ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಗಂಭೀರ ಬೀರಬಹುದು ಜೀವನಶೈಲಿ ಸಂಬಂಧಿತ ಸಮಸ್ಯೆಗಳು; ಈ ಅಭ್ಯಾಸಗಳಿಂದ ಇಂದೇ ದೂರಾಗಿ-health news kidney problem lifestyle problems impacts on kidney health how to prevent and kidney donate impacts rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಗಂಭೀರ ಬೀರಬಹುದು ಜೀವನಶೈಲಿ ಸಂಬಂಧಿತ ಸಮಸ್ಯೆಗಳು; ಈ ಅಭ್ಯಾಸಗಳಿಂದ ಇಂದೇ ದೂರಾಗಿ

ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಗಂಭೀರ ಬೀರಬಹುದು ಜೀವನಶೈಲಿ ಸಂಬಂಧಿತ ಸಮಸ್ಯೆಗಳು; ಈ ಅಭ್ಯಾಸಗಳಿಂದ ಇಂದೇ ದೂರಾಗಿ

ಮನುಷ್ಯನ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ ಕೂಡ ಒಂದು. ಆದರೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ಮೂತ್ರಪಿಂಡದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಡೆಗಟ್ಟುವುದು ಹೇಗೆ, ಮೂತ್ರಪಿಂಡ ದಾನ ಪರಿಣಾಮಗಳೇನು ಎಂಬ ಬಗ್ಗೆ ಡಾ. ಅಶೋಕ್ ಭಟ್ ನೀಡಿರುವ ಮಾಹಿತಿ ಇಲ್ಲಿದೆ.

ಮೂತ್ರಪಿಂಡದ ಆರೋಗ್ಯ
ಮೂತ್ರಪಿಂಡದ ಆರೋಗ್ಯ

ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಧೂಮಪಾನ ಮುಂತಾದ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಆಧುನಿಕ ಸಮಾಜದಲ್ಲಿ ವ್ಯಾಪಕವಾಗಿ ಹರಡಿವೆ. ಮೂತ್ರಪಿಂಡದ ಆರೋಗ್ಯದ ಮೇಲೆ ಈ ಕಾಯಿಲೆಗಳ ಪ್ರಭಾವವು ಗಂಭೀರವಾದುದು. ಈ ಪರಿಸ್ಥಿತಿಗಳು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ(ಸಿಕೆಡಿ) ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಿಕೆಡಿಯು ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವೆನಿಸುವಂತಹ ʻಅಂತಿಮ ಹಂತದ ಮೂತ್ರಪಿಂಡ ಕಾಯಿಲೆʼ(ಇಎಸ್ಆರ್‌ಡಿ) ಹಂತವನ್ನು ತಲುಪಬಹುದು.

ಮಧುಮೇಹ ಹಾಗೂ ಮೂತ್ರಪಿಂಡದ ಕಾಯಿಲೆ 

ಮೂತ್ರಪಿಂಡದ ಕಾಯಿಲೆಗೆ ಪ್ರಮುಖ ಕಾರಣವೆಂದರೆ ಮಧುಮೇಹ. ನಿರಂತರವಾಗಿ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವು ಇದ್ದರೆ ಮೂತ್ರಪಿಂಡಗಳಲ್ಲಿನ ರಕ್ತನಾಳಗಳು ಹಾಳಾಗುತ್ತದೆ. ತ್ಯಾಜ್ಯ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಶೋಧಿಸುವ ಅದರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಅಂತೆಯೇ, ಅಧಿಕ ರಕ್ತದೊತ್ತಡವು ಮೂತ್ರಪಿಂಡದ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ, ಇದು ಕಾಲಾನಂತರದಲ್ಲಿ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡರ ಅಪಾಯವನ್ನೂ ಬೊಜ್ಜು ಹೆಚ್ಚಳ ಮಾಡುತ್ತದೆ. ಹೆಚ್ಚಿದ ಉರಿಯೂತ ಮತ್ತು ʻಆಕ್ಸಿಡೇಟಿವ್ ಸ್ಟ್ರೆಸ್‌ʼ (ಜೀವಕೋಶಗಳ ಹಾನಿಗೆ ಕಾರಣವಾಗಬಲ್ಲ ಮಟ್ಟದ ಗಂಭೀರ ರಾಸಾಯನಿಕ ಒತ್ತಡ) ಮೂಲಕವೂ ಬೊಜ್ಜು ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ.

ಧೂಮಪಾನ ತ್ಯಜಿಸಿ, ಮೂತ್ರಪಿಂಡ ಉಳಿಸಿ 

ಧೂಮಪಾನವು ಮೂತ್ರಪಿಂಡದ ಅನಾರೋಗ್ಯಕ್ಕೆ ಮತ್ತೊಂದು ಕಾರಣ ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕಾರಕ ವಸ್ತುಗಳು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ರಕ್ತನಾಳಗಳ ಕಾರ್ಯವನ್ನು ದುರ್ಬಲಗೊಳಿಸುತ್ತವೆ. ಇದು ಮೂತ್ರಪಿಂಡದ ಹಾನಿಯನ್ನು ವೇಗಗೊಳಿಸುತ್ತದೆ. ಧೂಮಪಾನಿಗಳಲ್ಲಿ ಸಿಕೆಡಿ ರೋಗದ ಹೆಚ್ಚಳವು ತೀವ್ರವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ʻಸಿಕೆಡಿʼ ಅಪಾಯವನ್ನು ಕಡಿಮೆ ಮಾಡಲು ಧೂಮಪಾನವನ್ನು ತ್ಯಜಿಸಬೇಕು.

ಮೂತ್ರಪಿಂಡದ ಆರೋಗ್ಯದ ಮೇಲೆ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಪರಿಣಾಮಗಳನ್ನು ತಡೆಗಟ್ಟುವುದು ಅತ್ಯಗತ್ಯ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸಬೇಕು ಮತ್ತು ನಿಯಮಿತವಾಗಿ ಔಷಧಗಳನ್ನು ಸೇವಿಸಬೇಕು. ಇದು ಮೂತ್ರಪಿಂಡದ ಹಾನಿಯನ್ನು ನಿಧಾನಗೊಳಿಸುತ್ತದೆ. ಉಪ್ಪು ಮತ್ತು ಕೊಬ್ಬುಗಳು ಕಡಿಮೆ ಇರುವ ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಅತ್ಯಗತ್ಯ. ಆಹಾರ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದಲ್ಲದೆ, ಒಟ್ಟಾರೆ ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸಬಹುದು. ಅಲ್ಲದೆ, ʻಸಿಕೆಡಿʼ ಹೊಂದಿರುವ ವ್ಯಕ್ತಿಗಳಲ್ಲಿ ಅದು ಉಲ್ಬಣವಾಗದಂತೆ ತಡೆಯಲು ಧೂಮಪಾನ ತ್ಯಜಿಸುವುದು ಅಗತ್ಯ.

ಆರಂಭಿಕ ಹಂತದ ಪತ್ತೆ ಅಗತ್ಯ

ಈ ಪರಿಸ್ಥಿತಿಗಳನ್ನು ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಮತ್ತು ನಿರ್ವಹಿಸುವಲ್ಲಿ ನಿಯಮಿತ ಆರೋಗ್ಯ ತಪಾಸಣೆಗಳು ಪ್ರಮುಖ ಪಾತ್ರವಹಿಸುತ್ತವೆ. ನಿಯಮಿತ ತಪಾಸಣೆಗಳಿಂದ ಅಪಾಯದ ಅಂಶಗಳನ್ನು ಗುರುತಿಸಲು ಮತ್ತು ಮೂತ್ರಪಿಂಡಕ್ಕೆ ಗಂಭೀರ ಹಾನಿ ಸಂಭವಿಸುವ ಮೊದಲು ಸಮಯೋಚಿತ ಚಿಕಿತ್ಸೆಗೆ ಅನುವಾಗುತ್ತದೆ. ಇದಲ್ಲದೆ, ಮೂತ್ರಪಿಂಡದ ಕಾಯಿಲೆಯ ಕುಟುಂಬದಲ್ಲಿ ಇತರರಿಗೆ ಇದ್ದರೆ ಅಂತಹ ವ್ಯಕ್ತಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು ಮತ್ತು ರೋಗತಡೆಕ್ರಮಗಳನ್ನು ಅನುಸರಿಸಬೇಕು.

ಮೂತ್ರಪಿಂಡದ ದಾನದ ಪರಿಣಾಮ 

ಡಯಾಲಿಸಿಸ್‌ ಜೀವಂತ ಅಥವಾ ಮೃತ ದಾನಿಯಿಂದ ಮೂತ್ರಪಿಂಡ ದಾನ ಪಡೆಯುವುದು ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯನ್ನು(ಇಎಸ್ಆರ್‌ಡಿ) ನಿರ್ವಹಿಸಲು ಇರುವ ಚಿಕಿತ್ಸೆಗಳು. ಮೂತ್ರಪಿಂಡದಾನ ಮಾಡುವ ನಿರ್ಧಾರದಲ್ಲಿ ವೈದ್ಯಕೀಯ ಮತ್ತು ನೈತಿಕ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಜೀವಂತ ದಾನಿಗಳ ವಿಚಾರದಲ್ಲಿ, ಈ ಕಾರ್ಯವಿಧಾನದಿಂದ ದಾನಿಯ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನ ಮಾಡಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ಮೊದಲು ದಾನಿಗಳಿಗೆ ಸಂಪೂರ್ಣ ಸಮಾಲೋಚನೆಯನ್ನು ಮಾಡಲಾಗುತ್ತದೆ. ದಾನದ ನಂತರ, ಜೀವಂತ ದಾನಿಗಳು ಸಾಮಾನ್ಯವಾಗಿ ಚೆನ್ನಾಗಿ ಚೇತರಿಸಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಉಳಿದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ದಾನದ ನಂತರದ ಮಾನಸಿಕ ಬೆಂಬಲವು ಸಹಾಯಕವಾಗುತ್ತದೆ. ಇದಲ್ಲದೆ, ಮೃತ ವ್ಯಕ್ತಿಯ ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಡಯಾಲಿಸಿಸ್‌ಗೆ ಹೋಲಿಸಿದರೆ ಮೂತ್ರಪಿಂಡ ಕಸಿಯು ಜೀವನದ ಗುಣಮಟ್ಟ ಮತ್ತು ದೀರ್ಘಾಯುಷ್ಯವನ್ನು ಸುಧಾರಿಸಲು ಉತ್ತಮ ಆಯ್ಕೆಯಾಗಿರುತ್ತದೆ. ಆದರೆ ಅಂಗ ತಿರಸ್ಕಾರವನ್ನು ತಡೆಗಟ್ಟಲು ಜೀವನಪರ್ಯಂತ ಔಷಧಗಳು ಮತ್ತು ಮೂತ್ರಪಿಂಡದ ಕಾರ್ಯದ ನಿಯಮಿತ ಪರೀಕ್ಷೆಗಳು ಅಗತ್ಯವಾಗಿದೆ.

(ಲೇಖನ: ಡಾ. ಅಶೋಕ್ ಭಟ್, ಮೂತ್ರಪಿಂಡ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು)