Monsoon Health: ಮಳೆಗಾಲದಲ್ಲಿ ಬಾಧಿಸುವ ಹೆಪಟೈಟಿಸ್‌ ಇ ಸಮಸ್ಯೆಗೆ ಇಲ್ಲಿದೆ ಪರಿಹಾರ ಮಾರ್ಗ; ಭಯ ಬೇಡ ಮುನ್ನೆಚ್ಚರಿಕೆ ಇರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ಬಾಧಿಸುವ ಹೆಪಟೈಟಿಸ್‌ ಇ ಸಮಸ್ಯೆಗೆ ಇಲ್ಲಿದೆ ಪರಿಹಾರ ಮಾರ್ಗ; ಭಯ ಬೇಡ ಮುನ್ನೆಚ್ಚರಿಕೆ ಇರಲಿ

Monsoon Health: ಮಳೆಗಾಲದಲ್ಲಿ ಬಾಧಿಸುವ ಹೆಪಟೈಟಿಸ್‌ ಇ ಸಮಸ್ಯೆಗೆ ಇಲ್ಲಿದೆ ಪರಿಹಾರ ಮಾರ್ಗ; ಭಯ ಬೇಡ ಮುನ್ನೆಚ್ಚರಿಕೆ ಇರಲಿ

Tips To Protect From Hepatitis E: ಮಳೆಗಾಲದಲ್ಲಿ ಹೆಪಟೈಟಿಸ್‌ ಇ ಸಮಸ್ಯೆ ಕಾಣಿಸುವುದು ಸಾಮಾನ್ಯ. ಇದು ಎಲ್ಲ ವಯೋಮಾನದವರನ್ನೂ ಕಾಡುವ ಸಮಸ್ಯೆ. ಈ ಸಮಸ್ಯೆಯಿಂದ ದೂರವಿರುವುದು ಹೇಗೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತ ಲೇಖನ ಇಲ್ಲಿದೆ.

ಮಳೆಗಾಲದಲ್ಲಿ ಕಾಡುವ ಹೆಪಟೈಟಿಸ್‌ ಇ ಬಗ್ಗೆ ಇರಲಿ ಎಚ್ಚರ
ಮಳೆಗಾಲದಲ್ಲಿ ಕಾಡುವ ಹೆಪಟೈಟಿಸ್‌ ಇ ಬಗ್ಗೆ ಇರಲಿ ಎಚ್ಚರ

ಐದಾರು ತಿಂಗಳು ಬಿಸಿಲಿನ ಬೇಗೆಯಿಂದ ಕೆಂಗಟ್ಟ ಧರೆ, ಜೀವಗಳಿಗೆ ಮಳೆರಾಯ ತಂಪೆರೆಯುವುದು ನಿಜ. ಆದರೆ ಮಳೆ ತನ್ನೊಂದಿಗೆ ಹಲವು ರೋಗಗಳನ್ನು ಜೊತೆಯಾಗಿಯೇ ತೆಗೆದುಕೊಂಡು ಬರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಳೆಗಾಲದಲ್ಲಿ ಚರ್ಮ, ಕಣ್ಣಿನ ಸೋಂಕು, ಜಠರಗರುಳಿನ ಸಮಸ್ಯೆಗಳು, ಕೀಲುನೋವು, ಕೆಮ್ಮು, ನೆಗಡಿ, ಜ್ವರ ಅಥವಾ ಹೆಪಟೈಟಿಸ್‌ ಇಯಂತಹ ಗಂಭೀರ ಸೋಂಕುಗಳ ಪರಿಸ್ಥಿತಿಯ ಹೊರತಾಗಿಯೂ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಹೆಪಟೈಟಿಸ್‌ ಇ ಸಮಸ್ಯೆ ಮಳೆಗಾಲದಲ್ಲಿ ಕಾಡುವುದು ಹೆಚ್ಚು. ಇದನ್ನು ಯಕೃತ್ತಿನ ಹಾನಿ ಮತ್ತು ಉರಿಯೂತಕ್ಕೆ ಕಾರಣವಾಗುವ ವೈರಲ್‌ ಸೋಂಕು ಎನ್ನಬಹುದು.

ಈ ಹೆಪಟೈಟಿಸ್‌ ಇ ವೈರಸ್‌ ಮಲ, ಕಲುಷಿತ ನೀರು ಅಥವಾ ಆಹಾರದಿಂದ ಹರಡುತ್ತದೆ. ಇದು ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಮಳೆಗಾಲದಲ್ಲ ನೀರಿನ ಮಾಲಿನ್ಯ ಸಾಮಾನ್ಯ. ವಿಶೇಷವಾಗಿ ನೀರು ಸರಬರಾಜಾಗುವ ಮಾರ್ಗಗಳು ಮತ್ತು ಸಂಗ್ರಹ ಅಥವಾ ನೀರಿನ ಶೇಖರಣಾ ತೊಟ್ಟಿಗಳಂತಹ ಪ್ರದೇಶಗಳು ಹೆಪಟೈಟಿಸ್‌ ಇ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ ಎಂಬುದು ತಿಳಿದಿರುವ ಸತ್ಯ. ಆದರೆ ಈ ಸೋಂಕನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದ ನಿರ್ವಹಿಸಬಹುದಾದ ಕಾರಣ ಭಯ ಪಡುವ ಅಗತ್ಯವಿರುವುದಿಲ್ಲ.

ರೋಗಲಕ್ಷಣಗಳು

ಮುಂಬೈನ ಗ್ಲೋಬಲ್‌ ಆಸ್ಪತ್ರೆಯಲ್ಲಿ ಹೆಪಟಾಲಜಿ ಮತ್ತು ಲಿವರ್‌ ಐಸಿಯು ವಿಭಾಗದ ಮುಖ್ಯಸ್ಥ ಡಾ. ಅಮೀತ್‌ ಮಂಡೋಟ್‌ ಅವರು ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ವಿವರಿಸಿದ್ದಾರೆ. ಹಸಿವಾಗದೇ ಇರುವುದು, ಕಣ್ಣು ಹಾಗೂ ಚರ್ಮ ಹಳದಿಯಾಗುವುದು, ಜ್ವರ, ಕೀಲುನೋವು, ಹೊಟ್ಟೆ ನೋವು, ವಾಂತಿ, ವಾಕರಿಕೆ, ಸುಸ್ತು ಇವು ಹೆಪಟೈಟಿಸ್‌ ಇ ಸಮಸ್ಯೆಯ ಕೆಲವು ಲಕ್ಷಣಗಳು. ಹೆಪಟೈಟಿಸ್‌ ಇ ಅನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯುತ್ತಾರೆ. ಇದನ್ನು ನಿಧಾನಕ್ಕೆ ಗುಣವಾಗುತ್ತದೆ. ಆದರೆ ಇದರ ರೋಗಲಕ್ಷಣಗಳನ್ನು ಗುರುತಿಸಿದ ನಂತರ ಚಿಕಿತ್ಸೆ ಪಡೆಯಲು ವಿಳಂಬ ಮಾಡಬಾರದುʼ ಎನ್ನುತ್ತಾರೆ.

ಚಿಕಿತ್ಸೆ

ಹೆಪಟೈಟಿಸ್‌ ಇ ರೋಗಲಕ್ಷಣಗಳು ಕಾಣಿಸಿಕೊಂಡವರು ಯಾವುದೇ ಕಾರಣಕ್ಕೂ ಮನೆಮದ್ದು ಅಥವಾ ಸ್ವಯಂ ಔಷಧಿಗಳ ಮೊರೆ ಹೋಗುವುದನ್ನು ತಪ್ಪಿಸಬೇಕು. ತಕ್ಷಣಕ್ಕೆ ವೈದ್ಯರ ಬಳಿ ತೋರಿಸಬೇಕು ಮತ್ತು ವೈದ್ಯರ ಸಲಹೆ ನೀಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಸ್ವಯಂ ಔಷಧಿಗಳು ರೋಗಲಕ್ಷಣಗಳು ಉಲ್ಬಣವಾಗಲು ಕಾರಣವಾಗಬಹುದು. ಅಲ್ಲದೆ ಈ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಕೂಡ ಅಷ್ಟೇ ಮುಖ್ಯ. ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಎಚ್ಚರದಿಂದಿರುವುದು ಉತ್ತಮʼ ಎಂದು ಡಾ. ಅಮೀತ್‌ ಸಲಹೆ ನೀಡುತ್ತಾರೆ.

ತಡೆಗಟ್ಟಲು ಸಲಹೆಗಳು

ಹೆಪಟೈಟಿಸ್‌ ಈ ಸಮಸ್ಯೆ ತಡೆಗಟ್ಟುವ ಬಗ್ಗೆ ಮಾತನಾಡುವ ಡಾ. ಅಮೀತ್‌ ʼಹೆಪಟೈಟಿಸ್‌ ಆಹಾರ ಹಾಗೂ ನೀರಿನಿಂದ ಹರಡುವ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ಮಲ ಮತ್ತು ಬಾಯಿಯ ಮಾರ್ಗದ ಮೂಲಕ ಹರಡುತ್ತದೆ. ಮನೆ ಪರಿಸರದ ನೈರ್ಮಲ್ಯ, ವೈಯಕ್ತಿಕ ನೈರ್ಮಲ್ಯ ಮತ್ತು ಶುದ್ಧ ನೀರನ್ನು ಕುಡಿಯಬೇಕು. ಕಚ್ಚಾ ಆಹಾರಗಳು, ಸಲಾಡ್‌, ಜ್ಯೂಸ್‌ಗಳನ್ನು ಸೇವಿಸಬಾರದು. ಯಾವುದೇ ಕಾರಣಕ್ಕೂ ಬೀದಿ ಬದಿ ಆಹಾರಗಳ ಸೇವನೆ ಮಾಡದಿರಿ. ಕತ್ತರಿಸಿ ಇಟ್ಟ ಹಣ್ಣು, ತರಕಾರಿಗಳ ಸೇವನೆಗೆ ಕಡಿವಾಣ ಹಾಕಿ, ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.

ʼಟಾಯ್ಲೆಟ್‌ ಬಳಕೆಯ ಬಳಿಕ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಅಡುಗೆ ಮಾಡುವ ಮತ್ತು ತಿನ್ನುವ ಮೊದಲು, ಯಾವುದೇ ಮೇಲ್ಮೈಯನ್ನು ಮುಟ್ಟಿದ ಬಳಿಕ ಸರಿಯಾಗಿ ಕೈ ತೊಳೆದುಕೊಳ್ಳಬೇಕು. ನೀರಿನ ಮೂಲಗಳಿಗೆ ಧಕ್ಕೆಯಾಗದಂತೆ ಬಯಲು ಶೌಚವನ್ನು ನಿಲ್ಲಿಸಬೇಕು. ಕುದಿಸಿದ ನೀರನ್ನಷ್ಟೇ ಬಳಸಬೇಕು. ಹೆಪಟೈಟಿಸ್ ಇ ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಸೇರಿದಂತೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹಾನಿಕಾರಕವಾಗಿದೆ.