Hypertension: ಸೈಲೆಂಟ್‌ ಕಿಲ್ಲರ್‌ ಆಗಿ ಬದಲಾಗುತ್ತಿದೆ ಅಧಿಕ ರಕ್ತದೊತ್ತಡ ಸಮಸ್ಯೆ; ಈ ಕುರಿತ ವಿಶ್ವ ಆರೋಗ್ಯ ಸಂಸ್ಥೆ ವರದಿಯ ಸಾರಾಂಶ
ಕನ್ನಡ ಸುದ್ದಿ  /  ಜೀವನಶೈಲಿ  /  Hypertension: ಸೈಲೆಂಟ್‌ ಕಿಲ್ಲರ್‌ ಆಗಿ ಬದಲಾಗುತ್ತಿದೆ ಅಧಿಕ ರಕ್ತದೊತ್ತಡ ಸಮಸ್ಯೆ; ಈ ಕುರಿತ ವಿಶ್ವ ಆರೋಗ್ಯ ಸಂಸ್ಥೆ ವರದಿಯ ಸಾರಾಂಶ

Hypertension: ಸೈಲೆಂಟ್‌ ಕಿಲ್ಲರ್‌ ಆಗಿ ಬದಲಾಗುತ್ತಿದೆ ಅಧಿಕ ರಕ್ತದೊತ್ತಡ ಸಮಸ್ಯೆ; ಈ ಕುರಿತ ವಿಶ್ವ ಆರೋಗ್ಯ ಸಂಸ್ಥೆ ವರದಿಯ ಸಾರಾಂಶ

ಅಧಿಕ ರಕ್ತದೊತ್ತಡ, ಇತ್ತೀಚೆಗೆ ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು. ವಿಶ್ವ ಆರೋಗ್ಯ ಸಂಸ್ಥೆ ಇದೇ ಮೊದಲ ಬಾರಿ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ ಮೂರರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಅಧಿಕ ರಕ್ತದೊತ್ತಡ ಸಮಸ್ಯೆ
ಅಧಿಕ ರಕ್ತದೊತ್ತಡ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡ ಅಗ್ರಸ್ಥಾನದಲ್ಲಿದೆ. ಜೀವನಶೈಲಿಯ ಬದಲಾವಣೆಯೇ ಈ ಸಮಸ್ಯೆ ಹೆಚ್ಚಲು ಮುಖ್ಯ ಕಾರಣ ಎನ್ನಲಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಅಧಿಕ ರಕ್ತದೊತ್ತಡದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಅಲ್ಲದೆ ಇದು ಆರೋಗ್ಯ ತಜ್ಞರ ಕಳವಳಕ್ಕೂ ಕಾರಣವಾಗಿದೆ. ಜಡಜೀವನಶೈಲಿಯು ಖಂಡಿತ ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ದೇಹದ ಮೆಕ್ಯಾನಿಸಂ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಒತ್ತಡವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅತಿಯಾದ ಒತ್ತಡವೂ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟು ಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಬಿಪಿ (ಬ್ಲಡ್‌ ಪ್ರೆಶರ್‌)ಗೆ ಸಂಬಂಧಿಸಿದ ತನ್ನ ಮೊದಲ ವರದಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ 19ರಂದು ನಿಧಾನಕ್ಕೆ ಆವರಿಸುವ ಈ ಮಾರಕ ಕಾಯಿಲೆಗೆ ಕಾರಣವಾಗುವ ಅಂಶಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಡಬ್ಲ್ಯೂಎಚ್‌ಒ ನೀಡಿದ ಮಾರ್ಗಸೂಚಿಗಳು ಹೀಗಿವೆ.

ದೇಹದಲ್ಲಿ ರಕ್ತದೊತ್ತಡವು ಅಸಹಜವಾಗಿ ಅನಪೇಕ್ಷಿತ ಮಟ್ಟಕ್ಕೆ ಏರಿಕೆಯಾದಾಗ ಹೈಪರ್‌ ಟೆನ್‌ಶನ್‌ ಅಥವಾ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ವಿವಿಧ ಮಾರ್ಗಸೂಚಿಗಳ ಪ್ರಕಾರ 130/80 ಎಂಎಂ ಎಚ್‌ಜಿ ಅಥವಾ 140/90 ಎಂಎಂ ಎಚ್‌ಜಿಗಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಇದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ರಕ್ತದೊತ್ತಡದ ಯಾವುದೇ ಗಮನಾರ್ಹ ಲಕ್ಷಣಗಳು ಕಾಣಿಸುವುದಿಲ್ಲ. ಆ ಕಾರಣಕ್ಕೆ ಇದನ್ನು ʼಸೈಲೆಂಟ್‌ ಕಿಲ್ಲರ್‌ʼ ಎಂದು ವ್ಯಾಖ್ಯಾನಿಸಲಾಗಿದೆ.

ಅಧಿಕ ರಕ್ತದೊತ್ತಡದ ಪ್ರಭಾವದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲ ವರದಿ

ಡಬ್ಲ್ಯೂಎಚ್‌ಒ (ವಿಶ್ವ ಆರೋಗ್ಯ ಸಂಸ್ಥೆ) ವರದಿಯ ಪ್ರಕಾರ ವಿಶ್ವದಲ್ಲಿ ಮೂರರಲ್ಲಿ ಒಬ್ಬರು ವಯಸ್ಕರಲ್ಲಿ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಅತಿಯಾದ್ರೆ ಕಿಡ್ನಿ ಡ್ಯಾಮೇಜ್‌, ಹಾರ್ಟ್‌ ಅಟಾಕ್‌ (ಹೃದಯಾಘಾತ), ಹಾರ್ಟ್‌ ಫೆಲ್ಯೂರ್‌ (ಹೃದಯ ಸಂಭ್ತನ) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ವರದಿಯ ಪ್ರಕಾರ ಐದರಲ್ಲಿ ನಾಲ್ಕು ಮಂದಿ ಈ ಸಮಸ್ಸೆಗೆ ಸರಿಯಾಗಿ ಚಿಕಿತ್ಸೆ ಪಡೆಯುವುದಿಲ್ಲ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ಪ್ರಮುಖ ಕಾರಣಗಳು

  • ವಯಸ್ಸು
  • ಅನುವಂಶೀಯತೆ
  • ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇವನೆ
  • ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದೇ ಇರುವುದು
  • ಅತಿಯಾಗಿ ಮಧ್ಯಪಾನ ಮಾಡುವುದು
  • ಅರ್ಧದಷ್ಟು ಜನರಿಗೆ ತಮಗೆ ಇರುವ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ. ಇದು ಸಮಸ್ಯೆಯ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಾಗಬಹುದು.

ಬಿಪಿ ನಿಯಂತ್ರಣಕ್ಕೆ ಜೀವನಶೈಲಿಯ ಬದಲಾವಣೆ

ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಹಾಗೂ ಆರಂಭಿಕ ಹಂತದಲ್ಲೇ ಸರಿಯಾಗಿ ನಿರ್ವಹಣೆ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದರೊಂದಿಗೆ ಇವು ಕೂಡ ನೆರವಿಗೆ ಬರಬಹುದು.

  • ಆರೋಗ್ಯಕರ ಡಯೆಟ್‌ ಕ್ರಮ
  • ಧೂಮಪಾನ ನಿಷೇಧ
  • ದೈಹಿಕವಾಗಿ ಕ್ರಿಯಾಶೀಲರಾಗಿರುವುದು
  • ಕೆಲವರಿಗೆ ಅಧಿಕ ರಕ್ತದೊತ್ತಡ ನಿವಾರಣೆಗೆ ಔಷಧಿ ಅವಶ್ಯ ಇರಬಹುದು. ಇದರಿಂದ ಸಮಸ್ಯೆ ನಿವಾರಣೆ ಸಾಧ್ಯ.

ಅಧಿಕ ರಕ್ತದೊತ್ತಡದ ರೋಗಲಕ್ಷಣಗಳು

  • ತಲೆನೋವು
  • ಮೂಗುಸೋರುವುದು
  • ಉಸಿರಾಟದ ಸಮಸ್ಯೆ
  • ಅನಿಯಂತ್ರಿತ ಹೃದಯ ಬಡಿತ
  • ಎದೆನೋವು

ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆಯಲು ಮರೆಯದಿರಿ. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಈ ಸಮಸ್ಯೆಯನ್ನು ಕಂಡು ಹಿಡಿಯಬಹುದು.