Pregnancy: 35ರ ನಂತರ ಗರ್ಭ ಧರಿಸುವುದು ತಾಯಿಗಷ್ಟೇ ಅಲ್ಲ ಮಗುವಿಗೂ ಅಪಾಯ; ಇದರಿಂದ ಎದುರಾಗುವ ಪ್ರಮುಖ 4 ಸಮಸ್ಯೆಗಳಿವು
ಇತ್ತೀಚೆಗೆ ಹೆಣ್ಣುಮಕ್ಕಳು 35 ವಯಸ್ಸಿನ ನಂತರ ಗರ್ಭ ಧರಿಸುವುದು ಸಾಮಾನ್ಯವಾಗಿದ್ದರೂ ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಕೇವಲ ತಾಯಿಗಷ್ಟೇ ಅಲ್ಲ, ಮಗುವಿನ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. 35ರ ನಂತರ ಗರ್ಭ ಧರಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರ ಇಲ್ಲಿದೆ.
ಇತ್ತೀಚೆಗೆ ಹೆಣ್ಣುಮಕ್ಕಳು ತಡವಾಗಿ ಮದುವೆಯಾಗುವುದು ಹಾಗೂ ತಡವಾಗಿ ಗರ್ಭ ಧರಿಸುವುದು ಸಾಮಾನ್ಯವಾಗಿದೆ. 30ರ ನಂತರ ಮದುವೆ, 35ರ ನಂತರ ಮಗು ಎಂಬ ಪರಿಕಲ್ಪನೆ ಸಹಜವಾಗಿದೆ. ಮಗುವನ್ನು ಹೊಂದಲು ಇಂತಿಷ್ಟೇ ವಯಸ್ಸಾಗಿರಬೇಕು ಎಂಬುದು ಇಲ್ಲದಿದ್ದರೂ ಸೂಕ್ತ ವಯಸ್ಸಿನಲ್ಲಿ ಮಗು ಪಡೆಯುವುದು ಉತ್ತಮ ಎನ್ನುತ್ತಾರೆ. ಆದರೆ ಇತ್ತೀಚೆಗೆ ಹೆಣ್ಣುಮಕ್ಕಳು ವೃತ್ತಿಜೀವನದ ಮೈಲುಗಲ್ಲು ದಾಟುವವರೆಗೆ ಅಥವಾ ಆರ್ಥಿಕ ಸ್ಥಿರತೆ ಸಾಧಿಸುವವರೆಗೆ ತಮ್ಮ ಗರ್ಭಧಾರಣೆಯನ್ನು ಮುಂದೂಡುತ್ತಾರೆ. ಮದುವೆ ಬೇಗ ಆದರೂ ಕೂಡ ಮಗು ಮಾಡಿಕೊಳ್ಳಲು ನಿಧಾನ ಮಾಡುತ್ತಾರೆ.
35 ವರ್ಷದ ನಂತರ ಮಗು ಪಡೆಯುವ ಮಹಿಳೆಯರು ಅಡ್ವಾನ್ಸಡ್ ಮೆಟರ್ನಲ್ ಏಜ್ (ಎಎಂಎ) ಕೆಟಗರಿಗೆ ಸೇರುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ʼ35 ವರ್ಷದ ನಂತರ ಗರ್ಭ ಧರಿಸುವುದು ಹಾಗೂ ಮಗು ಪಡೆಯುವುದು ಇತ್ತೀಚೆಗೆ ಸಹಜ ಪ್ರಕ್ರಿಯೆಯಾದರೂ ಕೂಡ ಇದರಿಂದ ಹಲವು ಅಪಾಯಗಳಿವೆ. ಕಾಲಾನಂತರದಲ್ಲಿ ಹಾರ್ಮೋನ್ ಬದಲಾವಣೆಯು ಅಂಡಾಣುಗಳ ಸಂಗ್ರಹ ಮತ್ತು ಅಂಡಾಣುಗಳ ಗುಣಮಟ್ಟದಲ್ಲಿ ಕೊರತೆ ಉಂಟಾಗಿ ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗಬಹುದುʼ ಎನ್ನುತ್ತಾರೆ ಮುಂಬೈನ ಮುಲುಂದ್‌ನ ಫೋರ್ಟಿಸ್‌ನ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಸಂಗೀತಾ ರೋಡಿಯೊ.
ಅವರ ಪ್ರಕಾರ ಎಎಂಎ ವರ್ಗದ ಮಹಿಳೆ ಮತ್ತು ಮಗು ಎದುರಿಸಬಹುದಾದ ಕೆಲವು ಸಾಮಾನ್ಯ ತೊಂದರೆಗಳು ಹೀಗಿವೆ.
ಬಂಜೆತನ: ಋತುಬಂಧದ ವಯಸ್ಸು ಸಮೀಪಿಸಿದ ಮಹಿಳೆಯರು ಗರ್ಭಿಣಿಯರು ಮಗು ಪಡೆಯಲು ಹೆಚ್ಚು ಸವಾಲು ಎದುರಿಸಬೇಕಾಗಬಹುದು. ಅಲ್ಲದೇ ಗರ್ಭಧರಿಸುವ ಅವಧಿಯು ದೀರ್ಘವಾಗಬಹುದು. ಮಹಿಳೆಯರ ದೇಹದಲ್ಲಿ ನಿಗದಿತ ವಯಸ್ಸಿನಲ್ಲಿ ಅಂಡಾಣುಗಳು ಉತ್ಪತ್ತಿಯಾಗಲು ಪ್ರಾರಂಭವಾಗುತ್ತವೆ. ಕಾಲಾನಂತರದಲ್ಲಿ ಅವುಗಳ ಪ್ರಮಾಣ ಕಡಿಮೆಯಾಗಬಹುದು. ವಯಸ್ಸಾದಂತೆ ಅಂಡಾಣುಗಳ ಗುಣಮಟ್ಟದಲ್ಲಿ ಕಳಪೆಯಾಗಬಹುದು. ಇದರಿಂದ ಫಲವಂತಿಕೆಗೆ ಸಮಸ್ಯೆ ಉಂಟಾಗಬಹುದು.
ಗರ್ಭಪಾತ: ಅಂಡಾಣುವಿನ ಗುಣಮಟ್ಟ ಕಡಿಮೆಯಾದಂತೆ ಗರ್ಭಪಾತದ ಅಪಾಯ ಹೆಚ್ಚುತ್ತದೆ. ಅಲ್ಲದೆ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಸಮಸ್ಯೆ ಹೊಂದಿದ್ದರೆ ಗರ್ಭಾಪಾತವಾಗುವ ಸಾಧ್ಯತೆ ಹೆಚ್ಚು. ಅವಧಿ ಪೂರ್ವ ಹೆರಿಗೆಯಾಗುವ ಸಾಧ್ಯತೆಯೂ ಹೆಚ್ಚು.
ಕ್ರೋಮೊಸೋಮ್ ಸಮಸ್ಯೆಗಳು: 35 ದಾಟಿದ ಮೇಲೆ ಗರ್ಭ ಧರಿಸುವುದರಿಂದ ಹುಟ್ಟುವ ಮಗುವಿನಲ್ಲಿ ಕ್ರೋಮೊಸೋಮ್ ಸಮಸ್ಯೆಗಳನ್ನು ಎದುರಿಸುವ ಅಪಾಯವು ಹೆಚ್ಚಿರುತ್ತದೆ. 35 ವಯಸ್ಸಿನ ನಂತರ ಗರ್ಭ ಧರಿಸುವ 365 ಮಹಿಳೆಯರಲ್ಲಿ ಒಬ್ಬರಿಗೆ ಹುಟ್ಟುವ ಮಗುವಿನಲ್ಲಿ ಡೌನ್ ಸಿಂಡ್ರೋಮ್ ಸಿಂಡ್ರೋಮ್ ಕಾಣಿಸುತ್ತದೆ. 45 ವರ್ಷದ ನಂತರ ಈ ಅಪಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ: 35 ವರ್ಷ ವಯಸ್ಸಿನ ನಂತರ ಗರ್ಭ ಧರಿಸಿದ ಮಹಿಳೆಯು ಗರ್ಭಾವಸ್ಥೆಯಲ್ಲಿರುವಾಗ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಹೊಟ್ಟೆಯಲ್ಲೇ ಅಥವಾ ಹೆರಿಗೆಯ ಸಮಯದಲ್ಲಿ ಮಗು ಸಾಯುವ ಸಾಧ್ಯತೆಯೂ ಹೆಚ್ಚಿರುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ತಾಯಿಯಲ್ಲಿ ಪ್ರಿಕ್ಲಾಂಪ್ಸಿಯಾ ಸಮಸ್ಯೆ ಹಾಗೂ ಮಗುವಿನಲ್ಲಿ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.
ʼ35ರ ನಂತರ ಗರ್ಭ ಧರಿಸುವುದರಿಂದ ಅಧಿಕಪೂರ್ವ ಹೆರಿಗೆ, ತಾಯಿಯಲ್ಲಿ ಕ್ರೋಮೊಸೋಮಲ್ ಅಸಹಜತೆ ಉಂಟಾಗುವುದು, ಗರ್ಭಾಶಯದ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುವುದು, ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸುವ ಪರಿಸ್ಥಿತಿ, ಮಗುವಿನಲ್ಲಿ ಆಟಿಸಂ ಲಕ್ಷಣಗಳು ಕಾಣಿಸಬಹುದು. ತಡವಾಗಿ ಮಗು ಪಡೆಯುವುದರಿಂದ ಸಹಜ ಹೆರಿಗೆಯಾಗುವ ಸಾಧ್ಯತೆಯೂ ಕಡಿಮೆ. ಮಗು ಹೊಂದಲು ನಿರ್ದಿಷ್ಟ ವಯಸ್ಸು ಎಂಬುದು ಇಲ್ಲದೇ ಇದ್ದರೂ 35ರ ಗರ್ಭ ಧರಿಸುವ ಮುನ್ನ ಈ ಸಮಸ್ಯೆಗಳ ಬಗ್ಗೆ ಅರಿವಿರಬೇಕುʼ ಎನ್ನುತ್ತಾರೆ ಡಾ. ಸಂಗೀತಾ.
ವಿಭಾಗ