ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನಹಣ್ಣು ಸೇವನೆಯಿಂದಾಗುವ ದುಷ್ಪರಿಣಾಮಗಳೇನು? ಮ್ಯಾಂಗೋ ಪ್ರಿಯರು ತಿಳಿಯಬೇಕಾದ ಮಾಹಿತಿಯಿದು

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನಹಣ್ಣು ಸೇವನೆಯಿಂದಾಗುವ ದುಷ್ಪರಿಣಾಮಗಳೇನು? ಮ್ಯಾಂಗೋ ಪ್ರಿಯರು ತಿಳಿಯಬೇಕಾದ ಮಾಹಿತಿಯಿದು

ಮಾವಿನಹಣ್ಣುಗಳು ಕೇವಲ ಬಾಯಲ್ಲಿ ನೀರೂರಿಸುವುದು ಮಾತ್ರವಲ್ಲ, ಇದನ್ನು ತಿನ್ನುವುದರಿಂದ ಕಾಯಿಲೆ ಕೂಡ ಬರುತ್ತದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಮಾವಿನಹಣ್ಣುಗಳನ್ನು ವೇಗವಾಗಿ ಹಣ್ಣಾಗಿಸಲು ಬಳಸುವ ರಾಸಾಯನಿಕದಿಂದ ಮನುಷ್ಯನ ನರಮಂಡಲಕ್ಕೆ ಹಾನಿಯಾಗುತ್ತೆ ಎಂಬ ಆಘಾತಕಾರಿ ವಿಚಾರವನ್ನು ತಜ್ಞರು ತಿಳಿಸಿದ್ದಾರೆ.

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನಹಣ್ಣು ಸೇವನೆಯಿಂದಾಗುವ ದುಷ್ಪರಿಣಾಮಗಳೇನು?
ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನಹಣ್ಣು ಸೇವನೆಯಿಂದಾಗುವ ದುಷ್ಪರಿಣಾಮಗಳೇನು?

ಮಾವಿನಹಣ್ಣುಗಳ ಸೀಸನ್ ಅದಾಗಲೇ ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಸಿಗುವ ರಸಭರಿತ ಮಾವಿನ ಹಣ್ಣುಗಳನ್ನು ನೋಡಿದರೆ ಸಾಕು ಅದನ್ನು ಖರೀದಿ ಮಾಡದೇ ಮನಸ್ಸು ತಡೆಯುವುದಿಲ್ಲ. ಮಾವಿನ ಹಣ್ಣಿನಲ್ಲಿ ಇರುವ ಫೈಬರ್, ಆಂಟಿಆಕ್ಸಿಡಂಟ್ ಪ್ರಮಾಣ, ವಿಟಮಿನ್ ಸಿ ಅಂಶ ಹೀಗೆ ಸಾಕಷ್ಟು ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣುಗಳು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್‌ಗಳಿಂದ ಪಕ್ವಗೊಳ್ಳುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬರುತ್ತದೆ. ಈ ರಾಸಾಯನಿಕಗಳಿಂದ ಮಾಗಿಸಲ್ಪಟ್ಟ ಮಾವಿನ ಹಣ್ಣುಗಳನ್ನು ತಿಂದರೆ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಬಹುದು..? ಎಂಬುದನ್ನು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಭಾರತದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಣ್ಣುಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಬಳಕೆ ಮಾಡದಂತೆ ವ್ಯಾಪಾರಿಗಳು ಹಾಗೂ ದಲ್ಲಾಳಿಗಳಿಗೆ ಕಠಿಣ ಸೂಚನೆಯನ್ನು ನೀಡಿದೆ. ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಬಳಸಿ ಮಾಗಿಸಿದ ಹಣ್ಣುಗಳು ಮಾರಾಟವಾಗುತ್ತಿರುವುದು ಗಮನಕ್ಕೆ ಬಂದರೆ ಕೂಡಲೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಇಲಾಖೆಗೆ ಸೂಚನೆ ನೀಡಿದೆ.

ಮಾವಿನಹಣ್ಣುಗಳನ್ನು ಮಾಗಿಸಲು ಬಳಕೆ ಮಾಡುವ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವು ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇವುಗಳು ಆರ್ಸೆನಿಕ್ ಹಾಗೂ ಫಾಸ್ಪರಸ್ ಹಾನಿಕಾರಕ ಅಂಶಗಳನ್ನು ಹೊಂದಿರುತ್ತದೆ. ಮಸಾಲಾ ಎಂದೂ ಕರೆಯಲ್ಪಡುವ ಈ ಪದಾರ್ಥಗಳು ಮನುಷ್ಯನಲ್ಲಿ ತಲೆ ತಿರುಗುವಿಕೆ, ಬಾಯಾರಿಕೆ. ಕಿರಿಕಿರಿ, ವಾಂತಿ, ದೌರ್ಬಲ್ಯದಂತಹ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು FSSAI ತಿಳಿಸಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ಕೇವಲ ಮಾವಿನಹಣ್ಣು ಮಾತ್ರವಲ್ಲ ಇನ್ನೂ ಸಾಕಷ್ಟು ಹಣ್ಣುಗಳನ್ನು ಮಾಗಿಸಲು ಬಳಕೆ ಮಾಡುತ್ತಾರೆ. ಇದನ್ನು ಬಳಕೆ ಮಾಡಿದಾಗ ಕಾಯಿಯು ಹಣ್ಣಾಗುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಈಗಾಗಲೇ ಅನೇಕ ದೇಶಗಳು ಕ್ಯಾಲ್ಸಿಯಂ ಕಾರ್ಬೈಡ್‌ಗಳ ಬಳಕೆಯನ್ನು ನಿಷೇಧಿಸಿವೆ. ಕ್ಯಾಲ್ಸಿಯಂ ಕಾರ್ಬೈಡ್ ಅಸಿಟಲೀನ್ ಎಂಬ ಅನಿಲವನ್ನು ಉತ್ಪಾದಿಸುತ್ತದೆ. ಇವುಗಳನ್ನು ಸರಿಯಾಗಿ ಬಳಕೆ ಮಾಡಲು ತಿಳಿಯದವರಿಗೆ ಸ್ಫೋಟದ ಅಪಾಯ ಕೂಡ ಇದೆ. ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನ ಹಣ್ಣುಗಳ ಸೇವನೆಯು ಸಾಕಷ್ಟು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ವೈದ್ಯರು ಸೂಚನೆ ನೀಡಿದ್ದಾರೆ.

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ಅಧ್ಯಯನಗಳು ತಿಳಿಸಿರುವ ಮಾಹಿತಿಯ ಪ್ರಕಾರ, ಕ್ಯಾಲ್ಸಿಯಂ ಕಾರ್ಬೈಡ್‌ಗಳು ನಮ್ಮ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ತಲೆನೋವು, ತಲೆ ತಿರುಗುವಿಕೆ, ನಿದ್ರಾಹೀನತೆ, ಜ್ಞಾಪಕ ಶಕ್ತಿ ಹಾನಿ, ಕಾಲು ಹಾಗೂ ಕೈಗಳು ಮರಗಟ್ಟುವುದು, ಶೀತ, ಚರ್ಮ ತೇವಗೊಳ್ಳುವುದು, ರಕ್ತದೊತ್ತಡ ಕಡಿಮೆಯಾಗುವುದು ಹಾಗೂ ಸೆಳೆತ ಹೀಗೆ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಅತೀ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ಗಳನ್ನು ಬಳಸಿ ಮಾಗಿದ ಮಾವಿನ ಹಣ್ಣುಗಳನ್ನು ಸೇವಿಸುವುದು ಆರೋಗ್ಯದ ಮೇಲೆ ಭಾರೀ ಪ್ರಮಾಣದಲ್ಲಿ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇವುಗಳು ಮಾವಿನಕಾಯಿಯ ಮಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇವುಗಳು ಹಾನಿಕಾರಕ ಕಲ್ಮಶಗಳನ್ನು ಹೊಂದಿರುತ್ತದೆ. ಆರಂಭದಲ್ಲಿ ತಲೆನೋವು, ತಲೆ ತಿರುಗುವಿಕೆಯಿಂದ ಆರಂಭಗೊಂಡು ನರಮಂಡಲಕ್ಕೆ ಭಾರೀ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದು. ಹೀಗಾಗಿ ಕೃತಕವಾಗಿ ಬಲಿತ ಮಾವಿನ ಹಣ್ಣುಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಇನ್ನೂ ಪರಿಮಳವನ್ನು ಹೊಂದಿರದ ಮಾವಿನ ಹಣ್ಣುಗಳನ್ನು ಖರೀದಿ ಮಾಡಬೇಕು. ಅಲ್ಲದೇ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಒಂದು ಗಂಟೆಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ ಬಳಿಕ ಸೇವಿಸುವುದು ಒಳ್ಳೆಯದು.

ಕ್ಯಾಲ್ಸಿಯಂ ಕಾರ್ಬೈಡ್‌ಯುಕ್ತ ಮಾವಿನ ಹಣ್ಣುಗಳ ಸೇವನೆಯಿಂದಾಗುವ ಅಡ್ಡಪರಿಣಾಮಗಳು

ಜಠರಗರುಳಿನ ಸಮಸ್ಯೆ: ಆರ್ಸೆನಿಕ್ ಹಾಗೂ ಫಾಸ್ಪರಸ್ ಹೈಡ್ರೇಡ್‌ಗಳು ಜಠರಗರುಳಿನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ಹೊಟ್ಟೆ ನೋವು, ವಾಕರಿಕೆ, ವಾಂತಿ ಹಾಗೂ ಅತಿಸಾರಕ್ಕೆ ಕಾರಣವಾಗುತ್ತದೆ.

ನರಮಂಡಲಕ್ಕೆ ಅಡ್ಡಪರಿಣಾಮ: ಆರ್ಸೆನಿಕ್ ತಲೆನೋವು, ತಲೆ ತಿರುಗುವಿಕೆಗೆ ಕಾರಣವಾಗುತ್ತದೆ ಹಾಗೂ ತೀವ್ರತರ ಪ್ರಕರಣಗಳಲ್ಲಿ ನರಮಂಡಲಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತದೆ.

ಉಸಿರಾಟ ಸಂಬಂಧಿ ಕಾಯಿಲೆ: ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾವಿನಕಾಯಿ ಹಣ್ಣಾಗುವ ಸಂದರ್ಭದಲ್ಲಿ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ಮಾವಿನ ಹಣ್ಣು ಸೇವನೆ ಮಾಡುವವರಿಗೆ ಉಸಿರಾಟದ ಸಮಸ್ಯೆ, ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಇಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವುದರಿಂದ ಪಾರಾಗಲು ಸಾವಯವವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಮಾವಿನ ಹಣ್ಣುಗಳನ್ನು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಬಳಿಕ ಸಿಪ್ಪೆ ಸುಲಿದು ಸೇವಿಸುವುದು ಸೂಕ್ತ. ಅನೇಕ ದೇಶಗಳು ಈಗಾಗಲೇ ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ನಿಷೇಧಗೊಳಿಸಿದೆ. ಹೀಗಾಗಿ ಗ್ರಾಹಕರು ಮಾವಿನ ಹಣ್ಣಿನ ಖರೀದಿಯ ಸಂದರ್ಭದಲ್ಲಿ ಆದಷ್ಟು ಜಾಗರೂಕತೆ ವಹಿಸುವುದು ಉತ್ತಮ.

ಕ್ಯಾಲ್ಸಿಯಂ ಕಾರ್ಬೈಡ್‌ಗಳಿಂದ ಆಗುವ ದುಷ್ಪರಿಣಾಮಗಳು ಅವುಗಳನ್ನು ಬಳಸಿದ ಪ್ರಮಾಣ ಹಾಗೂ ಸಾಂದ್ರತೆಯ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ. ಆದರೂ ಸಂಭಾವ್ಯ ಆರೋಗ್ಯ ದುಷ್ಪರಿಣಾಮಗಳಿಂದ ಪಾರಾಗಲು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿದ ಹಣ್ಣುಗಳಿಂದ ದೂರ ಇರುವುದೇ ಉತ್ತಮ.