ಝೆರೋದಾ ಸಿಇಒ ನಿತಿನ್ ಕಾಮತ್‌ಗೆ ಲಘು ಪಾರ್ಶ್ವವಾಯು; ಹೈದರಾಬಾದ್ ಡಾಕ್ಟರ್ ಸುಧೀರ್ ಕುಮಾರ್ ಕೊಟ್ರು 5 ಕಾರಣ
ಝೆರೋದಾ ಸಿಇಒ ನಿತಿನ್ ಕಾಮತ್‌ಗೆ ಲಘು ಪಾರ್ಶ್ವವಾಯುವಾಗಿರುವ ವಿಚಾರ ಸೋಮವಾರ ಬಹಿರಂಗವಾಗಿದೆ. ಅವರೇ ಸ್ವತಃ ಈ ವಿಚಾರ ಹೇಳಿದ್ದು, ಸಂಭವನೀಯ ಕಾರಣಗಳನ್ನೂ ವಿವರಿಸಿದ್ದರು. ಇದನ್ನು ಪ್ರಶಂಸಿಸಿರುವ ಹೈದರಾಬಾದ್ ಡಾಕ್ಟರ್ ಸುಧೀರ್ ಕುಮಾರ್ 5 ಕಾರಣಗಳನ್ನು ಖಚಿತಪಡಿಸಿದ್ದಾರೆ. ಅವು ಯಾವುವು.
ಆರು ವಾರಗಳ ಹಿಂದೆ ಲಘು ಪಾರ್ಶ್ವವಾಯು ಉಂಟಾಗಿತ್ತು ಎಂದು ಝೆರೋಧಾ ಸಿಇಒ ನಿತಿನ್ ಕಾಮತ್ ಅವರು ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದರು. ಅದರ ಹಿಂದಿನ ಸಂಭವನೀಯ ಕಾರಣಗಳನ್ನೂ ಅದರಲ್ಲಿ ಉಲ್ಲೇಖಿಸಿದ್ದಾರೆ. ಇದು ವೈರಲ್ ಆಗಿದ್ದು, ಅಶ್ನೀರ್ ಗ್ರೋವರ್, ಕಿರಣ್ ಮಜುಂದಾರ್-ಶಾ, ದೀಪಕ್ ಶೆಣೈ ಮತ್ತು ನಿಲೇಶ್ ಸಾಹ್ ಸೇರಿ ಹಲವರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.
ಇವುಗಳ ನಡುವೆ, ಎಕ್ಸ್‌ನಲ್ಲಿ ಹೈದರಾಬಾದ್ ಡಾಕ್ಟರ್ ಎಂಬ ಹ್ಯಾಂಡಲ್ ಹೊಂದಿರುವ ಡಾ. ಸುಧೀರ್ ಕುಮಾರ್ ಅವರು ನಿತಿನ್ ಕಾಮತ್ ಅವರ ಪೋಸ್ಟ್ ಅನ್ನು ರೀ ಟ್ವೀಟ್ ಮಾಡಿ, ಲಘು ಪಾರ್ಶ್ವವಾಯುವಿಗೆ ಸಂಭವನೀಯ ಕಾರಣಗಳನ್ನು ಸರಿಯಾಗಿ ಗುರುತಿಸಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾ.ಸುಧೀರ್ ಕುಮಾರ್ ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ. ಅವರು ಎಕ್ಸ್ ಪೋಸ್ಟ್‌ನಲ್ಲಿ ನಿತಿನ್ ಅವರು ಕೊಟ್ಟ ಕಾರಣಗಳನ್ನೇ ವೈದ್ಯಕೀಯ ಭಾಷೆಯಲ್ಲಿ ಉಲ್ಲೇಖಿಸಿದ್ದಾರೆ.
ತಂದೆ ತೀರಿಹೋಗುವುದು, ಕಳಪೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ-ಇವುಗಳಲ್ಲಿ ಯಾವುದಾದರೂ ಸಂಭವನೀಯ ಕಾರಣಗಳಾಗಿರಬಹುದು ಎಂದು ನಿತಿನ್ ಕಾಮತ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಈಗಾಗಲೇ ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಟ್ವೀಟ್ ಮಾಡಿರುವ ನಿತಿನ್ ಕಾಮತ್, ಪಾರ್ಶ್ವವಾಯುವಿನ ನಂತರ, ಮುಖದ ಸ್ನಾಯುಗಳ ಸಮಸ್ಯೆ ಕಾರಣ ಓದಲು, ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಇದರಲ್ಲೂ ಚೇತರಿಕೆ ಸಾಧ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಸಂಪೂರ್ಣ ಗುಣಮುಖರಾಗಲು 3 ರಿಂದ 6 ತಿಂಗಳು ಬೇಕಾಗಬಹುದು ಎಂದು ಬರೆದಿದ್ದಾರೆ.
ನಿತಿನ್ ಕಾಮತ್ ಉಲ್ಲೇಖಿಸಿದ 5 ಕಾರಣಗಳನ್ನು ದೃಢೀಕರಿಸಿದ ಹೈದರಾಬಾದ್ ಡಾಕ್ಟರ್ ಸುಧೀರ್ ಕುಮಾರ್
ನಿತಿನ್ ಅವರು ಉಲ್ಲೇಖಿಸಿದ ಕಾರಣಗಳು, ಸಲಹೆಗಳು ಬಹಳ ಉಪಯುಕ್ತ. 44 ವರ್ಷ ವಯಸ್ಸಿನಲ್ಲಿ ಅತ್ಯಂತ ಆರೋಗ್ಯವಂತರಾಗಿರುವ ನಿತಿನ್ ಕಾಮತ್ ಅವರು ಲಘು ಪಾರ್ಶ್ವವಾಯುವಿಗೆ ಒಳಗಾದರು. ಆದರೆ ಅವರು ಶೀಘ್ರ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಂತೋಷದ ವಿಚಾರ. ಅವರು ಬಹುಬೇಗ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹೈದರಾಬಾದ್ ಡಾಕ್ಟರ್ ಸುಧೀರ್ ಕುಮಾರ್ ತಮ್ಮ ಟ್ವೀಟ್ ಶುರುಮಾಡಿದ್ದಾರೆ.
ಲಘು ಪಾರ್ಶ್ವವಾಯುವಿಗೆ ನಿತಿನ್ ಕಾಮತ್ ಅವರು ಕೊಟ್ಟ ಕಾರಣಗಳನ್ನು ಹೈದರಾಬಾದ್ ಡಾಕ್ಟರ್ ದೃಢೀಕರಿಸಿದ್ದಾರೆ. ಆ 5 ಕಾರಣಗಳಿವು
1 ಒತ್ತಡ (ತಂದೆಯನ್ನು ಕಳೆದುಕೊಳ್ಳುವುದು)
2 ನಿದ್ರಾಹೀನತೆ
3 ಅತಿಯಾದ ವ್ಯಾಯಾಮ (ಅತಿಯಾಗಿ ಕೆಲಸ ಮಾಡುವುದು)
4 ನಿಶ್ಯಕ್ತಿ (ಕೆಲಸದ ಬದ್ಧತೆಗಳು ಮತ್ತು ವ್ಯಾಯಾಮಗಳಿಗೆ ಸಂಬಂಧಿಸಿದೆ)
5 ನಿರ್ಜಲೀಕರಣ.
ಲಘು ಪಾರ್ಶ್ವವಾಯು ತಪ್ಪಿಸಲು ಡಾಕ್ಟರ್ ನೀಡಿರುವ ಸಲಹೆಗಳೇನು
ಐದು ಕಾರಣಗಳನ್ನು ದೃಢೀಕರಿಸಿದ ಹೈದರಾಬಾದ್ ಡಾಕ್ಟರ್, "ಆದ್ದರಿಂದ, ಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ (ಮತ್ತು ಅತಿಯಾದ ವ್ಯಾಯಾಮವಲ್ಲ). ಸಾಕಷ್ಟು ನಿದ್ರೆಯನ್ನು ಖಚಿತಪಡಿಸಿಕೊಳ್ಳುವುದು. ಕೆಲಸವನ್ನು ಕಡಿಮೆ ಮಾಡುವುದು (ಅತಿಯಾಗಿ ಕೆಲಸ ಮಾಡುತ್ತಿದ್ದರೆ), ವ್ಯಾಯಾಮ ಮಾಡಬೇಕು. ಫಿಟ್ ಆಗಿರುವುದು ಒಳ್ಳೆಯದು. ನಿತಿನ್ ಕಾಮತ್ ಪಾರ್ಶ್ವವಾಯುದಿಂದ ಬಳಲುತ್ತಿದ್ದರೂ, ಅದು ಸೌಮ್ಯವಾಗಿತ್ತು ಮತ್ತು ಅವರು ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದಾರೆ" ಎಂದು ಬರೆದಿದ್ದಾರೆ.
ಲಘು ಪಾರ್ಶ್ವವಾಯು ಹೇಗೆ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೈದರಾಬಾದ್ ಡಾಕ್ಟರ್, ನಿತಿನ್ ಅವರ ಆರೋಗ್ಯದ ವಿಚಾರಗಳು ನನಗೆ ತಿಳಿದಿಲ್ಲ. ಆದರೆ, ಬ್ರೈನ್ ಸ್ಟ್ರೋಕ್, ಪ್ರಾಯಶಃ ಮೆದುಳಿನ ಎಡಭಾಗಕ್ಕೆ ರಕ್ತ ಪೂರೈಕೆಯ ಅಡಚಣೆಯಿಂದಾಗಿ (ಶ್ರೀ ನಿತಿನ್ ಕಾಮತ್ ವರದಿ ಮಾಡಿದ ರೋಗಲಕ್ಷಣಗಳ ಆಧಾರದ ಮೇಲೆ ಒಂದು ಊಹೆ)" ಅವರು ಬರೆದಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)