ಬೆಂಡೆಕಾಯಿ ಲೋಳೆಯಾಗದಂತೆ ರುಚಿರುಚಿಯಾಗಿ ಖಾದ್ಯಗಳನ್ನು ತಯಾರಿಸುವುದು ಹೇಗೆ? ಬೆಂಡಿ ಪ್ರಿಯರು ತಿಳಿದಿರಬೇಕಾದ ಮಾಹಿತಿಯಿದು
ಬೆಂಡೆಕಾಯಿಯಿಂದ ವಿಭಿನ್ನ ರುಚಿಯ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುವ ಮನಸ್ಸಾದರೂ, ಲೋಳೆ ಎನ್ನುವ ಕಾರಣಕ್ಕೆ ಹಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಬೆಂಡೆಯಲ್ಲಿರುವ ಪೌಷ್ಟಿಕಾಂಶವನ್ನು ಸದುಪಯೋಗಪಡಿಸಿಕೊಂಡು, ಲೋಳೆಯೂ ಆಗದಂತೆ ಖಾದ್ಯಗಳನ್ನು ತಯಾರಿಸಲು ಇಲ್ಲಿದೆ ಉಪಾಯ.
ಬೆಂಡಿ ಫ್ರೈ, ಬೆಂಡೆಕಾಯಿ ಪಲ್ಯ, ಗೊಜ್ಜು, ಸಾಂಬಾರ್, ಬೋಳು ಹುಳಿ, ಪಚಡಿ, ಕಾಯಿರಸ, ಗ್ರೇವಿ ಹೀಗೆ ಹೇಳ್ತಾ ಹೋದರೆ ರುಚಿಕರವಾದ ಸಾಕಷ್ಟು ಬಗೆ ಬಗೆಯ ಪದಾರ್ಥಗಳನ್ನು ಬೆಂಡೆಕಾಯಿಯಿಂದ ತಯಾರಿಸಿಕೊಳ್ಳಬಹುದು. ಯಾವುದೇ ಪದಾರ್ಥವನ್ನು ಮಾಡಿದರೂ ಬೆಂಡೆಕಾಯಿಯ ಮೂಲ ರುಚಿಯಿಂದಾಗಿಯೇ ಆ ಪದಾರ್ಥಗಳ ರುಚಿಯೂ ದುಪ್ಪಟ್ಟಾಗಿಬಿಡುತ್ತವೆ. ಪೌಷ್ಟಿಕಾಂಶಯುಕ್ತ ಬೆಂಡೆಕಾಯಿಯಲ್ಲಿರುವ ಲೋಳೆಯ ಅಂಶದಿಂದಾಗಿ ಅನೇಕ ಬಾರಿ ನಾವು ತಯಾರಿಸುವ ಪದಾರ್ಥಗಳ ರೂಪ ಹಾಗೂ ರುಚಿ ಕೆಡುತ್ತದೆ. ಹಾಗಾದರೆ ಲೋಳೆಯಾಗದಂತೆ ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡು, ಅಡುಗೆ ಮಾಡುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಬೆಂಡೆಕಾಯಿ ಲೋಳೆ ಬಿಡದಂತೆ ಅಡುಗೆ ಮಾಡುವ ಕ್ರಮ
ತಾಜಾ ಬೆಂಡೆಕಾಯಿಯನ್ನು ಆಯ್ಕೆ ಮಾಡಿ: ಮಾರುಕಟ್ಟೆಯಿಂದ ಬೆಂಡೆ ಆಯ್ಕೆ ಮಾಡಿ ತರುವಾಗ ಸ್ವಲ್ಪ ಜಾಗರೂಕರಾಗಿರಿ. ಎಳೆಯದಾದ ಬೆಂಡೆಕಾಯಿಗಳನ್ನೇ ಆದಷ್ಟು ನೋಡಿ ತೆಗೆದುಕೊಳ್ಳಿ. ಬಲಿತ ಬೆಂಡೆಯನ್ನು ತಂದರೆ ಅಡುಗೆ ಮಾಡುವ ವೇಳೆ ಬೇಗನೆ ಲೋಳೆ ಬಿಟ್ಟುಕೊಳ್ಳುತ್ತದೆ.
ನೀರಿನ ಅಂಶವಿರದಂತೆ ಜಾಗರೂಕರಾಗಿರಿ: ಅಡುಗೆ ಮಾಡುವ ಮೊದಲು ಬೆಂಡೆಕಾಯಿಯನ್ನು ತಣ್ಣನೆಯ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಹೊರಪದರದಲ್ಲಿರುವ ನೀರನ್ನು ಚೆನ್ನಾಗಿ ಒರೆಸಿಕೊಳ್ಳಿ. ನೀರಿನ ಅಂಶ ಉಳಿದುಕೊಂಡರೆ ಬೇಯಿಸಿಕೊಳ್ಳುವಾಗ ಲೋಳೆಯಾಗಿಬಿಡುತ್ತವೆ.
ತುದಿಭಾಗವನ್ನು ಬೇರ್ಪಡಿಸಿಕೊಳ್ಳಿ: ಬೆಂಡೆಕಾಯಿಯನ್ನು ಮನೆಗೆ ತಂದಕೂಡಲೇ ಅದರ ತುದಿಭಾಗವನ್ನು ತುಂಡರಿಸಿಬಿಡಿ. ಇಲ್ಲವಾದರೆ ಬಲು ಬೇಗನೆ ಅದು ಬಲಿತುಹೋಗಿ ಅಡುಗೆಗೆ ಯೋಗ್ಯವೆನ್ನಿಸುವುದಿಲ್ಲ. ಅಲ್ಲದೆ ಅಂತಹ ಬೆಂಡೆಯಲ್ಲಿ ಪೌಷ್ಟಿಕಾಂಶವೂ ಇರುವುದಿಲ್ಲ.
ಅಧಿಕ ಉರಿಯಲ್ಲಿ ಬೇಯಿಸಿಕೊಳ್ಳಿ: ಬೆಂಡೆಕಾಯಿಯನ್ನು ಅಡುಗೆ ಮಾಡುವಾಗ, ಅದರ ನೈಸರ್ಗಿಕ ಲೋಳೆತನವನ್ನು ಕಡಿಮೆ ಮಾಡಲು ಹೆಚ್ಚಿನ ಶಾಖ ಅಥವಾ ಉರಿಯನ್ನು ಬಳಸುವುದು ಅತ್ಯಗತ್ಯ. ಇದು ತೇವಾಂಶವನ್ನು ತ್ವರಿತವಾಗಿ ಆವಿಯಾಗುವಂತೆ ಮಾಡುತ್ತದೆ. ಇದರಿಂದ ಬೆಂಡೆಯು ಬೇಗನೆ ಬೆಂದು ಕರಗಿಹೋಗದೆಯೇ, ಗರಿಗರಿಯಾಗಿರಲು ಸಾಧ್ಯವಾಗುತ್ತದೆ.
ಬೇಕಾದಷ್ಟೇ ಬೆಂಡೆಯನ್ನು ಒಮ್ಮೆಗೆ ಬೇಯಿಸಿಕೊಳ್ಳಿ: ಬೆಂಡೆಕಾಯಿಯನ್ನು ಬೇಯಿಸಿಕೊಳ್ಳುವಾಗ ಅಗತ್ಯವಿರುಷ್ಟನ್ನು ಮಾತ್ರವೇ ಒಮ್ಮೆಗೆ ಬೇಯಿಸಿಕೊಳ್ಳಿ. ಅಗತ್ಯವಿದ್ದರೆ ಎರಡು ಬಾರಿ ಬೇಯಿಸಿಕೊಂಡರೂ ಚಿಂತೆಯಿಲ್ಲ. ಒಮ್ಮೆಲೇ ಬೆಂಡೆಕಾಯಿಯನ್ನು ಪ್ಯಾನ್‌ನಲ್ಲಿ ಬೇಯಿಸಿಕೊಂಡರೆ ನಡುವಿನ ತೇವಾಂಶವು ಆವಿಯಾಗಲು ಜಾಗವಿಲ್ಲದೆ ಬೆಂದು ಕರಗಿಬಿಡುತ್ತದೆ. ಅಲ್ಲದೆ ಲೋಳೆ ಬಿಟ್ಟುಕೊಳ್ಳುತ್ತದೆ.
ಲಿಂಬೆ ರಸ ಅಥವಾ ವಿನೆಗರ್ ಸೇರಿಸಿ: ಬೆಂಡೆಕಾಯಿಯ ಪಲ್ಯ, ಗೊಜ್ಜು ಸೇರಿದಂತೆ ಅನೇಕ ಪದಾರ್ಥಗಳನ್ನು ತಯಾರಿಸುವ ವೇಳೆ ಅದರ ಜೊತೆ ಲಿಂಬೆಹಣ್ಣು, ಹುಣಸೆ ಹಣ್ಣು, ವಿನೆಗರ್ ಅಥವಾ ಮೊಸರನ್ನು ಸ್ವಲ್ಪ ಹಾಕುವುದರಿಂದ ಅದು ಲೋಳೆಯ ಅಂಶವನ್ನು ಬಿಡುವುದಿಲ್ಲ. ಆಮ್ಲೀಯ ಗುಣವುಳ್ಳ ವಸ್ತುಗಳನ್ನು ಹಾಕುವುದರಿಂದ ಬೆಂಡೆಕಾಯಿಯ ಲೋಳೆ ಕಡಿಮೆಯಾಗುತ್ತದೆ. ರುಚಿಯೂ ಭಂಗವಾಗುವುದಿಲ್ಲ.
ನಿಧಾನವಾಗಿ ಬೆರೆಸಿ: ಬೆಂಡೆ ಹೋಳುಗಳನ್ನು ಬೇಯಿಸುವಾಗ, ಅವು ಒಡೆದುಹೋಗುವುದನ್ನು ತಪ್ಪಿಸಲು ಮತ್ತು ಹೆಚ್ಚು ಲೋಳೆಯು ಬಿಡುಗಡೆಯಾಗುವುದನ್ನು ತಪ್ಪಿಸಲು ನಿಧಾನವಾಗಿ ಬೆರೆಸಿ. ಅಲ್ಲದೆ ಮರದ ಸೌಟುಗಳನ್ನು ಈ ವೇಳೆ ಬಳಸುವುದು ಒಳ್ಳೆಯದು. ಇದರಿಂದ ಹೋಳುಗಳು ಕರಗಿಹೋಗುವುದಿಲ್ಲ.
ಅಡುಗೆ ಮಾಡುವಾಗ ಮುಚ್ಚಿಡಬೇಡಿ: ಬೆಂಡೆಕಾಯಿಯ ಅಡುಗೆ ಮಾಡುವ ಸಮಯದಲ್ಲಿ ಯಾವುದೇ ಹಂತದಲ್ಲಿ ಬೆಂಡೆಕಾಯಿಯ ಹೋಳುಗಳಿರುವ ಪಾತ್ರೆಯನ್ನು ಮುಚ್ಚಿಡಬೇಡಿ. ಬಿಸಿ ಶಾಖದಲ್ಲಿ ಬೆಂಡೆಕಾಯಿಯನ್ನು ಬೇಯಿಸುವಾಗ ಆ ಪಾತ್ರೆ ಓಪನ್ ಆಗಿರಲಿ.
ತಕ್ಷಣವೇ ಸರ್ವ್ ಮಾಡಿ: ಬೆಂಡೆಕಾಯಿಯು ಬಿಸಿಯಾಗಿ ಮತ್ತು ಗರಿಗರಿಯಾಗಿರುವಾಗಲೇ ಮಾಡಿದ ಅಡುಗೆಯನ್ನು ಸರ್ವ್ ಮಾಡಿಕೊಳ್ಳಿ. ಇದನ್ನು ಸೈಡ್ ಡಿಶ್ ಆಗಿ ಬಡಿಸಿ, ಸಲಾಡ್‌ಗಳು ಇಲ್ಲವೇ ಸ್ಯಾಂಡ್‌ವಿಚ್‌ಗಳಿಗೆ ಸೇರಿಸಿ. ಇಲ್ಲವಾದರೆ ಊಟದ ಜೊತೆಗೆ ವಿಭಿನ್ನವಾದ ಪದಾರ್ಥಗಳನ್ನು ಮಾಡಿಕೊಂಡು ಪೌಷ್ಠಿಕಾಂಶಯುಕ್ತ ಬೆಂಡೆಕಾಯಿಯನ್ನು ಸವಿಯಿರಿ. ತಣ್ಣಗಾದ ಮೇಲೆ ಇದನ್ನು ತಿಂದರೆ ಲೋಳೆ ಬಿಟ್ಟುಕೊಳ್ಳುವುದು ಇಲ್ಲವೇ ರುಚಿ ಕೆಡುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳೇನು ?
ಬೆಂಡೆಕಾಯಿಯು ರುಚಿಯಲ್ಲಿ ಹೇಗೆ ರಾಜಿಮಾಡಿಕೊಳ್ಳುವುದಿಲ್ಲವೋ ಅದೇ ರೀತಿ ಆರೋಗ್ಯಕರ ಪ್ರಯೋಜನಗಳಲ್ಲಿಯೂ ಕೂಡ. ಆನೇಕ ಆರೋಗ್ಯ ಸಮಸ್ಯೆಗಳಿಗೂ ಬೆಂಡೆಕಾಯಿಯ ಸೇವನೆ, ಬೆಂಡೆಕಾಯಿಯ ಲೋಳೆಯ ಸೇವನೆಯೂ ಸಹ ಪರಿಣಾಮಕಾರಿ ಪ್ರಯೋಜನಗಳನ್ನು ನೀಡಬಲ್ಲುದು.
ಪೋಷಕಾಂಶಗಳಿಂದ ಸಮೃದ್ಧ: ಬೆಂಡೆಕಾಯಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಆದರೆ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೋಲೇಟ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆ, ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳಿಗೆ ನೆರವಾಗುತ್ತದೆ.
ನಾರಿನಂಶ ಸಮೃದ್ಧವಾಗಿದೆ: ಬೆಂಡೆಕಾಯಿಯು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ, ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೆ ದೇಹದ ಅನೇಕ ಚಟುವಟಿಕೆಗಳು ಸರಾಗವಾಗಿ ನಡೆಯಲು ಸಹಕಾರಿಯಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ: ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ರಕ್ತನಾಳದಲ್ಲಿ ಇರುವಂತಹ ಸಕ್ಕರೆ ಹೀರಿಕೊಳ್ಳುವುದು. ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು.
ಹೃದಯದ ಆರೋಗ್ಯಕ್ಕಿದು ಪೂರಕ: ಬೆಂಡೆಕಾಯಿ ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಬೆಂಡೆಕಾಯಿಯಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಕಾರಿ: ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಅಂಶದಿಂದಾಗಿ, ಬೆಂಡೆಕಾಯಿಯು ತೂಕ ಇಳಿಸಲು ಬಹು ಮುಖ್ಯ ಆಹಾರ. ಹಸಿವನ್ನು ಕಡಿಮೆ ಮಾಡುವುದರ ಜೊತೆಗೆ ಹೊಟ್ಟೆಯನ್ನು ಹೆಚ್ಚು ಸಮಯಗಳ ಕಾಲ ತುಂಬಿರುವಂತೆ ನೋಡಿಕೊಳ್ಳುತ್ತದೆ.
ಇದಷ್ಟೇ ಅಲ್ಲದೆ ಕಣ್ಣಿನ ಆರೋಗ್ಯಕ್ಕೆ, ಕೂದಲು ಹಾಗೂ ತಲೆ ಹೊಟ್ಟಿನಂತಹ ಸಮಸ್ಯೆಗಳಿಗೆ, ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಬೆಂಡೆಕಾಯಿ ಬಹಳ ಮಹತ್ವವೆನ್ನಿಸುತ್ತದೆ. ಲೋಳೆಯ ಗುಣದ ಕಾರಣಕ್ಕಾಗಿ ಬೆಂಡೆಕಾಯಿಯನ್ನು ದೂರತಳ್ಳುವ ಮುನ್ನ ಆರೋಗ್ಯದ ದೃಷ್ಟಿಯಿಂದಲೂ ಒಮ್ಮೆ ಯೋಚಿಸಿನೋಡಿ.