ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಮಸ್ಯೆಗೆ ಸರಳ ಪರಿಹಾರ; ಯಶಸ್ವಿ ಚಿಕಿತ್ಸೆಯ ವಿವರ ನೀಡಿದ್ದಾರೆ ರೀಗಲ್ ಆಸ್ಪತ್ರೆಯ ಡಾಕ್ಟರ್ ಸೂರಿರಾಜು
ಪುರುಷರ ವಯಸ್ಸು 40 ದಾಟಿದರೆ ಸಾಕು, ಪ್ರಾಸ್ಟೇಟ್ ಗ್ರಂಥಿ ಹಿಗ್ಗುತ್ತ ಸಾಗುತ್ತದೆ. ಸಾಮಾನ್ಯವಾಗಿ 60 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಮೂತ್ರ ವಿಸರ್ಜನೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಮಸ್ಯೆಗೆ ಸರಳ ಪರಿಹಾರವಾಗಿ ಬಳಸಿದ ಯಶಸ್ವಿ ಚಿಕಿತ್ಸೆಯ ವಿವರ ನೀಡಿದ್ದಾರೆ ರೀಗಲ್ ಆಸ್ಪತ್ರೆಯ ಡಾಕ್ಟರ್ ಸೂರಿರಾಜು.
ಬೆಂಗಳೂರು: ವಯಸ್ಸಾದಂತೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಪೈಕಿ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಅಥವಾ ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ (Prostate Enlargement (Benign Prostatic Hyperplasia)) ಮುಖ್ಯವಾದುದು. ಪ್ರಾಸ್ಟೇಟ್ ಗ್ರಂಥಿ ಹಿಗ್ಗಿದಾಗ ಮೂತ್ರ ವಿಸರ್ಜನೆ ಕಷ್ಟವಾಗಿ ಕಂಗಾಲಾಗುವವರ ಸಂಖ್ಯೆ ಹೆಚ್ಚು. ಆದರೆ ಈ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಮಸ್ಯೆಗೆ ಸರಳ ಪರಿಹಾರವಿದೆ ಎಂದು ರೀಗಲ್ ಆಸ್ಪತ್ರೆಯ ಯೂರಾಲಜಿ ವಿಭಾಗದ ಡಾಕ್ಟರ್ ಸೂರಿರಾಜು. ವಿ. ಹೇಳಿದ್ದಾರೆ.
ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮತ್ತು ಔಷಧಗಳನ್ನು ನೀಡಿ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತದೆ. ಆದರೆ, ಇತ್ತೀಚೆಗೆ 68 ವರ್ಷದವರೊಬ್ಬರಿಗೆ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಗೆ ನೀರಿನ ಆವಿಯ ಚಿಕಿತ್ಸೆ ನೀಡಿದ್ದು, ಅದು ಯಶಸ್ವಿಯಾಗಿದೆ. ಈ ವಿಧಾನದಲ್ಲಿ ವ್ಯಕ್ತಿಗೆ ಶಸ್ತ್ರಚಿಕಿತ್ಸೆಯ ನೋವು ಸಹಿಸಬೇಕಾಗುವುದಿಲ್ಲ. ಇದು ಹೊಸ ವಿಧಾನವಾಗಿದ್ದು, ಹೊಸ ಭರವಸೆಯನ್ನು ಮೂಡಿಸಿದೆ ಎಂದು ಡಾಕ್ಟರ್ ಸೂರಿರಾಜು ವಿವರಿಸಿದ್ದಾರೆ.
ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಗೆ ರೆಜಮ್ ವಿಧಾನ ಎಂದರೇನು
ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಮಸ್ಯೆಯು ವಿಶೇಷವಾಗಿ 65 ವರ್ಷ ಮೇಲ್ಪಟ್ಟ ಸುಮಾರು ಶೇಕಡ 50 ಪುರುಷರು ಮತ್ತು 85 ವರ್ಷದ ಶೇಕಡ 90 ಜನರಲ್ಲಿ ಕಂಡುಬರುತ್ತದೆ. ಬೆಂಗಳೂರು ನಿವಾಸಿ 68 ವರ್ಷದ ಪಟೇಲ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಹಲವಾರು ತಿಂಗಳುಗಳಿಂದ ಆಗಾಗ್ಗೆ ಮೂತ್ರ ವಿಸರ್ಜನೆ ತುರ್ತು ಮತ್ತು ಬಳಿಕ ಕಟ್ಟಿಕೊಂಡ ಸಮಸ್ಯೆ ಅನುಭವಿಸುತ್ತಿದ್ದರು. ಈ ರೋಗಲಕ್ಷಣಗಳು ಅವರ ಜೀವನದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.
ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಗೆ ಶಸ್ತ್ರಚಿಕಿತ್ಸೆ ಅಥವಾ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಪಟೇಲ್ ಈ ವಿಧಾನಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಚಿಂತಿಸಿ ಹಿಂಜರಿದಿದ್ದರು ಹೀಗಾಗಿ, ಅವರಿಗೆ ರೆಜಮ್ ವಿಧಾನ (rezum procedure) ಅನ್ನು ಶಿಫಾರಸು ಮಾಡಲಾಗಿತ್ತು.
ಏನಿದು ರೆಜಮ್ ವಿಧಾನ (Rezum Procedure): ಈ ವಿಧಾನದಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆಗೆ ಕಾರಣವಾದ ಅಂಗಾಂಶವನ್ನು ಕುಗ್ಗಿಸುವುದಕ್ಕೆ ನೀರಿನ ಆವಿಯನ್ನು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂಗ ಭಿನ್ನವಾಗಿದ್ದು ಹೆಚ್ಚಿನ ಫಲಿತಾಂಶವನ್ನು ಒದಗಿಸುತ್ತದೆ. ಈ ವಿಧಾನ ನೆರವೇರಿಸುವ ಶರೀರದ ಭಾಗಕ್ಕಷ್ಟೆ ಅರಿವಳಿಕೆ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಇದು 10 ನಿಮಿಷದ ವಿಧಾನವಾಗಿದ್ದು, ಶಸ್ತ್ರಚಿಕಿತ್ಸೆಗೆ ಹೊರತಾದ, ಔಷಧ ಮುಕ್ತ ವಿಧಾನ ಎಂದು ರೀಗಲ್ ಆಸ್ಪತ್ರೆಯ ಸಂಸ್ಥಾಪಕ ಡಾ. ಸೂರಿರಾಜು ವಿ ವಿವರಿಸಿದ್ದಾರೆ.
ಇನ್ನೂ ಸರಳವಾಗಿ ಹೇಳಬೇಕು ಎಂದರೆ, ರೆಜಮ್ ವಿಧಾನದಲ್ಲಿ ರೆಜಮ್ ಸಾಧನವನ್ನು ಸೂಜಿಯ ಮೂಲಕ ಪ್ರಾಸ್ಟೇಟ್ ಗ್ರಂಥಿಗೆ ಸೇರಿಸಲಾಗುತ್ತದೆ. ಇದು ಒಂಬತ್ತು ಸೆಕೆಂಡ್ ಕಾಲ ಆವಿಯನ್ನು ಪ್ರಾಸ್ಟೇಟ್ ಗ್ರಂಥಿಗೆ ಒದಗಿಸುತ್ತದೆ. ಈ ಆವಿಯು ಪ್ರಾಸ್ಟೇಟ್ ಜೀವಕೋಶಗಳ ನಡುವೆ ಹರಡುತ್ತ ಶಾಖವನ್ನು ಬಿಡುಗಡೆ ಮಾಡಿ ತಂಪಾಗುತ್ತದೆ. ಇದು ನಿಧಾನವಾಗಿ ಹಿಗ್ಗುವಿಕೆಗೆ ಕಾರಣವಾದ ಅಂಗಾಂಶವನ್ನು ಸರಿಪಡಿಸುತ್ತದೆ. ಇದಕ್ಕಾಗಿ ಅಳವಡಿಸಿದ ಕ್ಯಾತಿಟರ್ 2 ರಿಂದ 5 ದಿನಗಳ ತನಕ ಅಲ್ಲಿಯೇ ಉಳಿಯುತ್ತದೆ ಎಂದು ಯುಟಿ ಸೌತ್‌ವೆಸ್ಟರ್ನ್ಸ್ ಮೆಡಿಕಲ್ ಸೆಂಟರ್ ವೆಬ್‌ತಾಣ ಮಾಹಿತಿ ನೀಡುತ್ತದೆ.
ಪ್ರಾಸ್ಟೇಟ್ ಗ್ರಂಥಿ ಎಂದರೇನು, ಅದು ಎಲ್ಲಿರುತ್ತದೆ?
ಪ್ರಾಸ್ಟೇಟ್ ಗ್ರಂಥಿಯು ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವಂತಹ ಗ್ರಂಥಿ. ಇದು ಒಂದು ವಾಲ್‌ನಟ್‌ನಷ್ಟು ಗಾತ್ರದಲ್ಲಿರುತ್ತದೆ. ವೀರ್ಯಾಣುವಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಈ ಗ್ರಂಥಿಯ ಕೆಲಸ. ವ್ಯಕ್ತಿ (ಪುರುಷ)ಗೆ ವಯಸ್ಸಾದಂತೆ ಪ್ರಾಸ್ಟೇಟ್ ಗ್ರಂಥಿ ಹಿಗ್ಗುತ್ತ ಹೋಗುತ್ತದೆ. ಇದು ವ್ಯಕ್ತಿಯು 40 ವರ್ಷ ದಾಟಿದ ನಂತರ ನಿಧಾನಗತಿಯ, ಸೌಮ್ಯ ಸ್ವರೂಪದ ಊತಕ್ಕೆ ಒಳಗಾಗುತ್ತದೆ. ಆಗ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ. ಇದರ ಪರಿಣಾಮ ಮೂತ್ರನಾಳದ ಮೇಲಾಗುತ್ತದೆ. ಪ್ರಾಸ್ಟೇಟ್ ಗ್ರಂಥಿ ಹಿಗ್ಗಿದಾಗ ಮೂತ್ರನಾಳ ಕುಗ್ಗುತ್ತದೆ. ಆಗ ಮೂತ್ರನಾಳದ ಮೂಲಕ ಸರಿಯಾಗಿ ಮೂತ್ರ ವಿಸರ್ಜನೆ ಮಾಡುವುದು ಕಷ್ಟವಾಗುತ್ತದೆ.
ಪದೇಪದೆ ಮೂತ್ರ ಬಂದಂತೆ ಆಗುತ್ತದೆ. ಆದರೆ ಮೂತ್ರ ಬರುವುದಿಲ್ಲ. ಅಥವಾ ಬಂದರೂ ಸ್ವಲ್ಪವೇ ಬಂದು ನಿಂತುಬಿಡುತ್ತದೆ. ವಾಪಸ್ ಬಂದ ಕೂಡಲೇ ಮತ್ತೆ ಮೂತ್ರ ಬರುವಂತೆ ಆಗುತ್ತದೆ. ಈ ರೀತಿ ಪದೇಪದೆ ಮೂತ್ರಶಂಕೆ ಕಂಡುಬರಬಹುದು. ಮೂತ್ರನಾಳದ ಮೇಲೆ ನಿಯಂತ್ರಣ ಇಲ್ಲದೆ ಅರಿವಿಗೆ ಬರುವ ಮೊದಲೇ ಮೂತ್ರ ವಿಸರ್ಜನೆಯಾಗುವ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಈ ರೀತಿ ಸಮಸ್ಯೆಗಳಾದಾಗ ವ್ಯಕ್ತಿ ಸಾಮಾಜಿಕವಾಗಿ ಬೆರೆಯುವುದು ಕಷ್ಟವಾಗುತ್ತದೆ. ಈ ರೀತಿ ಸಮಸ್ಯೆಗೆ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಯಷ್ಟೇ ಅಲ್ಲ, ಪ್ರಾಸ್ಟೇಟ್ ಗ್ರಂಥಿಯ ಉರಿಯೂತ, ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಕೆಲವೊಮ್ಮೆ ಕಾರಣವಾಗಿ ಬಿಡುತ್ತದೆ. ಹೀಗಾಗಿ ಈ ಸಮಸ್ಯೆ ಕಂಡುಬಂದರೆ ಕೂಡಲೇ ಪರಿಣತ ಯೂರಾಲಜಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳಿತು.