ಕನ್ನಡ ಸುದ್ದಿ  /  Lifestyle  /  Health News Raising Dengue Fever Symptoms Backbone Fever Mosquito Borne Diseases Precautions Kannada News Rst

Dengue: ಮಳೆಯ ಕಣ್ಣಮುಚ್ಚಾಲೆಯ ನಡುವೆ ಹೆಚ್ಚುತ್ತಿದೆ ಡೆಂಗಿ ಜ್ವರದ ಲಕ್ಷಣ; ಇರಲಿ ಮುನ್ನೆಚ್ಚರಿಕೆ

Dengue Fever Symptoms: ಮುಂಗಾರು ಪ್ರವೇಶವಾಗಿ ಕೆಲ ದಿನಗಳು ಕಳೆದರೂ ಮಳೆ ಆರಂಭವಾಗಿಲ್ಲ. ಮಳೆಯ ಅಭಾವದ ಬೇಸರದ ನಡುವೆ ಡೆಂಗಿ ಜ್ವರ ಹೆಚ್ಚುವ ಭಯವೂ ಕಾಡುತ್ತಿದೆ. ಕೇರಳದಲ್ಲಿ ಡೆಂಗಿ ಜ್ವರದ ಪ್ರಭಾವ ಜೋರಾಗಿದ್ದು, ರಾಜ್ಯದಲ್ಲೂ ಡೆಂಗಿ ಹರಡುವ ಸಾಧ್ಯತೆ ಇದೆ. ಆ ಕಾರಣಕ್ಕೆ ಸಾಕಷ್ಟು ಎಚ್ಚರ ವಹಿಸುವುದು ಅವಶ್ಯ.

ಹೆಚ್ಚುತ್ತಿದೆ ಡೆಂಗಿ ಜ್ವರ
ಹೆಚ್ಚುತ್ತಿದೆ ಡೆಂಗಿ ಜ್ವರ

ಕೇರಳಕ್ಕೆ ಮುಂಗಾರು ಪ್ರವೇಶವಾಗಿ ಒಂದು ವಾರ ಕಳೆದಿದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಡೆಂಗಿ ಜ್ವರ ಹೆಚ್ಚುತ್ತಿದೆ. ಈಗಾಗಲೇ ಜೂನ್‌ ತಿಂಗಳಿನಲ್ಲಿ ಕೇರಳದ ಎರ್ನಾಕುಲಂನಲ್ಲಿ ನಾಲ್ಕು ಮಂದಿ ಡೆಂಗಿ ಜ್ವರದಿಂದ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲೂ ಕೆಲವು ಕಡೆ ಮಳೆಯಾಗಿದ್ದು, ಬಿಸಿಲಿನ ತಾಪವೂ ಹೆಚ್ಚಿದೆ. ಬಿಸಿಲು ಮಳೆಯ ಕಣ್ಣಮುಚ್ಚಾಲೆಯು ರಾಜ್ಯದಲ್ಲೂ ಡೆಂಗಿ ಜ್ವರದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಡೆಂಗಿ ಜ್ವರ

ಡೆಂಗಿ ಜ್ವರವನ್ನು ಬೆನ್ನು ಮೂಳೆಯ ಜ್ವರ ಎಂದೂ ಕರೆಯಲಾಗುತ್ತದೆ. ಸೊಳ್ಳೆಯಿಂದ ಹರಡುವ ಅತ್ಯಂತ ಮಾರಕ ರೋಗಗಳಲ್ಲಿ ಡೆಂಗಿ ಕೂಡ ಒಂದು. ಇದು ಮಲೇರಿಯಾದಂತೆ ವೈರಲ್‌ ಜ್ವರವಾಗಿದೆ. ಇದು ಸಾಂಕ್ರಾಮಿಕ ಸೋಂಕಲ್ಲ, ಆದರೆ ಸೋಂಕಿತ ಈಡಿಸ್‌ ಈಜಿಪ್ಟಿ ಸೊಳ್ಳೆಗಳ ಕಡಿತದಿಂದ ಹರಡುತ್ತದೆ.

ಆರಂಭಿಕ ಹಂತದಲ್ಲಿ ಪದೇ ಪದೇ ಜ್ವರ ಬರುವುದು, ದೇಹದಲ್ಲಿ ದದ್ದು ಉಂಟಾಗುವುದು ಮತ್ತು ನಿಶಕ್ತಿ ಈ ಲಕ್ಷಣಗಳನ್ನು ಹೊಂದಿರುತ್ತದೆ. ದೀರ್ಘಕಾಲದ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯುವುದು ಉತ್ತಮ. ಸೌಮ್ಯವಾದ ಅಥವಾ ತೀವ್ರವಾದ ಡೆಂಗಿ ಲಕ್ಷಣಗಳಿದ್ದರೂ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಅವಶ್ಯ.

ಡೆಂಗಿ ಜ್ವರದ ಲಕ್ಷಣಗಳು

ನಿರಂತರ ಅಧಿಕ ಜ್ವರ

104 ಡಿಗ್ರಿ ಪ್ಯಾರನ್‌ಹೀಟ್‌ಗೂ ಅಧಿಕ ನಿರಂಜರ ಜ್ವರವು ಡೆಂಗಿಯ ಪ್ರಮುಖ ಲಕ್ಷಣವಾಗಿದೆ. ಇದನ್ನು ಏಳು ದಿನ ಜ್ವರ ಎಂದೂ ಕರೆಯಲಾಗುತ್ತದೆ. ಇದು ಚರ್ಮದ ಮೂಗೇಟು ಮತ್ತು ಮಲ, ಮೂತ್ರದಲ್ಲಿ ರಕ್ತ ಸೋರುವುದಕ್ಕೂ ಕಾರಣವಾಗಬಹುದು.

ನಿಲ್ಲದ ತಲೆನೋವು

ಅತಿಯಾದ ನಿಲ್ಲದ ತಲೆನೋವು ಕೂಡ ಡೆಂಗಿ ಜ್ವರ ಲಕ್ಷಣ ಇರಬಹುದು. ತಲೆನೋವು ಮಾತ್ರೆ, ಔಷಧಿಗಳು ನಿವಾರಿಸಲಾಗದಷ್ಟು ನೋವು ಕಂಡರೆ ನಿರ್ಲಕ್ಷ್ಯ ಮಾಡಬೇಡಿ.

ಅತಿಯಾದ ದೇಹದ ನೋವು

ಡೆಂಗಿ ಜ್ವರ ಬಂದಾಗ ಅತಿಯಾದ ದೇಹದ ದೈಹಿಕ ಬೇನೆ ಇರುತ್ತದೆ. ಮೂಳೆಗಳಲ್ಲಿ ಅತಿಯಾದ ನೋವು ಇರುವ ಕಾರಣದಿಂದ ಇದನ್ನು ಮೂಳೆ ಮುರಿತದ ಜ್ವರ ಎಂದೂ ಕರೆಯಲಾಗುತ್ತದೆ. ವೈರಲ್‌ ಸೋಂಕು ಸ್ನಾಯುಗಳಿಗೆ ಹರಡಿದ ನಂತರ ಅತಿಯಾದ, ಅಸಹನೀಯ ನೋವು ಕಾಣಿಸಬಹುದು. ಕೈಕಾಲುಗಳು, ಬಾಯಿ, ಬೆನ್ನು ಮುಂತಾದ ಸ್ನಾಯುಗಳ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಮರುಕಳಿಸುವ ದೇಹದ ನೋವುಗಳನ್ನು ನಿರ್ಲಕ್ಷಿಸದೆ ಡೆಂಗ್ಯೂ ರೋಗಲಕ್ಷಣಗಳನ್ನು ಪತ್ತೆಹಚ್ಚಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ದದ್ದುಗಳು

ಡೆಂಗಿ ಜ್ವರದಿಂದ ಮೈ ಮೇಲೆ ದದ್ದುಗಳು ಉಂಟಾಗಬಹುದು. ವೈರಲ್‌ ಸೋಂಕು ಕೆಂಪು, ತಿಳಿ ಕೆಂಪು ಬಣ್ಣದ ದದ್ದುಗಳನ್ನು ಉಂಟು ಮಾಡಬಹುದು. ಇದು ಚರ್ಮದ ಮೂಗೇಟುಗಳಿಗೂ ಕಾರಣವಾಗಬಹುದು. ಈ ದದ್ದುಗಳು ದಡಾರವನ್ನು ಹೋಲುತ್ತವೆ. ಡೆಂಗೆ ಸೋಂಕಿನಿಂದ ಹರಡುವ ದದ್ದುಗಳು ಒಡೆಯುವುದರಿಂದ ಇನ್ನಷು ಪ್ರತಿಕೂಲ ಸ್ಥಿತಿ ಉಂಟಾಗಬಹುದು. ಇವು ಅಲರ್ಜಿಗಿಂತ ಭಿನ್ನವಾಗಿರುತ್ತವೆ.

ಕಣ್ಣಿನ ನೋವು

ಡೆಂಗಿ ಜ್ವರವಿದ್ದಾಗ ಕಣ್ಣುಗಳ ಹಿಂಭಾಗದಲ್ಲಿ ನೋವು ಕಾಣಿಸಬಹುದು. ನಿರಂತರ ತಲೆನೋವಿನ ಜೊತೆಗೆ ಕಣ್ಣು ನೋವು ಇರುತ್ತದೆ. ಇದು ಕಣ್ಣಿನ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಸಬ್‌ಕಾಂಜಂಕ್ಟಿವಲ್ ಹೆಮರೇಜ್‌ನಿಂದ ಕಣ್ಣುಗಳ ಬಣ್ಣ ಕೆಂಪಾಗಬಹುದು.

ದೀರ್ಘಕಾಲದ ಸುಸ್ತು

ಮೂಳೆ ಮೂರಿತದ ಜ್ವರ ಎಂದು ಕರೆಯುವ ಡೆಂಗಿ ಜ್ವರ ದೀರ್ಘಕಾಲದ ಆಯಾಸವನ್ನು ಉಂಟು ಮಾಡಬಹುದು. ಡೆಂಗಿ ವೈರಸ್‌ ಉರಿಯೂತ ಮತ್ತು ದೈಹಿಕ ನೋವುಗಳಿಗೆ ಕಾರಣವಾಗಬಹುದು. ತೀವ್ರವಾದ ದೈಹಿಕ ನೋವುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.

ಕಿಬ್ಬೊಟ್ಟೆ ನೋವು

ಡೆಂಗಿ ಜ್ವರ ಬಂದಾಗ ತೀವ್ರವಾದ ಕಿಬ್ಬೊಟ್ಟೆಯ ನೋವು ಕಾಣಿಸಬಹುದು. ಹೊಟ್ಟೆಯ ಉಬ್ಬರ ಹಾಗೂ ವಿಪರೀತ ನೋವಿಗೂ ಇದು ಕಾರಣವಾಗಬಹುದು.

ಡೆಂಗಿ ಸೋಂಕು ಪಿತ್ತಕೋಶ ಮತ್ತು ಯಕೃತ್ತಿನಂತಹ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರಬಹುದು.

ವಾಂತಿ, ವಾಕರಿಕೆ

ಅತಿಯಾದ ವಾಂತಿ ಅಥವಾ ವಾಕರಿಕೆ ಲಕ್ಷಣಗಳು ಡೆಂಗಿ ಜ್ವರದ ಸಂಕೇತಗಳಾಗಿರಬಹುದು. ಡೆಂಗಿ ಸೋಂಕು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಇದು ರಕ್ತವಾಂತಿಗೆ ಕಾರಣವಾಗಬಹುದು. ಇದು ಅತಿಸಾರ, ಹೊಟ್ಟೆ ನೋವಿಗೂ ಕಾರಣವಾಗಬಹುದು.

ಆಂತರಿಕ ರಕ್ತಸ್ರಾವ

ಆಂತರಿಕ ರಕ್ತಸ್ರಾವವು ಡೆಂಗಿ ಜ್ವರದ ಪ್ರಮುಖ ಲಕ್ಷಣವಾಗಿದೆ. ಡೆಂಗಿ ಜ್ವರವು ಅತಿಯಾದರೆ ಥ್ರಂಬೋಸೈಟೋಪೆನಿಯಾ (ಪ್ಲೇಟ್ಲೆಟ್‌ ಕೋಶಗಳ ನಾಶ)ಕ್ಕೂ ಕಾರಣವಾಗಬಹುದು. ಇದು ಕರುಳಿನ ಪ್ರದೇಶದ ತೀವ್ರರಕ್ತಸ್ರಾವಕ್ಕೆ ಕಾರಣವಾಗಬಹುದು. ಅಲ್ಲದೆ ಮಲ, ಮೂತ್ರದೊಂದಿಗೆ ರಕ್ತ ವಿಸರ್ಜನೆಯಾಗಬಹುದು. ಡೆಂಗಿ ವೈರಸ್‌ ರಕ್ತದ ಪ್ಲೇಟ್‌ಲೆಟ್‌ಗಳ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಇದು ದೇಹದಲ್ಲಿ ಕೆಂಪುರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆಯೂ ಇದೆ.

ಮುನ್ನೆಚ್ಚರಿಕೆ ವಹಿಸಿ

ಡೆಂಗಿ ಜ್ವರ ಬಾರದಂತೆ ತಡೆಯಲು ವ್ಯಾಕ್ಸಿನ್‌ ಪಡೆಯಬಹುದು. ವ್ಯಾಕ್ಸಿನ್‌ಗಿಂತ ಪ್ರಮುಖವಾಗಿ ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮನೆಯ ಸುತ್ತಮುತ್ತ ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳಬೇಕು.

* ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

* ಹೊರಗಿನಿಂದ ಸೊಳ್ಳೆಗಳು ಮನೆಯ ಒಳಗೆ ಬಾರದಂತೆ ಎಚ್ಚರ ವಹಿಸಿ. ಕಿಟಿಕಿ, ಬಾಗಿಲುಗಳನ್ನು ಮುಚ್ಚಿಡಿ.

* ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಿ.

* ಸೊಳ್ಳೆ ನಿವಾರಕಗಳನ್ನು ಬಳಸಿ.

* ಸೊಳ್ಳೆಗಳು ಮನೆಯ ಸುತ್ತ ಮೊಟ್ಟೆ ಇಡದಂತೆ ನೋಡಿಕೊಳ್ಳಿ. ವಾರಕೊಮ್ಮೆ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛ ಪಡಿಸಿ.

ವಿಭಾಗ