ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಶೀತ-ಕೆಮ್ಮು ನಿವಾರಿಸುವ ಅದ್ಭುತ ಕಷಾಯವಿದು, ಇದರ ಪ್ರಯೋಜನ ತಿಳಿಯಿರಿ
ಮಳೆಗಾಲ ಆರಂಭವಾಗಿ ಮಳೆರಾಯನ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಬಾಧಿಸುವುದು ಸಹಜ. ಮುಂಗಾರಿನಲ್ಲಿ ನಿರಂತರ ಕಾಡುವ ಕೆಮ್ಮು, ನೆಗಡಿಯಂತಹ ಸಮಸ್ಯೆ ಇಲ್ಲಿದೆ ಒಂದು ಬೆಸ್ಟ್ ಕಷಾಯ. ಇದನ್ನು ಕುಡಿದ್ರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಖಂಡಿತ. ಇದನ್ನು ತಯಾರಿಸೋದು ಹೇಗೆ ನೋಡಿ.

ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಶೀತ ಮತ್ತು ಕೆಮ್ಮು. ಇದು ಮಕ್ಕಳು ಹಾಗೂ ವಯಸ್ಕರ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಶೀತ, ಕೆಮ್ಮು ಬಿಡದೇ ಕಾಡಬಹುದು. ಹಾಗಂತ ಇದರ ನಿವಾರಣೆಗೆ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲಿ ಕಷಾಯ ತಯಾರಿಸಿ ಕುಡಿಯಬಹುದು. ಈ ಮದ್ದು ಪ್ರಾಚೀನ ಕಾಲದಿಂದಲೂ ಬಳಸಲ್ಪಟ್ಟಿದೆ. ಇದು ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ.
ಈ ಕಷಾಯವು ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದಾಗಿದೆ. ಅದನ್ನು ತಯಾರಿಸಲು ಅಡುಗೆಮನೆಯಲ್ಲೇ ಇರುವ ವಸ್ತುಗಳು ಸಾಕು. ಅವುಗಳನ್ನೇ ಬಳಸಿಕೊಂಡು ಒಂದು ಬೆಸ್ಟ್ ಕಷಾಯ ತಯಾರಿಸಬಹುದು.
ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಅರಿಶಿನ ಪುಡಿ - 1/2 ಟೀಸ್ಪೂನ್, 1/2 ಟೀಸ್ಪೂನ್ ಶುಂಠಿ ಪುಡಿ ಅಥವಾ 1/2 ಇಂಚು ಹಸಿ ಶುಂಠಿ, 1 ಟೀಸ್ಪೂನ್ ನಿಂಬೆ ರಸ, ಕೆಲವು ಲವಂಗ ಪುಡಿ, ಅರ್ಧ ಟೀಸ್ಪೂನ್ ದಾಲ್ಚಿನ್ನಿ ಪುಡಿ.
ಕಷಾಯ ತಯಾರಿಸುವ ವಿಧಾನ
ನಿಂಬೆ ರಸ ಹಾಗೂ ಜೇನುತುಪ್ಪ ಬಿಟ್ಟು ಉಳಿದ ಪದಾರ್ಥಗಳನ್ನು 5 ನಿಮಿಷಗಳ ಕಾಲ ಕುದಿಸಿ. ನಂತರ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಕೆಮ್ಮು ಮತ್ತು ಶೀತ ಸಂಪೂರ್ಣ ನಿವಾರಣೆಯಾಗುತ್ತದೆ. ಆಯುರ್ವೇದದ ಪ್ರಕಾರ ಈ ಕಷಾಯಕ್ಕೆ ಬಳಸುವ ವಸ್ತುಗಳು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ನೋಡಿ.
ಅರಿಸಿನ
ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಅರಿಶಿನ ತುಂಬಾ ಸಹಾಯಕ. ಇದು ಕೆಮ್ಮು-ಶೀತವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿನವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿ
ಶುಂಠಿ, ಕೆಮ್ಮು ಮತ್ತು ಶೀತಕ್ಕೆ ಮದ್ದು. ಹಲವು ಮನೆಮದ್ದುಗಳಲ್ಲಿ ಶುಂಠಿಯನ್ನು ಸೇರಿಸಲಾಗುತ್ತದೆ. ಶುಂಠಿಯ ಬಳಕೆಯು ತೀವ್ರ ಕಿರಿಕಿರಿಯನ್ನು ಉಂಟುಮಾಡುವ ಗಂಟಲು ನೋವು ಮತ್ತು ಕೆಮ್ಮನ್ನು ಕಡಿಮೆ ಮಾಡುತ್ತದೆ. ಮಳೆಗಾಲದಲ್ಲಿ ನಿತ್ಯವೂ ಶುಂಠಿಯನ್ನು ಬಳಸುವುದು ಒಳ್ಳೆಯದು.
ನಿಂಬೆ ರಸ
ನಿಂಬೆ ರಸದಲ್ಲಿ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು ಮತ್ತು ಶೀತವನ್ನು ತಡೆಯಲು ಇದು ತುಂಬಾ ಸಹಾಯಕ.
ದಾಲ್ಚಿನ್ನಿ ಪುಡಿ
ಈ ಪುಡಿ ಗಂಟಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
ಜೇನು
ಜೇನು ಕೆಮ್ಮು ಮತ್ತು ಶೀತ ನಿವಾರಣೆಗೆ ಪರಿಣಾಮಕಾರಿ ಔಷಧಿ. ಮೇಲೆ ಹೇಳಿದ ಕಷಾಯಕ್ಕೆ ತಪ್ಪದೇ ಜೇನುತುಪ್ಪವನ್ನು ಸೇರಿಸಬೇಕು. ಏಕೆಂದರೆ ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ.
ಮಳೆಗಾಲದಲ್ಲಿ ಈ ಮದ್ದು ಹೆಚ್ಚು ಪರಿಣಾಮಕಾರಿ. ಇದು ಕೆಮ್ಮು ಮತ್ತು ಶೀತಕ್ಕೆ ಅತ್ಯುತ್ತಮ ಮನೆಮದ್ದು. ಚಿಕ್ಕ ಮಕ್ಕಳಿಗೂ ಇದನ್ನು ನೀಡಬಹುದು. ತುಂಬಾ ಚಿಕ್ಕ ಮಕ್ಕಳಿಗೆ ಕೊಡಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀಡಬಹುದು.
ಅಡ್ಡ ಪರಿಣಾಮಗಳಿವೆಯೇ?
ಈ ಮದ್ದಿನ ಮತ್ತೊಂದು ಪ್ರಯೋಜನವೆಂದರೆ ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಸಾಮಾನ್ಯ ಶೀತ-ಕೆಮ್ಮಿಗೆ ಇದನ್ನು ಪ್ರಯತ್ನಿಸಿ. ನೀವು ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.
