡಿದರೆ ಕಾರ್ಟಿಸೋಲ್ ಹಾರ್ಮೋನ್‌ಳು ಒತ್ತಡ ಹೇರಲು ಆರಂಭಿಸುತ್ತವೆ. ಈ ಸಂದರ್ಭದಲ್ಲಿ ನಮಗೆ ಕಿರಿಕಿರಿ ಉಂಟಾಗುತ್ತದೆ.
ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದಾಗ, ಶಕ್ತಿಗಾಗಿ ಗ್ಲುಕೋಸ್‌ನ ಮೇಲೆ ಹೆಚ್ಚು ಅವಲಂಬಿತವಾಗಿರುವ ನಮ್ಮ ಮೆದುಳು ಒದ್ದಾಡಲು ಆರಂಭಿಸುತ್ತದೆ. ಆಗಲೇ ನಮಗೆ ಕಿರಿಕಿರಿ ಆಗಲು ಶುರುವಾಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಕಾರ್ಟಿಸೋಲ್ ಹಾಗೂ ಅಡ್ರಿನಾಲಿನ್ ಉತ್ಪಾದನೆ ಹೆಚ್ಚಿಸುತ್ತದೆ. ಇವು ಎರಡೂ ಹಾರ್ಮೋನ್‌ಗಳು ಒತ್ತಡವನ್ನು ಹೆಚ್ಚಿಸುವ ಹಾರ್ಮೋನ್‌ಗಳಾಗಿವೆ.
ಇನ್ನು ದೀರ್ಘಕಾಲದವರೆಗೆ ಹಸಿವನ್ನು ತಡೆದುಕೊಳ್ಳುವುದರಿಂದ ಸಿರೊಟೋನಿನ್ ಮಟ್ಟ ಕಡಿಮೆಯಾಗುತ್ತದೆ. ನಮ್ಮ ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್‌ಗಳು ಬಿಡುಗಡೆಯಾಗುವ ಪ್ರಮಾಣ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಸಿರೋಟಿನಿನ್ ಮಟ್ಟದ ಕುಸಿತ ಕೂಡ ಕಿರಿಕಿರಿ ಭಾವನೆ ಹೆಚ್ಚಳವಾಗಲು ಕಾರಣವಾಗುತ್ತದೆ.
ಹಾಗಾದರೆ ಹಸಿವಾದ ಪ್ರತಿಯೊಬ್ಬರೂ ಈ ರೀತಿ ಕೋಪಕ್ಕೆ ಒಳಗಾಗುತ್ತಾರಾ ಎಂದು ಕೇಳಿದರೆ ಇದಕ್ಕುತ್ತರ ಇಲ್ಲ ಎಂದು ಹೇಳಬಹುದು. ಇದು ಹಾರ್ಮೋನ್‌ಗಳ ಏರಿಳಿತದಿಂದ ಕಂಡುಬರುವ ಸಮಸ್ಯೆಯಾಗಿರುವುದರಿಂದ ಎಲ್ಲರಲ್ಲಿಯೂ ಈ ಭಾವನೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಹಸಿವಿನ ಕೋಪದಿಂದ ಪಾರಾಗುವುದು ಹೇಗೆ..?
ಹಸಿವು ಮತ್ತು ಕೋಪದ ಸಮ್ಮಿಲನದಿಂದ ಉಂಟಾಗುವ ಭಾವನೆಗಳ ಚಂಡಮಾರುತವು ನೀವು ಏನನ್ನಾದರೂ ತಿನ್ನುತ್ತಿದ್ದಂತೆಯೇ ಶಾಂತವಾಗಿಬಿಡುತ್ತದೆ. ಹೀಗಾಗಿ ನೀವು ಹಸಿದಾಗ ಇನ್ನೊಬ್ಬರ ಮೇಲೆ ಕೋಪ ಹೊರಹಾಕುವ ಮುನ್ನ ನನಗೆ ಬರುತ್ತಿರುವ ಕೋಪಕ್ಕೂ ನನ್ನ ಸುತ್ತಮುತ್ತಲೂ ಇರುವವರು ಕಾರಣರಲ್ಲ ಎಂಬುದನ್ನು ನಿಮಗೆ ನೀವೇ ಮನದಟ್ಟು ಮಾಡಿಕೊಳ್ಳಬೇಕು. ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲ್ಲ ಎನ್ನುವವರು ತಮ್ಮ ಜೊತೆಯಲ್ಲಿ ಕನಿಷ್ಠ ಒಂದು ಚಾಕಲೇಟ್ ಆದರೂ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹಣ್ಣು, ಡ್ರೈಫ್ರೂಟ್ಸ್ ಹೀಗೇ ಏನು ಬೇಕಿದ್ದರು ಇಟ್ಟುಕೊಳ್ಳಬಹುದು. ಇದು ತಕ್ಷಣಕ್ಕೆ ನಿಮ್ಮ ಹಸಿವನ್ನು ಕಡಿಮೆಮಾಡಿ ಶಾಂತವಾಗಿರುವಂತೆ ಮಾಡುತ್ತದೆ.
