Diabetes in Children: ಮಕ್ಕಳು, ಹದಿವಯಸ್ಸಿನವರಲ್ಲಿ ಹೆಚ್ಚುತ್ತಿದೆ ಟೈಪ್ 1 ಡಯಾಬಿಟಿಸ್; ಕೋವಿಡ್‌ಗೂ ಮಧುಮೇಹಕ್ಕೂ ಇದೆ ನಂಟು: ಅಧ್ಯಯನ
Type 1 Diabetes Surge in Child and Teen: ಕೋವಿಡ್ (Covid) ಬಳಿಕ ಮಕ್ಕಳು ಹಾಗೂ ಹದಿ ವಯಸ್ಸಿನವರಲ್ಲಿ ಟೈಪ್ 1 ಮಧುಮೇಹದ (Type 1 Diabetes) ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂಬ ಆಘಾತಕಾರಿ ಅಂಶವೊಂದರನ್ನು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ಜಾಮಾ ನೆಟ್‌ವರ್ಕ್ ಓಪನ್ ಎಂಬ ವಿದೇಶಿ ನಿಯತಕಾಲಿಕೆಯೊಂದು ಪ್ರಪಂಚದ ವಿವಿಧ ದೇಶಗಳಲ್ಲಿ ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನದ ಪ್ರಕಾರ ಕೋವಿಡ್ ಬಳಿಕ ಮಕ್ಕಳು ಹಾಗೂ ಹದಿವಯಸ್ಸಿನವರಲ್ಲಿ ಟೈಪ್ 1 ಮಧುಮೇಹದ ಪ್ರಮಾಣ ಹೆಚ್ಚಿದೆ ಎಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ನಿಯತಕಾಲಿಕೆಯು ಯುನೈಟೆಡ್ ಕಿಂಗ್‌ಡಮ್ ಸೇರಿ ಹಲವು ದೇಶಗಳ 38,000 ಯುವಜರನಲ್ಲಿ ಮಧುಮೇಹ ಪತ್ತೆಯಾಗಿರುವುದನ್ನು ಕಂಡುಕೊಂಡಿದೆ. ಲೇಖಕರು ಮಧುಮೇಹ ಪ್ರಕರಣಗಳ ಹೆಚ್ಚಳವನ್ನು ಗಣನೀಯ ಎಂದು ವಿವರಿಸುತ್ತಾರೆ.
ಯಾವ ಕಾರಣಕ್ಕೆ ಮಧುಮೇಹದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ತಿಳಿಯಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.
ಕೆಲವು ಪ್ರಕರಣಗಳಲ್ಲಿ ಕೋವಿಡ್ ಸಮಯದಲ್ಲಿ ಸರಿಯಾಗಿ ಆರೋಗ್ಯ ತಪಾಸಣೆ ನಡೆಸದೇ ಇರುವುದು, ಆರೋಗ್ಯ ಸೇವೆಗಳಲ್ಲಿ ಹಿನ್ನೆಡೆಯಾಗಿರುವುದು ಕಾರಣವಾದರೆ, ಎಲ್ಲಾ ಹೊಸ ಪ್ರಕರಣಗಳಿಗೂ ಇದೊಂದೆ ಕಾರಣವಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ಹರಡುವ ಮೊದಲು ಮಕ್ಕಳಲ್ಲಿ ಟೈಪ್ 1 ಮಧುಮೇಹದ ಪ್ರಮಾಣ ಶೇ 3ರಷ್ಟು ಏರಿಕೆಯಾಗಿತ್ತು.
ಇತ್ತೀಚಿನ ಅಧ್ಯಯನ ಹೀಗಿದೆ
ಕೋವಿಡ್‌ಗೆ ಹೋಲಿಸಿದರೆ ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಮಧುಮೇಹವು ಶೇ 14ರಷ್ಟು ಏರಿಕೆಯಾಗಿದೆ, ಎರಡನೇ ವರ್ಷದಲ್ಲಿ ಮಧುಮೇಹದ ಪ್ರಮಾಣವು ಶೇ 27ರಷ್ಟು ಹೆಚ್ಚಾಗಿತ್ತು.
ಟೊರೊಂಟೊ ವಿಶ್ವ ವಿದ್ಯಾಲಯದ ಸಂಶೋಧಕರ ಪ್ರಕಾರ ಇದಕ್ಕೆ ಕಾರಣ ಏನು ಎನ್ನುವುದಕ್ಕಿಂತ ಟೈಪ್ 1 ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ಹೆಚ್ಚು ಹೆಚ್ಚು ವೈದ್ಯಕೀಯ ಸಂಪನ್ಮೂಲ ಹಾಗೂ ಸಹಕಾರ ಅಗತ್ಯ ಎನ್ನುತ್ತದೆ.
ಟೈಪ್ 1 ಮಧುಮೇಹ ಎಂದರೇನು?
ಟೈಪ್ 1 ಮಧುಮೇಹ ಹೊಂದಿರುವವರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು. ಇದನ್ನು ನಿಯಂತ್ರಣಕ್ಕೆ ತರಲು ಇನ್ಸುಲಿನ್ ಪಡೆಯಬೇಕು. ಏಕೆಂದರೆ ಅವರು ದೇಹವು ತನ್ನಿಂದ ತಾನಾಗಿಯೇ ಅದನ್ನು ಮಾಡಲು ಸಾಧ್ಯವಿಲ್ಲ.
ಏಕೆಂದರೆ ಮೇದೋಜ್ಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯಿಂದ ಅರಿಯದೇ ನಾಶವಾಗುತ್ತವೆ. ಈ ಮಧುಮೇಹವು ಮಕ್ಕಳು ಮತ್ತು ವಯಸ್ಕರಲ್ಲಿ ಕಂಡು ಬರುತ್ತದೆ. ಇದಕ್ಕೆ ಕಾರಣಗಳು ಏನು ಎಂಬುದು ಸಂಪೂರ್ಣವಾಗಿ ತಿಳಿದಿಲ್ಲ ಹಾಗೂ ಪ್ರಸ್ತುತ ಇದಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ.
ಏರಿಕೆಯ ಹಿಂದಿನ ಕಾರಣ
ಮಕ್ಕಳಲ್ಲಿ ಏರುತ್ತಿರುವ ಮಧುಮೇಹಗಳ ಪ್ರಕರಣಕ್ಕೆ ಕಾರಣ ಏನು ಎಂಬುದು ಸ್ವಷ್ಟವಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲವು ಅಂಶಗಳನ್ನು ಪರಿಗಣಿಸುತ್ತಾರೆ.
ಅದೇನೆಂದರೆ ಕೋವಿಡ್ ಕೆಲವರಲ್ಲಿ ರಿಯಾಕ್ಷನ್ ಉಂಟು ಮಾಡಿದ್ದು, ಇದು ಮಕ್ಕಳಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸಿರಬಹುದು. ಆದರೆ ಈ ರೀತಿಯ ಸ್ವಯಂ ನಿರೋಧಕ ಪ್ರತಿಕ್ರಿಯೆಯನ್ನು ಹುಡುಕುವ ಅಧ್ಯಯನಗಳಲ್ಲಿ - ದೇಹವು ತನ್ನದೇ ಆದ ಕೆಲವು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ - ಎಲ್ಲರೂ ಈ ಸಿದ್ಧಾಂತವನ್ನು ಬೆಂಬಲಿಸುವ ಪುರಾವೆಗಳನ್ನು ಕಂಡುಕೊಂಡಿಲ್ಲ.
ಟೈಪ್ 1 ಮಧುಮೇಹ ಸಂಸ್ಥೆ ಜೆಡಿಆರ್‌ಎಫ್‌ಯುಕೆ ಇದರ ನೀತಿ ನಿರ್ದೇಶಕ ಹಿಲರಿ ನಾಥನ್ ಅವರ ಪ್ರಕಾರ ʼಈ ಸಂಶೋಧನೆಯು ಹಲವು ಕುಟುಂಬಗಳು ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು ಎಂಬ ವಾಸ್ತವವನ್ನು ತಿಳಿಸುತ್ತದೆʼ ಎನ್ನುತ್ತಾರೆ.
ಅವರ ಪ್ರಕಾರ ದಣಿವು, ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ತೂಕ ನಷ್ಟ ಇವು ಟೈಪ್ 1 ಮಧುಮೇಹದ ಲಕ್ಷಣಗಳು, ಟಿಎಸ್ 4 ಎಂದು ಕರೆಯಲಾಗುವ ಇವುಗಳನ್ನು ಗಮನಿಸಬೇಕು ಎಂದು ಅವರು ಹೇಳುತ್ತಾರೆ.
ಈ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದರಿಂದ ಆರಂಭಿಕ ರೋಗನಿರ್ಣಯ ಹಾಗೂ ತ್ವರಿತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.