Afternoon Sleep: ಮಧ್ಯಾಹ್ನ ಊಟದ ಬಳಿಕ ನಿದ್ದೆ ಮಾಡುವ ಅಭ್ಯಾಸವಿದೆಯೇ; ಇದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗುತ್ತೆ ನೋಡಿ
ಮಧ್ಯಾಹ್ನ ಊಟವಾದ ಬಳಿಕ ತೂಕಡಿಕೆ ಬರುತ್ತದೆ, ಅಲ್ಲದೆ ನಿದ್ದೆ ಎಳೆಯುತ್ತದೆ. ಹಲವರು ಮಧ್ಯಾಹ್ನದ ಊಟದ ಬಳಿಕ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಹಾಗಾದರೆ ಮಧ್ಯಾಹ್ನದ ಊಟವಾದ ಬಳಿಕ ಮಲಗುವುದು ಒಳ್ಳೆಯದೇ, ಮಧ್ಯಾಹ್ನ ಯಾವ ವೇಳೆಯಲ್ಲಿ ಮಲಗುವುದು ಉತ್ತಮ, ಎಷ್ಟು ಹೊತ್ತು ಮಲಗಿದರೆ ತೊಂದರೆ ಇಲ್ಲ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮಧ್ಯಾಹ್ನ ಊಟದ ಮಾಡಿದ ಬಳಿಕ ಮಲಗುವುದು ಹಲವರಿಗೆ ಅಭ್ಯಾಸ. ಪ್ರತಿದಿನ ಊಟವಾದ ಮೇಲೆ ಮಲಗದೇ ಇದ್ದರೆ ಏನೋ ಕಳೆದುಕೊಂಡ ಭಾವ ಆವರಿಸುತ್ತದೆ. ಊಟ ಮಾಡಿ ಹೊಟ್ಟೆ ಭಾರವಾದಾಗ ಕಣ್ಣು ಎಳೆಯುವುದು ಸಾಮಾನ್ಯ. ಆ ಕಾರಣಕ್ಕೆ ಕೆಲವರು ಮಧ್ಯಾಹ್ನದ ವೇಳೆ ಸಣ್ಣ ನಿದ್ದೆ ಮಾಡುತ್ತಾರೆ. ಹಾಗಾದರೆ ಮಧ್ಯಾಹ್ನದ ವೇಳೆ ಮಲಗುವ ಅಭ್ಯಾಸ ಒಳ್ಳೆಯದೇ?
ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮಧ್ಯಾಹ್ನ ಊಟವಾದ ಬಳಿಕ ಒಂದರ್ಧ ಗಂಟೆ ಅಥವಾ ಕಾಲು ಗಂಟೆ ಮಲಗಿದರೆ ಒತ್ತಡ ಕಡಿಮೆಯಾಗುತ್ತದೆ, ಇದರಿಂದ ಆಯಾಸವೂ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದನ್ನು ಪವರ್ ನ್ಯಾಪ್ ಎಂದು ಕರೆಯಲಾಗುತ್ತದೆ. ಈ ಪವರ್ ನ್ಯಾಪ್ ದೇಹ ಹಾಗೂ ಮನಸ್ಸಿಗೆ ಚೈತನ್ಯ ನೀಡುತ್ತದೆ. ಆ ಕಾರಣಕ್ಕೆ ಇದನ್ನು ಅನುಸರಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಮಧ್ಯಾಹ್ನದ ವೇಳೆ ಅರ್ಥ ಗಂಟೆಗಿಂತಲೂ ಹೆಚ್ಚು ಹೊತ್ತು ಮಲಗುವುದು ಅಪಾಯ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು ಎನ್ನುತ್ತಾರೆ ತಜ್ಞರು.
ಮಧ್ಯಾಹ್ನದ ವೇಳೆ ಮಲಗುವುದರಿಂದಾಗುವ ಅಡ್ಡ ಪರಿಣಾಮಗಳಿವು
- ಒಬ್ಬ ಸಾಮಾನ್ಯ ವ್ಯಕ್ತಿ ಮಧ್ಯಾಹ್ನದ ವೇಳೆ ಅರ್ಧಗಂಟೆಗಿಂತ ಹೆಚ್ಚು ಕಾಲ ಮಲಗಬಾರದು. ಇದು ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿಯ ನಿದ್ರೆ ಕಡಿಮೆಯಾಗುತ್ತದೆ ಮತ್ತು ಇದು ಕ್ರಮೇಣ ನಿದ್ರಾಹೀನತೆಗೆ ಕಾರಣವಾಗಬಹುದು.
- ಹಗಲಿನಲ್ಲಿ ಮಲಗುವವರಲ್ಲಿ ಹೃದಯಾಘಾತದ ಅಪಾಯವು ಶೇ 20ರಷ್ಟು ಹೆಚ್ಚಿರುತ್ತದೆ ಮತ್ತು ಸರಾಸರಿ ವ್ಯಕ್ತಿಗಿಂತ ಶೇ 25ರಷ್ಟು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
- ಹಗಲಿನಲ್ಲಿ ನಿದ್ದೆ ಮಾಡಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದ ಕಾರಣ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಆತಂಕದಂತಹ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕಾಗಿ ಹಗಲಿನ ವೇಳೆ ಸಾಧ್ಯವಾದಷ್ಟು ಕಡಿಮೆ ನಿದ್ದೆ ಮಾಡಿ, ರಾತ್ರಿ ವೇಳೆ ಹೆಚ್ಚು ನಿದ್ದೆ ಮಾಡಬೇಕು. ರಾತ್ರಿ ಕನಿಷ್ಠ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು.
- ಮಧ್ಯಾಹ್ನ ಊಟ ಮಾಡಿ ಹೆಚ್ಚು ಹೊತ್ತು ಮಲಗುವುದರಿಂದ ತೂಕ ಹೆಚ್ಚಳವಾಗುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ರಾತ್ರಿ ನಿದ್ದೆಯ ಕೊರತೆಯು ಆಹಾರ ಕಡುಬಯಕೆಯನ್ನು ಹೆಚ್ಚಿಸಬಹುದು. ನಿದ್ದೆ ಕೊರತೆಯು ಹಸಿವು ಹೆಚ್ಚಲು ಕಾರಣವಾಗಬಹುದು. ಇದರಿಂದ ರಾತ್ರಿ ಸಮಯವಲ್ಲದ ಸಮಯದಲ್ಲಿ ತಿನ್ನಬಹುದು. ಇದರಿಂದ ದೇಹದಲ್ಲಿ ಕೊಬ್ಬಿನಾಂಶ ಸಂಗ್ರಹ ಹೆಚ್ಚುತ್ತದೆ. ಪರಿಣಾಮವಾಗಿ ಅಧಿಕರಕ್ತದೊತ್ತಡದಂತಹ ಸಮಸ್ಯೆಗಳು ಉದ್ಭವಿಸಬಹುದು. ಇದು ಮಧುಮೇಹಕ್ಕೂ ಕಾರಣವಾಗಬಹುದು.
- ಮಧ್ಯಾಹ್ನದ ಮೇಲೆ ಹೆಚ್ಚು ಹೊತ್ತು ಮಲಗುವುದರಿಂದ ವಿವಿಧ ಹೃದಯ ಸಂಬಂಧೀ ಸಮಸ್ಯೆಗಳು ಎದುರಾಗಬಹುದು.
ಈ ಕಾರಣದಿಂದ ಮಧ್ಯಾಹ್ನ ಮಲಗುವ ಮುನ್ನ ಯೋಚಿಸಿ. ಸಾಧ್ಯವಾದಷ್ಟು ಮಧ್ಯಾಹ್ನ ಮಲಗುವ ಅಭ್ಯಾಸವನ್ನು ತಪ್ಪಿಸಿ. ಒಂದು ವೇಳೆ ತೀರಾ ಮಲಗಲೇಬೇಕು ಎನ್ನಿಸಿದರೆ ಮೇಲೆ ಹೇಳಿರುವ ಸಮಯದಲ್ಲಿ ಮಲಗಿ ಮತ್ತು ಕನಿಷ್ಠ ಅರ್ಧಗಂಟೆಗಿಂತ ಕಡಿಮೆ ಮಲಗಿ.
ಮಧ್ಯಾಹ್ನ ಯಾವ ಸಮಯಕ್ಕೆ ಮಲಗಬಹುದು
ಮಧ್ಯಾಹ್ನದ ವೇಳೆ ಮಲಗಬೇಕು ಎನ್ನಿಸಿದರೆ ಒಂದು ಗಂಟೆಯಿಂದ ಮೂರು ಗಂಟೆಯ ನಡುವೆ ಮಲಗಬೇಕು. ಹಗಲಿನ ವೇಳೆ ನಿದ್ದೆಗೆ ಈ ಸಮಯ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಚಿಕ್ಕಮಕ್ಕಳು, ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರು ಮಧ್ಯಾಹ್ನದ ಸಮಯದಲ್ಲಿ ಗರಿಷ್ಠ 90 ನಿಮಿಷಗಳ ಕಾಲ ನಿದ್ದೆ ಮಾಡಬಹುದು. ಒಬ್ಬ ಸಾಮಾನ್ಯ ವ್ಯಕ್ತಿ 10 ನಿಮಿಷಕ್ಕಿಂತ ಹೆಚ್ಚು ಅರ್ಧ ಗಂಟೆಗಿಂತ ಕಡಿಮೆ ನಿದ್ದೆ ಮಾಡಬಹುದು. ಅದನ್ನು ಮೀರಿ ಮಧ್ಯಾಹ್ನದ ವೇಳೆ ಮಲಗುವುದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಭಾಗ