Child Health: ಮಕ್ಕಳನ್ನು ಕಾಡುತ್ತಿದೆ ಫ್ಲೂ, ವೈರಲ್‌ ಜ್ವರ; ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಹೀಗಿರಲಿ ಅವರ ಜೀವನಕ್ರಮ
ಕನ್ನಡ ಸುದ್ದಿ  /  ಜೀವನಶೈಲಿ  /  Child Health: ಮಕ್ಕಳನ್ನು ಕಾಡುತ್ತಿದೆ ಫ್ಲೂ, ವೈರಲ್‌ ಜ್ವರ; ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಹೀಗಿರಲಿ ಅವರ ಜೀವನಕ್ರಮ

Child Health: ಮಕ್ಕಳನ್ನು ಕಾಡುತ್ತಿದೆ ಫ್ಲೂ, ವೈರಲ್‌ ಜ್ವರ; ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಹೀಗಿರಲಿ ಅವರ ಜೀವನಕ್ರಮ

ಮಳೆಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯು ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಇದು ಮಕ್ಕಳಲ್ಲಿ ವೈರಲ್‌, ಫ್ಲೂ ಜ್ವರದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದರೆ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಡಾ. ಗಣೇಶ್ ಕಾಧೆ.

ಮಕ್ಕಳನ್ನು ಕಾಡುತ್ತಿದೆ ಫ್ಲೂ, ವೈರಲ್‌ ಜ್ವರ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಗಮನ ನೀಡಿ
ಮಕ್ಕಳನ್ನು ಕಾಡುತ್ತಿದೆ ಫ್ಲೂ, ವೈರಲ್‌ ಜ್ವರ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಗಮನ ನೀಡಿ

ಮಳೆಗಾಲದಲ್ಲಿನ ತಂಪಾದ ವಾತಾವರಣ, ಆರ್ದ್ರತೆ ಹಾಗೂ ಶೀತಗಾಳಿಯು ಮನಸ್ಸಿಗೆ ಖುಷಿ ನೀಡಿದರೂ ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಇವು ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಮುಂಗಾರಿನಲ್ಲಿ ವೈರಲ್‌ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚು. ಇದು ಮಕ್ಕಳನ್ನು ಬೇಗ ಆವರಿಸುತ್ತದೆ. ಅಲ್ಲದೆ ಅವರಲ್ಲಿ ಅನಾರೋಗ್ಯ ಉಂಟು ಮಾಡಲು ಕಾರಣವಾಗುತ್ತದೆ.

ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುವುದೂ ಕೂಡ ಕಾಯಿಲೆಗಳನ್ನು ಅವರನ್ನು ಹೆಚ್ಚು ಬಾಧಿಸಲು ಕಾರಣವಾಗುತ್ತದೆ. ಆ ಕಾರಣಕ್ಕೆ ಮಕ್ಕಳ ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚುವಂತೆ ಮಾಡಲು ಸರಿಯಾದ ಪೋಷಣೆ ಅವಶ್ಯ. ಮಕ್ಕಳನ್ನು ಬಾಧಿಸುವ ಫ್ಲೂ ಜ್ವರವನ್ನು ತಡೆಗಟ್ಟುವುದು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಮೂರು ಸಲಹೆಗಳನ್ನು ಇಲ್ಲಿ ವಿವರಿಸಿದ್ದಾರೆ ಅಬಾಟ್ಸ್ ನ್ಯೂಟ್ರಿಷನ್ ಬಿಸಿನೆಸ್‌ನ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ನಿರ್ದೇಶಕ ಡಾ. ಗಣೇಶ್ ಕಾಧೆ.

ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಆದ್ಯತೆ ನೀಡಿ

ಮಕ್ಕಳ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುವುದು ಜ್ವರ ತಡೆಯುವ ಮೊದಲ ಹೆಜ್ಜೆಯಾಗಿದೆ. ಹಣ್ಣುಗಳು, ತರಕಾರಿಗಳು, ಕಾಳುಗಳು ಮತ್ತು ಲೀನ್‌ ಪ್ರೋಟೀನ್‌ ಸಮೃದ್ಧವಾಗಿರುವ ಆಹಾರವು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ಸರಿಯಾದ ಸಮಯಕ್ಕೆ ಮಲಗುವುದು ಕೂಡ ಅವಶ್ಯ. ನಿದ್ದೆಯ ಕೊರತೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಮಕ್ಕಳಿಗೆ ಶೀತ ಹಾಗೂ ಜ್ವರದಂತಹ ಕಾಯಿಲೆಗಳು ಮಕ್ಕಳನ್ನು ಹೆಚ್ಚು ಬಾಧಿಸಬಹುದು.

ವಿಟಮಿನ್‌ ಸಮೃದ್ಧ ಆಹಾರ ನೀಡುವುದು

ವಿಟಮಿನ್ ಎ ಸಮೃದ್ಧ ಆಹಾರಗಳು ಪ್ರತಿರಕ್ಷಣಾ ಕಾರ್ಯ ಸುಧಾರಿಸಲು ಸಹಾಯ ಮಾಡುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲೂ ವಿಟಮಿನ್‌ ಎ ಅಂಶವಿರುತ್ತದೆ. ಕಿತ್ತಳೆ ಹಣ್ಣು, ಕ್ಯಾರೆಟ್‌, ಗೆಣಸು, ಏಪ್ರಿಕಾಟ್‌, ಮಾವಿನಹಣ್ಣು, ಮೀನು ಹಾಗೂ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್‌ ಎ ಅಂಶ ಸಮೃದ್ಧವಾಗಿದೆ.

* ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯ ಬೂಸ್ಟರ್ ಎಂದು ಪ್ರಸಿದ್ಧವಾಗಿದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಮತ್ತು ಚಕ್ಕೋತ, ಸ್ಟ್ರಾಬೆರಿಗಳು, ಕಿವಿ, ಟೊಮೆಟೊಗಳು ಹಾಗೂ ಬ್ರೊಕೊಲಿ, ಪಾಲಲ್‌ ಮತ್ತು ಕೇಲ್‌ (ಎಲೆಕೋಸು) ನಂತಹ ವಿವಿಧ ತರಕಾರಿಗಳು ಈ ಅವಶ್ಯಕ ಪೋಷಕಾಂಶದ ಹೇರಳವಾದ ಮೂಲಗಳಾಗಿವೆ.

* ವಿಟಮಿನ್ ಇ ಒಂದು ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಅದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ಬಾದಾಮಿ, ಕಡಲೆಕಾಯಿಯಂತಹ ಬೀಜಗಳು ಹಾಗೂ ಅವುಗಳ ಬೆಣ್ಣೆ ಮತ್ತು ಎಣ್ಣೆಗಳು, ಹಾಗೆಯೇ ಸೂರ್ಯಕಾಂತಿ ಬೀಜಗಳು ಇವು ವಿಟಮಿನ್ ಇ ಯ ಅತ್ಯುತ್ತಮ ಮೂಲಗಳಾಗಿವೆ.

ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ

ದೈಹಿಕ ಚಟುವಟಿಕೆಯು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ನಿಮ್ಮ ಮಗುವನ್ನು ಆನ್‌ಲೈನ್ ವ್ಯಾಯಾಮ ತರಗತಿಗಳಿಗೆ ಸೇರಿಸಿ. ಹೊರಾಂಗಣ ಅಥವಾ ಚಲನೆ ಇರುವ ಆಟಗಳನ್ನು ಉತ್ತೇಜಿಸಿ. ಮೊಬೈಲ್‌, ಕಂಪ್ಯೂಟರ್‌ ಗೇಮ್‌ಗಳನ್ನು ನಿರ್ಬಂಧಿಸಿ.

ಒತ್ತಡ ಕಡಿಮೆ ಮಾಡಿ

ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಕಥೆಯನ್ನು ಹೇಳುವ-ಕೇಳುವ ಮೂಲಕ, ಪಾಡ್‌ಕ್ಯಾಸ್ಟ್ ಅನ್ನು ಆಲಿಸುವ ಮೂಲಕ ಅಥವಾ ಅಡುಗೆಯಂತಹ ಚಟುವಟಿಕೆಗಳನ್ನು ಒಟ್ಟಿಗೆ ಪ್ರಯತ್ನಿಸುವ ಮೂಲಕ ನಿಮ್ಮ ಮಗುವಿಗೆ ಮಾನಸಿಕ ವಿಶ್ರಾಂತಿ ಸಿಗುವಂತೆ ಮಾಡಿ. ಮಕ್ಕಳನ್ನು ಅಡುಗೆಮನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ.

ಈ ವರ್ಷ ಮಳೆಗಾಲ ಕಡಿಮೆಯಾದರೂ ಆಗಾಗ ಬಿಸಿಲು, ಮಳೆ ಕಾಣಿಸುತ್ತಿದ್ದು, ಈ ಹವಾಮಾನ ವೈಪರೀತ್ಯವು ಮಕ್ಕಳಲ್ಲಿ ರೋಗ ಹರಡಲು ಕಾರಣವಾಗಿದೆ. ಆ ಕಾರಣಕ್ಕೆ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಪೌಷ್ಟಿಕಾಂಶ ಸಮೃದ್ಧ ಆಹಾರ ಸೇವನೆಗೆ ಆದ್ಯತೆ ನೀಡುವುದು, ನಿಯಮಿತ ವ್ಯಾಯಾಮವನ್ನು ಪ್ರೋತ್ಸಾಹಿಸುವುದು, ಒತ್ತಡ ನಿರ್ವಹಣೆಯನ್ನು ಕಲಿಸುವುದರ ಮೂಲಕ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಬಹುದು.

Whats_app_banner