National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಮಳೆಗಾಲ ಆರಂಭವಾಗುವ ಹೊತ್ತಿನಲ್ಲೇ ಸೊಳ್ಳೆಗಳ ಕಾಟವೂ ಹೆಚ್ಚಲು ಆರಂಭವಾಗುತ್ತದೆ. ಸೊಳ್ಳೆ ಕಡಿತದಿಂದ ಉಂಟಾಗುವ ಹಲವು ಸಮಸ್ಯೆಗಳಲ್ಲಿ ಡೆಂಗ್ಯೂ ಕೂಡ ಒಂದು. ಡೆಂಗ್ಯೂ ಕಾಯಿಲೆಗಳಿಂದ ಕಂದಮ್ಮಗಳ ರಕ್ಷಿಸಿಕೊಳ್ಳುವುದು ಪೋಷಕರಿಗೆ ಸವಾಲೇ ಸರಿ. ರಾಷ್ಟ್ರೀಯ ಡೆಂಗ್ಯೂ ದಿನವಾದ ಇಂದು (ಮೇ 16) ಮಕ್ಕಳನ್ನು ಡೆಂಗ್ಯೂವಿನಿಂದ ರಕ್ಷಿಸುವ ಬಗ್ಗೆ ಪೋಷಕರಿಗೆ ಸಲಹೆ ಇಲ್ಲಿದೆ.

ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗಿರಲಿ ಎಚ್ಚರ
ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗಿರಲಿ ಎಚ್ಚರ

ರಾಜ್ಯದಲ್ಲಿ ಪ್ರತಿವರ್ಷ ಮಳೆಗಾಲ ಸಮೀಪಿಸುತ್ತಿದ್ದಂತೆ ಡೆಂಗ್ಯೂ ಭೀತಿ ಆವರಿಸುತ್ತದೆ. ಸೊಳ್ಳೆಗಳ ಪ್ರಭಾವ ಹೆಚ್ಚಾದಂತೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತವೆ. ಈ ವರ್ಷ ಜನವರಿ 1 ರಿಂದ ಮೇ 14ರವರೆಗೆ 2,877 ಡೆಂಗ್ಯೂ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಬಿಸಿಲು-ಮಳೆಯ ಕಣ್ಣಮುಚ್ಚಾಲೆಯಿದ್ದು ಡೆಂಗ್ಯೂ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.

ಡೆಂಗ್ಯೂ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನ ಎಂದು ಆಚರಿಸಲಾಗುತ್ತದೆ. ಇಂದು ರಾಷ್ಟ್ರೀಯ ಡೆಂಗ್ಯೂ ದಿನವಿದ್ದು ʼಸಮುದಾಯದೊಂದಿಗೆ ಸಂಪರ್ಕ ಸಾಧಿಸಿ, ಡೆಂಗ್ಯೂ ನಿಯಂತ್ರಿಸಿʼ ಎಂಬ ವಿಷಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಹೊತ್ತಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಬಹಳ ಮುಖ್ಯವಾಗುತ್ತದೆ. ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆಯ ಬಗ್ಗೆ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಡೆಂಗ್ಯೂ ಜ್ವರ ಹರಡುವುದು ಹೇಗೆ?

ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಇದು ಮಲೇರಿಯಾ ಕಾಯಿಲೆಗೆ ಕಾರಣವಾದ ಸೊಳ್ಳೆಗಿಂತ ಭಿನ್ನವಾಗಿರುತ್ತದೆ. ಈಡಿಸ್ ಈಜಿಪ್ಟಿ ಸೊಳ್ಳೆ ಹಗಲಿನಲ್ಲಿ ಆಹಾರವನ್ನು ಸೇವಿಸುತ್ತದೆ. ಹೀಗಾಗಿ ಹಗಲಿನ ವೇಳೆ ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಡೆಂಗ್ಯೂ ಜ್ವರವು ಮಕ್ಕಳು, ವಯಸ್ಕರಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಮಕ್ಕಳಲ್ಲಿ ಈ ಕಾಯಿಲೆ ಕಂಡುಬಂದಲ್ಲಿ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿರುತ್ತದೆ ಎನ್ನುತ್ತಾರೆ ತಜ್ಞೆ ಶಿಲ್ಪಾ ಪಾಂಡ್ಯ.

ಮಕ್ಕಳಲ್ಲಿ ಕಂಡುಬರುವ ಡೆಂಗ್ಯೂ ಕಾಯಿಲೆಯ ಲಕ್ಷಣಗಳು

ಡೆಂಗ್ಯೂ ಸೋಂಕಿತ ಮಕ್ಕಳಲ್ಲಿ ಆಗಾಗ್ಗೆ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಜಠರದಲ್ಲಿ ಉರಿತದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದಾಗಿ ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ದ್ರವರೂಪದಲ್ಲಿ ಮಲ ವಿಸರ್ಜನೆ ಉಂಟಾಗಲಿದೆ.

ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಮೊದಲ 2 ರಿಂದ 4 ವಾರಗಳ ಕಾಲ ಹೆಚ್ಚು ಜಾಗ್ರತೆ ವಹಿಸಬೇಕು. ಪ್ಯಾರಾಸಿಟಮಲ್‌ನಂತಹ ಜ್ವರ ನಿವಾರಕ ಔಷಧಿಗಳನ್ನು ಮಕ್ಕಳಿಗೆ ನೀಡಬೇಕು. ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವ ಜೊತೆಗೆ ನೀರು ಕುಡಿಸಬೇಕು ಎನ್ನುತ್ತಾರೆ ತಜ್ಞರು.

ಡೆಂಗ್ಯೂ ಕುರಿತ ಸತ್ಯ ಹಾಗೂ ಮಿಥ್ಯಗಳು

ತಪ್ಪುಕಲ್ಪನೆ: ಡೆಂಗ್ಯೂ ಕಲುಷಿತ ನೀರಿನಿಂದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.

ಸತ್ಯ: ಡೆಂಗ್ಯೂ ಸೊಳ್ಳೆ ಕಡಿತದಿಂದ ಮಾತ್ರ ಹರಡುತ್ತದೆ. ಆದರೂ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಮಿಥ್ಯ: ಡೆಂಗ್ಯೂ ಸೋಂಕಿತ ತಾಯಂದಿರು ಹಾಲುಣಿಸಬಾರದು.

ಸತ್ಯ: ಡೆಂಗ್ಯೂ ವೈರಸ್ ಎದೆ ಹಾಲಿನ ಮೂಲಕ ಹರಡುವುದಿಲ್ಲ.

ಮಿಥ್ಯ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಡೆಂಗ್ಯೂ ಬರಬಹುದು.

ಸತ್ಯ: ಡೆಂಗ್ಯೂ ಸಂಪರ್ಕದಿಂದ, ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಹರಡುವುದಿಲ್ಲ.

ಮಿಥ್ಯ: ಡೆಂಗ್ಯೂ ಸೋಂಕಿನಿಂದ ರೋಗನಿರೋಧಕ ಶಕ್ತಿ ಬರುತ್ತದೆ.

ಸತ್ಯ: ಯಾವುದೇ ರೋಗನಿರೋಧಕ ಶಕ್ತಿ ಸಿಗುವುದಿಲ್ಲ. ಜನರು ಡೆಂಗ್ಯೂನಿಂದ ಪುನಃ ಸೋಂಕಿಗೆ ಒಳಗಾಗಬಹುದು.

ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳಿವು

ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.

* ಊಟ ಸೇವನೆಗೆ ನಿರಾಕರಿಸುವುದು ಅಥವಾ ವಾಂತಿ ಮಾಡುವುದು.

* ನಿದ್ರಾಹೀನತೆ ಅಥವಾ ಚಡಪಡಿಕೆಗೆ ಒಳಗಾಗುವುದು.

* ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ, ವಾಂತಿ ಅಥವಾ ಮಲದಲ್ಲಿ ರಕ್ತಸ್ರಾವ ಕಂಡುಬರುವುದು.

* ಹೊಟ್ಟೆ ನೋವು

* ಚರ್ಮದ ಬಣ್ಣ ಬದಲಾವಣೆ, ಕೈ ಮತ್ತು ಪಾದಗಳು ತಣ್ಣಗಾಗುವುದು.

* ಕನಿಷ್ಠ 6 ಗಂಟೆಗಳ ಕಾಲ ಮೂತ್ರ ಕಟ್ಟಿಕೊಂಡಿರುವುದು.

ಡೆಂಗ್ಯೂನಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರಿಗೆ ಸಲಹೆಗಳು

ಪೋಷಕರು ತಮ್ಮ ಮಕ್ಕಳನ್ನು ಡೆಂಗ್ಯೂನಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ

* ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.

* ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತುಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.

* ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಅವಶ್ಯ.

* ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.

* ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.

* ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.

ಡೆಂಗ್ಯೂವಿನಿಂದ ಮಕ್ಕಳಷ್ಟೇ ಅಲ್ಲ, ದೊಡ್ಡವರು ಕೂಡ ಎಚ್ಚರ ವಹಿಸಬೇಕು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಡೆಂಗ್ಯೂ ಸೇರಿದಂತೆ ಹಲವು ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಹಾಗಾಗಿ ಸೊಳ್ಳೆಗಳಿಂದ ದೂರ ಇರುವಂತೆ ಎಚ್ಚರ ವಹಿಸುವುದು ಬಹಳ ಮುಖ್ಯವಾಗುತ್ತದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

Whats_app_banner