ಬೇಸಿಗೆಯಲ್ಲಿ ಹೆಚ್ಚಬಹುದು ಹೃದ್ರೋಗ ಸಮಸ್ಯೆ; ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ, ಹೃದಯಾಘಾತದ ಭಯ ದೂರವಾಗಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಹೆಚ್ಚಬಹುದು ಹೃದ್ರೋಗ ಸಮಸ್ಯೆ; ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ, ಹೃದಯಾಘಾತದ ಭಯ ದೂರವಾಗಿಸಿ

ಬೇಸಿಗೆಯಲ್ಲಿ ಹೆಚ್ಚಬಹುದು ಹೃದ್ರೋಗ ಸಮಸ್ಯೆ; ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ, ಹೃದಯಾಘಾತದ ಭಯ ದೂರವಾಗಿಸಿ

ಬೇಸಿಗೆಯಲ್ಲಿ ಹೃದಯದ ಆರೋಗ್ಯ ಏರುಪೇರಾಗುವುದು ಸಹಜ. ಹೆಚ್ಚುತ್ತಿರುವ ತಾಪಮಾನವು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಹೃದಯವನ್ನು ಜೋಪಾನ ಮಾಡುವುದು ಅವಶ್ಯ. ಹಾಗಾದರೆ ಬೇಸಿಗೆಯಲ್ಲಿ ಹೃದಯ ಕಾಳಜಿ ಮಾಡಿ, ಹೃದ್ರೋಗಗಳಿಂದ ದೂರವಿರುವುದು ಹೇಗೆ, ಇಲ್ಲಿದೆ ಒಂದಿಷ್ಟು ಸರಳ ಸಲಹೆಗಳು.

ಬೇಸಿಗೆಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ
ಬೇಸಿಗೆಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ತಾಪಮಾನದಲ್ಲಿ ಏರಿಕೆಯಾಗಿ ಆರೋಗ್ಯದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತವೆ. ಸಾಲು ಸಾಲು ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಕಂಗಾಲಾಗಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಹ ಸುಡುಬಿಸಿಲಿಗೆ ಹೈರಾಣಾಗುತ್ತಾರೆ, ಜೊತೆಗೆ ಇಲ್ಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೀಟ್‌ ಸ್ಟ್ರೋಕ್‌, ಜೀರ್ಣಕಾರಿ ಸಮಸ್ಯೆ, ಚರ್ಮದ ಸಮಸ್ಯೆ, ಜ್ವರ ಮತ್ತು ಸೋಂಕಿನ ಸಮಸ್ಯೆಗಳು ಹೆಚ್ಚು ಕಾಣಿಸುತ್ತವೆ. ಇದರೊಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಹೃದಯಾಘಾತದ ಸಾಧ್ಯತೆಗಳೂ ಹೆಚ್ಚು.

ಅತಿಯಾದ ತಾಪಮಾನವು ದೇಹದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಇದು ಹೃದಯವು ಹೆಚ್ಚು ರಕ್ತವನ್ನು ಪಂಪ್ ಮಾಡುವಂತೆ ಮಾಡುತ್ತದೆ. ಇದರಿಂದ ಬೇಸಿಗೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತದೆ. ಆ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ದೇಹಾರೋಗ್ಯದ ಜೊತೆಗೆ ಹೃದಯದ ಆರೋಗ್ಯ ಕಾಳಜಿಗೂ ಒತ್ತು ನೀಡಬೇಕು.

ಬೇಸಿಗೆಯಲ್ಲಿ ಹೀಗಿರಲಿ ಹೃದಯದ ಕಾಳಜಿ

ಆರೋಗ್ಯಕರ ಆಹಾರ ಸೇವಿಸಿ

ಬಾಯಿ ಚಪಲದ ಕಾರಣದಿಂದ ಹೊತ್ತು ಗೊತ್ತಿಲ್ಲದೇ ಜಂಕ್ ಫುಡ್‌ ಸೇವಿಸುವವರು ನೀವಾಗಿದ್ದರೆ ಈ ಕೂಡಲೇ ಅವೆಲ್ಲದಕ್ಕೂ ಬ್ರೇಕ್‌ ಹಾಕಿ. ಯಾಕೆಂದರೆ ಬೇಸಿಗೆ ಕಾಲದಲ್ಲಿ ಎಂದಿನಂತೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುವುದಿಲ್ಲ. ಎಲ್ಲದರಲ್ಲೂ ಮೂಲ ಜೀರ್ಣಾಂಗ ವ್ಯವಸ್ಥೆಯಾಗಿದ್ದು, ಅದುವೇ ಸರಿಯಾಗಿ ಕಾರ್ಯನಿರ್ವಹಿಸದೇ ಹೋದರೆ ಎಲ್ಲ ಅಂಗಾಂಗಗಳ ಮೇಲೂ ಅದು ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಕಷ್ಟು ನೀರಿನಾಂಶವುಳ್ಳ ಆಹಾರ ಪದಾರ್ಥಗಳು, ಪಾನೀಯಗಳು, ಪೋಷಕಾಂಶಯುಕ್ತ ಹಣ್ಣುಗಳ ಸೇವನೆಯ ಕಡೆ ಹೆಚ್ಚಿನ ಗಮನವಹಿಸಿ.

ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿರಿ

ಸುಡು ಬಿಸಿಲಿನಲ್ಲಿ ದೇಹದೊಳಗಿನ ಚಟುವಟಿಕೆಗಳು ಸರಾಗವಾಗಿ ನಡೆಯಲು ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಇಲ್ಲವಾದರೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು. ಇದು ಪ್ರಮುಖವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀರು ಕುಡಿದಷ್ಟೂ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ.

ತಿಳಿ ಬಣ್ಣದ ಸಡಿಲವಾದ ಬಟ್ಟೆ ನಿಮ್ಮ ಆಯ್ಕೆಯಾಗಿರಲಿ

ದೇಹಾರೋಗ್ಯದ ಜೊತೆಗೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಡಿಲವಾದ ಬಟ್ಟೆಗಳನ್ನು ಧರಿಸಿ. ಅಲ್ಲಿ ತಿಳಿ ಬಣ್ಣದ ಬಟ್ಟೆಗಳನ್ನೇ ಆಯ್ದುಕೊಳ್ಳಿ. ಇದರಿಂದ ದೇಹವು ಅತಿಯಾಗಿ ಬೆವರಲಾರದು. ಅಲ್ಲದೆ ಹೃದಯದ ಮೇಲಾಗುವ ಒತ್ತಡವನ್ನು ನಿಯಂತ್ರಿಸಬಲ್ಲುದು.

ಬೇಸಿಗೆಯ ಅತಿಯಾದ ವ್ಯಾಯಾಮಕ್ಕಿರಲಿ ಕಡಿವಾಣ

ಅತಿಯಾದರೆ ಅಮೃತವೂ ವಿಷ ಎಂಬುದು ಬೇಸಿಗೆ ಕಾಲದ ವ್ಯಾಯಾಮಕ್ಕೂ ಹೊಂದಿಕೊಳ್ಳುವ ಗಾದೆ. ನಿತ್ಯವೂ ದೇಹಕ್ಕೆ ವ್ಯಾಯಾಮದ ಅಗತ್ಯವಿದೆ ಸರಿ. ಆದರೆ ಬೇಸಿಗೆಕಾಲದ ಅತಿಯಾದ ವ್ಯಾಯಾಮ ಶರೀರವನ್ನು ನಿರ್ಜಲೀಕರಣಗೊಳಿಸುತ್ತದೆ. ಇದರಿಂದಾಗಿ ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ. ಅಲ್ಲದೆ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಆರೋಗ್ಯ ಯಾವಾಗ ಏರುಪೇರಾಗಿಬಿಡುತ್ತದೆ ಎಂದು ಊಹಿಸುವುದೂ ಕಷ್ಟ. ಅದರಲ್ಲೂ ಹೃದಯ ಆರೋಗ್ಯವಂತೂ ಕೇಳುವುದೇ ಬೇಡ. ಆದ್ದರಿಂದ ನಿಮ್ಮ ಹೃದಯ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ವೈದ್ಯರಿಂದ ನಿಮ್ಮ ಆರೋಗ್ಯ ಸಂಬಂಧಿ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುತ್ತಿರಿ.

ಬೇಸಿಗೆಯಲ್ಲಿ ಹೃದಯದ ಆರೋಗ್ಯಕ್ಕಾಗಿ ಇವುಗಳನ್ನು ತಪ್ಪದೇ ಸೇವಿಸಿ

ನೀರಿನ ಅಂಶ ಹೆಚ್ಚಾಗಿರುವ ಆಹಾರಗಳನ್ನು ಬೇಸಿಗೆಯಲ್ಲಿ ಸೇವಿಸುತ್ತಿದ್ದರೆ ಉತ್ತಮ. ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣು, ಬೆರ್ರಿಗಳು, ಪಪ್ಪಾಯ, ಸೌತೆಕಾಯಿಯಂತಹ ಹಣ್ಣು-ತರಕಾರಿಗಳು ಬೇಸಿಗೆ ಕಾಲಕ್ಕೆ ಸೂಕ್ತ. ಇನ್ನು ಲೀನ್‌ ಪ್ರೊಟೀನ್ ಮೂಲಗಳಾದ ಮೀನು, ಕೋಳಿ ಮತ್ತು ನಿರಂತರ ಶಕ್ತಿ ಮತ್ತು ಫೈಬರ್‌ಗಾಗಿ ಬ್ರೌನ್ ರೈಸ್‌ನಂತಹ ಧಾನ್ಯಗಳನ್ನು ಆರಿಸಿಕೊಳ್ಳಿ.

ಸೋಡಿಯಂ ಅಧಿಕವಾಗಿರುವ ಆಹಾರಗಳಿಂದ ದೂರವಿರಲೇಬೇಕು. ಸಕ್ಕರೆ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆ ಒಳ್ಳೆಯದಲ್ಲ. ಅಲ್ಲದೆ ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಹದಗೆಡಿಸುವ ಧೂಮಪಾನವನ್ನು ತ್ಯಜಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ಬೇಸಿಗೆಕಾಲದಲ್ಲಿ ನಿಮ್ಮ ಹೃದಯದ ಮಾತನ್ನು ನೀವೇ ಒಮ್ಮೆ ಕೇಳಿ ನೋಡಿ.

ಬೇಸಿಗೆಯಲ್ಲಿ ಹೃದಯಾಘಾತವಾಗುವ ಪ್ರಮಾಣವು ಹೆಚ್ಚಿರುವ ಕಾರಣದಿಂದ ಆರೋಗ್ಯದ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಮಹತ್ವ ನೀಡಬೇಕು. ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ಹೃದಯದ ಆರೋಗ್ಯದ ಜೊತೆಗೆ ದೇಹಾರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಬರಹ: ಭಾಗ್ಯ ದಿವಾಣ

Whats_app_banner