Covid Variant: ದೇಶದಾದ್ಯಂತ ಆತಂಕ ಹುಟ್ಟಿಸಿದೆ ಕೋವಿಡ್‌ ರೂಪಾಂತರಿ ಜೆಎನ್‌.1; ಇದರ ರೋಗಲಕ್ಷಣಗಳು, ತಡೆಗಟ್ಟುವ ಮಾರ್ಗದ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Covid Variant: ದೇಶದಾದ್ಯಂತ ಆತಂಕ ಹುಟ್ಟಿಸಿದೆ ಕೋವಿಡ್‌ ರೂಪಾಂತರಿ ಜೆಎನ್‌.1; ಇದರ ರೋಗಲಕ್ಷಣಗಳು, ತಡೆಗಟ್ಟುವ ಮಾರ್ಗದ ಮಾಹಿತಿ ಇಲ್ಲಿದೆ

Covid Variant: ದೇಶದಾದ್ಯಂತ ಆತಂಕ ಹುಟ್ಟಿಸಿದೆ ಕೋವಿಡ್‌ ರೂಪಾಂತರಿ ಜೆಎನ್‌.1; ಇದರ ರೋಗಲಕ್ಷಣಗಳು, ತಡೆಗಟ್ಟುವ ಮಾರ್ಗದ ಮಾಹಿತಿ ಇಲ್ಲಿದೆ

ಕೋವಿಡ್‌ ಮಹಾಮಾರಿಗೆ ಅಂತ್ಯವೆಂಬುದೇ ಇಲ್ಲ. ಒಂದಿಷ್ಟು ದಿನ ಸದ್ದಡಗಿದ್ದ ಕೋವಿಡ್‌ ಈಗ ಹೊಸ ರೂಪಾಂತರಿಯ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಹೊಸ ರೂಪಾಂತರಿಗೆ ಜೆಎನ್‌.1 ಎಂದು ಹೆಸರಿಸಲಾಗಿದ್ದ, ಇದು ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರ ರೋಗಲಕ್ಷಣಗಳು, ತಡೆಗಟ್ಟುವ ಮಾರ್ಗ ಸೇರಿದಂತೆ ಒಂದಿಷ್ಟು ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

2020ರಿಂದ ಪ್ರಪಂಚದಾದ್ಯಂತ ಕೋವಿಡ್‌ನದ್ದೇ ಸದ್ದು. ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್‌ ಮಾರಕಕ್ಕೆ ಅಂತ್ಯವೆಂಬುದೇ ಇಲ್ಲ ಎಂಬಂತಾಗಿದೆ. ಆಗಾಗ್ಗೆ ಹೊಸ ಹೊಸ ರೂಪಾಂತರಿಗಳ ಮೂಲಕ ಭಯ ಹುಟ್ಟಿಸುತ್ತಿದೆ ಕೋವಿಡ್‌ 19. ಇತ್ತೀಚೆಗಷ್ಟೇ ಪಿರೋಲಾ ವೈರಸ್‌ ಹಲವು ದೇಶಗಳಲ್ಲಿ ಕಾಣಿಸಿತ್ತು. ಇದೀಗ ಅದರ ಉಪತಳಿಯಾದ ಜೆಎನ್‌.1 ಅಮೆರಿಕ, ಚೀನಾ ಹಾಗೂ ಸದ್ಯ ಭಾರತದಲ್ಲೂ ಪತ್ತೆಯಾದ ಸುದ್ದಿ ಇದೆ. ಪಿರೋಲಾ ಅಥವಾ ಬಿಎ.2.86 ಗೆ ಹೋಲಿಸಿದರೆ ಜೆಎನ್‌.1 ಒಂದೇ ರೂಪಾಂತರಿಯನ್ನು ಹೊಂದಿದೆ ಎನ್ನಲಾಗುತ್ತಿದ್ದು, ಇದು ಡಿಸೆಂಬರ್‌ 8 ರಂದು ಕೇರಳದ ತಿರುವಂತನಪುರಂ ಜಿಲ್ಲೆಯ ಕರಕುಲಂನಲ್ಲಿ ಪತ್ತೆಯಾಗಿತ್ತು. ಜೆಎನ್‌.1 ರೂಪಾಂತರಿ ಕೂಡ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಇದು ಹಿಂದಿನ ಓಮಿಕ್ರಾನ್‌ ತಳಿಗಳಿಗಿಂತ ಭಿನ್ನವಾಗಿಲ್ಲ. ಆದರೆ ವಯಸ್ಸಾದವರೂ, ಆರೋಗ್ಯ ಸಮಸ್ಯೆ ಹೊಂದಿರುವ ಜನರು ಇದನ್ನು ತಡೆಗಟ್ಟುವ ಮಾರ್ಗದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಜೆಎನ್‌.1 ಜ್ವರ, ಮೂಗು ಸೋರುವುದು, ಗಂಟಲು ನೋವು, ಗ್ಯಾಸ್ಟ್ರಿಕ್‌ನಂತಹ ರೋಗಲಕ್ಷಣಗಳನ್ನು ಹೊಂದಿದೆ.

ಜೆಎನ್‌.1 ಮೊದಲ ಬಾರಿಗೆ ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ಡಿಸೆಂಬರ್‌ 15ರಂದು ಚೀನಾದಲ್ಲಿ 7 ಪ್ರಕರಣಗಳು ಕಂಡುಬಂದಿದ್ದವು. ಇದು ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು, ಕಳವಳ ವ್ಯಕ್ತವಾಗಿದೆ. ಕೋವಿಡ್‌ 19 ಹಾಗೂ ಇನ್ಫ್ಲುಯೆಂಜಾದ ತಾಜಾ ಪ್ರಕರಣಗಳು ಅಮೆರಿಕದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಎಚ್ಚರಿಕೆ ನೀಡಿತ್ತು. ಇದೀಗ ಕೋವಿಡ್‌ ರೂಪಾಂತರಿ ಜೆಎನ್‌.1 ಹೆಚ್ಚು ವ್ಯಾಪಕವಾಗಿ ಹರಡುತ್ತಿರುವುದನ್ನು ಕಾಣಬಹುದಾಗಿದೆ.

ಭಾರತದಲ್ಲಿ ಕೋವಿಡ್‌ ಜೆಎನ್‌.1 ಪ್ರಕರಣ

ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಜೆಎನ್‌.1 ರೂಪಾಂತರಿ ಕಾಣಿಸಿತ್ತು. 79 ವರ್ಷ ಮಹಿಳೆಯೊಬ್ಬರಲ್ಲಿ ಇದು ಮೊದಲು ಕಾಣಿಸಿತ್ತು. ಇವರು ಸೌಮ್ಯತರದ ರೋಗಲಕ್ಷಣಗಳನ್ನು ಹೊಂದಿದ್ದರು. ಸೌಮ್ಯತರದ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಇನ್ಫ್ಲುಯೆನ್ಸ್‌ ಲೈಕ್‌ ಇಲ್ನೆಸ್‌ ಎಂದು ಕರೆಯಲಾಗುತ್ತದೆ. ಇದು ಮೊದಲು ಕಾಣಿಸಿಕೊಂಡಿದ್ದು ಲಕ್ಸೆಂಬರ್ಗ್‌ನಲ್ಲಿ. ಇದು ಓಮಿಕ್ರಾನ್‌ ಉಪ ರೂಪಾಂತರಿ ಎಂದೂ ಹೇಳಲಾಗುತ್ತಿದೆ. ಜೆಎನ್‌.1 ವ್ಯಾಪಕವಾಗಿ ಹರಡಬಹುದು ಹಾಗೂ ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಜೆಎನ್‌.1 ರೋಗಲಕ್ಷಣಗಳಿವು

ಅಮೆರಿಕದಲ್ಲಿ ಸಮಾರು ಶೇ 15 ರಿಂದ ಶೇ 29 ರಷ್ಟು ಪ್ರಕರಣಗಳು ಸದ್ಯ ವರದಿಯಾಗಿದೆ. ಸೋಂಕು ವ್ಯಾಪಕವಾಗಿ ಹರಡಿದ್ದರೂ ಕೂಡ ಸೌಮ್ಯ ರೋಗಲಕ್ಷಣಗಳ ಕಾರಣ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿಲ್ಲ ಎಂಬ ವರದಿ ಇದೆ. ಆದರೆ ಭಾರತದಲ್ಲಿ ಅಂದರೆ ಕೇರಳದಲ್ಲಿ ಈ ಉಪತಳಿಯ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ, ಮಾತ್ರವಲ್ಲ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ.

ಸದ್ಯ ವರದಿಯಾದ ರೋಗಲಕ್ಷಣಗಳಲ್ಲಿ ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ಕೆಮ್ಮು ಹಾಗೂ ಕೆಲವರಲ್ಲಿ ಸಣ್ಣ ಮಟ್ಟಿಗೆ ಜಠರಗಳುರಿನ ಸಮಸ್ಯೆಯೂ ಕಾಣಿಸಿದೆ.

ಕೋವಿಡ್‌ ರೂಪಾಂತರಿ ಬಾರದಂತೆ ತಡೆಯುವುದು ಬಹಳ ಮುಖ್ಯ. ಒಮ್ಮೆ ರೂಪಾಂತರಿ ದಾಳಿಗೆ ಒಳಗಾದರೆ ಅದರಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದು ಊಹಿಸಲು ಆಗುವುದಿಲ್ಲ. ಆ ಕಾರಣಕ್ಕೆ ತಡೆಗಟ್ಟುವ ಮಾರ್ಗದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗಾಗ್ಗೆ ಕೈ ತೊಳೆಯುವುದು, ಟ್ರಿಪ್ಲಿ ಮಾಸ್ಕ್‌ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಅಗತ್ಯ ಎನ್ನುತ್ತಾರೆ ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್‌ನಲ್‌ ಮೆಡಿಸಿನ್‌ ವಿಭಾಗದ ಮುಖ್ಯ ವ್ಯವಸ್ಥಾಪಕ ಡಾ. ತುಷಾರ್‌ ತಯಾಲ್‌. ಇವರು ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧರಿಸುವುದರ ಜೊತೆಗೆ ಬೂಸ್ಟರ್‌ ಡೋಸ್‌ ಪಡೆಯುವುದು ಬಹಳ ಮುಖ್ಯ ಎಂದು ಡಾ. ತುಷಾರ್‌ ಹೇಳುತ್ತಾರೆ.

ಒಂದೇ ದಿನ 335 ಜನರಲ್ಲಿ ಸೋಂಕು ಪತ್ತೆ; 5 ಬಲಿ

ಜೆಎನ್‌.1 ಕೋವಿಡ್‌ ರೂಪಾಂತರಿಯ ಅಟ್ಟಹಾಸ ಜೋರಾಗಿದ್ದು, ಒಂದೇ ದಿನ 335 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಅಂಶ ವರದಿಯಾಗಿದೆ. ಈ ನಡುವೆ ಹೊಸ ಕೋವಿಡ್‌ ರೂಪಾಂತರಿಗೆ 5 ಮಂದಿ ಬಲಿಯಾಗಿದ್ದಾರೆ. ಕೇರಳ ಹಾಗೂ ಉತ್ತರಪ್ರದೇಶದಲ್ಲಿ ಕೋವಿಡ್‌ ರೂಪಾಂತರಿಯಿಂದ ಸಾವನ್ನಪ್ಪಿರುವುದು ಎನ್ನಲಾಗಿದೆ.

Whats_app_banner