High Blood Pressure: ದೀರ್ಘಕಾಲದ ಮೊಬೈಲ್ ಫೋನ್ ಸಂಭಾಷಣೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ
High Blood Pressure: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನ ಸಂಗಾತಿ. ಫೋನ್‌ನಲ್ಲಿ ಮಾತನಾಡುವುದು ನೆಚ್ಚಿನ ಹವ್ಯಾಸ. ಇದು ಬಹುತೇಕರ ಸತ್ಯ. ಆದರೆ ಮೊಬೈಲ್ ಫೋನ್‌ನಲ್ಲಿ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಮಾತನಾಡುವುದರಿಂದ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಬಹುದು ಎಂಬುದನ್ನು ಅಧ್ಯಯನವೊಂದು ತಿಳಿಸಿದೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.
ಸ್ನೇಹಿತರು, ಕುಟುಂಬದವರು ಅಥವಾ ಸಹೋದ್ಯೋಗಿ ಹೀಗೆ ಆತ್ಮೀಯರು ಕರೆ ಮಾಡಿದಾಗ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತೇವೆ. ಇದು ನಮ್ಮ ಮನಸ್ಸಿಗೆ ಖುಷಿ ಕೊಡುವ ವಿಚಾರವೂ ಹೌದು. ಆದರೆ ಅತಿಯಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದರಿಂದ ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ಸಾಬೀತು ಪಡಿಸಿದೆ.
ಯುರೋಪಿಯನ್ ಹಾರ್ಟ್ ಜರ್ನಲ್ ʼಡಿಜಿಟಲ್ ಹೆಲ್ತ್ʼನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಫೋನ್‌ನಲ್ಲಿ ಮಾತನಾಡುವುದರಿಂದ ಅಧಿಕ ರಕ್ತದೊತ್ತಡದ ಪ್ರಮಾಣ ಶೇಕಡಾ 12ರಷ್ಟು ಹೆಚ್ಚಬಹುದು ಎಂಬುದನ್ನು ಸಾಬೀತು ಪಡಿಸಿದೆ.
ಮೊಬೈಲ್ ಫೋನ್ ಅನ್ನು ದೀರ್ಘಕಾಲದವರೆಗೆ ಕಿವಿಯ ಬಳಿ ಹಿಡಿದುಕೊಂಡೇ ಇರುವುದರಿಂದ ಕತ್ತು, ಭುಜ, ಬೆನ್ನಿನ ಮೇಲೆ ಒತ್ತಡ ಉಂಟಾಗಬಹುದು. ದೇಹದ ಭಾಗಗಳ ಮೇಲೆ ಅತಿಯಾಗಿ ಒತ್ತಡ ಉಂಟಾಗಿ ಅದು ರಕ್ತದೊತ್ತಡ ಹೆಚ್ಚಲು ಕಾರಣವಾಗಬಹುದು.
ಮೊಬೈಲ್ ಫೋನ್ ಎಂಬ ʼಸೈಲೆಂಟ್ ಕಿಲ್ಲರ್ʼ
ಈ ಬಗ್ಗೆ ವಿವರಣೆ ನೀಡುವ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಹಿರಿಯ ನಿರ್ದೇಶಕ ಡಾ. ಕೇಶವ್ ಆರ್. ʼಇಂದಿನ ವೇಗದ ಜಗತ್ತಿನಲ್ಲಿ, ಸೆಲ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಮೊಬೈಲ್ ಫೋನ್‌ಗಳ ಅತಿಯಾಗ ಬಳಕೆಯು ಮನುಷ್ಯನ ಜೀವನದಲ್ಲಿ ʼಸೈಲೆಂಟ್ ಕಿಲ್ಲರ್ʼ ಆಗಿವೆ ಎಂಬುದು ಮಾತ್ರ ಸತ್ಯ. ಗಂಟೆಗಟ್ಟಲೆ ಕುಳಿತಲ್ಲೇ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುವುದರಿಂದ ಆರೋಗ್ಯ ಮೇಲೆ ನೇರ ಪರಿಣಾಮ ಬೀರದೇ ಇರಬಹುದು. ಆದರೆ ಇದು ಉತ್ತೇಜಿಸುವ ಜಡ ಜೀವನಶೈಲಿಯು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರೊಂದಿಗೆ ಮೊಬೈಲ್ ಫೋನ್ ಹೊರ ಸೂಸುವ ಅತಿ ನೇರಳೆ ಕಿರಣಗಳು ನಮ್ಮ ಸಹಜ ನಿದ್ದಗೆ ಅಡ್ಡಿ ಪಡಿಸಬಹುದು. ಇದರಿಂದ ಕಳಪೆ ಗುಣಮಟ್ಟದ ನಿದ್ದೆಗೆ ಕಾರಣವಾಗಬಹುದು, ಅಲ್ಲದೆ ಇದು ಅಧಿಕ ರಕ್ತದೊತ್ತಡಕ್ಕೆ ಮೂಲವಾಗಬಹುದು. ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಒತ್ತಡ ಹಾಗೂ ಆತಂಕವೂ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸಬಹುದು.
ಮೊಬೈಲ್ ಬಳಕೆಯ ಗುಂಗಿನಲ್ಲಿ ಸರಿಯಾಗಿ ತಿನ್ನದೇ ಇರುವುದು, ದೈಹಿಕ ಚಟುವಟಿಕೆಯ ಕೊರತೆ ಕೂಡ ಅಧಿಕ ರಕ್ತದೊತ್ತಡ ಉಂಟಾಗಲು ಕಾರಣವಾಗಬಹುದು. ಮೊಬೈಲ್ ಫೋನ್‌ಗಳಲ್ಲಿ ಕಳೆಯುವ ಸಮಯವನ್ನು ವ್ಯಾಯಾಮ ಮಾಡಲು, ಜನರನ್ನು ನೇರವಾಗಿ ಭೇಟಿ ಮಾತನಾಡುವುದು ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮವಾಗಿ ಬಳಸಿಕೊಳ್ಳಬಹುದು, ಇದು ನಿಸ್ಸಂದೇಹವಾಗಿ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮೊಬೈಲ್ ಫೋನ್ ನೀಡುವ ಅನುಕೂಲ ಹಾಗೂ ಮನರಂಜನೆಯ ನಡುವೆ ನಮ್ಮ ಆರೋಗ್ಯ ಹಾಗೂ ಸುತ್ತಲಿನವರ ಕಾಳಜಿಯ ಬಗ್ಗೆ ಮರೆಯಬಾರದುʼ ಎನ್ನುತ್ತಾರೆ.
ಸಂಭವದ ಪ್ರಮಾಣ ಕಡಿಮೆ
ಫರಿದಾಬಾದ್‌ನ ಮರೆಂಗೊ ಏಷ್ಯಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರಾಗಿರುವ ಡಾ. ರಾಕೇಶ್ ರೈ ಸಪ್ರಾ ಈ ಅಧ್ಯಯನವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಅವರ ವ್ಯಕ್ತಿತ್ವ ಅಥವಾ ಒತ್ತಡದ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳುತ್ತಾರೆ.
ಈ ಬಗ್ಗೆ ಮಾತನಾಡುವ ಅವರು ʼಮೊಬೈಲ್ ಫೋನ್ ಬಳಕೆ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧದ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಫಲಿತಾಂಶ ಸ್ವಷ್ಟವಾಗಿ ದೊರೆತಿಲ್ಲ. ಇದು ತಾರ್ಕಿಕವಾಗಿದೆ, ಏಕೆಂದರೆ ಫಲಿತಾಂಶದ ಮೇಲೆ ಪರಿಣಾಮ ಬೀರಲು ಹಲವಾರು ಗೊಂದಲಮಯ ಅಂಶಗಳಿವೆ. ವ್ಯಕ್ತಿಯ ಮಾನಸಿಕ ಒತ್ತಡದ ಮಟ್ಟ ಮತ್ತು ವ್ಯಕ್ತಿತ್ವದ ಪ್ರಕಾರವೂ ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. 10-15 ನಿಮಿಷಕ್ಕಿಂತ ಹೆಚ್ಚು ಹೊತ್ತು ಮೊಬೈಲ್ ಫೋನ್‌ನಲ್ಲಿ ಮಾತನಾಡುವ ವ್ಯಕ್ತಿಗಿಂತ ಅರ್ಧಗಂಟೆಗೂ ಹೆಚ್ಚು ಮಾತನಾಡುವ ವ್ಯಕ್ತಿಯಲ್ಲಿ ಸಮಸ್ಯೆಗಳು ಹೆಚ್ಚಬಹುದು. ಇದರೊಂದಿಗೆ ಅವರಲ್ಲಿ ಮಾನಸಿಕ ಒತ್ತಡ ಕೂಡ ಹೆಚ್ಚಬಹುದು. ವಾಸ್ತವವಾಗಿ ಇದು ವ್ಯಕ್ತಿಯ ಸ್ವಭಾವ ಅಥವಾ ವ್ಯಕ್ತಿತ್ವದ ಪ್ರತಿಬಿಂಬವೂ ಆಗಿರಬಹುದು. ಅಂತಹ ಮತ್ತು ಇತರ ಹಲವು ಅಂಶಗಳನ್ನು ನಿರ್ಣಯಿಸಲು ಮತ್ತು ಹೊಂದಿಸಲು ತುಂಬಾ ಕಷ್ಟ. ಆದರೆ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಲು ಮೊಬೈಲ್ ಫೋನ್‌ನಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡುವುದು ಸರಿ ಕಾಣುತ್ತಿಲ್ಲʼ ಎನ್ನುತ್ತಾರೆ.
ವಿಭಾಗ