ಕನ್ನಡ ಸುದ್ದಿ  /  ಜೀವನಶೈಲಿ  /  Plastic Bottle: ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ಯಾ; ಇದರಿಂದ ಏನೆಲ್ಲಾ ಅಪಾಯಗಳಿವೆ ನೋಡಿ

Plastic Bottle: ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ಯಾ; ಇದರಿಂದ ಏನೆಲ್ಲಾ ಅಪಾಯಗಳಿವೆ ನೋಡಿ

ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚುವ ಕಾರಣಕ್ಕೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ತುಂಬಿಸಿಟ್ಟುಕೊಂಡು ಕುಡಿಯುವ ಅಭ್ಯಾಸ ನಿಮಗೂ ಇದ್ಯಾ? ಇದರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂಬುದು ಸಾಬೀತಾಗಿದೆ.

ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ಯಾ; ಇದರಿಂದ ಏನೆಲ್ಲಾ ಅಪಾಯಗಳಿವೆ ನೋಡಿ
ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ಯಾ; ಇದರಿಂದ ಏನೆಲ್ಲಾ ಅಪಾಯಗಳಿವೆ ನೋಡಿ

ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚುವುದು ಸಹಜ. ಪದೇ ಪದೇ ನೀರು ಕುಡಿಯಬೇಕು ಅನ್ನಿಸುತ್ತದೆ. ಹಾಗಾಗಿ ನಾವು ಎಲ್ಲೇ ಇದ್ದರೂ, ಎಲ್ಲಿಗೆ ಹೋಗುವುದಿದ್ದರೂ ಒಂದು ಬಾಟಲಿ ನೀರನ್ನು ಜೊತೆಯಲ್ಲಿ ಇರಿಸಿಕೊಳ್ಳುತ್ತೇವೆ. ಹಲವರಿಗೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುವ ಅಭ್ಯಾಸವಿದೆ. ಪ್ಲಾಸ್ಟಿಕ್‌ ಬಾಟಲಿ ಭಾರವೂ ಕಡಿಮೆ ಇರುವ ಕಾರಣ ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಅಲ್ಲದೇ ಬಣ್ಣ ಬಣ್ಣ ವಿವಿಧ ಆಕಾರ, ಗಾತ್ರಗಳ ಬಾಟಲಿಗಳು ನಮ್ಮ ಗಮನ ಸೆಳೆಯುವಂತೆ ಮಾಡುವುದು ಸುಳ್ಳಲ್ಲ. ಆದರೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಖಂಡಿತ ಒಳಿತಲ್ಲ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ವೈದ್ಯಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅದಕ್ಕೆ ಕಾರಣ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಇರಿಸಿದ ನೀರಿನಲ್ಲಿ ಬಿಡುಗಡೆಯಾಗುವ ರಾಸಾಯನಿಕ ಅಂಶಗಳು ಹಾಗೂ ಆರೋಗ್ಯದ ಮೇಲೆ ಅವುಗಳಿಂದಾಗುವ ಪರಿಣಾಮ.

ʼಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಸಂಗ್ರಹಿಸಲಾದ ಪ್ರತಿ ಲೀಟರ್‌ ನೀರಿನಲ್ಲಿ 1,00,000 ನ್ಯಾನೊಪ್ಲಾಸ್ಟಿಕ್ ಅಣುಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇವು ಅತ್ಯಂತ ಸಣ್ಣಕಣಗಳಾದ ಕಾರಣ ರಕ್ತಪ್ರವಾಹಕ್ಕೆ, ಜೀವಕೋಶಗಳಿಗೆ ಹಾಗೂ ಮೆದುಳಿಗೆ ಸುಲಭವಾಗಿ ಪ್ರವೇಶಿಸಬಹುದು. ಜೊತೆಗೆ ಇವುಗಳು ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದುʼ ಎಂದು ಅಧ್ಯಯನ ವರದಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವುದರಿಂದಾಗುವ ಅಪಾಯಗಳು, ಅಧ್ಯಯನ ವರದಿಯಲ್ಲಿ ಪ್ರಕಟವಾದ ಅಂಶಗಳ ಸತ್ಯಾಸತ್ಯತೆ ಬಗ್ಗೆ ನೋಯ್ಡಾದ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಹಾಸ್ಪಿಟಲ್ ಜನರಲ್ ಮೆಡಿಸಿನ್, ಅಸೋಸಿಯೇಟ್ ಪ್ರೊಫೆಸರ್ ಡಾ. ಎಸ್. ಎ. ರೆಹಮಾನ್ ಅವರು ಹೇಳಿರುವುದು ಹೀಗೆ.

ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವುದರಿಂದಾಗುವ ಸಂಭಾವ್ಯ ಅಪಾಯಗಳು

ʼನೀರಿನಲ್ಲಿ ಮುಳುಗುವ ಬಿಸ್ಫೆನಾಲ್-ಎ (ಬಿಪಿಎ) ಮತ್ತು ಥಾಲೇಟ್‌ಗಳಂತಹ ರಾಸಾಯನಿಕಗಳ ಅಂಶಗಳು ಪ್ಲಾಸ್ಟಿಕ್‌ ಬಾಟಲಿಯಲ್ಲಿರುತ್ತವೆ. ವಿಶೇಷವಾಗಿ ಈ ಬಾಟಲಿಗಳು ಶಾಖ ಅಥವಾ ಬಿಸಿಲಿಗೆ ಒಡ್ಡಿಕೊಂಡಾಗ ಈ ಅಂಶಗಳು ಹೆಚ್ಚು ಬಿಡುಗಡೆಯಾಗುತ್ತವೆ. ಅಂತಹ ಸಂದರ್ಭದಲ್ಲಿ ಆ ಬಾಟಲಿಯಲ್ಲಿದ್ದ ನೀರನ್ನು ನಾವು ಕುಡಿದಾಗ ಆರೋಗ್ಯಕ್ಕೆ ಹಾನಿಕಾರಕವಾಗಬಹುದುʼ ಎಂದು ಡಾ. ರೆಹಮಾನ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಪಿಎ ಮತ್ತು ಥಾಲೇಟ್‌ಗಳಂತಹ ಅಂಶಗಳು ಸಂತಾನೋತ್ಪತ್ತಿ ಮತ್ತು ಹಾರ್ಮೋನ್ ಅಸಮತೋಲನದ ತೊಂದರೆಗಳೊಂದಿಗೆ ಸಂಪರ್ಕ ಹೊಂದಿದೆ. ಮೈಕ್ರೋಪ್ಲಾಸ್ಟಿಕ್‌ಗಳಿಂದ ಕಲುಷಿತಗೊಂಡ ನೀರು ಜೀವಕೋಶಗಳಿಗೆ ಉರಿಯೂತ ಮತ್ತು ಹಾನಿಯನ್ನು ಉಂಟುಮಾಡಬಹುದು.

ಸಂಶೋಧನೆಯ ಬಗ್ಗೆ ಮಾತನಾಡುವ ಅವರು ʼಪ್ಲಾಸ್ಟಿಕ್‌ ಬಾಟಲಿಯಲ್ಲಿನ ರಾಸಾಯನಿಕ ಅಂಶಗಳು ದೀರ್ಘಕಾಲದವರೆಗೆ ದೇಹ ಪ್ರವೇಶಿಸಿದರೆ ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಅಸ್ವಸ್ಥತೆಗಳಂತಹ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸಬಹುದುʼ ಎಂದು ಹೇಳುತ್ತಾರೆ.

ʼದೀರ್ಘಕಾಲೀನ ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ. "ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಮಿತಿಗೊಳಿಸುವುದು ಮತ್ತು ಫಿಲ್ಟರ್ ಮಾಡಿದ ಟ್ಯಾಪ್ ನೀರನ್ನು ಬಳಸುವುದು ಈ ಅಪಾಯಕಾರಿ ಕಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದನ್ನು ತಡೆಯಲು ಮಾಡಲು ಸಹಾಯ ಮಾಡುತ್ತದೆ" ಎಂದು ವೈದ್ಯರು ಹೇಳುತ್ತಾರೆ.

ಪ್ಲಾಸ್ಟಿಕ್‌ ಬಾಟಲಿಗೆ ಪರ್ಯಾಯವಿದು

ಡಾ ರೆಹಮಾನ್ ಪ್ರಕಾರ ಪ್ಲಾಸ್ಟಿಕ್‌ ಬಾಟಲಿಯಲ್ಲಿರುವ ನೀರನ್ನು ಸೂರ್ಯನ ಬೆಳಕಿಗೆ ನೇರವಾಗಿ ಮತ್ತು ದೀರ್ಘವಾಗಿ ಒಡ್ಡಿಕೊಳ್ಳುವುದರಿಂದ, ಕ್ಯಾನ್ಸರ್ ಮತ್ತು ಇತರ ಹಾನಿಕಾರಕ ಆರೋಗ್ಯ ಫಲಿತಾಂಶಗಳಂತಹ ಹೃದಯರಕ್ತನಾಳದ ಅಸ್ವಸ್ಥತೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಮರುಬಳಕೆ ಮಾಡಬಹುದಾದ ಗಾಜು ಅಥವಾ ಸ್ಟೇನ್‌ಲೆಸ್ ಸ್ಟೀಲ್ ಕಂಟೈನರ್‌ಗಳ ಬಳಕೆ ಉತ್ತಮ.

ಪ್ಲಾಸ್ಟಿಕ್‌ ಬಾಟಲಿಗಳ ಬದಲು ನೀರು ಕುಡಿಯಲು ಸ್ಟೇನ್‌ಲೆಸ್ಟ್‌ ಸ್ಟೀಲ್‌ ಬಾಟಲಿಗಳು ಉತ್ತಮ ಎನ್ನುವ ಡಾ. ರೆಹಮಾನ್‌ ಈ ಬಾಟಲಿಗಳು ನೀರಿನ ಗುಣಮಟ್ಟವನ್ನು ಕಾಪಾಡುತ್ತವೆ. ಇವುಗಳು ಬಿಪಿಎ ಹೊಂದಿರುವುದಿಲ್ಲ. ಅವು ವಿಷಕಾರಿಯಲ್ಲದ ಕಾರಣ ರಾಸಾಯನಿಕಗಳನ್ನು ಹೊರ ಹಾಕುವುದಿಲ್ಲ. ಗಾಜಿನ ಬಾಟಲಿಗಳು ಇನ್ನೂ ಉತ್ತಮ ಆಯ್ಕೆಯಾಗಿದೆ. ಪರಿಸರ ಸ್ನೇಹಿ ಪರ್ಯಾಯಗಳಲ್ಲಿ ಸಮರ್ಥನೀಯ ಮತ್ತು ಜೈವಿಕ ವಿಘಟನೀಯ ಸಸ್ಯ ಆಧಾರಿತ ಅಥವಾ ಬಿದಿರಿನ ಬಾಟಲಿಗಳು ಸೇರಿವೆ.

ʼಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನು ತಪ್ಪಿಸಬೇಕು. ಮನೆಯಲ್ಲೂ ಸ್ಟೀಟ್‌, ಮಣ್ಣಿನ ಪಾತ್ರೆ, ಗಾಜಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಇಡಬೇಕು. ಇದರಿಂದ ವೈಯಕ್ತಿಕ ಆರೋಗ್ಯ ಸುಧಾರಣೆಯ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಉಂಟುಮಾಡುವ ಹಾನಿಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು, ದಿನದಲ್ಲಿ 8 ಗ್ಲಾಸ್‌ ನೀರನ್ನು ತಪ್ಪದೇ ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೇ ಬೇಸಿಗೆಯಲ್ಲಿ ದಾಹ ಹೆಚ್ಚಿರುವ ಕಾರಣಕ್ಕೆ ಪದೇ ಪದೇ ನೀರು ಕುಡಿಯಬೇಕು ಅನ್ನಿಸುವುದು ಸಹಜ. ಹಾಗಂತ ತಪ್ಪಿಯೂ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ಕುಡಿಯಬೇಡಿ. ಇದರಿಂದ ಒಂದಿಲ್ಲೊಂದು ಸಮಸ್ಯೆ ತಪ್ಪಿದ್ದಲ್ಲ.