ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ನಿಯಮಿತ ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ ತಿಳಿದ್ರೆ, ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ

Mental Health: ನಿಯಮಿತ ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ ತಿಳಿದ್ರೆ, ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ

ಹಿಂದಿನಿಂದಲೂ ಬಂದಿರುವಂತಹ ಹಲವು ರೂಢಿಗಳು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಯೋಗಕ್ಷೇಮಕ್ಕೂ ಬಹಳ ಪ್ರಯೋಜನಕಾರಿ. ಅಂಥವುಗಳ ಪೈಕಿ ಯೋಗ ಪ್ರಮುಖ ಆಯ್ಕೆಯಾಗಿದ್ದು, ಮಾನಸಿಕ ಆರೋಗ್ಯ ವೃದ್ಧಿಗೆ ಇದು ಬಹಳ ಮುಖ್ಯ. ಯೋಗದಿಂದ ಮನಸ್ಸಿಗಾಗುವ ಪ್ರಯೋಜನ ಕೇಳಿದ್ರೆ ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ.

ನಿಯಮಿತ ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ ತಿಳಿದ್ರೆ, ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ
ನಿಯಮಿತ ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ ತಿಳಿದ್ರೆ, ಇಂದೇ ಯೋಗಾಭ್ಯಾಸ ಶುರು ಮಾಡ್ತೀರಿ

ನಮ್ಮ ದೈನಂದಿಕ ಜೀವನದಲ್ಲಿ ಒತ್ತಡ ಹಾಗೂ ಆತಂಕವೆಲ್ಲವೂ ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ. ಕೆಲಸ, ಮನೆ-ಮಕ್ಕಳು-ಕುಟುಂಬ, ಆರೋಗ್ಯ ಹೀಗೆ ಹೇಳುತ್ತಾ ಹೋದರೆ ಒಂದರ ಹಿಂದೊಂದರಂತೆ ಒತ್ತಡ ಹಾಗೂ ಆತಂಕಕ್ಕೆ ಅನೇಕ ಕಾರಣಗಳು ಸೃಷ್ಟಿಯಾಗುತ್ತಲೇ ಹೋಗುತ್ತವೆ. ಒಂದು ಮುಗಿಯುತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆಗೆ ದಾರಿಯಾಗಿ ನೆಮ್ಮದಿಯೆನ್ನುವುದು ಮರೀಚಿಕೆಯಾಗಿದೆ. ಆದರೆ ನಮ್ಮ ಅದೃಷ್ಟವೆನ್ನುವಂತೆ ಹಿಂದಿನಿಂದಲೂ ಬಂದಿರುವ ಯೋಗ ಎಂಬ ಔಷಧ ಈ ಸಮಸ್ಯೆಗಳಿಂದ ನಮ್ಮನ್ನು ಪಾರುಮಾಡುವ ಶಕ್ತಿಯನ್ನು ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಹೌದು, ಯೋಗವು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಯೋಗ ಎಂಬ ಅಭ್ಯಾಸವು ಎಲ್ಲಾ ವಯಸ್ಸಿನವರಿಗೂ ತಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿದೆ. ಮನಸ್ಸು ಹಗುರಾಗಲು, ನೆಮ್ಮದಿಯೆನ್ನಿಸಲು ಯೋಗ, ಧ್ಯಾನ, ಆರೋಗ್ಯಕರ ಆಹಾರ ಪದ್ಧತಿಯಂತಹ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತೀ ಅಗತ್ಯ.

ಯೋಗದಿಂದ ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನ

1. ಒತ್ತಡ ನಿವಾರಣೆಗಿದು ಸೂಕ್ತ: ಮಾನಸಿಕ ಒತ್ತಡವನ್ನು ನಿವಾರಿಸಲು ಯೋಗಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಉಸಿರಾಟದ ವ್ಯಾಯಾಮಗಳು, ಧ್ಯಾನ ಸೇರಿದಂತೆ ಅನೇಕ ವಿಧಾನಗಳು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಚಿಂತೆಗಳಿಂದ ದೂರವಾಗಿಸುತ್ತದೆ. ಅಲ್ಲದೆ ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಸುಧಾರಿಸುವ ಮೂಲಕ ಸಂಪೂರ್ಣ ಆರೋಗ್ಯವನ್ನು ಹೆಚ್ಚಿಸುತ್ತದೆ. ಯೋಗದ ನಿಯಮಿತ ಅಭ್ಯಾಸವು ಒತ್ತಡವನ್ನು ಹೆಚ್ಚಿಸುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಆತಂಕವನ್ನು ಶಮನಗೊಳಿಸಲಿದೆ: ದೇಹ, ಮನಸ್ಸು ಮತ್ತು ಆತ್ಮದ ಏಕೀಕರಣವೇ ಯೋಗ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ ಭಾವನೆಗಳನ್ನು ಹತೋಟಿಯಲ್ಲಿಡಲು, ನಕಾರಾತ್ಮಕ ಆಲೋಚನೆಗಳು ಮತ್ತು ಭಾವನೆಗಳನ್ನು ತೊಡೆದುಹಾಕಿ, ಒಳ್ಳೆಯ ಚಿಂತನೆಗಳಿಗೆ ದಾರಿಮಾಡಿಕೊಡುತ್ತದೆ.

3. ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ: ಸ್ನಾಯುಗಳಿಗೆ ಸಂಬಂಧಿಸಿದ ಅನೇಕ ಆಸನ, ಭಂಗಿಗಳನ್ನು ಯೋಗವು ಒಳಗೊಂಡಿದೆ. ಇಂತಹ ಆಸನಗಳನ್ನು ಮಾಡುವುದಕ್ಕೆ ದೈಹಿಕ ಪರಿಶ್ರಮ ಹೆಚ್ಚಾಗಿ ಬೇಕಾಗುತ್ತದೆ. ಅಲ್ಲದೆ ಪ್ರಾಣಾಯಾಮದ ವೇಳೆಯಲ್ಲಿ ಹೆಚ್ಚಿಗೆ ಮಾನಸಿಕ ಏಕಾಗ್ರತೆಯ ಅಗತ್ಯವಿರುತ್ತದೆ. ಇವೆಲ್ಲದರ ಪರಿಣಾಮವಾಗಿ ಯಾವುದೇ ಅಡ್ಡಿಯಿಲ್ಲದೆ ನಿದ್ರಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ನಿದ್ರಿಸಲು ನಿಗದಿತ ಸಮಯವೂ ರೂಢಿಯಾಗಿಬಿಡುತ್ತದೆ.

4. ಜೀವನದ ಗುಣಮಟ್ಟ ಸುಧಾರಿಸಲಿದೆ: ಸಾಮಾನ್ಯವಾಗಿ ಆರೋಗ್ಯಕರ ಮನಸ್ಸು, ಆರೋಗ್ಯಕರ ದೇಹವನ್ನು ಪ್ರತಿಬಿಂಬಿಸುತ್ತದೆ. ಸತತವಾಗಿ ಯೋಗ ಮಾಡುವುದರಿಂದ ನೀವು ವಿಶ್ರಾಂತಿ ಪಡೆಯಲು, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಧನಾತ್ಮಕ ಶಕ್ತಿ ಹೊರಸೂಸುತ್ತದೆ.

5. ಆತ್ಮವಿಶ್ವಾಸ ಬಲಪಡಿಸುತ್ತದೆ: ಸಕಾರಾತ್ಮಕ ಭಾವ ಬೆಳೆಸಿಕೊಳ್ಳುವಲ್ಲಿ ಯೋಗದ ಪಾತ್ರ ಪ್ರಮುಖವಾದುದು. ಯೋಗದ ನಿಯಮಿತ ಅಭ್ಯಾಸವು ಒತ್ತಡವನ್ನು ನಿಭಾಯಿಸಲು ಮತ್ತು ನಮ್ಮ ಕೊರತೆಗಳನ್ನು ನಾವೇ ತಿಳಿದುಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಜೀವನದ ಸವಾಲುಗಳಿಗೆ ಎದೆಯೊಡ್ಡಿ ನಿಂತು, ಛಲದಿಂದ ಅದನ್ನು ಎದುರಿಸುವ ದೃಢತೆಯನ್ನು ನಮ್ಮಲ್ಲಿ ತುಂಬುತ್ತದೆ.

ಒಟ್ಟಿನಲ್ಲಿ ನಿಯಮಿತವಾದ ಯೋಗಾಭ್ಯಾಸವು, ನಿದ್ರೆಯನ್ನು ಸುಧಾರಿಸುವ ಮೂಲಕ ನಮ್ಮೊಳಗಿನ ಆತಂಕವನ್ನು ಮೂಲದಿಂದಲೇ ತೊಡೆದುಹಾಕುತ್ತದೆ. ಖಿನ್ನತೆಯನ್ನು ಕಡಿಮೆ ಮಾಡಿ ಧೈರ್ಯದಿಂದ ಬದುಕನ್ನು ಕಟ್ಟಿಕೊಳ್ಳುವ ನಂಬಿಕೆಯನ್ನು ಮೂಡಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮಗಳು ನಮ್ಮನ್ನು ಮಾನಸಿಕವಾಗಿ ದೃಢವಾಗಿಸುವುದರ ಜೊತೆಗೆ ನಮ್ಮ ಆಲೋಚನೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಇನ್ಯಾಕೆ ತಡ, ಯೋಗಾಭ್ಯಾಸವನ್ನು ನಿತ್ಯವೂ ರೂಢಿ ಮಾಡಿಕೊಳ್ಳಿ.

ವಿಭಾಗ